ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಗೆ ಬೆಳೆದರೆ ಹೆಂಗೆ?

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಹೊಂಗೆ, ಬೇವು, ಸಿಮರೂಬಾ, ಹಿಪ್ಪೆ, ಜತ್ರೋಪ, ಸುರಹೊನ್ನೆ ಬೀಜಗಳಿಂದ ಎಣ್ಣೆ ತೆಗೆದು ಅದನ್ನು ಜೈವಿಕ ಇಂಧನ ರೂಪಕ್ಕೆ ಪರಿವರ್ತಿಸಿ ಬಳಕೆ ಮಾಡಲು ಸಾಧ್ಯವಿದೆ. 

ಜೈವಿಕ ಇಂಧನ ಸಸ್ಯಗಳನ್ನು ಬೆಳೆಯುವ ರೈತರಿಗೆ ಅನುದಾನ ನೀಡಲು ರಾಜ್ಯ ಸರ್ಕಾರ ರೂ.100 ಕೋಟಿ ಅನುದಾನವನ್ನು ತೆಗೆದಿರಿಸಿದೆ.

ನಮ್ಮ ರೈತರು ನೂರಾರು ವರ್ಷಗಳಿಂದ ಬೆಳೆಯುತ್ತಿರುವ ಅನೇಕ ಮರ-ಗಿಡಗಳು ಜೈವಿಕ ಇಂಧನ ಮೂಲಗಳು.   ಹೊಂಗೆ, ಬೇವು, ಸಿಮರೂಬಾ, ಹಿಪ್ಪೆ, ಜತ್ರೋಪ, ಸುರಹೊನ್ನೆ ಮೊದಲಾದ ಮರಗಳ ಬೀಜಗಳಿಂದ ಎಣ್ಣೆ ತೆಗೆದು ಜೈವಿಕ ಇಂಧನ ಉತ್ಪಾದಿಸಬಹುದು. ಸಾಗುವಳಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಮತ್ತು ಹೊಲ, ತೋಟಗಳ ಬದುಗಳ ಮೇಲೆ ಬೆಳೆದರೆ ರೈತರಿಗೆ ಲಾಭವಿದೆ.

ಜೈವಿಕ ಇಂಧನ ಮೂಲದ ಸಸ್ಯಗಳನ್ನು ಬೆಳೆಯುವುದರಿಂದ ರೈತರಿಗೆ ಆಗುವ ಅನುಕೂಲ ಹಾಗೂ ಜೈವಿಕ ಇಂಧನದ ಪ್ರಾಮುಖ್ಯತೆ ತಿಳಿಸಿಕೊಡುವ ಸಲುವಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಈಚೆಗೆ ಮೈಸೂರಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಕಾರ್ಯಾಗಾರದಲ್ಲಿ ಜೈವಿಕ ಇಂಧನದ ಪ್ರಸ್ತುತತೆ, ಜೈವಿಕ ಇಂಧನ ಸಸ್ಯಗಳ ತಳಿಗಳು, ಜೈವಿಕ ಇಂಧನ ಪಾರ್ಕ್‌ನ ಚಟುವಟಿಕೆಗಳು, ಜೈವಿಕ ಇಂಧನ ಕ್ಷೇತ್ರದಲ್ಲಿ ಜಗತ್ತಿನ ಉದ್ದಗಲದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಜೈವಿಕ ಇಂಧನ ಬೀಜಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಚರ್ಚಿಸಲಾಯಿತು.

ಜೈವಿಕ ಇಂಧನ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು.

`ಹೊಂಗೆಯಿಂದ ಅನೇಕ ಉಪಯೋಗಗಳಿವೆ. ರೈತರು ಬೆಳೆಗಳಿಗೆ ಬಳಸುವ ರಾಸಾಯನಿಕ ಗೊಬ್ಬರದಲ್ಲಿರುವ ಎಲ್ಲ ಪೋಷಕಾಂಶಗಳು ಹೊಂಗೆ ಎಲೆಯಲ್ಲಿ ಇವೆ. ಜಮೀನಿನ ನಡುವೆ ಹೊಂಗೆ ಬೆಳೆದರೆ ಮರದಿಂದ ಉದುರುವ ಎಲೆಗಳು ಅತ್ಯುತ್ತಮ ಸಾವಯವ ಗೊಬ್ಬರವಾಗಿ ರೂಪುಗೊಳ್ಳುತ್ತದೆ.

ಮಳೆ ನೀರನ್ನು ಭೂಮಿಯಲ್ಲೇ ಇಂಗಿಸಲು ನೆರವಾಗುತ್ತದೆ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ~ ಎನ್ನುತ್ತಾರೆ ದೊಡ್ಡಬಳ್ಳಾಪುರದ ರೈತ ನಾರಾಣಪ್ಪ.

ಯಾವುದೇ ಯೋಜನೆಗಳು ಗ್ರಾಮ ಮಟ್ಟಕ್ಕೆ ತಲುಪಿದಾಗ ಮಾತ್ರ ಅದು ಯಶಸ್ವಿಗೊಳ್ಳಲು ಸಾಧ್ಯ ಎಂಬುದನ್ನು ಅರಿತಿರುವ ಮಂಡಳಿ ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಹೊಂಗೆ ಬೆಳೆಯುವಂತೆ ರೈತರನ್ನು ಉತ್ತೇಜಿಸಲು ಹಸಿರು ಹೊನ್ನು, ಬರಡು ಬಂಗಾರ, ಹಸಿರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ.

ಯೋಜನೆ ಅಡಿ ರೈತರಿಗೆ ಕಡಿಮೆ ಎತ್ತರ ಬೆಳೆಯುವ ಗುಣಮಟ್ಟದ ಸಸಿಗಳನ್ನು ಉಚಿತವಾಗಿ ನೀಡುತ್ತಿದೆ. ಜತೆಗೆ ಸಹಾಯ ಧನವನ್ನು ನೀಡುತ್ತಿದೆ. ಜೈವಿಕ ಇಂಧನ ಮೂಲದ ಮರಗಿಡಗಳನ್ನು ಬೆಳೆಯುವ 1 ಲಕ್ಷ ರೈತರಿಗೆ ಅನುದಾನ ನೀಡಲು ರಾಜ್ಯ ಸರ್ಕಾರ ರೂ.100 ಕೋಟಿ ಅನುದಾನವನ್ನು ತೆಗೆದಿರಿಸಿದೆ.

ಹೊಂಗೆ ಬೀಜಗಳಿಗೆ ಈಗ ಬಹು ಬೇಡಿಕೆ ಇದೆ. ಕಿಲೋಗೆ 15ರಿಂದ 20 ರೂ ಬೆಲೆ ಇದೆ. ಹೊಂಗೆ ಬೀಜದಿಂದ ಎಣ್ಣೆ ತೆಗೆದು ಮಾರಾಟ ಮಾಡಿದರೆ ಕಿಲೋಗೆ 60 ರೂ. ಸಿಗುತ್ತದೆ. ಎಣ್ಣೆ ತೆಗೆದ ನಂತರ ಹಿಂಡಿ ಕೂಡ ಸಿಗುತ್ತದೆ. ಹಿಂಡಿಯನ್ನು ಗೊಬ್ಬರವಾಗಿ ಬಳಸಬಹುದು ಅಥವಾ ಕಿಲೋಗೆ 15ರೂ ನಂತೆ ಮಾರಾಟ ಮಾಡಬಹುದು.

ಹಲವು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ  ಈಗ ಎಣ್ಣೆ ಸಂಸ್ಕರಿಸಿ ಬಯೋಡೀಸೆಲ್ ಆಗಿ ಪರಿವರ್ತಿಸುವ ಕೇಂದ್ರಗಳಿವೆ. ಹೊಂಗೆ ಎಣ್ಣೆ ಸಂಸ್ಕರಿಸುವಾಗ ಗ್ಲಿಸರಿನ್ ಮತ್ತು ಸೋಪ್ ವಾಟರ್ ಸಹ ದೊರಕುತ್ತದೆ. ಇದನ್ನು ಸೋಪು ತಯಾರಿಕೆಯಲ್ಲಿ ಬಳಸಬಹುದು.

ರಾಜ್ಯದಲ್ಲಿ ಪ್ರಸ್ತುತ 5ರಿಂದ 7ಲಕ್ಷ ಟನ್ ಹೊಂಗೆ ಬೀಜ ಸಂಗ್ರಹವಾಗುತ್ತಿದೆ. ಮಂಡಳಿ ಹೀಗಾಗಲೇ ರಾಜ್ಯದಾದ್ಯಂತ 25ರಿಂದ 30 ಎಣ್ಣೆ ತೆಗೆಯುವ ಘಟಕಗಳನ್ನು ತೆರೆದಿದೆ. ಬಯೋಡಿಸೇಲ್ ತಯಾರಿಕೆಗೆ ಸರಳ ತಂತ್ರಜ್ಞಾನ ಇದೆ. ರೈತರು ತಾವೇ ತಯಾರಿಸಿದ ಬಯೋಡೀಸೆಲ್ ಅನ್ನು ತಾವೇ ಬಳಕೆ ಮಾಡಿಕೊಳ್ಳಬಹುದು.
 

ಗ್ರಾಮಕ್ಕೆ ಬೇಕಾದ ವಿದ್ಯುತ್ ತಯಾರಿಸಬಹುದು. ಡೀಸೆಲ್ ಎಂಜಿನ್‌ನಿಂದ ಚಲಿಸುವ ಟ್ರ್ಯಾಕ್ಟರ್, ಟಿಲ್ಲರ್, ನೀರೆತ್ತುವ ಯಂತ್ರಗಳಿಗೆ ಬಳಸಿ ಡೀಸೆಲ್‌ಪೆಟ್ರೋಲ್ ಅವಲಂಬನೆಯಿಂದ ಮುಕ್ತರಾಗಬಹುದು.

ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಯ ರೂಪದಲ್ಲಿ ಜೈವಿಕ ಇಂಧನ ಕ್ರಾಂತಿ ಆಗಬೇಕಾದರೆ ರೈತರು ಹೆಚ್ಚು ಹೊಂಗೆ ಬೆಳೆಯಬೇಕು. ಇದು ಜನಾಂದೋಲನದ ಸ್ವರೂಪ ಪಡೆದುಕೊಂಡಾಗ ಮಾತ್ರ ನಾವು ಮುಂದಿನ ದಿನಗಳಲ್ಲಿ ಇಂಧನ ಸ್ವಾವಲಂಬನೆ ಸಾಧಿಸಲು ಸಾಧ್ಯ.

ಜೈವಿಕ ಇಂಧನ ಮಂಡಳಿಯು ರೈತರು ಬೆಳೆದ ಹೊಂಗೆ ಬೀಜ ಮಾರಾಟ ಮಾಡಲು ಮಧ್ಯವರ್ತಿಗಳ ಹಾವಳಿ ಇಲ್ಲದ ಮಾರುಕಟ್ಟೆ ಕಲ್ಪಿಸಿದೆ. ಜತೆಗೆ ಮೌಲ್ಯವರ್ಧನ ಚಟುವಟಿಕೆಗಳಾದ ಹಿಂಡಿ, ಬಯೋಗ್ಯಾಸ್, ಗ್ಲಿಸರಿನ್ ಬಳಕೆಗೂ ತಂತ್ರಜ್ಞಾನ ರೂಪಿಸಿದೆ.

ಇವೆಲ್ಲವೂ ರೈತರನ್ನು ಈ ಹೊಂಗೆ ಬೆಳೆಯುವತ್ತ ಆಕರ್ಷಿಸಿದೆ. ಈಗಾಗಲೇ ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅನೇಕ ರೈತರು ಹೊಂಗೆ ಬೆಳೆಯುತ್ತಿದ್ದಾರೆ. ಈ ರೈತರಿಗೆ ಹೊಂಗೆ ಬೆಳೆಯುವುದು ಲಾಭದಾಯಕ ಎಂಬುದು ಅರಿವಾಗಿದೆ. ಅವರ ಉತ್ಸಾಹ ಮಂಡಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಿದೆ.

`ವಿಶ್ವದಲ್ಲಿ ಇಂದು ಅತಿಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯ ಜೈವಿಕ ಇಂಧನ. ಅವಲಂಬನೆಯಿಂದ ಸ್ವಾವಲಂಬನೆ ಸಾಧಿಸಬೇಕಾದ್ದು ಇಂದಿನ ಜರೂರು. ರೈತರು ಹಾಗೂ ಸಣ್ಣ ಉದ್ದಿಮೆಗಳನ್ನು ಒಂದುಗೂಡಿಸಿ ಇಂಧನವನ್ನು ತಯಾರಿಸಿಕೊಳ್ಳುವ ಅನಿವಾರ್ಯತೆ ಇದೆ.

ಭವಿಷ್ಯದ ಇಂಧನ ಕೊರತೆಯ ಭೀಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ಸರ್ಕಾರ ಈಗ ಜೈವಿಕ ಇಂಧನ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಮೊನ್ನಪ್ಪ

 `ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಕೇಂದ್ರ ಸರ್ಕಾರ (ಸಿಎಸಿಪಿ) ಈಗಾಗಲೇ ಹೊಂಗೆ ಮತ್ತು ಜತ್ರೋಪಕ್ಕೆ ಸೂಕ್ತ ಬೆಲೆ ನಿಗದಿಪಡಿಸುವ ಸಂಬಂಧ ಮಂಡಳಿಯನ್ನು ಚರ್ಚೆಗೆ ಆಹ್ವಾನಿಸಿದೆ. ರೈತರು ತಮ್ಮ ಬೆಳೆಗಳಿಗೆ ಪೂರಕವಾಗಿ ಬೆಳೆಯುವ ಹೊಂಗೆ ಆದಾಯದ ಮೂಲವಾಗಿ ಪರಿಣಮಿಸಲಿದೆ ಎನ್ನುತ್ತಾರವರು.

ರಾಷ್ಟ್ರದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜೈವಿಕ ಇಂಧನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಷ್ಟ್ರದಲ್ಲಿಯೇ ಪ್ರಥಮವಾಗಿ `ಜೈವಿಕ ಇಂಧನ ಕಾರ್ಯಪಡೆ ಮಂಡಳಿ~ ರಚಿಸಿದೆ~ ಎನ್ನುತ್ತಾರೆ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ.

ಮುಗಿದು ಹೋಗುವ ಸಂಪನ್ಮೂಲವಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳ ಬಳಕೆಯಿಂದ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಕಚ್ಚಾತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

ನಮ್ಮದು ಬೇಸಾಯ ಪ್ರಧಾನ ದೇಶ. ಬೇಸಾಯದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವುದರ ಜತೆಗೆ ಜೈವಿಕ ಇಂಧನ ಮೂಲವನ್ನು ಸದೃಢಗೊಳಿಸುವುದು ಸರ್ಕಾರದ ಉದ್ದೇಶ. ಬರಡು ಭೂಮಿಯಲ್ಲಿ ಹೊಂಗೆ, ಬೇವು ಗಳನ್ನು ಬೆಳೆದು ಇಂಧನದಲ್ಲಿ ಸ್ವಾವಲಂಬನೆ ಸಾಧಿಸಬಹುದು ಎನ್ನುತ್ತಾರೆ  ರಾಮಕೃಷ್ಣ. 

ನಮ್ಮಲ್ಲಿ ತಂತ್ರಜ್ಞಾನದ ಕೊರತೆಯಿಲ್ಲ. ಆದರೆ ಇಚ್ಛಾಶಕ್ತಿ ಕೊರತೆ ಇದೆ. ಮಂಡಳಿಯ ಪ್ರಮುಖ ಉದ್ದೇಶ ಹೊಂಗೆ ಬೆಳೆಯುವ ರೈತನೇ ಅದರ ಬಳಕೆದಾರ ಆಗಬೇಕು ಎಂಬುದು. ಅಂದರೆ ಹೊಂಗೆ ಬೆಳೆಯುವುದರಿಂದ ಹಿಡಿದು ಬೀಜ ಸಂಸ್ಕರಿಸಿ ಅದನ್ನು ಬಯೋಡೀಸೆಲ್ ಆಗಿ ಪರಿವರ್ತಿಸಿ ಬೇಸಾಯದ ಚಟುವಟಿಕೆಯಲ್ಲಿ ಬಳಸಿಕೊಳ್ಳಬೇಕು ಎಂಬುದಾಗಿದೆ.

ಜೈವಿಕ ಇಂಧನ ಜನಾಂದೋಲನವಾಗಿ ರೂಪುಗೊಳ್ಳಬೇಕು; ರೈತರು ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬುದು ಮಂಡಳಿಯ ಆಶಯ. ರೈತರು ಹೊಂಗೆ ಬೆಳೆಯುವ ಇಚ್ಛಾಶಕ್ತಿ ತೋರಿದಲ್ಲಿ ಮಾತ್ರ ಸ್ವಾವಲಂಬನೆ ಸಾಧಿಸಲು ಸಾಧ್ಯ. ಇದರಲ್ಲಿ ದೇಶದ ಭವಿಷ್ಯದ ಭದ್ರತೆ ಅಡಕಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT