ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅನುಭವದ ಕಛೇರಿ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಮುತ್ತುಸ್ವಾಮಿ ದೀಕ್ಷಿತರ ತಮ್ಮ ರಾಮಸ್ವಾಮಿ ದೀಕ್ಷಿತರ ಕಾಲದಲ್ಲಿ ಕರ್ನಾಟಕ ಸಂಗೀತ ಕಛೇರಿಯು ವೀಣಾ ಪಕ್ಕವಾದ್ಯದೊಂದಿಗೆ ನಡೆಯುತ್ತಿತ್ತಂತೆ. ಆ ಅನುಭವವು ಮರುಕಳಿಸುವಂತಹ ಕಾರ್ಯಕ್ರಮವೊಂದು ನಡೆಯಿತು.

ತಿರುಮಲೆ ಶ್ರೀನಿವಾಸ್ ಅವರ ಗಾಯನಕ್ಕೆ ಎಂ.ಆರ್. ಮಂಜುಳಾ ಅವರ ವೀಣಾ ಪಕ್ಕವಾದ್ಯವಿದ್ದು, ತುಂಬಿದ್ದ ಜೆಎಸ್‌ಎಸ್ ಸಭಾಂಗಣ ಪುಳಕಿತಗೊಂಡಿತು. ಅನನ್ಯ ಸಂಸ್ಥೆಯ ಆರೋಗ್ಯಧಾರಾ ಯೋಜನೆಯ ಸಹಾಯಾರ್ಥ ಆಯೋಜಿಸಲಾಗಿದ್ದ ವೈವಿಧ್ಯ ಸಂಗೀತ ಸಂಧ್ಯಾ ಕಾರ್ಯಕ್ರಮದ ಮೊದಲ ಕಾರ್ಯಕ್ರಮ ಅದು. ಶ್ರೀನಿವಾಸ್ ಮೃದಂಗದ ಬದಲು ರಾಜಕುಮಾರ್ ಮತ್ತು ಭಾಸ್ಕರ್ ಅವರ ಯುಗಳ ಡೋಲು ವಾದ್ಯಗಳನ್ನು `ಲಯ ಪಕ್ಕವಾದ್ಯ~ಗಳನ್ನಾಗಿ ಬಳಸಿಕೊಂಡರು.

ಅದಕ್ಕಾಗಿ ಮಲ್ಲಾರಿಯೊಂದಿಗೆ (ಗಂಭೀರನಾಟ) ಅವರ ಕಾರ್ಯಕ್ರಮ ಆರಂಭವಾದುದು ಔಚಿತ್ಯಪೂರ್ಣ. ವಿವಾದಿ ಮೇಳವಾದ ವಾಗಧೀಶ್ವರಿ ರಾಗದಲ್ಲಿ ರಾಗ, ತಾನ ಮತ್ತು ಪಲ್ಲವಿಯನ್ನು (ಭಾವ ರಾಗ ತಾಳಯೋಗಮಿದಂ ಸಂಗೀತಂ ಕಾಲಾತೀತಂ, ಆದಿತಾಳ) ಸಾರಸಮಗ್ರವಾಗಿ ವಿಸ್ತರಿಸಿದರು.

ನಡೆಭೇದಗಳು, ಸ್ವರಭೇದಗಳು, ಗ್ರಹಭೇದಗಳು ಮುಂತಾದ ಅಲಂಕರಣ ಗಾಯಕರ ವಿದ್ವತ್ತನ್ನು ಬಿಂಬಿಸುವುದರ ಜೊತೆಗೆ ಪಲ್ಲವಿ ಗಾಯನಕ್ಕೆ ಹೊಸ ಆಯಾಮಗಳನ್ನೊದಗಿಸಿತು. ಕೆಲವು ಸ್ವರಗಳನ್ನು ಬಿಟ್ಟು ಹಾಡಿ ಬೇರೆ ಬೇರೆ ರಾಗಗಳ ಛಾಯೆಯನ್ನು ಅವರು ಮೂಡಿಸಿದ ಪರಿ ರೋಚಕ. ಸ್ವತಃ ಗಾಯಕಿಯೂ ಆಗಿರುವ ಮಂಜುಳಾ ಅವರ ವೀಣಾವಾದನ ಶ್ರೀನಿವಾಸ್ ಗಾಯನಕ್ಕೆ ಸೂಕ್ತವೂ ಪುಷ್ಟಿದಾಯಕವೂ ಆಗಿತ್ತು.

ನಿರಾತಂಕ ನಿರೂಪಣೆಗಳು
ಸಾಮಾನ್ಯವಾಗಿ ಶಾಲಾ ವಾರ್ಷಿಕೋತ್ಸವ ಸಮಾರಂಭಗಳಿಗೆ ವಿದ್ಯಾರ್ಥಿಗಳಿಂದ ಪ್ರದರ್ಶನಗಳನ್ನು ಏರ್ಪಡಿಸಿ ಅವರ ತಂದೆ ತಾಯಿ ಮತ್ತು ಪೋಷಕರ ಮನ ಓಲೈಸುವ ಸ್ವರೂಪವಿರುತ್ತದೆ. ಆದರೆ, ಅಂತಹುದೇ ಸಮಾರಂಭ ಈ ಉದ್ದೇಶವನ್ನು ಪೂರೈಸದೆ ನಿಜವಾಗಿಯೂ ವಿದ್ಯಾರ್ಥಿಗಳ ಅಂತರ್ಗತವಾಗಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರಕಟಗೊಳಿಸಿದರೆ ಆಗುವ ಅಚ್ಚರಿ ಅಷ್ಟಿಷ್ಟಲ್ಲ. ಬಹುತೇಕ ಖಚಿತ ಹಾಗೂ ನಿಷ್ಕಳಂಕವಾಗಿ ಮೂಡಿಬಂದ ಅಂತಹ ಕಾರ್ಯಕ್ರಮ ಎಡಿಎ ರಂಗಮಂದಿರದಲ್ಲಿ  ಶನಿವಾರ ನಡೆಯಿತು.

ಗುರು ಗೀತಾಲಕ್ಷ್ಮಿ ಗೋವಿಂದರಾಜನ್ ಅವರ ನಂದಿ ಭರತನಾಟ್ಯ ಕಲಾಶಾಲೆಯ 17ನೆಯ ವಾರ್ಷಿಕೋತ್ಸವವು ಅರ್ಥಪೂರ್ಣವಾಗಿತ್ತು. ಸುಮಾರು ಎರಡು ಗಂಟೆಗೂ ಕಡಿಮೆ ಅವಧಿಯಲ್ಲಿ ಹದಿನಾಲ್ಕು ರಚನೆಗಳನ್ನು ಶಾಲೆಯ ಸಬ್‌ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಮಂಡಿಸಿ ಗುಣಾತ್ಮಕ ನೃತ್ಯ, ನೃತ್ತ ಮತ್ತು ಅಭಿನಯಗಳಿಂದ ಪ್ರಶಂಸೆಗೊಳಗಾದರು.

ಪಂಡಿತ-ಪಾಮರ ನೃತ್ಯ ಪ್ರೇಮಿಗಳನ್ನು ರಂಜಿಸುವಂತಹ ಪರಿವಿಡಿಯ ಆಯ್ಕೆ, ಅವುಗಳ ಯೋಜನಾಬದ್ಧ ಸಕ್ರಮ, ಅಚ್ಚುಕಟ್ಟಾದ ನಿರ್ವಹಣೆ ಶ್ಲಾಘನೀಯ. ಸಹಜವಾಗಿಯೇ ಸಮೂಹ ನೃತ್ಯಕ್ಕೆ ಹೆಚ್ಚಿನ ಒತ್ತು ಇತ್ತಾದರೂ ಅದರಲ್ಲಿ ಇದ್ದ ಶಿಸ್ತು, ಹೊಂದಾಣಿಕೆ, ಲವಲವಿಕೆ ಮತ್ತು ಭರತನಾಟ್ಯ ಪ್ರಕಾರದ ವ್ಯಾಕರಣ ಮತ್ತು ತಂತ್ರದ ನಿರಾತಂಕ ಮಂಡನೆಗಳು ಆಕರ್ಷಕವಾಗಿದ್ದವು. ರಚನೆಗಳ ಪರಿಮಾಣದ ಜೊತೆಜೊತೆಗೆ ಗುಣಮಟ್ಟವೂ ಹದವಾಗಿ ಬೆರೆತದ್ದು ಗಮನಾರ್ಹ ಅಂಶ.

ಗುರು ಗೀತಾಲಕ್ಷ್ಮಿ (ನಟುವಾಂಗ), ವಸುಧಾ ಬಾಲಕಷ್ಣ (ಗಾಯನ), ಸೋಮಣ್ಣ (ಪಿಟೀಲು), ನರಸಿಂಹಮೂರ್ತಿ (ಕೊಳಲು) ಮತ್ತು ರಮೇಶ್ (ಮೃದಂಗ) ಅವರ ಉತ್ಸಾಹವರ್ಧಕ ಸಂಗೀತ ಸಹಕಾರದೊಂದಿಗೆ ಮೂಡಿಬಂದ ಅಲರಿಪ್ಪು, ಗಣೇಶ ಸ್ತುತಿ, ಪುಷ್ಪಾಂಜಲಿ, ಜತಿಸ್ವರ (ಕಲ್ಯಾಣಿ), ದಾಸರಪದ (ಮೆಲ್ಲಮೆಲ್ಲನೆ ಬಂದನೆ, ಮೋಹನ), ಕೌತುವಂ (ನಾಟ) ಇತ್ಯಾದಿಗಳು ಸಮೂಹ ನೃತ್ಯದಲ್ಲಿ ಸೊಗಸೆನಿಸಿದವು. ಗುರು ಗೀತಾ ಅವರ ಪುಟ್ಟ ಮೊಮ್ಮಗ ಮಧುಶ್ರೇಯಸ್‌ನ ಬಿಲಹರಿ ಸ್ವರಜತಿಯ (ರಾರವೇಣುಗೋಪಾಲ) ಗಾಯನಕ್ಕೆ ನರ್ತಿಸಿದ ಪುಟ್ಟ ನರ್ತಕಿಯರು ತಮ್ಮ ಮೋಹಕ ಅಡುವು, ಸ್ವರ ಮತ್ತು ಜತಿ ನಿರೂಪಣೆಗಾಗಿ ಅಭಿನಂದನೆ ಗಿಟ್ಟಿಸಿದರು.

ಹಿರಿಯ ವಿದ್ಯಾರ್ಥಿನಿಯರಾದ ಕಾವ್ಯ ಷಣ್ಮುಗಂ, ವರ್ಷಿಣಿ ಮತ್ತು ದಿವ್ಯಾ ಸುರೇಶ್ ತಮ್ಮ ಪ್ರದರ್ಶನದಲ್ಲಿ ನೃತ್ತ, ನೃತ್ಯ ಮತ್ತು ಅಭಿನಯ ಅಂಶಗಳ ಮೇಲಿನ ತಮ್ಮ ಪ್ರಭುತ್ವವನ್ನು ಪ್ರಚುರಪಡಿಸಿದರು. ಅವರು ವಿಸ್ತರಿಸಿದ ಗಣೇಶ ಸ್ತುತಿ (ಏಕದಂತನೆ, ಅಮೃತವರ್ಷಿಣಿ ರಾಗ), ಅರುಣಾಚಲ ಕವಿಯ ಎನ್‌ಪಲ್ಲಿಕೊಂಡಿರಯ್ಯ (ರಾಗಮಾಲಿಕೆ) ಮತ್ತು ಕಿಲಿಕನಿ (ಆನಂದಭೈರವಿ) ಬಂಧಗಳು ಅವರ ಭಾವ ಮತ್ತು ಲಯಜ್ಞಾನದ ಔಚಿತ್ಯವನ್ನು ತೋರಿತು. ನರ್ತಕಿತ್ರಯರು ತಮ್ಮ ಪರಿಶುದ್ಧ ನಿರ್ವಹಣೆ ಮತ್ತು ಅಭಿವ್ಯಕ್ತಿಗಳಿಂದ ರಸಿಕರ ಕಣ್ಮನಗಳನ್ನು ಸೆಳೆದರು.

ಮಿಶ್ರ ಫಲದಾಯಕ
ಯುವ ಹಾಗೂ ಉತ್ಸಾಹಿ ಭರತನಾಟ್ಯ ಪಟು ಕೆ.ಆರ್.ಎಸ್. ಪ್ರಸನ್ನ ಇದೀಗ ಅಮೆರಿಕೆಯಲ್ಲಿ ನೆಲೆಸಿದ್ದು ಬೆಂಗಳೂರಿಗೆ ಬಂದಾಗ ತನ್ನ ಯಾವುದಾದರು ಹೊಸ ಕಲಾ ಪ್ರಯತ್ನದೊಂದಿಗೆ ಇಲ್ಲಿನ ರಸಿಕರನ್ನು ತಣಿಸುತ್ತಾ ಬಂದಿರುವುದು ವಾಡಿಕೆಯಂತಾಗಿದೆ. ಮೊನ್ನೆ ಎಡಿಎ ರಂಗಮಂದಿರ ದಲ್ಲಿ ಶಾಂತಲಾ ಡಾನ್ಸ್ ಅಕಾಡೆಮಿ ಆಶ್ರಯದಲ್ಲಿ ನಡೆದ ಭಕ್ತಿಪಥ ಕಾರ್ಯಕ್ರಮವು ಬಹಳಷ್ಟು ನಿರೀಕ್ಷೆಗಳನ್ನು ಹೊಂದಿತ್ತು.

ಭಗವಂತನನ್ನು ಸುಪ್ರೀತಗೊಳಿಸಲು ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮ ನಿವೇದನೆ ಎಂಬ ಒಂಬತ್ತು ಪ್ರಕಾರಗಳ ಭಕ್ತಿಯನ್ನು ಹೇಳಲಾಗಿದೆ. ಹರಿಕಥೆ ಮತ್ತು ಭರತನಾಟ್ಯ ಮಾಧ್ಯಮಗಳನ್ನು ಬಳಸಿಕೊಂಡು ಅವುಗಳ ವಿಶ್ಲೇಷಣೆಯನ್ನೇ ವಸ್ತುವನ್ನಾಗಿ ಯೋಜಿಸಿಕೊಂಡಿದ್ದ ಕಾರ್ಯಕ್ರಮವದು.
 
ತನ್ನ ಮಾತುಗಾರಿಕೆ, ಹೆಜ್ಜೆಗಾರಿಕೆ ಮತ್ತು ಅಭಿನಯ ವಿಶೇಷತೆಗಳನ್ನು ಪ್ರಸನ್ನ ಮೆರೆದರಾದರೂ ಅದೊಂದು ಕಲಸುಮೇಲೋಗರವಾದಂತಾಯಿತು. ತಮ್ಮ ಸೋದರ ಪುಲಿಕೇಶಿ (ನಟುವಾಂಗ ಹಾಗೂ ಒಂದೆರಡು ಪ್ರಸಂಗಗಳಲ್ಲಿ ಸಹನೃತ್ಯ), ಪತ್ನಿ ಸೀಮಾ ಕಸ್ತೂರಿ (ಗಾಯನ), ಹೇಮಂತಕುಮಾರ್ (ಪಿಟೀಲು), ವಿವೇಕ್ (ಕೊಳಲು) ಮತ್ತು ರಮೇಶ್ (ಮೃದಂಗ) ಅವರ ಉತ್ತಮ ಪಕ್ಕವಾದ್ಯ ಗಳಿದ್ದಾಗ್ಯೂ ಪ್ರದರ್ಶನದ ಪರಿಣಾಮ ಸಮಗ್ರವಾಗಿರದೆ ಮಿಶ್ರಫಲದಿಂದ ಕೂಡಿತ್ತು.

-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT