ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಪಾಡಿನ ಮಾತು

Last Updated 4 ಜೂನ್ 2012, 19:30 IST
ಅಕ್ಷರ ಗಾತ್ರ

ಮುತ್ತುಗಳು ಮಾತಾಡೋ ಹೊತ್ತಲ್ಲಿ
ಮಾತುಗಳೇ ಮುತ್ತಂತಿದ್ದಾಗ
ಮಾತಿಗಿಂತ ಮತ್ತೇನಿದೆ?
ಇದೇ ಮಾತಿನ ಮತ್ತು
ಮಾತ್‌ಮಾತಿನ ಗಮ್ಮತ್ತು!

ಆರ್‌ಜೆ ಅಂದರೆ ಬಾಯಿ ತುಂಬಾ ಮಾತನಾಡುವವರಲ್ಲ, ಏನು ಮಾತಾಡ್ಬಾರ‌್ದು ಅಂತ ಗೊತ್ತಿರೋರು. ಮಾತಿಗೇನ್ರೀ ಎಲ್ಲರೂ ಆಡ್ತಾರೆ, ಹಾಗಂತ ಎಲ್ಲರೂ ಆರ್‌ಜೆ ಆಗಕ್ಕೆ ಆಗುತ್ತಾ? ಒಂದಂತೂ ನಿಜ, ವಟವಟ ಅಂತ ಮಾತಾಡೋರು ಆರ್‌ಜೆಗಳಲ್ಲ.

ನಮ್ಮ ಮಾತಿಗೆ ಇನ್ನೊಬ್ಬರು ಕಾಯೋ ಹಾಗೆ ಇರಬೇಕು. ಅದ್ಕೇ ರೇಡಿಯೋ ಸಿಟಿಯಲ್ಲಿ ಮಾತನಾಡಿದ ಐದು ವರ್ಷವೂ ನಾನು ಎಷ್ಟು ಬೇಕೋ ಅಷ್ಟೇ ಮಾತಾಡಿದ್ದೆ. ಕೇಳುಗರು ಹಾಡು ಮುಗಿದು ಜೋಶಿ ಯಾವಾಗ ಮಾತಾಡುತ್ತಾನೆ ಎಂದು ಕಾಯುತ್ತಿದ್ದರು. `ಟಾಪ್ 1~ ಆರ್‌ಜೆ ಎಂದು ಗುರುತಿಸಿಕೊಳ್ಳುತ್ತಲೇ ಕೆಲಸ ಬಿಟ್ಟೆ. ಬೆಂಗಳೂರಿನಾಚೆಗೂ ಗುರುತಿಸಿಕೊಳ್ಳಬೇಕು ಎಂಬ ಬಯಕೆ ಐದು ವರ್ಷಗಳ ಮಾತಿಗೆ ಪೂರ್ಣವಿರಾಮ ಹಾಕಿತು.

ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಬಾಲನಟನಾಗಿ. ಏಳನೇ ವಯಸ್ಸಿನಲ್ಲಿ ನಟಿಸಿದ `ನಮ್ಮೂರ ಮಂದಾರ ಹೂವೆ~ ನನ್ನ ಮೊದಲ ಚಿತ್ರ. ಶಾಲೆಯೂ ಸೇರಿ ಸಾರ್ವಜನಿಕವಾಗಿ ಡ್ಯಾನ್ಸ್ ಕಾರ್ಯಕ್ರಮ ನೀಡುವ ಮೂಲಕ ಗುರುತಿಸಿಕೊಂಡಿದ್ದ ನಾನು ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ಕಣ್ಣಿಗೂ ಬಿದ್ದೆ. ಅಲ್ಲಿ ತರಲೆ ಹುಡುಗನಾಗಿ ಕಾಣಿಸಿಕೊಂಡೆ. ಆ ಬಳಿಕ `ಅಪ್ಪು~, `ಮಿಂಚಿನ ಓಟ~, `ಕಂಠಿ~, `ನನ್ನ ಕನಸಿನ ಹೂವೆ~ ಸೇರಿದಂತೆ ಸುಮಾರು 45 ಚಿತ್ರಗಳಲ್ಲಿ ನಟಿಸಿದೆ.

ರೇಡಿಯೋ ಜಾಕಿಯಾಗಿದ್ದು ಹೊಟ್ಟೆಪಾಡಿಗಾಗಿ. ಕಲಾವಿದನಿಗೆ ಮಾಧ್ಯಮವಿಲ್ಲದೆ ಹೋದರೆ ಅನ್ನವಿಲ್ಲ. ಅದಕ್ಕಾಗಿ ರೇಡಿಯೋ ಬಳಸಿಕೊಂಡೆ. ವಿನಾಯಕ ಜೋಷಿ ಕಾರ್ಯಕ್ರಮ ನಿರೂಪಕನಾಗಿದ್ದಾನೆ ಅಂದಾಗ ಕೇಳುಗರು ಗೊಂದಲದಲ್ಲಿದ್ದರು. ಈವರೆಗೆ ಟೀವಿ ಪರದೆಯಲ್ಲಿ ಕಂಡ ಜೋಷಿಯೇ ಇಲ್ಲಿ ಮಾತಿಗಿಳಿದಿದ್ದಾನೆ ಎಂಬುದು ಬಹುತೇಕರಿಗೆ ತಿಳಿದಿರಲಿಲ್ಲ. ನಾನು ಯಾರು ಅಂತ ತಿಳಿಯುವ ಮೊದಲೇ ಮಾತಿನ ಧಾಟಿ ಅವರಿಗೆ ಇಷ್ಟವಾಗಿತ್ತು.

ಆವರೆಗೆ ನಟನೆಯನ್ನೇ ಬಂಡವಾಳ ಮಾಡಿಕೊಂಡಿದ್ದ ನನಗೆ ಮಾತಿನಲ್ಲೇ ಮೋಡಿ ಮಾಡುವ ರೇಡಿಯೋ ವಿಶಿಷ್ಟ ಪ್ರಕಾರ ಎನಿಸುತ್ತಿತ್ತು. ಇಲ್ಲಿ ನವರಸಗಳಿಗೆ ಅವಕಾಶವಿಲ್ಲ. ಅವೆಲ್ಲವನ್ನೂ ಸ್ವರದಲ್ಲಿ ತುಂಬಿ ಕೊಡಬೇಕು. ಕೇಳುಗರ ಹೃದಯಕ್ಕೂ ಇಳಿದು, ಅವರ ಭಾವಕ್ಕೆ ಜೀವ ತುಂಬುವಂತೆ ಮಾತನಾಡುವುದು ಇಷ್ಟವಾಗುತ್ತಿತ್ತು.

ಹಿಂದೆಲ್ಲಾ ಆರ್‌ಜೆಗಳನ್ನೂ ಸೆಲೆಬ್ರಿಟಿ ರೀತಿಯಲ್ಲೇ ನಡೆಸಿಕೊಳ್ಳುತ್ತಿದ್ದರು. ಈಗ ಅವರ ಮೌಲ್ಯ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ- ಆರ್‌ಜೆ ಆಯ್ಕೆಗೆ ಅರ್ಹತೆಯ ಮಾನದಂಡ ಬಳಸದಿರುವುದು. ಸರಿಯಾಗಿ ಮಾತು ಪೋಣಿಸಲೂ ಬಾರದ, ತಪ್ಪುತಪ್ಪಾಗಿ ಉಚ್ಚರಿಸುವವರೆಲ್ಲಾ ರೇಡಿಯೋಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೊಸಬರಿಗೆ ನಾನು ಹೇಳುವುದಿಷ್ಟೇ- ಯಾರದ್ದೋ ಮಾತು ಕೇಳಿ ಆರ್‌ಜೆ ಆಗಬೇಡಿ. ಮೊದಲು ಪದವಿ ಮುಗಿಸಿಕೊಳ್ಳಿ. ಪ್ರಸ್ತುತ ಆಗುಹೋಗುಗಳ ಮಾಹಿತಿ ನಿಮ್ಮಲ್ಲಿರಲಿ. ಯಾವುದೇ ವಿಷಯದ ಬಗ್ಗೆ ಕೇಳುಗರನ್ನು ಮಾತಿಗೆಳೆಯುವ ಮುನ್ನ ನಿಮಗೂ ಒಂದಿಷ್ಟು ಮಾಹಿತಿ ಇರಲಿ.

ರೇಡಿಯೋ ಜಾಕಿಗಳಿಗಾಗಿ ಹಲವಾರು ಸಂಸ್ಥೆಗಳು ಸರ್ಟಿಫಿಕೇಟ್ ಕೋರ್ಸ್‌ಗಳನ್ನೂ ಪರಿಚಯಿಸಿವೆ. ಅವುಗಳಲ್ಲಿ ತರಬೇತಿ ಪಡೆಯಿರಿ. ಯಾವುದೇ ಸಂದರ್ಭದಲ್ಲಿ ಇನ್ನೊಬ್ಬರಿಗೆ ಬಕೆಟ್ ಹಿಡಿಯೋಕೆ ಹೋಗಬೇಡಿ. ಮುಂದಿನ ವರ್ಷದಿಂದ ಇನ್ನೂ 50 ರೇಡಿಯೋ ಸ್ಟೇಷನ್‌ಗಳು ಆರಂಭವಾಗಲಿವೆ. ಅದೃಷ್ಟದ ಬಾಗಿಲು ಸದಾ ತೆರೆದಿರುತ್ತದೆ...

ತಂದೆ ಆರಂಭಿಸಿದ್ದ ಜೋಷಿ ಚಿತ್ರ ಪ್ರೊಡಕ್ಷನ್‌ಗೆ ಮರುಜೀವ ತುಂಬಬೇಕು, ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಬೇಕು ಎಂಬುದು ಸದ್ಯದ ಕನಸು. `ಈ-ಟಿವಿ~ಯಲ್ಲಿ `ನಮ್ಮೂರ ಸವಿರುಚಿ~ ಕಾರ್ಯಕ್ರಮಕ್ಕೆ ನಿರೂಪಕನಾಗಿದ್ದೇನೆ. ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುವ ಸದಾವಕಾಶ ಇದು. ಈಗ ಮೂರು ಚಿತ್ರಗಳು ಕೈಲಿವೆ. ನಾಯಕನಾಗುವ ಅವಕಾಶಗಳು ಸಿಕ್ಕರೂ ಸಮಾಧಾನ ಪಡಿಸುವ ಕತೆ ಸಿಗಲಿಲ್ಲ. ಚಿತ್ರರಂಗದ ಮೇಲೆ ಭರವಸೆ ಇದೆ. ಒಳ್ಳೆ ಸಿನಿಮಾ ಮಾಡದೇ ಇದ್ದರೂ ಪರವಾಗಿಲ್ಲ, ಕೆಟ್ಟ ಸಿನಿಮಾ ಮಾಡಬಾರದು ಎಂಬುದಷ್ಟೇ ನನ್ನ ಪಾಲಿಸಿ.

                                 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT