ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಳು ಹಾದಿಯಲ್ಲಿ ಅಣ್ಣಾ ತಂಡ: ಮುಂದಿನ ನಡೆ ಇನ್ನೂ ಗೊಂದಲ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಬಲ ಲೋಕಪಾಲ ಮಸೂದೆಗಾಗಿ ಅಣ್ಣಾ ತಂಡ ನಡೆಸುತ್ತಿರುವ ಹೋರಾಟದ ಮುಂದಿನ ನಡೆ ಏನು? ಈ ಪ್ರಶ್ನೆಗೆ ಸ್ವತಃ ತಂಡದಲ್ಲಿಯೇ ಸ್ಪಷ್ಟವಾದ ಉತ್ತರ ಇದ್ದಂತಿಲ್ಲ.

ಭಾರಿ ಪ್ರಚಾರದ ನಡುವೆಯೂ ಇತ್ತೀಚೆಗೆ ದೆಹಲಿ ಹಾಗೂ ಮುಂಬೈನಲ್ಲಿ ಅಣ್ಣಾ ತಂಡದ ಪ್ರತಿಭಟನೆ ವಿಫಲಗೊಂಡ ಬಳಿಕ ಇಂಥದ್ದೊಂದು ಪ್ರಶ್ನೆ ಇದೀಗ ಎದುರಾಗಿದೆ.

ಹೋರಾಟ `ಹೊರಳು ಹಾದಿ~ಯಲ್ಲಿರುವ ಈ ಹಂತದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡರೆ ಅಂತಿಮವಾಗಿ ಅದು ಪರ್ಯವಸಾನಕ್ಕೆ ನಾಂದಿಯಾಗಬಹುದು ಎನ್ನುವ ಆತಂಕ ಕೂಡ ತಂಡವನ್ನು ಕಾಡುತ್ತಿರುವಂತಿದೆ.

`ಭ್ರಷ್ಟಾಚಾರ ವಿರೋಧಿ ಆಂದೋಲನ ಇಂದು ಹೊರಳು ಹಾದಿಯಲ್ಲಿ ಇದೆ. ನಾವು ಮುಂದೆ ಏನು ಮಾಡಬೇಕು? ಈ ಹಂತದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಅದು ನಮ್ಮ ಚಳವಳಿಯನ್ನು ಸರ್ವನಾಶ ಮಾಡಿ ಬಿಡುವ ಅಪಾಯ ಇದೆ. ಈ ಬಗ್ಗೆ ನಾವು ಎಚ್ಚರದಿಂದ ಇದ್ದೇವೆ. ಎರಡು ದಿನಗಳ ಹಿಂದೆ ನಾನು ಆಸ್ಪತ್ರೆಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದೆ~ ಎಂದು ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ವಾರದ ಹಿಂದೆ ಅಣ್ಣಾ ಅನಾರೋಗ್ಯದ ಕಾರಣದಿಂದ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹವನ್ನು ಅರ್ಧಕ್ಕೇ ಕೈಬಿಡಬೇಕಾಯಿತು. ಜತೆಗೆ `ಜೈಲ್ ಭರೋ~ ಸೇರಿದಂತೆ ಮುಂದಿನ ಪ್ರತಿಭಟನಾ ಯೋಜನೆಗಳಿಗೂ ತಡೆ ಬಿದ್ದಿತ್ತು.

ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಿಗೆ ಭೇಟಿ ನೀಡಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಲು ಅಣ್ಣಾ ನಿರ್ಧರಿಸಿದ್ದರು. ಆದರೆ ವೈದ್ಯರ ಸಲಹೆ ಮೇರೆಗೆ ಇದಕ್ಕೂ ಕತ್ತರಿ ಬಿದ್ದಿದೆ.

`ಹಾಗಾದರೆ ನಾವು ಏನು ಮಾಡಬೇಕು? ಅಣ್ಣಾ ಇನ್ನೊಂದು ಉಪವಾಸ ಸತ್ಯಾಗ್ರಹ ಮಾಡಬೇಕೇ? ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗಿಯಾದ ಜನರು ಚುನಾವಣೆಯಲ್ಲಿ ಕೈಕೊಟ್ಟರೆ ಚಿಂತೆ ಇಲ್ಲ ಎಂಬ ಅರ್ಥದ ಸಂದೇಶವನ್ನು ಸರ್ಕಾರ ಈಗಾಗಲೇ ನೀಡಿದೆ. ಈ ಹಂತದಲ್ಲಿ ನಮ್ಮ ಮುಂದಿನ ನಡೆ ಏನು?~ಎಂದು ಪ್ರಶ್ನಿಸುತ್ತಾರೆ ಕೇಜ್ರಿವಾಲ್.

ಅಣ್ಣಾ ತಂಡದ ಹೋರಾಟದ ಕಾವು ನಿಧಾನವಾಗಿ ಇಳಿಯುತ್ತಿದೆಯೇನೋ ಎಂಬಂತೆ ಕಳೆದ ವಾರ ಮುಂಬೈ ಹಾಗೂ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಸಾರ್ವಜನಿಕರಿಂದ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೆ ಇದಕ್ಕೆ ಕಾಂಗ್ರೆಸ್ ಹಾಗೂ ಇತರ ಮುಖಂಡರ ಬತ್ತಳಿಕೆಯಿಂದ `ವ್ಯಂಗ್ಯ~ದ ಬಾಣಗಳೂ ತೂರಿಬಂದಿದ್ದವು. ಈ ಎಲ್ಲ ಅಂಶಗಳೂ ಇದೀಗ ಅಣ್ಣಾ ತಂಡವನ್ನು ಕಂಗೆಡಿಸುತ್ತಿವೆ.

`ನಾವು ನಮ್ಮದೇ ಆದ ಪಕ್ಷ ಹುಟ್ಟುಹಾಕಬೇಕು ಎಂದು ಕೆಲವರು ಸೂಚಿಸಿದ್ದಾರೆ. ಆದರೆ ನಮಗೆ ಇದು ಇಷ್ಟವಿಲ್ಲ ಮತ್ತು ಅಂಥ ಸಾಮರ್ಥ್ಯ ಕೂಡ ನಮ್ಮಲ್ಲಿ ಇಲ್ಲ. ಇದು ಜನಾಂದೋಲನ. ಸಾವಿರಾರು ಜನ ಭಾಗವಹಿಸಿದ್ದರಿಂದ ಚಳವಳಿ ಯಶಸ್ವಿಯಾಗಿದೆ. ಇದೀಗ ಜನರೇ ನಮ್ಮ ಮುಂದಿನ ನಡೆಯನ್ನು ನಿರ್ಧರಿಸಬೇಕು~ ಎಂದು ಕೇಜ್ರಿವಾಲ್ ಅಸಹಾಯಕರಂತೆ ನುಡಿಯುತ್ತಾರೆ.

`ಕೇಜ್ರಿವಾಲ್ ಅವರ ಲೇಖನಕ್ಕೆ ಸುಮಾರು ಸಾವಿರ ಇ-ಮೇಲ್‌ಗಳು ಬಂದಿವೆ. ಜನರು ಹೋರಾಟದ ಮುಂದಿನ ಹೆಜ್ಜೆಗಳ ಬಗ್ಗೆ ಸಲಹೆ ನೀಡಿದ್ದಾರೆ~ ಎಂದು ಇನ್ನೊಂದೆಡೆ  ಅಣ್ಣಾ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.

`ಕೆಲ ದಿನಗಳ ಹಿಂದೆ ಪುಣೆಯ ಆಸ್ಪತ್ರೆಯಲ್ಲಿ ನಾನು ಅಣ್ಣಾ ಅವರನ್ನು ಭೇಟಿಯಾಗಿದ್ದೆ. ಆಗ ಅವರು `ಪ್ರಧಾನಿ ಹಾಗೂ ಅತ್ಯಂತ ಹಿರಿಯ ನಾಯಕರೆಲ್ಲ ದೇಶವನ್ನು ಈ ರೀತಿ ವಂಚಿಸಿದರೆ ಜನ ಭರವಸೆ ಇಡುವುದಾದರೂ ಯಾರ ಮೇಲೆ~ ಎಂದು ನೊಂದು ನುಡಿದಿದ್ದರು. ಸರ್ಕಾರ ನಡೆದುಕೊಂಡ ರೀತಿಗೆ ಹಾಗೂ ಈ ವಿಷಯದಲ್ಲಿ ತಂಡಕ್ಕೆ ಮೋಸ ಮಾಡಿದ್ದಕ್ಕಾಗಿ ಅವರಿಗೆ ತುಂಬಾ ನೋವಾಗಿದೆ~ ಎಂದು ಕೇಜ್ರಿವಾಲ್ ಬೇಸರ ವ್ಯಕ್ತಪಡಿಸುತ್ತಾರೆ.

 `ಸ್ಥಾಯಿ ಸಮಿತಿ ತನ್ನ ವರದಿ ಸಲ್ಲಿಸಿದಾಗ ಅಣ್ಣಾ ಆಶ್ಚರ್ಯಗೊಂಡರು. ಶಿಫಾರಸು ಮಾಡಿದ 34 ತಿದ್ದುಪಡಿಗಳಲ್ಲಿ ಸಮಿತಿಯು ಕೇವಲ ಒಂದೇ ಒಂದು ಶಿಫಾರಸನ್ನು ಒಪ್ಪಿಕೊಂಡಿದೆ. ಆಗ ಅಣ್ಣಾ ಮೊದಲ ಬಾರಿ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದರು~ ಎಂದು ಕಾಂಗ್ರೆಸ್ ಮೇಲೆ ಅಣ್ಣಾ ತಂಡ ಮಾಡಿದ ವಾಗ್ದಾಳಿಯನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ.
 
`ಕಾಂಗ್ರೆಸ್ ವಿರೋಧಿಯಾದ ಮಾತ್ರಕ್ಕೆ ಬಿಜೆಪಿಯನ್ನು ಬೆಂಬಲಿಸುತ್ತೇವೆ ಎನ್ನುವ ವಾದ ಎಷ್ಟರ ಮಟ್ಟಿಗೆ ಸರಿ? ನಮ್ಮ ವಿಷಯದಲ್ಲಿ ಕೆಲವರು ಇಂತಹ ತಪ್ಪು ಕಲ್ಪನೆ ಬಿತ್ತಿದ್ದಾರೆ. ನಾವು ಬಿಜೆಪಿ ಪರವಾಗಿ ಇದ್ದೇವೆ ಎನ್ನುವುದಕ್ಕೆ ಪುರಾವೆಗಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT