ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅಲೆಯೂ ಉದುರೋ ಎಲೆಯೂ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಜನವರಿ 20, 2012ರಂದು ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಎ.ಎಸ್. ಕನಾಲ್ ಅವರು ಕ್ಲುಪ್ತ ಸಂದೇಶವೊಂದನ್ನು ನನ್ನ ಮೊಬೈಲ್ ಪೋನ್‌ಗೆ ಕಳುಹಿಸಿದ್ದರು. ಅದರ ಒಕ್ಕಣೆ ಇಂತಿತ್ತು - ‘SAD DAY FOR CINEMA’. ವಿಶ್ವದಾದ್ಯಂತ ಚಲನಚಿತ್ರ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಲಕ್ಷಾಂತರ ಮಂದಿ ಕಲೋಪಾಸಾಕರ, ಕಲಾಭ್ಯಾಸಿಗಳ, ವಿದ್ಯಾರ್ಥಿಗಳ ಮತ್ತು ಚಲನಚಿತ್ರ ಇತಿಹಾಸಕಾರರ ಅಂತರಂಗದಲ್ಲಿ ಮನೆಮಾಡಿದ್ದ ಅನಿರ್ವಚನೀಯವಾದ ದುಃಖವನ್ನು ಕೇವಲ ಈ ನಾಲ್ಕೇ ಪದಗಳಲ್ಲಿ ಕನಲ್ ಸಮರ್ಥವಾಗಿ ವ್ಯಕ್ತಪಡಿಸಿದ್ದರು.

ಯಾವ ವಿಧಿಲಿಖಿತವಾದ ಘಟನೆ ಇವರೆಲ್ಲರನ್ನೂ ಇಂತಹ ಸಂತಾಪಸಾಗರಕ್ಕೆ ದೂಡಿತ್ತು? ಆಗಷ್ಟೇ ಅಮೆರಿಕೆಯಿಂದ ಬಂದಿದ್ದ ವಾರ್ತಾಪತ್ರವನ್ನೋದಿದ್ದ ನನಗೆ ಅವರು ಯಾವ ವಿಷಯವನ್ನು ಕುರಿತಾಗಿ ಇಷ್ಟು ವ್ಯಾಕುಲಚಿತ್ತರಾಗಿದ್ದರೆಂಬುದು ತತ್‌ಕ್ಷಣವೇ ಅರ್ಥವಾಯಿತು.

ವಿಶ್ವದೆಲ್ಲೆಡೆ ಚಲನಚಿತ್ರ-ನಿರ್ಮಾಣದ ಪ್ರಮುಖ ಸಾಮಗ್ರಿ ಎನಿಸಿದ ಕಚ್ಚಾ ಫಿಲ್ಮ್ ಸುರುಳಿಯ ಪ್ರಮುಖ ತಯಾರಿಕಾ ಘಟಕವೆನಿಸಿದ್ದ ರಾಚೆಸ್ಟರ್‌ನಲ್ಲಿನ ಕೊಡಾಕ್ ಕಂಪೆನಿಯು ಋಣಭಾರದ ಹೊರೆಯನ್ನು ತಾಳಲಾಗದೆ ಅಮೆರಿಕೆಯಲ್ಲಿ ತನ್ನ ವ್ಯಾಪಾರ-ವಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಿ, ಸರ್ಕಾರದ ಪರವಾನಗಿ ಮತ್ತು ರಕ್ಷಣೆಯನ್ನು ಕೋರಿ ಜನವರಿ 19ರಂದು ಅಮೆರಿಕೆಯ ಸರ್ಕಾರಕ್ಕೆ ಪತ್ರ ಬರೆದಿತ್ತು.
 
ಸರಿ-ಸುಮಾರು ಒಂದು ಶತಮಾನದ ಕಾಲ ಉದ್ಯಮವನ್ನಾಳಿದ ಕಂಪೆನಿಯು ಈ ನಿರ್ಧಾರ ಕೈಗೊಂಡಿದ್ದು ವಿಶ್ವದಾದ್ಯಂತ ಚಲನಚಿತ್ರ-ಕಲಾಭ್ಯಾಸಿಗಳಿಗೆ ಅತೀವ ನೋವನ್ನು ತಂದಿದ್ದು ಸಹಜವೇ ಆಗಿತ್ತು.

ಈ ಸಾಲಿನ ಆಸ್ಕರ್ ಪ್ರಶಸ್ತಿವಿಜೇತ ಚಿತ್ರ, `ದಿ ಆರ್ಟಿಸ್ಟ್~ ಮೂಲಕ ನಾವು ವಿಸ್ತೃತವಾಗಿ ಕಂಡುಕೊಂಡಂತೆ, 1930ರ ದಶಕದ ಆದಿಭಾಗದಲ್ಲಿ ತಂತ್ರಜ್ಞಾನದ ಮುನ್ನಡೆಯಿಂದಾಗಿ ಚಲನಚಿತ್ರ-ಕಲಾಪ್ರಕಾರವು ಸಿದ್ಧಿಸಿಕೊಂಡ `ಟಾಕಿ~ ಚಿತ್ರಗಳು ಮಾತಿನ ಜೋಡಣೆಯಿಲ್ಲದ `ಮೂಕಿ~ ಚಿತ್ರಗಳಿಗೆ ಇತಿಶ್ರೀ ಹಾಡಿದವು.

ಸರಿಸುಮಾರು ಇದೇ ವೇಳೆಗೆ, ಇಂತಹುದೇ ಆದ ಮತ್ತೊಂದು ದೊಡ್ಡ ಸುನಾಮಿಯು ಕಪ್ಪು-ಬಿಳುಪು ಚಿತ್ರಗಳ ತಯಾರಿಕೆಯನ್ನು ನಾಮಾವಶೇಷವನ್ನಾಗಿಸಿತು. ಕಲಾತ್ಮಕ ಸಾಧನೆಯ ಹಾದಿಯಲ್ಲಿ ದಾಪುಗಾಲು ಹಾಕಿ, ಮೇರುಸದೃಶವಾದ ಕೀರ್ತಿಪತಾಕೆಯನ್ನು ತನ್ನದಾಗಿಸಿಕೊಂಡಿದ್ದ ಕಪ್ಪು-ಬಿಳುಪು ಚಲನಚಿತ್ರ ಪ್ರಕಾರವು ವರ್ಣರಂಜಿತ ಚಲನಚಿತ್ರಗಳ ಆರ್ಭಟಕ್ಕೆ, ಕಲ್ಪನಾರಹಿತ ವಿಲಾಸಕ್ಕೆ, ಅರ್ಥರಹಿತ ಅಟ್ಟಹಾಸಕ್ಕೆ ತುತ್ತಾಯಿತು.

ಚಲನಚಿತ್ರ ತಯಾರಿಕೆಗೆ ಬೇಕಾಗುವ ಕಚ್ಚಾ ಫಿಲ್ಮ್ ಅನ್ನು ತಯಾರಿಸುತ್ತಿದ್ದ `ಕೊಡಾಕ್~ ಕಲಾಪ್ರಕಾರದ ದಿಕ್ಕನ್ನೇ ಬದಲಿಸಿದ ತಂತ್ರಜ್ಞಾನದ ಮುಂಚೂಣಿಯಲ್ಲಿತ್ತು. ಅದರ ತೀವ್ರದಾಳಿಗೆ  ತತ್ತರಿಸಿದ ಕಪ್ಪು ಬಿಳುಪು ಚಲನಚಿತ್ರವು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು.

ಬಿಂಬಪ್ರಪಂಚದ ಅನಭಿಷಿಕ್ತ ಸರದಾರ
20ನೇ ಶತಮಾನಕ್ಕೆ ಸಮನಾಗಿ ಸಮಕಾಲೀನ ಸಮಾಜದ ರೂಪು-ರೇಷೆಗಳನ್ನು ದೃಶ್ಯರೂಪದಲ್ಲಿ ವಿಫುಲವಾಗಿ ದಾಖಲಿಸಿದ ಕಾಲಘಟ್ಟವು, ಮಾನವಜನಾಂಗದ ಇತಿಹಾಸದಲ್ಲಿಯೇ ಮತ್ತೊಂದಿರಲಾರದು.

ಅತ್ಯಂತ ಕ್ಲಿಷ್ಟವೆನಿಸಿದ್ದ ವರ್ಣರಂಜಿತ ಛಾಯಾಚಿತ್ರ ಗ್ರಹಿಕೆಯನ್ನು ಸರಳೀಕರಿಸಿ, ಅದಕ್ಕೆ ಬೇಕಾದ ಕ್ಯಾಮೆರಾ-ಪರಿಕರಗಳನ್ನು ಶ್ರೀಸಾಮಾನ್ಯನ ಕೈಗೆಟುಕುವಂತೆ ಏರ್ಪಾಟು ಮಾಡಿ(BROWNIEಎನ್ನುವ ಸರಳ-ಸುಂದರ ಆಗಿBOX-CAMERA),ಅವುಗಳ ತಯಾರಿಕೆ, ವಿತರಣೆ ಹಾಗೂ ರಾಸಾಯನಿಕ ಸಂಸ್ಕರಣಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು, ತನ್ನ ಸಾಮ್ರಾಜ್ಯವನ್ನು ಯಥೇಚ್ಛವಾಗಿ ವಿಸ್ತರಿಸಿಕೊಂಡಿತು, ಕೊಡಾಕ್.

ಅದರ ಜನಪ್ರಿಯತೆಯ ಮೂಲಾಧಾರವೂ ಸಹ ಜನಸಾಮಾನ್ಯನು ಕಂಡುಕೊಂಡ ಸಂತೋಷ-ಸಂತೃಪ್ತಿಗಳೇ ಎನ್ನುವುದು ಗಮನಾರ್ಹವಾದ ವಿಷಯ. ಮನೆ-ಮನೆಗಳಲ್ಲಿ ಇಂದು ನಾವು ಕಾಣುವ ಅಜ್ಜ-ಅಜ್ಜಂದಿರ ಫೋಟೋಗಳು, ತಂದೆ-ತಾಯಿಯರ ಮದುವೆ ಆಲ್ಬಮ್‌ಗಳು, ಅಣ್ಣಂದಿರ-ಅಕ್ಕಂದಿರ ಪಿಕ್ನಿಕ್ ಪೋಸ್‌ಗಳು, ಅವರ ಬಾಲ್ಯಲೀಲೆಗಳ ದೃಶ್ಯದಾಖಲೆಗಳು ನಮಗಿಂದು ಲಭ್ಯವಿರುವುದು, ಕೊಡಾಕ್ ಕಂಪೆನಿಯು ಹೀಗೆ ರೂಪಿಸಿಕೊಟ್ಟ ಜನಪದ-ದೃಶ್ಯಕಲಾ ಪ್ರಕಾರದಿಂದಾಗಿಯೇ.

ಇಂದಿನ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಂತೆಯೇ, ಅಂದಿನ ಬಾಕ್ಸ್ ಕ್ಯಾಮೆರಾ ಮತ್ತು ಕೊಡಾಕ್ ಫಿಲ್ಮ್- ರೋಲ್‌ಗಳು ಜನಜನಿತವಾಗಿದ್ದವು. ತನ್ನ ಸುತ್ತಲಿನ ಪರಿಸರವನ್ನು ಕಂಡಂತೆಯೇ ಬಿಂಬರೂಪದಲ್ಲಿ ಗ್ರಹಿಸಿಟ್ಟುಕೊಳ್ಳುವ ಸೌಕರ್ಯವನ್ನು ಶ್ರೀಸಾಮಾನ್ಯನಿಗೆ ಕಲ್ಪಿಸಿಕೊಟ್ಟ `ಕೊಡಾಕ್~, ಚಿತ್ರಕಲೆಗಾರಿಕೆಯ ವ್ಯಾಕರಣವನ್ನೇ ಹೊಸದಾಗಿ ರೂಪಿಸಿಬಿಟ್ಟಿತು ಎಂದರೆ ಅತಿಶಯೋಕ್ತಿಯಲ್ಲ.

ಚಂದ್ರನ ಮೇಲೆ ಮಾನವನಿಟ್ಟ ಮೊದಲ ಹೆಜ್ಜೆಯನ್ನು ದೃಶ್ಯದಾಖಲೆಯನ್ನಾಗಿಸಿದ ಕೀರ್ತಿಯು ಕೊಡಾಕ್ ಫಿಲ್ಮ್‌ಗೆ ಸೇರಿದ್ದು. ಇಂತೆಯೇ, ಚರಿತ್ರಾರ್ಹವಾದ ಅನೇಕ ಘಟನೆಗಳು ವಿಶ್ವವಿಖ್ಯಾತ ಪೋಟೋಗ್ರಾಫರ್‌ಗಳ ಕೈಯಲ್ಲಿ ದಾಖಲಿಸಲ್ಪಟ್ಟಿದ್ದರೆ, ಕಲಾತ್ಮಕವಾಗಿಯೂ ಸಹ ANSEL ADAMS, HENRI-CARTIER-BRESSON, ROBERT CAPA, ALFRED STEIGLITZ, EUGENE ATGET, ERNST HAAS ಅವರಂತಹ ಅನೇಕ ಮೇಧಾವಿಗಳು ಈ ಚಿತ್ರಕಲಾಕ್ರಾಂತಿಯ ಅಗ್ರಸ್ಥಾನದಲ್ಲಿದ್ದರು.

ಇದು ಬಾಹ್ಯಪ್ರಪಂಚವನ್ನು ಬಿಂಬರೂಪದಲ್ಲಿ ಗ್ರಹಿಸುವ ಪರಿಯಾದರೆ, ಪ್ರಕೃತಿಯ ವಿಸ್ಮಯವೆನಿಸುವ ನಮ್ಮ ಶರೀರ-ರಚನೆಯನ್ನು ಅರಿತುಕೊಳ್ಳುವಲ್ಲಿಯೂ ಸಹ ಎಕ್ಸ್ ರೇ ಫಿಲ್ಮ್‌ಗಳು ವಿಶೇಷವಾಗಿ ಸಹಕಾರಿಯಾಗಿದ್ದುವು. ಇದನ್ನೂ ಸಹ `ಕೊಡಾಕ್~ ನಿರ್ಮಾಣ ಮಾಡುತ್ತಿತ್ತು.

ಹೀಗೆ ಬಿಂಬಗ್ರಹಣ ಕಾರ್ಯಕ್ಕೆ ಅಗತ್ಯವಾಗಿ ಬೇಕಾಗಿದ್ದ ಕ್ಯಾಮೆರಾ, ಕಚ್ಚಾ ಫಿಲ್ಮ್ ಹಾಗೂ ಅದನ್ನು ಸಂಸ್ಕರಿಸುವುದಕ್ಕೆ ಬೇಕಾದ ರಾಸಾಯನಿಕಗಳನ್ನು ತಯಾರಿಸಿ, ಶ್ರೀಸಾಮಾನ್ಯನಿಗೆ ಮಾರುಕಟ್ಟೆಯ ಮೂಲಕ ಅವನ್ನು ತಲುಪಿಸಿದ `ಕೊಡಾಕ್~, ಬಿಂಬವೀಕ್ಷಣೆಗೆ ಅಗತ್ಯವಾದ ಫೋಟೊಗ್ರಫಿಕ್ ಪೇಪರ್ ಹಾಗೂ ಟ್ರಾನ್ಸ್‌ಪೆರೆನ್ಸಿಗಳನ್ನು ಪ್ರದರ್ಶಿಸಲು ಅಗತ್ಯವಾದ ಸ್ಲೈಡ್ ಪ್ರೊಜೆಕ್ಟರ್‌ಗಳ ತಯಾರಿಕೆ ಹಾಗೂ ವಿತರಣೆಯಲ್ಲಿಯೂ ಅಗ್ರಸ್ಥಾನದಲ್ಲಿತ್ತು.

ಈ ಕಂಪೆನಿಯ CAROUSEL ಸ್ಲೈಡ್ ಪ್ರೊಜೆಕ್ಟರ್‌ಗಳು ಯಾವುದೇ ವಸ್ತುವನ್ನು ಪರಿಚಯಿಸುವಲ್ಲಿ ಅತ್ಯಗತ್ಯವೆನಿಸುವಂತಹ ಜನಪ್ರಿಯತೆಯನ್ನು ಪಡೆದವು.
ಹೀಗೆ ಜನಪ್ರಿಯತೆಯನ್ನೂ ಲಾಭವನ್ನೂ ಪಡೆಯುತ್ತಾ `ಕೊಡಾಕ್~ ಒಂದು ಉದ್ಯಮವಾಗಿ ಬೆಳೆಯಿತು.

ಸಿರಿ-ಸಂಪತ್ತನ್ನು ಹೆಚ್ಚಿಸಿಕೊಂಡು ತನ್ನ ಅಧಿಪತ್ಯವನ್ನು ಇನ್ನಿಲ್ಲದಂತೆ ವಿಸ್ತರಿಸುತ್ತಾ ಸಾಗಿತು. ಕೇವಲ ಸ್ವಂತಕ್ಕಾಗಿ ಲಾಭ ಗಳಿಸಿಕೊಂಡದ್ದಷ್ಟೇ ಇದರ ಹೆಗ್ಗಳಿಕೆಯಾಗಲಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಅನೇಕಾನೇಕ ಸಂಸ್ಥೆಗಳಿಗೆ ಉದಾರವಾಗಿ ಸಹಾಯ ಮಾಡಿದ ಕೀರ್ತಿಯನ್ನೂ ಇದು ಪಡೆದಿದೆ. ಓರ್ವ ಬ್ಯಾಂಕ್ ನೌಕರನಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದ ಜಾರ್ಜ್ ಈಸ್ಟ್‌ಮನ್  ಸ್ವಪ್ರತಿಭೆಯಿಂದ, ವೃತ್ತಿಪರತೆಯಿಂದ, ಬಿಂಬಗ್ರಹಿಕೆಯಲ್ಲಿ ತನಗಿದ್ದ ವಿಶೇಷ ಆಸಕ್ತಿಯಿಂದ ಈ ಪವಾಡವನ್ನು ತನ್ನದಾಗಿಸಿಕೊಂಡ್ದ್ದಿದ.

ಚಲನಚಿತ್ರಕ್ಕೆ ಸ್ವರ್ಣ ಚೌಕಟ್ಟು
ಯಾವುದೇ ವರ್ಗಭೇದ, ವರ್ಣಭೇದವಿಲ್ಲದೆ ಸಮಸ್ತ ಪ್ರೇಕ್ಷಕರನ್ನೂ ಸಮೂಹ-ಸನ್ನಿಗೊಳಪಡಿಸಬಲ್ಲ ಮಾಂತ್ರಿಕ ಕಲಾ ಪ್ರಕಾರ ಚಲನಚಿತ್ರ. ಬಹುಶಃ ಮಾನವ ಜನಾಂಗದ ಇತಿಹಾಸದಲ್ಲಿಯೇ ಈ ಪರಿಯಾಗಿ ವಿಶ್ವವ್ಯಾಪಿಯಾಗಿ ನಿಂತ ಸಮೂಹಮಾಧ್ಯಮವು ಮತ್ತೊಂದಿಲ್ಲ.

ಇಡೀ ವಿಶ್ವದಲ್ಲಿ ನಿರ್ಮಾಣವಾಗುತ್ತಿದ್ದ ಚಲನಚಿತ್ರಗಳಲ್ಲಿ ಶೇಕಡಾ 80ರಷ್ಟು ಚಲನಚಿತ್ರಗಳು `ಕೊಡಾಕ್~ನ  ಕಚ್ಚಾಫಿಲ್ಮ್ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತ್ದ್ದಿದವು. ಸರಿ-ಸುಮಾರು 80 ವರ್ಷಗಳ ಕಾಲ ಚಲನಚಿತ್ರ ಜಗತ್ತಿನ ಅತಿಗಣ್ಯ `ಆಸ್ಕರ್~ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಬಹುಪಾಲು ಚಿತ್ರಗಳೆಲ್ಲವೂ `ಕೊಡಾಕ್~ ಕಚ್ಚಾಫಿಲ್ಮ್‌ಗಳಿಗೆ ಆಭಾರಿಯಾಗಿರಬೇಕು.

ಕಾರಣ ಕಂಪೆನಿ ಒಂದು ರೀತಿಯಲ್ಲಿ ಚಲನಚಿತ್ರ ಜಗತ್ತಿನ `ಕಚ್ಚಾಫಿಲ್ಮ್~ ತಯಾರಿಕೆಯ ಅನಭಿಷಿಕ್ತ ಸಾಮ್ರಾಟನೆನಿಸಿತ್ತು.ಈ ಎಲ್ಲ ಸವಲತ್ತುಗಳೂ `ಕೊಡಾಕ್~ ಹೆಸರನ್ನರಸಿ ಬರಲಿಲ್ಲ. ತಾನು ತಯಾರಿಸುತ್ತಿದ್ದ ಸಾಮಗ್ರಿಗಳ ಗುಣಮಟ್ಟವನ್ನು ಅವಿರತವಾಗಿ ಕಾಯ್ದುಕೊಂಡದ್ದಷ್ಟೇ ಅಲ್ಲದೆ,

ನಿರಂತರ ಅನುಸಂಧಾನ ಮತ್ತು ಅನುಷ್ಠಾನದ ಮೂಲಕ ಬಿಂಬಗ್ರಹಿಕೆಯ ಕ್ಷೇತ್ರದಲ್ಲಿ ಅಸಾಧಾರಣ ಎನಿಸುವಂತಹ ಸಾಮಗ್ರಿಗಳನ್ನು ಆವಿಷ್ಕರಿಸಿ, ಛಾಯಾಚಿತ್ರ ಕಲಾವಿದರು ತಮ್ಮ ಸಾಧನೆಯ ಹಾದಿಯಲ್ಲಿ ದಾಪುಗಾಲಿಡಲು ಅನುವಾಗುವ ವಾತಾವರಣವನ್ನೂ, ಸಾಧನಗಳನ್ನೂ ಕಲ್ಪಿಸಿಕೊಟ್ಟಿತು ಕೊಡಾಕ್.

ಸಾಮಗ್ರಿಗಳನ್ನು ತಯಾರಿಸುವಲ್ಲಿ ತಕ್ಕ ಪೈಪೋಟಿಯನ್ನು ಒಡ್ಡಬಲ್ಲ ಮತ್ತಾವುದೇ ತಯಾರಕರು ಇಲ್ಲದಿದ್ದಾಗ್ಯೂ ಸಹ, ಕೊಡಾಕ್ ಅವಿಶ್ರಾಂತವಾಗಿ ಸಾಧನೆಯ ಮಟ್ಟವನ್ನು ಏರಿಸಿಕೊಳ್ಳುತ್ತಲೇ ಮುನ್ನಡೆಯಿತೆನ್ನುವುದು ಗಮನಾರ್ಹವಾದ ವಿಷಯ.

ಚಿತ್ರಕಲೆಗಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದ ದಿಗ್ಗಜರೊಡನೆ ಸಂವಾದ ನಡೆಸಿ, ಅವರ ಬೇಕು-ಬೇಡಗಳಿಗೆ ನಿಷ್ಠೆಯಿಂದ ಪ್ರತಿಸ್ಪಂದಿಸಿ, ಅದಕ್ಕನುಗುಣವಾಗಿ ಅನುಸಂಧಾನ ಕೇಂದ್ರಗಳಲ್ಲಿ ವಿಜ್ಞಾನಿಗಳು ಮತ್ತು ಕಾರ್ಮಿಕರು ಒಟ್ಟಾಗಿ ಕೈಗೂಡಿಸಿಕೊಂಡ ಸಾಧನೆಯ ಫಲವಾಗಿ ಹಲವಾರು ಅಸಾಮಾನ್ಯವೆನಿಸುವ ಕಚ್ಚಾಫಿಲಂ ಸಾಮಗ್ರಿಗಳನ್ನು ಚಲನಚಿತ್ರ-ಛಾಯಾಗ್ರಹಣ ಕಲೆಗಾರಿಕೆಗೆ ಕೊಡುಗೆಯಾಗಿ ನೀಡಿತು.

`ನಿಮ್ಮ ಕಣ್ಣು ಕಾಣಬಲ್ಲದೆಲ್ಲವನ್ನೂ ಕೊಡಾಕ್ ಫಿಲಂ ಅಂತೆಯೇ ಗ್ರಹಿಸಬಲ್ಲದು~ ಎನ್ನುವ ಧ್ಯೇಯವಾಕ್ಯವು ಉತ್ಪ್ರೇಕ್ಷೆಯಾಗಿಯಷ್ಟೇ ಉಳಿಯದೆ ಕಾರ್ಯರೂಪಕ್ಕೆ ಬಂದಿದ್ದು, ಕಂಪೆನಿಯ ವಿಜ್ಞಾನಿಗಳ ಅಪಾರ ಪರಿಶ್ರಮದಿಂದಾಗಿ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಲ್ಲಷ್ಟು ತೆಳುವಾದ ಪದರಗಳಲ್ಲಿ ರಾಸಾಯನಿಕಗಳನ್ನು ಅಡಗಿಸಿ ಚಲನಚಿತ್ರ ಬಿಂಬಗ್ರಹಣ ಕಾರ್ಯವನ್ನು ಲೀಲಾಜಾಲವಾಗಿಸಿದ ಕೀರ್ತಿ ಇದರದು.

ಈ ಎಲ್ಲ ಸಾಧನೆಗಳ ಹೊರತಾಗಿಯೂ `ಕೊಡಾಕ್~ ಅತ್ಯಂತ ವಿನಮ್ರವಾಗಿಯೇ ತನ್ನೆಡೆಗೆ ಹರಿದು ಬರುತ್ತಿದ್ದ ಹೊಗಳಿಕೆಯ ಮಹಾಪೂರವನ್ನು ಎದುರುಗೊಳ್ಳುತ್ತಿತ್ತು. ಆಧುನಿಕ ಭಾರತೀಯ ಚಲನಚಿತ್ರ ಛಾಯಾಗ್ರಹಣ ಕಲೆಗಾರಿಕೆಯ ಪಿತಾಮಹನೆನಿಸಿದ ಸುಬ್ರತೋ ಮಿತ್ರ ಅವರು ಒಂದೊಮ್ಮೆ ಭಾರತದಲ್ಲಿ `ಕೊಡಾಕ್~ ಸಾಮಗ್ರಿಗಳ ಸರಬರಾಜಿನ  ಉಸ್ತುವಾರಿಯ ಹೊಣೆಹೊತ್ತಿದ್ದ ಕೆ.ಕೃಷ್ಣನ್ ಅವರೊಂದಿಗೆ ಸಂಭಾಷಿಸುತ್ತಾ- `ನೀವು (ಎಂದರೆ, ಕೊಡಾಕ್) ಉತ್ಪಾದಿಸುತ್ತಿರುವ ಕಚ್ಚಾಫಿಲಂನ ಬಿಂಬಗ್ರಹಣ ಸಾಮರ್ಥ್ಯವು ನಿಮಗೇ ತಿಳಿಯದು.
 
ನೀವು ಬೇಕೆಂದು ಪ್ರತಿಪಾದಿಸಿ, ನಮೂದಿಸಿರುವುದಕ್ಕಿಂತಲೂ ಕಡಿಮೆ ಬೆಳಕಿನಲ್ಲಿಯೇ ಛಾಯಾಚಿತ್ರವನ್ನು ಮೂಡಿಸುವ ಸಾಮರ್ಥ್ಯ ಇದಕ್ಕಿದೆ~ ಎಂದು ಆರೋಪ ಮಾಡಿದ್ದರು! (ಸುಬ್ರತೋ ಬರೀ ಬಾಯಿಮಾತಿಗಾಗಿ ಈ ರೀತಿ ಹೇಳದೆ, ತಾವು ನಡೆಸಿದ ಅನೇಕ ಪ್ರಯೋಗಗಳ ಸಾಕ್ಷ್ಯಾಧಾರಗಳ ಸಮೇತ ಈ ಮಾತನ್ನು ರುಜುವಾತು ಪಡಿಸಿದ್ದರು.

ಈ ದಾಖಲೆಗಳು ಸುಬ್ರತೋ ಅವರ ಆಪ್ತಸಹಾಯಕರಾಗಿದ್ದ ಪೂರ್ಣೇಂದು ಬೋಸ್ ಅವರ ಬಳಿ ಈಗಲೂ ಲಭ್ಯವಿವೆ.) ಹಸನ್ಮುಖಿಯಾಗಿ, ಕೃತಜ್ಞತೆಯಿಂದ ಈ ದೋಷಾರೋಪವನ್ನು ಸ್ವೀಕರಿಸಿದ ಕೃಷ್ಣನ್, ಲಂಡನ್ನಿನ ಹೆಡ್-ಆಫೀಸಿಗೆ ಈ ವಿಚಾರವನ್ನು ತಿಳಿಸಿದ್ದರು. ಇದು ಹೀಗಾದರೆ, ಇನ್ನೊಂದೆಡೆ ನಮ್ಮ ಕನ್ನಡದವರೇ ಆದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತ ಛಾಯಾಗ್ರಾಹಕರಾದ ವಿ.ಕೆ. ಮೂರ್ತಿಯವರದು ಮತ್ತೊಂದು ಬಗೆ.

ಕ್ರಾಂತಿಕಾರಕವೆನಿಸುವ ಲೈಟಿಂಗ್ ಪ್ರಯೋಗಗಳ ಮೂಲಕ ಕಪ್ಪು-ಬಿಳುಪು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸಿದ್ದ ಯಕ್ಷಿಣಿಕಾರ ವಿ.ಕೆ.ಮೂರ್ತಿ, ವರ್ಣರಂಜಿತ ಚಿತ್ರಗಳಲ್ಲೂ ಇದೇ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದರು. `ಕಲರ್-ಫಿಲ್ಮ್‌ನಲ್ಲಿ ಈ ಪರಿಯ ಕಾಂಟ್ರಾಸ್ಟ್ ಲೈಟಿಂಗ್ ಮಾಡಬಾರದು.

ಇಂಥಾ ಪ್ರಯೋಗಗಳು ಫಲಕಾರಿಯಾಗುವುದಿಲ್ಲ~ ಎಂದು ಕೃಷ್ಣನ್ ಅವರು ಪರಿಪರಿಯಾಗಿ ತಿಳಿಸಿ ಹೇಳಿದರೂ ಸಹ, ವಿ.ಕೆ.ಮೂರ್ತಿ ತಮ್ಮ ಹಾದಿಯಿಂದ ಮಿಸುಕಲಿಲ್ಲ. ತಮ್ಮ ಮನೆಯ ವೆರಾಂಡದಲ್ಲಿ ಸಂಜೆಬಿಸಿಲಿನ ಆಹ್ಲಾದಕರವಾದ ನಸುಗೆಂಪು ಬಣ್ಣಕ್ಕೆ ಮೈಯೊಡ್ಡಿ ಮಂದಹಾಸದೊಂದಿಗೆ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ, ವಿ.ಕೆ.ಮೂರ್ತಿ. `ಕೃಷ್ಣನ್ ನನ್ನೊಡನೆ ಮಾಡುತ್ತಿದ್ದ ವಾದ-ವಿವಾದವೆಲ್ಲವೂ ವ್ಯರ್ಥವೇ ಆಯಿತು.

ಯಾವುದು ಚೆನ್ನಾಗಿದೆ ಎಂದು ನನಗನ್ನಿಸಿತೋ ನಾನು ಅದನ್ನಷ್ಟೇ ಮಾಡಿದೆ. ನಾನು ಯಾವುದೇ ಲ್ಯಾಬೊರೇಟರಿಯ ಸಲಹೆ-ಸಮಜಾಯಿಷಿಗಳಿಗೆ ಸೊಪ್ಪು ಹಾಕಲಿಲ್ಲ. (ಕಚ್ಚಾ ಫಿಲಂ ತಯಾರಕರೂ ಸೇರಿದಂತೆ) ಈ ರೀತಿಯಾಗಿ ಸಿದ್ಧಿಸಿಕೊಂಡ ಬಿಂಬಗಳ ಗುಣಮಟ್ಟವು ನಿಮಗೆ ನೋಡಲು ಇಂದೂ ಸಹ ಲಭ್ಯವಿದೆ~. ಕೊಡಾಕ್ ಸಾಮಗ್ರಿಗಳ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಮುಂದುವರಿಸುತ್ತಾ ವಿ.ಕೆ. ಹೇಳುತ್ತಾರೆ - `ನಾನು ಕೊಡಾಕ್ ಫಿಲಂ ಅಲ್ಲದೇ ಬೇರಾವುದೇ ಕಂಪೆನಿಯ ಫಿಲಂ ಅನ್ನು ಉಪಯೋಗಿಸುವ ಪ್ರಮೇಯವೇ ಬರಲಿಲ್ಲ.

ಏಕೆಂದರೆ, ಈ ಕಚ್ಚಾ ಫಿಲಂಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತಾವುದೇ ಕಂಪೆನಿಯ ಸರಕು ಮಾರುಕಟ್ಟೆಯಲ್ಲೇ ಇರಲಿಲ್ಲ~.

ರೂಪಾಂತರ ಪರ್ವ
ಖ್ಯಾತ ಕಲಾವಿದರ, ಕಲಾಭ್ಯಾಸಿಗಳ, ಉದ್ಯಮಿಗಳ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿ, ಏಕಮೇವಾದ್ವಿತೀಯವಾಗಿ ಮೆರೆದ ಕೊಡಾಕ್ ಈಗ ಪೊರೆ ಕಳಚಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.

ಅದು ಸಾಗಿಬಂದ ಹಾದಿ ಹಾಗೂ ಅದರ ಇಂದಿನ ಡೋಲಾಯಮಾನ ಪರಿಸ್ಥಿತಿ ಸಿನಿಮಾ ಪ್ರೇಮಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿ, ನಮ್ಮನ್ನು ಸಂದಿಗ್ಧ ಮನಸ್ಥಿತಿಗೆ ಸಿಲುಕಿಸುತ್ತವೆ. ಉತ್ತರವೇ ಇಲ್ಲದ ವಿಧಿವಿಲಾಸ ಇದೆನ್ನಬಹುದೇನೋ? ಆದರೆ ವಸ್ತುಸ್ಥಿತಿಯೇ ಬೇರೆ. `ಕೊಡಾಕ್~ ಕಚ್ಚಾಫಿಲಂನ ಚರಮಗೀತೆಯ ಮೊದಲ ಪಂಕ್ತಿಯನ್ನು 1975ರಲ್ಲಿ ತಾನು ಅನ್ವೇಷಿಸಿದ ಜಗತ್ತಿನ ಮೊಟ್ಟಮೊದಲ ಡಿಜಿಟಲ್ ಕ್ಯಾಮೆರಾದ ಮೂಲಕವೇ ಬರೆದಿತ್ತು.

ಸುಮಾರು ಮೂರು ದಶಕಗಳ ಹಿಂದೆಯೇ, ಅತ್ಯಂತ ಕರಾರುವಾಕ್ಕಾದ ಭವಿಷ್ಯ ನುಡಿದಿದ್ದರು ಕೊಡಾಕ್ ಕಂಪೆನಿಯ ಅನುಸಂಧಾನಕಾರರು. `2010ರ ವೇಳೆಗೆ ಕಚ್ಚಾಫಿಲಂ ಅನ್ನು ಬಿಂಬಗ್ರಹಣಕಾರ್ಯಕ್ಕೆ ಬಳಸುವವರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ~ ಎನ್ನುವ ದಾರ್ಶನಿಕ ಮಾತದು.

`ಕೊಡಾಕ್~ ಮನಸ್ಸು ಮಾಡಿದ್ದರೆ ಹಲವಾರು ಚಿಲ್ಲರೆ ವಹಿವಾಟುಗಳಲ್ಲಿ ತನ್ನನ್ನು ತಾನು ಹಂಚಿಕೊಂಡು ಈ ಸುಳಿಯಿಂದ ಪಾರಾಗಬಹುದಿತ್ತು. ಆದರೆ ಅನಭಿಷಿಕ್ತ ಸಾಮ್ರಾಟನಾಗಿ ಮೆರೆದ ಮೇರುವ್ಯಕ್ತಿತ್ವವೊಂದು ಹಾಗೆ ಮಾಡದಿದ್ದುದೇ ಸೂಕ್ತವೆನಿಸುತ್ತದೆ. ವೀರಮರಣವನ್ನಪ್ಪುವುದೇ ಸಾಹಸಿಗನಿಗೆ ಸರಿಯೆನಿಸುವ ದಾರಿ. ತನ್ನ ಹೆಗ್ಗಳಿಕೆಯನ್ನು ಉಳಿಸಿಕೊಂಡು ಬಿಂಬಗ್ರಹಣದ ಇತಿಹಾಸದಲ್ಲಿ ಅಜರಾಮರವಾಗಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ, `ಕೊಡಾಕ್~.

ಕಂಪೆನಿಯನ್ನು ಹುಟ್ಟುಹಾಕಿದ ಎಉ್ಕಣ್ಕಎಉ ಉಅಖಅಘೆ ಅವರ ಜೀವನದ ಕೊನೆಯ ಮಾತುಗಳು ಇಂತಿದ್ದವು- `ನನ್ನ ಕೆಲಸ ಮುಗಿದಿದೆ. ಮತ್ತಿನ್ನೇತಕ್ಕೆ ಕಾಯಬೇಕಿದೆ?~. ಸುಮಾರು ಎಂಟು ದಶಕಗಳ ನಂತರ ಕೊಡಾಕ್ ಕಂಪೆನಿಯ ನಿರ್ಗಮನದಲ್ಲಿ ಮತ್ತೊಮ್ಮೆ ಇದೇ ಮಾತುಗಳು ಮಾರ್ದನಿಸಿವೆ.

`ದಿ ಆರ್ಟಿಸ್ಟ್~ ಚಿತ್ರದ ನಾಯಕ ಪಾತ್ರವಾದ ಜಾರ್ಜ್ ವ್ಯಾಲೆಂಟಿನ್ ಸಹ ಇಂತಹುದೇ ಮನಸ್ಥಿತಿಗೆ ಒಳಗಾಗುವುದನ್ನು ನಾವು ಕಾಣುತ್ತೇವೆ. ಅತ್ಯಂತ ನಿಷ್ಠಾವಂತನಾದ ಆತನ ಮುದ್ದು ನಾಯಿಮರಿ ಆತನ ಪ್ರಾಣವುಳಿಸುತ್ತದೆ. ಆತನೇ ಬಣ್ಣದ ಬದುಕಿಗೆ ಪರಿಚಯಿಸಿದ ಪೆಪ್ಪಿ ಮಿಲ್ಲರ್ ತನ್ನ ಜನಪ್ರಿಯತೆಯನ್ನೇ ಪಣವಾಗಿಟ್ಟು, ಮತ್ತೊಮ್ಮೆ ರಜತಪರದೆಯಲ್ಲಿ ಆತನಿಗೆ ತಕ್ಕುದಾದ ಪಾತ್ರವೊಂದನ್ನು ಸೃಷ್ಟಿಸಿ, ಜಾರ್ಜ್ ವ್ಯಾಲೆಂಟಿನ್ ಮತ್ತೊಮ್ಮೆ ಹೊನಲು ಬೆಳಕಿನಲ್ಲಿ ಮೀಯುವಂತೆ ನೋಡಿಕೊಳ್ಳುತ್ತಾಳೆ.

ಕೊಡಾಕ್ ಕಂಪೆನಿಯ `ಪೆಪ್ಪಿ~ ಯಾರಾಗಬಹುದು? 1975ರಲ್ಲಿ ಅದರಿಂದಲೇ ಅನ್ವೇಷಿಸಲ್ಪಟ್ಟ ಡಿಜಿಟಲ್ ತಂತ್ರಜ್ಞಾನವು ಕೊಡಾಕ್ ಕಂಪೆನಿಗೆ ಪುನರ್ಜನ್ಮವನ್ನು ನೀಡಬಹುದೇ?! ಯಾರಿಗೆ ಗೊತ್ತು?! ವಿಧಿಯ ಸಂಚಿನ ನಾಟಕದಲ್ಲಿ ನಾವೆಲ್ಲಿ ಪಾತ್ರಧಾರಿಗಳಷ್ಟೇ!

(`‘DER SPEIGEL’ ಜರ್ಮನ್ ಪತ್ರಿಕೆಯಲ್ಲಿ ಪ್ರಕಟಗೊಂಡ Ullrich Fichtnerಅವರ A Century on film’ ಎನ್ನುವ ಲೇಖನದಿಂದ ಪ್ರೇರಿತ. ಆಂಗಭ್ಲಾಷಾನುವಾದ Jan Liebelt).
 ಲೇಖಕರು ಕನ್ನಡ ಸಿನಿಮಾದ ಹಿರಿಯ ಛಾಯಾಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT