ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಡ, ಕೆಸರು ರಸ್ತೆ: ಒಳಚರಂಡಿ ಮಂಡಳಿಗೆ ಶಾಪ!

Last Updated 20 ಸೆಪ್ಟೆಂಬರ್ 2011, 9:00 IST
ಅಕ್ಷರ ಗಾತ್ರ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಸೇರಿದಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ವಿವಿಧೆಡೆ ರಸ್ತೆ ಅಗೆದು ಮ್ಯಾನ್‌ಹೋಲ್ ನಿರ್ಮಾಣ ಕಾಮಗಾರಿ ಬಳಿಕ ಪೂರ್ಣ ಪ್ರಮಾಣದಲ್ಲಿ ರಸ್ತೆ ದುರಸ್ತಿಗೊಳಿಸದಿರುವುದರಿಂದ ಜನರು ರಸ್ತೆಯಲ್ಲಿ ಹೊಂಡ, ಕೆಸರು, ದೂಳಿನ ಕಷ್ಟ ಎದುರಿಸಬೇಕಾಗಿದೆ.

ಇಲ್ಲಿನ ಬಂಟ್ವಾಳ-ಜಕ್ರಿಬೆಟ್ಟು ಮತ್ತು ಬಂಟ್ವಾಳ-ಬಸ್ತಿಪಡ್ಪು ಹಾಗೂ ಬಂಟ್ವಾಳ-ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ಮತ್ತಿತರ ಲಘು ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ನಡೆದಾಡಲು ಅಸಾಧ್ಯ ಎಂಬ ದುಸ್ಥಿತಿ ಎದುರಾಗಿದೆ.

ಪುರಸಭಾ ವ್ಯಾಪ್ತಿಯ ಲೊರೆಟ್ಟೊ, ಬಾರೆಕಾಡು, ಜಕ್ರಿಬೆಟ್ಟು, ಬಸ್ತಿಪಡ್ಪು, ಪಾಣೆಮಂಗಳೂರು, ಗೂಡಿನಬಳಿ, ಪರ್ಲಿಯಾ, ಕೈಕುಂಜೆ ಮತ್ತಿತರ ಕಡೆಗಳಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕಳೆದ ಎರಡು ವರ್ಷಗಳಿಂದ ಆರಂಭಗೊಂಡ ಮ್ಯಾನ್‌ಹೋಲ್ ನಿರ್ಮಾಣ ಹಾಗೂ ಆವೆಮಣ್ಣಿನ ಮಾದರಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆದಿತ್ತು.
 
ಇದೀಗ ಅವರು ಅಗೆದು ಹಾಕಿದ ರಸ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಅಥವಾ ಡಾಂಬರೀಕರಣಗೊಳಿಸದಿರುವ ಪರಿಣಾಮ ಕೆಲವೆಡೆ ರಸ್ತೆ ಕುಸಿತಕ್ಕೀಡಾಗಿದೆ. ಇನ್ನೂ ಕೆಲವೆಡೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದರಿಂದಾಗಿ ಇಲ್ಲಿನ ನಾಗರಿಕರು ಒಳಚರಂಡಿ ಮಂಡಳಿಗೆ ಹಿಡಿಶಾಪ ಹಾಕುವಂತಾಗಿದೆ.

ಎಲ್ಲೆಡೆ ಕೆಸರುಮಯಗೊಂಡು ಹೊಂಡಗಳೇ ತುಂಬಿಕೊಂಡಿರುವ ಈ ರಸ್ತೆಯಲ್ಲಿ ಪಾದಚಾರಿಗಳಿಗೆ ನಡೆದಾಡಲು ದುಸ್ತರವಾಗಿದೆ. ಒಂದೆಡೆ ಕೆಸರಿನ ಸಿಂಚನವಾದರೆ, ಇನ್ನೊಂದೆಡೆ ಬಿಸಿಲು, ದೂಳು ಹೇಳತೀರದು.

ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ ನಡೆದಿದ್ದು, ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ಭಾರೀ ಚರ್ಚೆ ನಡೆದಿತ್ತು.

ಈ ನಡುವೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಕಳಪೆ ಕಾಮಗಾರಿಯ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಆರಂಭದಲ್ಲಿ ನಡೆಸಿದ್ದ ಕರಾರಿನಂತೆ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣಕ್ಕಾಗಿ ಒಳಚರಂಡಿ ಮಂಡಳಿಯು ಲೋಕೋಪಯೋಗಿ ಇಲಾಖೆಗೆ ರೂ. 66 ಲಕ್ಷ ಮೊತ್ತ ಪಾವತಿಸಿದ್ದು, ಪುರಸಭೆಗೆ ಪಾವತಿಸಬೇಕಿದ್ದ ರೂ.1.34 ಕೋಟಿ ಮೊತ್ತ ಬಾಕಿ ಇರಿಸಿಕೊಂಡಿದೆ ಎಂದು ಪುರಸಭಾಧ್ಯಕ್ಷ ದಿನೇಶ ಭಂಡಾರಿ ಅವರು  `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT