ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ ಸ್ಮಾರಕಗಳಿಗೆ ಭೇಟಿ

ಶೈಕ್ಷಣಿಕ ಅಂಗಳ
Last Updated 14 ಡಿಸೆಂಬರ್ 2013, 9:20 IST
ಅಕ್ಷರ ಗಾತ್ರ

ಹಳೇಬೀಡು: ಇತಿಹಾಸದ ಅರಿವು ಮೂಡಿಸುವುದರೊಂದಿಗೆ ಪ್ರಾಚೀನ ಕಾಲದ ಕಲೆ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸ­ಬೇಕು. ಹೊಯ್ಸಳ ನಾಡಿನ ಮಕ್ಕಳು ಹೊಯ್ಸಳರ ಇತಿಹಾಸವನ್ನು ಬಲ್ಲವರಾಗಬೇಕು ಎಂದು ಹಳೇಬೀಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಈಚೆಗೆ ಹೊಯ್ಸಳ ಸ್ಮಾರಕಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕೆಲಸ ನಡೆಸಿದರು.

ಹೊಯ್ಸಳೇಶ್ವರ, ಕೇದಾರೇಶ್ವರ ದೇವಾಲಯ ಜೈನ ಬಸದಿ, ನಗರೇಶ್ವರ ಸಂಕೀರ್ಣ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ  ಶಿಲ್ಪಕಲೆಯನ್ನು ಕಂಡು ನಿಬ್ಬೆರಗಾದರು. ಹೊಯ್ಸಳರ ಉಗಮದಿಂದ ಅಂತ್ಯದವರೆಗೆ ವಿಷಯವನ್ನು ಅರಿತುಕೊಂಡರು.

‘ಅಂದಿನ ಕಾಲದಲ್ಲಿ ಗುಣಮಟ್ಟಕ್ಕೆ ಮಹತ್ವ ನೀಡಿದ್ದರಿಂದ 900 ವರ್ಷ ಕಳೆದರೂ ಸ್ಮಾರಕಗಳು ಇಂದಿಗೂ ಅಚ್ಚಳಿಯದ ಉಳಿದಿವೆ. ರಾಜರ ಕಾಲದಲ್ಲಿ ಇಂದಿನ ವಾಸ್ತುಶಿಲ್ಪಿಗಳಿಗೂ ಮಿಗಿಲಾದ ತಂತ್ರಜ್ಞರು ಇದ್ದರು ಎಂಬುದಕ್ಕೆ ಸ್ಮಾರಕಗಳು ಸಾಕ್ಷಿಯಾಗಿವೆ. ಶತ್ರುಗಳು ದೇಗುಲಗಳ ಮೇಲೆ ದಾಳಿ ಮಾಡದಿದ್ದರೆ, ಹೊಯ್ಸಳ ಸಾಮ್ರಾಜ್ಯದ ವೈಭವಕ್ಕೆ ಮತ್ತಷ್ಟು ಮೆರುಗು ಬರುತ್ತಿತ್ತು’ ಎಂದು ಹೇಳುವಾಗ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು.

ಸ್ಮಾರಕಗಳ ಬಗ್ಗೆ ಮಾಹಿತಿ ನೀಡಿದ ಮಾರ್ಗದರ್ಶಿಗಳು ಹಾಗೂ ಇತಿಹಾಸಕಾರರೊಂದಿಗೆ ಚರ್ಚೆ ನಡೆಸಿದ ವಿದ್ಯಾರ್ಥಿಗಳು ಪಠ್ಯ ಮೀರಿದ ಜ್ಞಾನ ಸಂಪಾದಿಸಿದರು. ಇತಿಹಾಸ ಆಯ್ಕೆ ಮಾಡಿಕೊಂಡ ಕಲಾ ವಿದ್ಯಾರ್ಥಿಗಳು ಮಾತ್ರವಲ್ಲದೆ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ಭಾಗವಹಿಸಿ ಇತಿಹಾಸದ ಬಗ್ಗೆ ಅರಿತು ಕೊಂಡರು.

ಪ್ರಾಚಾರ್ಯ ಭೈರೇಶಪ್ಪ ಅವರ ಸಲಹೆ ಮಾರ್ಗದರ್ಶನದಲ್ಲಿ ಉಪನ್ಯಾಸಕರಾದ ಧರ್ಮೇಗೌಡ, ಹಾಲಸಿದ್ದಪ್ಪ, ಮೊಹನ್ ಕುಮಾರ್‌, ನಾಗರಾಜು, ಫಿರ್ಧೋಸ್‌, ಖಾನಂ, ಗೋಮತಿ, ರೋಹಿಣಿ, ಗೀತಾ ವಿದ್ಯಾರ್ಥಿಗಳೊಂದಿಗೆ ಸ್ಮಾರಕ ಸಂದರ್ಶನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT