ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ ಜಡೆ ಗಣಪತಿ

Last Updated 27 ಜುಲೈ 2011, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಪ್ರಸನ್ನ ಗಣಪತಿ ಜಡೆ ಗಣಪತಿ ಎಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನಕ್ಕೆ  ಐತಿಹಾಸಿಕ ಹಿನ್ನೆಲೆಯೂ ಇದೆ.

ಚಿತ್ರದುರ್ಗ ಪ್ರದೇಶವನ್ನು ಆಳಿದ ಪಾಳೇಗಾರರು ರಾಜಕೀಯದ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಕಾಲದಲ್ಲಿ ಚಿತ್ರದುರ್ಗ ಪ್ರದೇಶದಲ್ಲಿ ಅನೇಕ ದೇವಸ್ಥಾನಗಳು ನಿರ್ಮಾಣವಾದವು.
 
ಅವುಗಳಲ್ಲಿ ಪ್ರಮುಖವಾಗಿ ಹೊಳಲ್ಕೆರೆಯಲ್ಲಿ ಒಂದನೇ ಮದಕರಿ ನಾಯಕರ ಮೈದುನ ಗುಲ್ಯಪ್ಪ ನಾಯಕ ಪ್ರತಿಷ್ಠಾಪಿಸಿದ ಈ ಗಣಪತಿ ವಿಗ್ರಹವೂ ಒಂದು. ಇದು ಆಕರ್ಷಕ ಏಕಶಿಲಾ ಮೂರ್ತಿ. ಸಂಕಷ್ಟಹರ ಬಯಲು ಗಣಪ, ಜಡೆ ಗಣಪತಿ ಎಂದೇ ಅದು ಹೆಸರು ಪಡೆದಿದೆ.

1475ರಲ್ಲಿ ಪ್ರತಿಷ್ಠಾಪಿತವಾದ ಗಣಪತಿ ಹದಿನಾರೂವರೆ ಅಡಿ ಎತ್ತರವಿದೆ. ಈ ಏಕಶಿಲಾ ಗಣಪತಿ ವಿಗ್ರಹದ ಎಡಭಾಗದಲ್ಲಿ ಉಗ್ರ ನರಸಿಂಹನ ಮುಖದ ಭಾಗವನ್ನು ಕೆತ್ತಲಾಗಿದೆ. ಇದು ಈ ಮೂರ್ತಿಯ  ಮತ್ತೊಂದು ವಿಶೇಷ. ಜೊತೆಗೆ ವಿಗ್ರಹದ ಹಿಂಭಾಗದಲ್ಲಿ ಜಡೆಯನ್ನು ಕೆತ್ತಲಾಗಿದ್ದು, ಇದನ್ನು ಪಾರ್ವತಿಯ ರೂಪ ಎಂದು ಹೇಳಲಾಗಿದೆ.

ನರಸಿಂಹಸ್ವಾಮಿ ಆರಾಧನೆ ಮಾಡುವವರು ಕುಜ ದೋಷ ನಿವಾರಣೆಗಾಗಿ ಇಲ್ಲಿಗೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ಜೊತೆಗೆ ವಿವಾಹ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕಾಗಿಯೂ ಭಕ್ತರು ಹೆಚ್ಚಾಗಿ ಬರುತ್ತಾರೆ.
 
ಅವರ ಕಷ್ಟಗಳು ಪರಿಹಾರವಾದರೆ ಬೆಣ್ಣೆ, ಕಡುಬು ಅಲಂಕಾರ ಸೇವೆ ಮಾಡಿಸುವ ಹರಕೆ ಮಾಡಿಕೊಳ್ಳುತ್ತಾರೆ. ಮಂಗಳವಾರ, ಸಂಕಷ್ಟ ಚತುರ್ಥಿ ದಿನಗಳಂದು ಗಣಪತಿಗೆ ವಿಶೇಷ ಪೂಜೆ ನಡೆಯುತ್ತದೆ.

ಮೋದಕಹಸ್ತ, ಪಾರ್ವತೀಸುತ, ಏಕದಂತ ಎಂದೆಲ್ಲ ಕರೆಸಿಕೊಳ್ಳುವ ಸಂಕಷ್ಟ ನಿವಾರಕ ಪ್ರಸನ್ನ ಗಣಪನ ದೇವಾಲಯಕ್ಕೆ ರಾಜ್ಯದಾದ್ಯಂತ  ಸಾವಿರಾರು ಭಕ್ತರು ಬರುತ್ತಾರೆ. ಮೊದಲು ಬಯಲಿನಲ್ಲಿ ಇದ್ದ ಗಣಪತಿ ವಿಗ್ರಹಕ್ಕೆ 1985ರಲ್ಲಿ ದೇವಾಲಯ ನಿರ್ಮಿಸಲಾಯಿತು.

ಈಗ ದೇವಸ್ಥಾನದ ಮುಂಭಾಗಕ್ಕೆ ಭಕ್ತರೊಬ್ಬರ ಖರ್ಚಿನಲ್ಲಿ ರಾಜಗೋಪುರ ನಿರ್ಮಾಣವಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಗಣಪತಿ ದೇವಸ್ಥಾನಗಳು ಇದ್ದರೂ ಈ ಗಣಪತಿ ದೇವಸ್ಥಾನ ಅತ್ಯಂತ ಜನಪ್ರಿಯ ಹಾಗೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಬೆಳಿಗ್ಗೆ 6.30ಕ್ಕೆ ದೇವಸ್ಥಾನ ತೆರೆಯುತ್ತದೆ. ಮುಂಜಾನೆ ಪೂಜೆಯ ನಂತರ ರಾತ್ರಿ 9.30ರವರೆಗೆ ದೇವರ ದರ್ಶನಕ್ಕೆ ನಿರಂತರ ಅವಕಾಶವಿದೆ. ದೇವಸ್ಥಾನದಲ್ಲಿಯೇ ಕೆಲ ಭಕ್ತರು ಮದುವೆ ಮಾಡಿಕೊಳ್ಳುತ್ತಾರೆ. ಇಲ್ಲಿ ಕಲ್ಯಾಣ ಮಂಟಪವೂ ಇದೆ. ಹೊಳಲ್ಕೆರೆ ತಾಲ್ಲೂಕು ಕೇಂದ್ರ. ದೇವರ ದರ್ಶನಕ್ಕೆ ಬಂದ ಭಕ್ತರು ಉಳಿದುಕೊಳ್ಳಲು ಊರಲ್ಲಿ ಹಲವಾರು ಲಾಡ್ಜ್‌ಗಳಿವೆ.

ಕ್ಷೇತ್ರದ ದಾರಿ: ಹೊಳಲ್ಕೆರೆ ಶಿವಮೊಗ್ಗದಿಂದ 80ಕಿ.ಮೀ ದೂರದಲ್ಲಿದೆ. ಚಿತ್ರದುರ್ಗದಿಂದ 30ಕಿ ಮೀ ಮತ್ತು ದಾವಣಗೆರೆಯಿಂದ 60 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಬರುವವರು ಚಿತ್ರದುರ್ಗ ಮಾರ್ಗವಾಗಿ ಬರಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್‌ಗಳು: 98862 16192, 99867 22167.

ಸೇವಾ ವಿವರ
* ಬೆಣ್ಣೆ ಪೂಜೆ...                50 ರೂ
* ಹೋಮ ಪೂಜೆ...          201ರೂ
* ಕುಂಕುಮಾರ್ಚನೆ...        300ರೂ
* ಪಂಚಾಮೃತ ಅಭಿಷೇಕ...  51ರೂ
* ಕಡುಬಿನ ಹಾರ ಪೂಜೆ ....  51ರೂ

(ಮೇಲಿನ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಭಕ್ತರೇ ತರಬೇಕು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT