ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ 308 ಮತಗಟ್ಟೆಗಳ ಸ್ಥಾಪನೆಗೆ ಕೋರಿಕೆ

Last Updated 5 ಏಪ್ರಿಲ್ 2013, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಹೊಸದಾಗಿ 308 ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಕೋರಿಕೆ ಸಲ್ಲಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.

ಚುನಾವಣಾ ನಿಯಮ ಪಾಲನೆ ಮತ್ತು ಸಿದ್ಧತೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, `ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಸಲದ ಮತದಾರರ ಪಟ್ಟಿಗೆ 3.80 ಲಕ್ಷ ಮಂದಿ ಹೊಸದಾಗಿ ಸೇರಿದ್ದಾರೆ. ಹೀಗಾಗಿ 308 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಬೇಕಾಗಿದೆ' ಎಂದರು.

`ನಗರ ಜಿಲ್ಲಾ ವ್ಯಾಪ್ತಿಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್. ಸದ್ಯ ಇರುವ ಒಟ್ಟು ಮತಗಟ್ಟೆಗಳ ಸಂಖ್ಯೆ 2011' ಎಂದರು.

`ಹಿಂದೆ ಮತಗಟ್ಟೆಯಾಗಿದ್ದ ಸರ್ಕಾರಿ ಶಾಲೆಗಳನ್ನು ಕೆಡವಿ ಹಾಕಿರುವುದು, ಕೊಠಡಿಗಳ ಕೊರತೆ ಇರುವುದು, ಕೆಲ ಖಾಸಗಿ ಶಾಲೆಗಳು ಮುಚ್ಚಿರುವುದು- ಇವೇ ಮೊದಲಾದ ಕಾರಣಗಳಿಂದ 158 ಮತಗಟ್ಟೆಗಳನ್ನು ಸ್ಥಳಾಂತರ ಮಾಡುತ್ತಿದ್ದೇವೆ' ಎಂದು ವಿವರಿಸಿದರು.

`ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿನ ಆರು ಮತಗಟ್ಟೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಸ್ಥಳಾಂತರಗೊಳ್ಳುವ ಮತಗಟ್ಟೆ ಹಳೆಯ ಮತಗಟ್ಟೆಗೆ ಅರ್ಧ ಕಿ.ಮೀ. ಒಳಗಿನ ಅಂತರದಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ' ಎಂದು ಅವರು ಹೇಳಿದರು.

ರಾಜಕೀಯ ಪಕ್ಷದ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, `ಮತಗಟ್ಟೆ ಭದ್ರತಾ ವ್ಯವಸ್ಥೆಗಾಗಿ ರಾಜ್ಯ ಪೊಲೀಸರ ಜತೆ ಅರೆ ಸೇನಾ ಪಡೆಯ ಯೋಧರನ್ನೂ ನಿಯೋಜಿಸಲಾಗುವುದು' ಎಂದರು.

ನೀತಿ ಸಂಹಿತಿ ಉಲ್ಲಂಘನೆ ಸಲ್ಲ: ನೀತಿ ಸಂಹಿತೆ ಉಲ್ಲಂಘನೆ ಮಾಡಬೇಡಿ. ನೇರ ಮಾರ್ಗದಲ್ಲಿಯೇ ಚುನಾವಣೆ ಎದುರಿಸಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹೇಳಿದರು.

`ನೀತಿ ಸಂಹಿತೆ ಪಾಲನೆ ನೋಡಿಕೊಳ್ಳಲು ಈ ಸಲ ಮೂರು ಬಗೆಯ ವೀಕ್ಷಕರು ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತಾರೆ. ಯಾರೊಬ್ಬರೂ ವೀಕ್ಷಕರ ಕಣ್ಣಿನಿಂದ ತಪ್ಪಿಸಿಕೊಳ್ಳಲಾರಿರಿ. ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ ಬೇರೆ ರಾಜ್ಯಗಳ ಐಎಎಸ್ ಅಧಿಕಾರಿಯೊಬ್ಬರು ಸಾಮಾನ್ಯ ವೀಕ್ಷಕರಾಗಿರುತ್ತಾರೆ. ಚುನಾವಣಾ ವೆಚ್ಚದ ಮೇಲೆ ಕಣ್ಣಿಡಲು ಆದಾಯ ತೆರಿಗೆ ಇಲಾಖೆಯ ಇತರ ರಾಜ್ಯಗಳ ಅಧಿಕಾರಿಗಳನ್ನು ಎರಡು ಕ್ಷೇತ್ರಕ್ಕೆ ಒಬ್ಬರಂತೆ ನೇಮಿಸಲಾಗುವುದು. ಇವರಲ್ಲದೇ ಪೊಲೀಸ್ ವೀಕ್ಷಕರೂ ಇರುತ್ತಾರೆ' ಎಂದು ಅವರು ಹೇಳಿದರು.

`ನಾಮಪತ್ರ ಸಲ್ಲಿಸುವ ದಿನ ಹೆಚ್ಚು ಜನರನ್ನು ಕರೆತಂದರೆ ಆ ವೆಚ್ಚವನ್ನು ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಕುಟುಂಬದ ಹೊರಗಿನವರನ್ನು ಆಹ್ವಾನಿಸಿ ಮಾಡುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT