ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ ತಾಲ್ಲೂಕು ಪಂಚಾಯ್ತಿಗೆ ಅವಿರೋಧ ಆಯ್ಕೆ

Last Updated 8 ಡಿಸೆಂಬರ್ 2012, 6:34 IST
ಅಕ್ಷರ ಗಾತ್ರ

ಹೊನ್ನಾಳಿ:  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಪ್ರಭಾವತಿಬಾಯಿ ಜುಂಜಾನಾಯ್ಕ ಹಾಗೂ ವಿಶಾಲಾಕ್ಷಮ್ಮ ಆಲ್ಬರ್ಟ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಡಿ. 4ರಂದು ನಿಗದಿಯಾಗಿದ್ದ ಚುನಾವಣೆ ಸದಸ್ಯರ ಕೋರಂ ಕೊರತೆಯಿಂದ ನಡೆದಿರಲಿಲ್ಲ. ಉಪ ವಿಭಾಗಾಧಿಕಾರಿ ನಾಗರಾಜ್ ಡಿ. 7ಕ್ಕೆ ಚುನಾವಣೆ ಮುಂದೂಡಿದ್ದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ `ಅ' ವರ್ಗಕ್ಕೆ ಮೀಸಲಾಗಿತ್ತು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಪ್ರಶ್ನಿಸಿ ಕಾಂಗ್ರೆಸ್‌ನ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಪ್ರಥಮ ಪೀಠ ಈ ಅರ್ಜಿಯನ್ನು ವಜಾಗೊಳಿಸಿತ್ತು. ಮತ್ತೆ ಕಾಂಗ್ರೆಸ್‌ನ ಸದಸ್ಯರು ದ್ವಿತೀಯ ಪೀಠಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.

ಆದರೆ, ಈವರೆಗೂ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂಬ ಆದೇಶ ನ್ಯಾಯಾಲಯದಿಂದ ಬಾರದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮಂಗಳವಾರ ಚುನಾವಣಾ ಪ್ರಕ್ರಿಯೆ ನಡೆಸಲು ಮುಂದಾಗಿದ್ದರು.

ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ ಐವರು, ಬಿಜೆಪಿಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಾಂತರಾಜ್ ಪಾಟೀಲ್, ಮುಖಂಡರಾದ ಎಂ.ಪಿ. ರಮೇಶ್, ಎಂ.ಪಿ. ರಾಜು ಇದ್ದರು.

ಹೈಕೋರ್ಟ್ ಆದೇಶ

ಬೆಂಗಳೂರು: ಹೊನ್ನಾಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಯ ಫಲಿತಾಂಶ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

`ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಪಟ್ಟಿ ಸರಿಯಾಗಿಲ್ಲ. ಹಾಗಾಗಿಚುನಾವಣೆಗೆ ತಡೆ ನೀಡಬೇಕು' ಎಂದು ಕೋರಿ ಟಿ.ಎಸ್. ಕೃಷ್ಣಪ್ಪ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT