ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅಧ್ಯಕ್ಷರ ಆಯ್ಕೆಗೆ ತಕರಾರು

Last Updated 1 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ರಾಮನಗರ: ನಗರದ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ನಡೆದ ವೀರಶೈವ ಯುವಕ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ವೀರಶೈವ ಯುವಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಈ ಗೊಂದಲ ಉಂಟಾಯಿತು.

ಸಂಘದ ನೂತನ ಅಧ್ಯಕ್ಷರನ್ನಾಗಿ ಎಂ.ಆರ್. ಶಿವಕುಮಾರ ಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದಾಗ ಸದಸ್ಯರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ವೀರಶೈವ ಸಮಾಜದ ಹಿರಿಯ ಮುಖಂಡರುಗಳಾದ ಎಚ್.ಶಿವಪ್ರಸಾದ್, ಕೆ.ಎಸ್. ಶಂಕರಯ್ಯ, ಎ.ಜೆ.ಸುರೇಶ್, ರಾಜಶೇಖರ್ ಮತ್ತಿತರರು ಗೊಂದಲ ನಿವಾರಿಸುವಲ್ಲಿ ವಿಫಲರಾದರು.

ಈ ವೇಳೆ ಒಂದು ತಂಡ ದಿಢೀರ್ ಎಂದು ಬಸವೇಶ್ವರ ಪ್ರಾರ್ಥನಾ ಮಂದಿರದ ಮುಂದೆ ಪ್ರತಿಭಟನೆ ನಡೆಸಿತು. ವೀರಶೈವ ಸಮಾಜದ ಹಿರಿಯ ಮುಖಂಡ ಎ.ಎನ್.ನಾಗರಾಜ್ ಮಾತನಾಡಿ, ಹಾಲಿ ಅಧ್ಯಕ್ಷ ಬೆಂಕಿ ಮಹದೇವ್ ಇನ್ನೂ ರಾಜೀನಾಮೆ ನೀಡಿಲ್ಲ. ಇಂದು ನಡೆದ ಸಭೆಯಲ್ಲಿ ಏಕಪಕ್ಷೀಯವಾಗಿ ಸದಸ್ಯರ ಸಹಮತವಿಲ್ಲದೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇದು ಅಸಿಂಧುವಾಗಿದೆ ಎಂದು ಆರೋಪಿಸಿದರು.

ಯುವ ಮುಖಂಡ ಕೂನಮುದ್ದನಹಳ್ಳಿ ರುದ್ರೇಶ್ ಮಾತನಾಡಿ, ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಂಘದಲ್ಲಿರುವ ನಿಯಮಗಳನ್ನೆಲ್ಲಾ ಗಾಳಿಗೆ ತೂರಲಾಗಿದೆ.  ಇಂದು ನಡೆದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸದಸ್ಯರ ಸಹಮತವನ್ನು ಕಡೆಗಣಿಸಲಾಗಿದೆ.
 
ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ ಆಕಾಂಕ್ಷಿಗಳಿದ್ದರೂ ಪರಿಗಣಿಸದೇ ಏಕಮುಖ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮೂರು ದಿನಗಳಲ್ಲಿ ಸಭೆ ಕರೆದು ಸದಸ್ಯರ ಸಹಮತದ ಮೇರೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ನಾಲ್ಕು ವರ್ಷಗಳಿಂದ ನಾವು ಸುಮ್ಮನಿದ್ದೆವು. ಇವರು ಯಾವುದೇ  ಕೆಲಸಗಳನ್ನು ಮಾಡದೇ ಕೇವಲ ಹುದ್ದೆಗಾಗಿ ಹಂಬಲಿಸುತ್ತಾರೆ. ಆದ್ದರಿಂದ ಸದಸ್ಯರೆಲ್ಲರೂ ಸಭೆ ಸೇರಿ ತೀರ್ಮಾನ ತೆಗೆದುಕೊಂಡು ಸಭೆ ನಡೆಸಿದ್ದೇವೆ. 13 ಮಂದಿ ಸದಸ್ಯರಿರುವ ಸಮಿತಿ ಸಂಘದ ನಿಯಮಗಳ ಪ್ರಕಾರವೇ ಇಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದೆ ಎಂದು ವೀರಶೈವ ಯುವಕ ಸಂಘದ ನೂತನ ಅಧ್ಯಕ್ಷ ಎಂ.ಆರ್.ಶಿವಕುಮಾರ ಸ್ವಾಮಿ ಸ್ಪಷ್ಟನೆ ನೀಡಿದರು.

ಮುಖಂಡರುಗಳಾದ ಎಂ. ಜಗದೀಶ್, ವೇದಮೂರ್ತಿ ಬೆಂಕಿ ಮಹದೇವ್, ಚಿಕ್ಕೇನಹಳ್ಳಿ ನಾಗರಾಜ್, ವಿಜಯ್‌ಕುಮಾರ್ ಒಡೆಯರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT