ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಟೆ ಎಂದವ ಮರಳಿ ಬರಲೇ ಇಲ್ಲ!

Last Updated 7 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಪತ್ರಿಕೆ ವಿತರಕನ `ದುರಂತ~ ಸಾವು; ಕಂಗಾಲಾದ ಕುಟುಂಬ

ಹುಬ್ಬಳ್ಳಿ: ನಗರದ ಗಣೇಶಪೇಟೆ ತಬೀಬಲ್ಯಾಂಡ್‌ನಲ್ಲಿರುವ ಜಂಕ್ಲಿ ಚಾಳದಲ್ಲಿ ಮಹಡಿ ಮೇಲಿರುವ ಗುಡಿಸಲಿನಂತಹ ಆ ಪುಟ್ಟ ಮನೆಯಲ್ಲೆಗ ಸೂತಕದ ಛಾಯೆ. ಕುಟುಂಬದ ಆಧಾರವಾಗಿದ್ದ, ಪತ್ರಿಕಾ ವಿತರಕ ನಾರಾಯಣ ಬೀಳಗಿಕರ ರಸ್ತೆ ಅಪಘಾತಕ್ಕೆ ಬಲಿಯಾಗಿ ಎರಡು ದಿನ ಕಳೆದರೂ ಆ ಆಘಾತದಿಂದ ಅಲ್ಲಿದ್ದವರ‌್ಯಾರೂ ಹೊರ ಬಂದಿಲ್ಲ. ನಾರಾಯಣ ಅವರು ಇನ್ನಿಲ್ಲ ಎನ್ನು ವುದನ್ನು ಓರಗೆಯ ಜನರಿಗೂ ನಂಬಲಾಗುತ್ತಿಲ್ಲ!

`ನಸುಕಿಡೀ ಪತ್ರಿಕೆಗಳನ್ನು ಓದುಗರಿಗೆ ಹಂಚುವುದೆಂದರೆ ಅವನಿಗೆ ಪಂಚಪ್ರಾಣ. 35 ವರ್ಷಗಳಲ್ಲಿ ಊಟ, ತಿಂಡಿ ಬಿಟ್ಟಿರಬಹುದು. ಆದರೆ ಆ ಕೆಲಸ ಮಾತ್ರ ಒಂದೂ ದಿನ ತಪ್ಪಿಸಿಲ್ಲ. `ಅಮ್ಮಾ... ಹೊರಟೇ...~ ಎಂದು ಅವತ್ತೂ ಹೇಳಿ ಹೋಗಿದ್ದ. ಆದರೆ ಮರಳಿ ಬರಲೇ ಇಲ್ಲ, ಅವನ ಶವ ಬಂತು...~  ಎಂದು ಎಂಬತ್ತರ ಇಳಿವಯಸ್ಸಿನ ಕಾಶಿ ಬಾಯಿ ಆ ಮನೆಯ ಮೂಲೆಯಲ್ಲಿ ಕುಳಿತು ಎದೆಬಡಿದು ಕಣ್ಣೀರಿಡುತ್ತಿದ್ದರು.

ಇಂದಿರಾ ಗ್ಲಾಸ್ ಹೌಸ್ ಬಳಿಯ ತಿರುವಿನಲ್ಲಿ ಗುರುವಾರ ಮಧ್ಯರಾತ್ರಿ 1.30ರ ಸುಮಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಗ ನಾರಾಯಣ ಬೀಳಗಿಕರ (59) ಸಾವಿಗೀಡಾದ ಸುದ್ದಿ ಕೇಳಿದ ಕ್ಷಣದಿಂದ ಆ ವೃದ್ಧೆಯ ಅಳು ನಿಂತಿಲ್ಲ. ಮೃತ ನಾರಾಯಣ ಅವರ ಪತ್ನಿ ರೇಣುಕಾ, ಮಕ್ಕಳಾದ ವಿನೋದ, ಅಜಯ್ ಕೂಡಾ ಕಣ್ಣೀರುಡುತ್ತಿದ್ದರು. ನಾರಾಯಣ ಅವರ ನಾಲ್ವರು ಸಹೋದರಿ ಯರು, ಒಬ್ಬ ಸಹೋ ದರ... ಹೀಗೆ ಯಾರೂ ಆ ಪುಟ್ಟ ಸಂಸಾರ ವನ್ನು ಸಾಂತ್ವನಗೊಳಿಸುವ ಸ್ಥಿತಿ ಯಲ್ಲಿ ಇರಲಿಲ್ಲ.

`ಅವನು ಪತ್ರಿಕೆ ಹಂಚುವ ವೃತ್ತಿಯನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ. ಅಪ್ಪನನ್ನು ಕಳೆದುಕೊಂಡ ಬಳಿಕ ಆ ಸ್ಥಾನದಲ್ಲಿ ನಿಂತು ನಮಗೆ ಆಧಾರ-ಮಾರ್ಗದರ್ಶಕವಾಗಿದ್ದ. ನಿದ್ದೆ ಬಿಟ್ಟು, ಆರೋಗ್ಯ ಕೆಟ್ಟು ನಿರ್ವಹಿಸುವ ಪತ್ರಿಕೆ ಹಂಚುವ ಕೆಲಸ ಬಿಟ್ಟುಬಿಡು. ಬೇರೇನಾದರೂ ಮಾಡು ಎಂದು ನಾವೆಲ್ಲರೂ ಹೇಳುತ್ತಲೇ ಬಂದಿದ್ದೇವೆ. ಆದರೆ ಕಳೆದ 35 ವರ್ಷಗಳಿಂದ ಬೆಳೆಸಿಕೊಂಡಿದ್ದ ಪತ್ರಿಕಾ ನಂಟನ್ನು ಅದೇಗೆ ಅಷ್ಟು ಸುಲಭದಲ್ಲಿ ಬಿಡಲಿ ಎನ್ನುತ್ತಲೇ ಇದ್ದವ ನಮ್ಮನ್ನೆಲ್ಲ ಬಿಟ್ಟು ಹೋದ...~ ಎಂದು ಸಹೋದರಿ ಅನಸೂಯ ದುಃಖಿಸಿದರು.

`ಮಕ್ಕಳಿಬ್ಬರ ಪೈಕಿ ಹಿರಿಯವನಾದ ವಿನೋದ (28) ಅಂಗವಿಕಲ. ಮೂರು ವರ್ಷದ ವನಾಗಿದ್ದಾಗ ಬಂದ ಜ್ವರ ತಲೆಗೆ ಏರಿ ತೀವ್ರ ಅನಾರೋಗ್ಯಗೊಂಡು ನಂತರ ಚೇತರಿಸಿಕೊಂಡರೂ ಬಲಗೈ ಸ್ವಾಧೀನವನ್ನೇ ಕಳೆದುಕೊಂಡ. ಆದರೂ ಅಪ್ಪನ ಜೊತೆಗಿದ್ದು, ಕಳೆದ 20 ವರ್ಷಗಳಿಂದ ಹಳೆ ಬಸ್ ನಿಲ್ದಾಣ ದಲ್ಲಿ ಪತ್ರಿಕೆ ಹಂಚಿ ಒಂದಷ್ಟು ಸಂಪಾದಿಸುತ್ತಾನೆ. ಕಿರಿಯ ಮಗ ಅಜಯ್ ಬೇರೊಂದು ಪತ್ರಿಕಾ ಸಂಸ್ಥೆಯಲ್ಲಿ ಅದೇ ವೃತ್ತಿ ನಿರ್ವಹಿಸುತ್ತಿದ್ದಾನೆ. ಅಣ್ಣನ ಸಾವಿನಿಂದ ಅವನ ಕುಟುಂಬಕ್ಕೆ ಆಧಾರ ಇಲ್ಲದಾಗಿದೆ~ ಎಂದು  ಸಹೋದರಿಯರಾದ ರತ್ನಮಾಲಾ, ಶಾಂತಾ, ಸರೋಜಾ ಕೂಡಾ ಕಣ್ಣೊರೆಸಿಕೊಂಡರು. 

`35 ವರ್ಷದಿಂದ ಮನೆ ಮನೆ ಬಾಗಿಲಿಗೆ ಪತ್ರಿಕೆ ವಿತರಿಸುತ್ತಲೇ ಬದುಕು ಕಂಡ ಅಣ್ಣನಿಗೆ ಸಿಗುತ್ತಿದ್ದ ಹಣದಿಂದ ಕುಟುಂಬ ಸಾಕುವುದೇ ಕಷ್ಟವಾಗಿತ್ತು. ಹೀಗಾಗಿ ಸ್ವಂತಕ್ಕೊಂದು ಸೂರು ಕಟ್ಟಿಕೊಳ್ಳುವ ಬಗ್ಗೆ ಅವನು ಯೋಚಿಸಿಯೇ ಇಲ್ಲ. 

ಈ ಪುಟ್ಟ ಬಾಡಿಗೆ ಮನೆಯಲ್ಲೇ ಹೆಂಡತಿ, ಮಕ್ಕಳು, ತಾಯಿ ಜೊತೆ ಸಂತಸದಿಂದ ಇದ್ದ. ಅವನಿಗೆ ಈರೀತಿಯ ಸಾವು ಬರಬಾರದಿತ್ತು~ ಎಂದು ಸಹೋದರ ದೇವಾನಂದ ಅತ್ತರು. ಪತ್ರಿಕೆ ವಿತರಕರಾಗಿಯೇ ಕೆಲಸ ಮಾಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT