ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆರಹಿತ ಗ್ರಾಮಸಂಕುಲ

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ ತಾಲ್ಲೂಕಿನ ಈ ಗ್ರಾಮಗಳ ಮನೆಗಳಲ್ಲಿ ಮುಂಜಾನೆ ಒಲೆಗಳಿಂದ ಹೊಗೆ ಬರುವುದಿಲ್ಲ. ಅಂದರೆ ಇಲ್ಲಿ ಅಡುಗೆ ಮಾಡುವುದಿಲ್ಲ ಎಂದಲ್ಲ. ಅಡುಗೆ ಮಾಡುತ್ತಾರೆ. ಆದರೆ ಹೊಗೆ ಮಾತ್ರ ಇಲ್ಲ. ಅಚ್ಚರಿಯಾಯಿತೇ? ಈ ಊರುಗಳ ಪ್ರತಿ ಮನೆಗಳಲ್ಲೂ ಗ್ಯಾಸ್ ಬಳಸುತ್ತಾರೆ. ಈ ಊರುಗಳ ಜನರು ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಕಂಪೆನಿಗಳನ್ನು ನಂಬಿಕೊಂಡಿಲ್ಲ.

ಬೆಳಗಾವಿ ತಾಲ್ಲೂಕಿನ ಕಡೋಲಿ, ಬಂಬರಗೆ, ಅಗಸಗೆ, ನಿಂಗ್ಯಾನಟ್ಟಿ, ಇದ್ದಲಹೊಂಡ, ಶಿವಾಪುರ ಮತ್ತಿತರ ಹಲವು ಗ್ರಾಮಗಳ ಮನೆ, ಮನೆಗಳಲ್ಲಿ ದೀನಬಂಧು ಮಾದರಿಯ ‘ಗೋಬರ್ ಗ್ಯಾಸ್’ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆ ತಾಲ್ಲೂಕಿನ ಇತರ ಗ್ರಾಮಗಳಿಗೂ ವಿಸ್ತರಿಸಿಕೊಳ್ಳುತ್ತ ಸಾಗಿದೆ. ತಾಲ್ಲೂಕಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಗೋಬರ್ ಅನಿಲ ಘಟಕಗಳು  ಕಾರ್ಯ ನಿರ್ವಹಿಸುತ್ತಿವೆ. ಸಾವಿರಾರು ಮಹಿಳೆಯರಿಗೆ ಸೌದೆ ಒಲೆಗಳಲ್ಲಿ ಅಡುಗೆ ಮಾಡುವುದು ತಪ್ಪಿದೆ.

ಈ ಊರುಗಳ ಗೃಹಿಣಿಯರು ಮೊದಲು ಹಸಿ ಕಟ್ಟಿಗೆ ಬಳಸಿ ಒಲೆಗಳಲ್ಲಿ ಅಡುಗೆ ಮಾಡಲು ಪ್ರಯಾಸ ಪಡುತ್ತಿದ್ದರು. ಮಳೆಗಾಲದಲ್ಲಿ ಅವರ ಕಷ್ಟ ಹೇಳತೀರದು. ಮಳೆಗಾಲ ಮುಗಿಯುವವರೆಗೆ ಬಳಸಲು ಬೇಕಾದ ಕಟ್ಟಿಗೆ, ಬೆರಣಿ ಇತ್ಯಾದಿಗಳನ್ನು ಅವರೇ ಸಂಗ್ರಹಿಸಿಕೊಳ್ಳಬೇಕಿತ್ತು.

 ‘ಜನ ಜಾಗರಣ ಸಂಸ್ಥೆ’ಯ ಮುಖ್ಯಸ್ಥ ಜೋ. ಚೆನಕಲ ಅವರು ಈ ಮಹಿಳೆಯರ ಸಂಕಷ್ಟಗಳನ್ನು ಕೊನೆಗೊಳಿಸಲು ಮನಸ್ಸು ಮಾಡಿದರು. ಆಗ ಹೊಳೆದದ್ದೇ ದೀನಬಂಧು ಮಾದರಿಯ ಗೋಬರ್ ಅನಿಲ ಘಟಕಗಳು. ಗ್ರಾಮಗಳ ಸ್ವಾವಲಂಬನೆಯ ಕನಸು ಹೊತ್ತ ಶಿವಾಜಿ ಕಾಗಣಿಕರ ಅವರು ಚೆನಕಲ ಅವರಿಗೆ ಸಾಥ್ ನೀಡಿದರು. ಪರಿಣಾಮ ಈಗ ಸಾವಿರಾರು ಮನೆಗಳನ್ನು ಗೋಬರ್ ಅನಿಲ ಬಳಕೆಯಾಗುತ್ತಿದೆ.

ಈ ಗ್ರಾಮಗಳ ಬಹುತೇಕ ಜನರು ದನಕರುಗಳನ್ನು ಸಾಕಿಕೊಂಡಿದ್ದಾರೆ. ಹಾಲು ಮಾರಿ ಕುಟುಂಬಗಳ ನಿರ್ವಹಣೆ ಮಾಡುತ್ತಾರೆ. ಗೊಬ್ಬರಕ್ಕೆ ಬಳಕೆಯಾಗುತ್ತಿದ್ದ ಸಗಣಿ ಬಳಸಿ ಈಗ ಅನಿಲ ಉತ್ಪಾದಿಸುತ್ತಾರೆ.

ಮೊದಲು ಉರುವಲು ಕಟ್ಟಿಗೆ ಸಂಗ್ರಹಿಸಲು ಕಾಡು-ಮೇಡು ಅಲೆಯುತ್ತಿದ್ದೆವು. ಈಗ ಅದು ತಪ್ಪಿದೆ. ಮೂರ್ನಾಲ್ಕು ವರ್ಷಗಳಿಂದ ಹೆಚ್ಚಿನ ಖರ್ಚಿಲ್ಲದೇ ಸಗಣಿ ಅನಿಲ ಉತ್ಪಾದಿಸಿ ಬಳಸುತ್ತಿದ್ದೇವೆ ಎನ್ನುತ್ತಾರೆ ಅಗಸಗೆ ಗ್ರಾಮದ ಗೃಹಿಣಿ ಸುಮಿತ್ರಾ ಪಾಟೀಲ.

ನಾಲ್ಕೈದು ವರ್ಷಗಳ ಹಿಂದೆ ಒಂದು ಅನಿಲ ಘಟಕ ಆರಂಭಿಸಲು 25 ಸಾವಿರ ರೂ ಖರ್ಚಾಗುತ್ತಿತ್ತು. ಕೆಲವರು ಅನಿಲ ಘಟಕ ನಿರ್ಮಿಸಲು ನಮ್ಮಲ್ಲಿ ಹಣ ಇಲ್ಲ ಎಂದರೆ ಇನ್ನು ಕೆಲವರು ಅದು ಯಶಸ್ವಿಯಾದೀತೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದರು.

ಅವರನ್ನೆಲ್ಲ ಒಪ್ಪಿಸುವುದು ನಮಗೆ ಸವಾಲಾಗಿತ್ತು.  ಕಡೋಲಿ ಗ್ರಾಮದ ಶೆಟಗೊಂಡ ದೇಸಾಯಿ ಅವರು ಜನರನ್ನು ಒಪ್ಪಿಸಿದರು ಎನ್ನುತ್ತಾರೆ ಶಿವಾಜಿ ಕಾಗಣಿಕರ್.

ಶೌಚಾಲಯಗಳ ತ್ಯಾಜ್ಯವನ್ನು ಅನಿಲ ಘಟಕದೊಳಕ್ಕೆ ಬರುವಂತೆ ಮಾಡುವ ಪ್ರಸ್ತಾವ ಬಹುತೇಕರಿಗೆ ಇಷ್ಟವಾಗಿರಲಿಲ್ಲ. ಅದರಿಂದ ಬರುವ ಅನಿಲ ಬಳಸಿ ಮಾಡಿದ ಪದಾರ್ಥಗಳನ್ನು ತಿನ್ನುವುದು ಹೇಗೆ ಎಂಬ ಹಿಂಜರಿಕೆ ಕೆಲವರಿಗೆ. ನಂತರ ಎಲ್ಲರನ್ನೂ ಒಪ್ಪಿಸಲಾಯಿತು. ಶೌಚಾಲಯಕ್ಕೆ  ಪ್ರತ್ಯೇಕ ಸೇಫ್ಟಿ ಟ್ಯಾಂಕ್ ನಿರ್ಮಿಸುವುದು ತಪ್ಪುತ್ತದೆ. ಹಣ ಉಳಿತಾಯ ಆಗುತ್ತದೆ ಎಂದಾಗ ಒಪ್ಪಿದರು. ಅನಿಲ ಘಟಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ 10ಸಾವಿರ ರೂ ಸಹಾಯ ಧನ ನೀಡಿದೆ ಎನ್ನುತ್ತಾರೆ ಜೋ. ಚೆನಕಲ.
ಅನಿಲ ತಯಾರಿಕೆ ನಂತರ ಹೊರಬರುವ ಸ್ಲರಿ ಉತ್ತಮ ಗೊಬ್ಬರ. ಗೋಬರ್ ಘಟಕ ನಿರ್ಮಾಣ ನಂತರ ಗಿಡ,ಮರಗಳನ್ನು ಕಡಿಯುವುದು ಕಡಿಮೆಯಾಗಿದೆ. ಮಹಿಳೆಯರ ಆರೋಗ್ಯ ಸುಧಾರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT