ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಗುಂಟಾ ಹಿಂಗುಲಾಂಬಿಕೆ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ ಜಿಲ್ಲೆ ಹೊನಗುಂಟಾದಲ್ಲಿರುವ ಚಂದ್ರಲಾ ಪರಮೇಶ್ವರಿದೇವಿಗೆ (ಹಿಂಗುಲಾಂಬಿಕೆ) ವಿಶೇಷ ಶಕ್ತಿ ಇದೆ ಎಂಬುದು ಭಕ್ತಾದಿಗಳ ಅಚಲ ನಂಬಿಕೆ. ಚಾಲುಕ್ಯ ಶೈಲಿಯ ಶಿಖರ (ಗೋಪುರ, ಕಳಸ) ದೇವಸ್ಥಾನದ ವಾಸ್ತು ಹೊಂದಿದ ಇದು ಮೂಲತಃ ಸುಮಾರು 1,200 ವರ್ಷಗಳಷ್ಟು ಪುರಾತನ ಕ್ಷೇತ್ರ ಎಂದು ಹೇಳಲಾಗುತ್ತದೆ.

ಬಾದಾಮಿ ಚಾಲುಕ್ಯ ಅರಸರ ಇಷ್ಟ ದೇವತೆಯಾಗಿ, ಅವರಿಗೆ ಸದಾ ಶಕ್ತಿ ನೀಡುತ್ತಿದ್ದಳೆಂಬುದು ಚಂದ್ರಲಾ ಪರಮೇಶ್ವರಿ ಸುಪ್ರಭಾತದಲ್ಲಿ ಬರುವ `ಭುವನ ಚಕ್ರದಿ ಮೆರೆದ ಚಾಳುಕ್ಯ ಚಕ್ರಿಗಳ ಭುಜಬಲದ ಘನಶಕ್ತಿ ನೀನಾಗಿ ಕುಣಿದೆ~ ಎಂಬ ಸಾಲುಗಳಿಂದ ತಿಳಿದುಬರುತ್ತದೆ.

ಅಡ್ಡ ಗೋಡೆ: ಈ ದೇವಾಲಯದ ಕಟ್ಟಡವೇ ವಿಶಿಷ್ಟ ಹಾಗೂ ಅಪರೂಪ. `ರಂಗಮಂದಿರ~ (ಪ್ರಾಂಗಣ) ಪ್ರವೇಶಿಸದ ಹೊರತು ದೇವಿಯ ದರ್ಶನ ಮಾಡುವಂತಿಲ್ಲ.

ಯಾರೇ ಆಗಲಿ ದೇವಿಯನ್ನು ನೇರವಾಗಿ ನೋಡುವಂತಿಲ್ಲ. ಪ್ರವೇಶದ್ವಾರದಲ್ಲಿ ಇರುವ ಅಡ್ಡ ಗೋಡೆಯೇ  ಇದಕ್ಕೆ ಕಾರಣ. ಈ ಗೋಡೆಗೆ ಒಂದು ಚಿಕ್ಕ ಕಿಂಡಿ ಇದೆ. ಇದರ ಮೂಲಕ ದೇವಿಯ ಮುಖದರ್ಶನ ಪಡೆದು ಎಡಕ್ಕೆ ತಿರುಗಿ ಹೋದರೆ `ರಂಗಮಂದಿರ~ ಸಿಗುತ್ತದೆ. ಅಲ್ಲಿಂದ ಮಾತ್ರ ನೇರವಾಗಿ ಗರ್ಭಗುಡಿಯಲ್ಲಿರುವ ದೇವಿ ದರ್ಶನ ಪಡೆಯಬಹುದಾಗಿದೆ.

ಸೂರ್ಯೋದಯ ವೇಳೆ ನೇರ ಮತ್ತು ಸೂರ್ಯಾಸ್ತಮಾನದ ವೇಳೆ ಹೊಂಗಿರಣ ದೇವಸ್ಥಾನದ ಮುಂದಿರುವ ಧ್ವಜಸ್ತಂಭದ ಮೇಲೆ ಬಿದ್ದು ಗೋಡೆ ಕಿಂಡಿ ಮುಖಾಂತರ ಅಮ್ಮನ ಮುಖಕ್ಕೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷತೆ.

ಇದು ಕಾಗಿಣಾ, ಭೀಮಾ ನದಿಗಳ ಸಂಗಮ. ಕಾಗಿನಾ ನದಿ ಉತ್ತರದಿಂದ ದಕ್ಷಿಣಾಭಿಮುಖವಾಗಿ ಹಾಗೂ ಭೀಮಾ ಪಶ್ಚಿಮದಿಂದ ಪೂರ್ವಾಭಿಮುಖ ಹರಿದು ಇಲ್ಲಿ ಸಂಗಮಗೊಂಡಿರುವುದು ಸೃಷ್ಟಿಯ ಸೋಜಿಗವೇ ಸರಿ ಎನ್ನುತ್ತಾರೆ ಇಲ್ಲಿಯ ಅರ್ಚಕ ಅಶೋಕ ಜೋಶಿ.

ಹಿಂಗುಲಾಂಬಿಕೆಗೆ ಚಂದ್ರಲಾ ಪರಮೇಶ್ವರಿ ಎನ್ನುವ ಇನ್ನೊಂದು ಹೆಸರೂ ಇದೆ. ಸ್ಥಳ ಮಹಾತ್ಮೆಯ ಪ್ರಕಾರ ಈಕೆ ಈಗಿನ ಆಫ್ಘಾನಿಸ್ತಾನದ ದೇವಿ. ನಾರಾಯಣ ಮುನಿಯ ಪತ್ನಿಯನ್ನು ಅಪಹರಿಸಿದ ಕಾಮಾಂಧ ದೊರೆ ಸೇತುರಾಜನನ್ನು ಶಿಕ್ಷಿಸಲು ಈಕೆ ಮುನಿಯ ಕೋರಿಕೆಯಂತೆ ಇಲ್ಲಿ ಬಂದು ನೆಲೆಸಿದವಳು. 
  
ಪೂಜಾ ವಿಶೇಷ

ಸನ್ನತಿಯಲ್ಲಿರುವ ಹಿಂಗಲಾಂಬಿಕೆಯ (ಚಂದ್ರಲಾ ಪರಮೇಶ್ವರಿ) ಪಾದುಕೆ ಪೂಜೆ ಮಾಡಿದ ಭಕ್ತರು ಬಂದ ನಂತರವಷ್ಟೇ ನಿತ್ಯವೂ ಹೊನಗುಂಟಾದಲ್ಲಿ ಮಧ್ಯಾಹ್ನದ ಪೂಜೆ ನಡೆಯುತ್ತದೆ. ಸನ್ನತಿಗೆ ಬಂದವರು ಹೊನಗುಂಟಾಗೂ ಬಂದು ದರ್ಶನ ಪಡೆಯದ ಹೊರತು ಯಾತ್ರೆ ಪೂರ್ಣಗೊಳ್ಳದು ಎಂದು ಹೇಳಲಾಗುತ್ತದೆ.

ಉತ್ಸವ, ಪೂಜೆ: 
ಚೈತ್ರಮಾಸದಲ್ಲಿ ವದ್ಯ ಪಂಚಮಿ (ದೇವಿಪಂಚಮಿ) ಯಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ. ರಾತ್ರಿ 10ರಿಂದ ಬೆಳಗಿನ 5ರ ವರೆಗೆ ದೇವಸ್ಥಾನದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ, ಆಶ್ವೀಜದಲ್ಲಿ ನವರಾತ್ರಿ ಉತ್ಸವಕ್ಕೆ ದೇಶ-ವಿದೇಶಗಳಿಂದ ಭಕ್ತರುಗಳು ಬರುತ್ತಾರೆ.

ಮಾರ್ಗ:  ಗುಲ್ಬರ್ಗದಿಂದ 27 ಕಿ.ಮೀ. ದೂರದಲ್ಲಿದೆ ಶಹಾಬಾದ್. ಅಲ್ಲಿಂದ 8 ಕಿ.ಮೀ. ಮುಂದೆ ಹೋದರೆ ಹೊನಗುಂಟಾ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT