ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೊರ ಅಭ್ಯರ್ಥಿಗೆ ಅವಕಾಶ ಇಲ್ಲ'

Last Updated 24 ಡಿಸೆಂಬರ್ 2012, 6:59 IST
ಅಕ್ಷರ ಗಾತ್ರ

ವಿಜಾಪುರ: `ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಬೇಕು. ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡುವುದು ಬೇಡ ಎಂದು ಕೆಪಿಸಿಸಿಗೆ ತಿಳಿಸಿದ್ದೇವೆ' ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಸುಣಗಾರ ಹೇಳಿದರು.

`ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಒಬ್ಬರು ತಮಗೇ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ ಎಂದು ಹೇಳುತ್ತ ನನ್ನ ಸಿಂದಗಿ ಮತಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ವಿಜಾಪುರ ನಗರ ಮತಕ್ಷೇತ್ರದಲ್ಲಿಯೂ ಇಂತಹ ಘಟನೆ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೆಪಿಸಿಸಿಯನ್ನು ಕೋರಿದ್ದೇವೆ' ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಯಸುವ ಆಕಾಂಕ್ಷಿಗಳಿಂದ ವೀಕ್ಷಕರು ಅರ್ಜಿ ಪಡೆದುಕೊಂಡಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದಿಂದ ಹಾಲಿ ಶಾಸಕ ಸಿ.ಎಸ್. ನಾಡಗೌಡ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ವಿಜಾಪುರ ನಗರ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ 28 ಜನ ಅರ್ಜಿ ಸಲ್ಲಿದ್ದಾರೆ' ಎಂದರು.

`ಪ್ರತಿ ವಿಧಾನಸಭಾ ಕ್ಷೇತ್ರಗಳಿಂದ ಏಳು ಜನ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಲ್ಲಿಸುವಂತೆ ಎಐಸಿಸಿಯಿಂದ ಸೂಚನೆ ಬಂದಿದೆ. ಗೆಲ್ಲುವ ಸಾಧ್ಯತೆ, ಪಕ್ಷಕ್ಕೆ ಅಭ್ಯರ್ಥಿ ಸಲ್ಲಿಸಿದ ಕೊಡುಗೆ, ಆತನ ಜಾತಿಯ ಮತದಾರರ ಸಂಖ್ಯೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಆದ್ಯತೆಯ ಮೇಲೆ ಪಟ್ಟಿ ತಯಾರಿಸಿ ಕಳಿಸ ಲಾಗುವುದು. ಈಗಾಗಲೇ ಸಲ್ಲಿಕೆಯಾಗಿ ರುವ ಅರ್ಜಿಗಳನ್ನು ಇದೇ 29ರಂದು ಪರಿಶೀಲಿಸಿ, 30ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ ಮಿಸ್ತ್ರಿ ಅವರಿಗೆ ಸಲ್ಲಿಸಲಾಗುವುದು' ಎಂದು ಹೇಳಿದರು.

`ವಿಜಾಪುರ ಜಿಲ್ಲೆಯ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ವಿಜಾಪುರ ನಗರ ಮತಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂಬುದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಭಿಪ್ರಾಯ. ಆದರೆ, ಆ ಕುರಿತು ನಾವು ಠರಾವು ಪಾಸ್ ಮಾಡಿಲ್ಲ. ಆದರೂ, ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರಬೇಕಾಗುತ್ತದೆ' ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಆಗ್ರಹಿಸಿ ತುಂಗಭದ್ರಾ ನದಿಯಿಂದ ಕೃಷ್ಣಾ ನದಿ (ಕೂಡಲ ಸಂಗಮ)ದ ವರೆಗೆ ಕೆಪಿಸಿಸಿಯಿಂದ ನಡೆಯಲಿರುವ ಪಾದಯಾತ್ರೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಇತರ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲಾಗುವುದು. ಬಿಜೆಪಿ ಒಡೆದು ಮೂರು ಹೋಳಾಗಿದ್ದು, ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಕಾರ್ಯಕರ್ತರೊಟ್ಟಿಗೆ ಎಲ್ಲ ನಾಯಕರು ಶ್ರಮಿಸುತ್ತಿರುವುದಾಗಿ ಸುಣಗಾರ ಹೇಳಿದರು.

`ವಿಜಾಪುರ ನಗರ ಮತಕ್ಷೇತ್ರದಿಂದ ಸ್ಥಳೀಯ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಸಹ ವಿಜಾಪುರದ ಸಮಾವೇಶದಲ್ಲಿ ಇದನ್ನೇ ಹೇಳಿದ್ದಾರೆ' ಎಂದು ಕಾಂಗ್ರೆಸ್ ಮುಖಂಡ ಜಾವೀದ್ ಜಮಾದಾರ ಹೇಳಿದರು.

ಲೆಕ್ಕ: ನೂತನವಾಗಿ ನಿರ್ಮಿಸಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ 34.38 ಲಕ್ಷ ರೂಪಾಯಿ ದೇಣಿಗೆ ಬಂದಿದ್ದು, 33.61 ಲಕ್ಷ ಖರ್ಚಾಗಿದೆ ಎಂದು ಹೇಳಿದ ಸುಣಗಾರ ಜಮಾ-ಖರ್ಚಿನ ವಿವರ ಬಿಡುಗಡೆ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಅಜಾದ್ ಪಟೇಲ್, ವೈಜನಾಥ ಕರ್ಪೂರಮಠ, ಎ.ಎ. ಹೊರ್ತಿ, ಜ್ಯೋತಿರಾಮ ಪವಾರ, ಮಹಾದೇವಿ ಗೋಕಾಕ, ಡಾ.ಗಂಗಾಧರ ಸಂಬಣ್ಣಿ, ಎನ್.ಆರ್. ಪಂಚಾಳ, ಈರಪ್ಪ ಜಕ್ಕಣ್ಣವರ, ಐ.ಎಂ. ಇಂಡಿಕರ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT