ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಯಂತೆ ಹರಿದ ಮಳೆ ನೀರು...

Last Updated 20 ಜೂನ್ 2012, 7:45 IST
ಅಕ್ಷರ ಗಾತ್ರ

ಭಟ್ಕಳ: ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನದವರೆಗೂ ತನ್ನ ಅರ್ಭಟವನ್ನು ಮುಂದುವರಿಸಿದ್ದು, ಪಟ್ಟಣದ ವಿವಿಧ ರಸ್ತೆಗಳಲ್ಲಿ ಮಳೆಯ ನೀರು ಹೊಳೆಯಾಗಿ ಹರಿದಿದೆ.

ಇದರಿಂದ  ವಾಹನ ಸವಾರರು ತೀವ್ರ ಪ್ರಯಾಸ ಪಡಬೇಕಾಯಿತು. ಸೋಮವಾರ ಗಾಳಿಮಳೆಯಾದರೆ, ಮಂಗಳವಾರ ಬೆಳಿಗ್ಗೆ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಧಾರಾಕಾರ ಮಳೆಯಿಂದ ತಾಲ್ಲೂಕಿನ ಎಲ್ಲಾ ನದಿ, ಕೆರೆ, ಬಾವಿ, ಹಳ್ಳಗಳು ತುಂಬಿತುಳುಕುತ್ತಿವೆ.
 
ಮಳೆಯಿಂದಾಗಿ ಮುರ್ಡೇಶ್ವರದ ಮುಖ್ಯರಸ್ತೆಯ ಮೇಲೆ ನೀರು ಹೊಳೆಯಂತೆ ಹರಿದು ಪ್ರವಾಸಿಗರು ದೇವಸ್ಥಾನಕ್ಕೆ ತೆರಳಲು ಪ್ರಯಾಸಪಟ್ಟರು.

ಮುರ್ಡೇಶ್ವರದಲ್ಲಿರುವ ಕಾರಿಹಳ್ಳದ ಹೂಳೆತ್ತುವ ಕಾಮಗಾರಿಯ ವಿಳಂಬದಿಂದಾಗಿ  ಹಳ್ಳದ ನೀರು ಕೃಷಿಭೂಮಿಗಳಿಗೆ ನುಗ್ಗುವ ಸಂಭವವಿದೆ. ಹಾಗೇನಾದರೂ ಆದಲ್ಲಿ ನಾಟಿ ಮಾಡಿದ ನೂರಾರು ಎಕರೆ ಕೃಷಿಭೂಮಿಗೆ ಉಪ್ಪುನೀರು ನುಗ್ಗಿ ರೈತರು ಹಾನಿಗೀಡಾಗಲಿದ್ದಾರೆ ಎಂದು ಈ ಭಾಗದ ರೈತರು ದೂರಿದ್ದಾರೆ. ಅದಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮುಂಗಾರು ಮಳೆಯ ಆರ್ಭಟ ಜೋರಾದ ಹಿನ್ನೆಲೆಯಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.  ಮಧ್ಯಾಹ್ನದವರೆಗೆ ರಭಸದಿಂದ ಸುರಿಯುತ್ತಿದ್ದ ಮಳೆ ಮಧ್ಯಾಹ್ನದ ನಂತರ ಕಡಿಮೆಯಾಗಿ ನಾಲ್ಲು ದಿನಗಳ ನಂತರ ಸೂರ್ಯನ ದರ್ಶನವಾಗಿ ಎಳೆ ಬಿಸಿಲು ಗೋಚರವಾಗಿತ್ತು.

ಸೋಮವಾರದಿಂದ ಮಂಗಳವಾರದವರೆಗಿನ 24 ತಾಸುಗಳ ಅವಧಿಯಲ್ಲಿ 116 ಮಿ.ಮೀ ಮಳೆಯಾಗಿದ್ದು, ತಾಲ್ಲೂಕಿನಲ್ಲಿ ಈವರೆಗೆ ಒಟ್ಟೂ 436 ಮಿ.ಮೀ ಮಳೆಯಾಗಿದೆ. ಸಂಜೆ 4ಗಂಟೆವರೆಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ತಹಶೀಲ್ದಾರ ಡಾ.ಮಧುಕೇಶ್ವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT