ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರನಾಡು ಆರ್ಥಿಕತೆಗೆ ಹೆಬ್ಬೊಳೆ `ಸೇತುವೆ'ಯ ಕಂಟಕ

ಮುಳುಗು ಸೇತುವೆ ಶಿಥಿಲ: ಎತ್ತರದ ಸೇತುವೆಗೆ ಬೇಡಿಕೆ
Last Updated 11 ಜುಲೈ 2013, 10:57 IST
ಅಕ್ಷರ ಗಾತ್ರ

ಹೊರನಾಡು (ಕಳಸ): ಬೇಸಿಗೆಯಲ್ಲಿ ವಸತಿಗೃಹದ ಒಂದು ಕೊಠಡಿಗೆ ದಿನವೊಂದಕ್ಕೆ 1 ಸಾವಿರ ರೂಪಾಯಿ ಬಾಡಿಗೆಯಾದರೆ ಈಗ ಮಳೆಗಾಲದಲ್ಲಿ 100 ರೂಪಾಯಿಗೂ ಗ್ರಾಹಕರಿಲ್ಲ.

ಮಳೆ ಕಡಿಮೆಯಾಗಿ ಹೆಬ್ಬೊಳೆಯ ಸೇತುವೆಯ ಮೇಲೆ ಹರಿದ ನೀರು ಇಳಿದರೂ ಹೊರನಾಡಿನತ್ತ ಪ್ರವಾಸಿಗರು ಮುಖ ಮಾಡದೆ ಇಡೀ ಊರು ಬಣಗುಡುತ್ತಿದೆ. ವ್ಯಾಪಾರ ವ್ಯವಹಾರ ನೆಲಕಚ್ಚಿದೆ.

ಇಡೀ ದಕ್ಷಿಣ ಭಾರತದಲ್ಲಿ ವ್ಯಾಪಿಸುತ್ತಿರುವ ಅನ್ನಪೂಣೇಶ್ವರೀ ದೇವಿಯ ಮಹಿಮೆಯು ಹೊರನಾಡಿನ ನೂರಾರು ಕುಟುಂಬಕ್ಕೂ ಅನ್ನಕ್ಕೆ ಆಸರೆ ಆಗಿದೆ. ಆದರೆ ಪ್ರತಿ ವರ್ಷದ ಮಳೆಗಾಲದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹೊರನಾಡಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕನಿಷ್ಟ ಆಗಿರುತ್ತದೆ. ಕಳಸ- ಹೊರನಾಡು ಹೆದ್ದಾರಿಯಲ್ಲಿರುವ ಹೆಬ್ಬೊಳೆ ಮುಳುಗು ಸೇತುವೆ ಇದಕ್ಕೆ ಕಾರಣ.

20 ವರ್ಷದ ಹಿಂದೆ ಹೆಬ್ಬೊಳೆಗೆ ಅಡ್ಡಲಾಗಿ ಮುಳುಗು ಸೇತುವೆ ನಿರ್ಮಿಸಲಾಗಿತ್ತು. ಹೊರನಾಡಿಗೆ ಪ್ರವಾಸಿಗರು ದೋಣಿ ಬಳಸಿ ಹೊಳೆ ದಾಟಿ ಬರುತ್ತಿದ್ದ ಪರಿಸ್ಥಿತಿಗೆ ಹೋಲಿಸಿದರೆ ಆ ಮುಳುಗು ಸೇತುವೆ ವರದಾನ ಆಗಿತ್ತು. ಸ್ವತಃ ಮುಖ್ಯಮಂತ್ರಿ ಬಂಗಾರಪ್ಪ ಬಂದು ಆ ಸೇತುವೆ ಉದ್ಘಾಟಿಸಿದ್ದೂ ಸುದ್ದಿಯಾಗಿತ್ತು.

ಆದರೆ ಆನಂತರದ ಹೊರನಾಡಿನ ಬೆಳವಣಿಗೆಯ ನಾಗಾಲೋಟ ಮಾತ್ರ ನಿಜಕ್ಕೂ ಅಚ್ಚರಿಯೇ ಸರಿ. ಕೆಲವೇ ವರ್ಷಗಳಲ್ಲಿ ಹೊರನಾಡಿನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಅತ್ಯಾಧುನಿಕ ವಸತಿಗೃಹಗಳು, ಅಂಗಡಿ ಮಳಿಗೆಗಳು  ಕೋಟ್ಯಂತರ ವೆಚ್ಚದಲ್ಲಿ ತಲೆ ಎತ್ತಿದವು.

ಹೊರನಾಡು ದೇವಸ್ಥಾನ ಆಡಳಿತ ಕೂಡ ಪ್ರವಾಸಿಗರಿಗೆ ಸುಸಜ್ಜಿತ ವಸತಿಗೃಹ, ಭೋಜನ ಶಾಲೆ ನಿರ್ಮಿಸಿತು. ಹೊರನಾಡಿನ ಅನ್ನಪ್ರಸಾದ ಈಗ ದೊಡ್ಡ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಲೇ ಇದೆ. ಆದರೆ ಮಳೆಗಾಲದಲ್ಲಿ ಅನೇಕ ಬಾರಿ ಮುಳುಗುವ ಹೆಬ್ಬೊಳೆ ಹೊರನಾಡನ್ನು ಮಳೆಗಾಲದ ನಾಲ್ಕು ತಿಂಗಳು ಪ್ರವಾಸಿಗರಿಂದ ದೂರ ಮಾಡಿದೆ.

ಕುದುರೆಮುಖ, ಕಳಕೋಡು, ಸಂಸೆಯಲ್ಲಿ ಒಂದು ದಿನದಲ್ಲಿ ನಾಲ್ಕೈದು ಇಂಚು ಮಳೆ ಸುರಿದರೆ ಹೆಬ್ಬೊಳೆ ಸೇತುವೆ ಮೇಲೆ ಭದ್ರೆ ತುಂಬಿ ಹರಿಯುತ್ತಾಳೆ. ಕೆಲವೊಮ್ಮೆ ಗಂಟೆಗಟ್ಟಲೆ ಸೇತುವೆಯು ಮುಳುಗಿರುತ್ತದೆ. `ಹೆಬ್ಬೊಳೆ ಸೇತುವೆ ಮುಳುಗಿತು ಎಂದರೆ ಎರಡು ವಾರ ಹೊರನಾಡಿಗೆ ಜನ ಬರುವುದಿಲ್ಲ. ಮಾಧ್ಯಮಗಳಲ್ಲಿ ಸೇತುವೆ ಮುಳುಗಿದ ಸುದ್ದಿ ಕೇಳಿದ ಪ್ರವಾಸಿಗರು ಹೊರನಾಡು ಪ್ರವಾಸ ರದ್ದು ಮಾಡುತ್ತಾರೆ. ಹೊರನಾಡಿನ ವ್ಯಾಪಾರ ಕ್ಕೆ ಆಘಾತ  ಆಗುತ್ತದೆ' ಎಂದು ವಸತಿಗೃಹ ಮಾಲೀಕ ಅಜಿತ್ ಕುಮಾರ್ ಹೇಳುತ್ತಾರೆ.

`ಹೆಬ್ಬೊಳೆಯಲ್ಲಿ ಎತ್ತರದ ಶಾಶ್ವತ ಸೇತುವೆ ನಿರ್ಮಿಸಿದರೆ ಹೊರನಾಡಿಗೆ ವರ್ಷವಿಡೀ ಯಾತ್ರಿಕರು ಬರುತ್ತಾರೆ. ಹೊರನಾಡಿನಲ್ಲಿ ಹಣದ ಚಲಾವಣೆ ವರ್ಷವಿಡೀ ಇರುತ್ತದೆ. ಸ್ಥಳೀಯ ಆರ್ಥಿಕತೆಗೆ ಇದು ಕೊಡುಗೆ ನೀಡುತ್ತದೆ' ಎಂದು ಹೋಮ್ ಸ್ಟೇ ನಡೆಸುವ ಮಳಲ್‌ಗದ್ದೆ ಜ್ವಾಲನಯ್ಯ ಹೇಳುತ್ತಾರೆ.

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾಗ ಹೆಬ್ಬೊಳೆಯಲ್ಲಿ ನೂತನ ಸೇತುವೆಗಾಗಿ ಪ್ರಸ್ತಾವನೆ ತರಿಸಿಕೊಂಡಿದ್ದರು. ಆದರೆ ಆನಂತರ ಈ ಪ್ರಸ್ತಾಪ ನೆನೆಗುದಿಗೆ ಬಿತ್ತು. ನೂತನ ಸೇತುವೆ ನಿರ್ಮಿಸಲು ಈ ಬಾರಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದು ಹೊರನಾಡಿನ ವ್ಯಾಪಾರಿ ಸಮೂಹದ ಒಕ್ಕೊರಲಿನ ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT