ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆರ್ಥಿಕ ಕೊಡುಗೆಗಳಿಲ್ಲ: ಪ್ರಣವ್

Last Updated 19 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ಪ್ಯಾರಿಸ್ (ಪಿಟಿಐ): ಸತತ ಎರಡು ವರ್ಷಗಳ ಆರ್ಥಿಕ ಕೊಡುಗೆ  ಮತ್ತು ವಿಸ್ತರಣೆಯ ನಂತರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಟ್ಟುನಿಟ್ಟಿನ ವಾಣಿಜ್ಯ ನೀತಿಯನ್ನು ಸರ್ಕಾರ ಪ್ರಕಟಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ‘ಜಿ-20’ ರಾಷ್ಟ್ರಗಳ ಹಣಕಾಸು ಸಚಿವರುಗಳ ಸಭೆಯಲ್ಲಿ ಮಾತನಾಡಿದ ಅವರು, 2008ರಲ್ಲಿ ಜಾಗತಿಕ ಆರ್ಥಿಕ ಮಗ್ಗಟ್ಟಿನ ಹಿನ್ನೆಲೆಯಲ್ಲಿ ಮುಂದಿನ ಎರಡು ರ್ವಗಳ ಕಾಲ ಆರ್ಥಿಕ ಉತ್ತೇಜನ ನೀತಿಗಳು ಬೇಕಾಗಿದ್ದವು. ಈಗ ಅದರ ಅಗತ್ಯ ಇಲ್ಲ. ಈ ಬಾರಿ ಬಜೆಟ್‌ನಲ್ಲಿ ಶಿಸ್ತುಬದ್ಧ ಆರ್ಥಿಕ ನೀತಿಗೆ ಒತ್ತು ಕೊಡಲಾಗುವುದು. ಹೆಚ್ಚಿನ ಆರ್ಥಿಕ ಕೊಡುಗೆ ಇಲ್ಲ ಎಂದರು.

ಸರ್ಕಾರ ಆರ್ಥಿಕ ಉತ್ತೇಜನಾ ನೀತಿಗಳಿಗೆ ಹೆಚ್ಚಿನ ಹಣ ಮೀಸಲಿರಿಸಿದ ಹಿನ್ನೆಲೆಯಲ್ಲಿ 2009-10ರಲ್ಲಿ ಬಜೆಟ್‌ನಲ್ಲಿ ವಿತ್ತೀಯ ಕೊರತೆ ಶೇ 6.8ರಷ್ಟಾಗಿತ್ತು. ಪ್ರಸಕ್ತ ವರ್ಷ ಶೇ 5.5ರಷ್ಟು ಎಂದು  ಅಂದಾಜಿಸಲಾಗಿದೆ. ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಎಲ್ಲ ದೇಶಗಳು ಆರ್ಥಿಕ ವಿಸ್ತರಣೆ ಯೋಜನೆಗಳಿಗೆ ಹೆಚ್ಚು ಗಮನ ಹರಿಸಿದ  ಹಿನ್ನೆಲೆಯಲ್ಲಿ ಆಯವ್ಯಯ ಕೊರತೆ ಹೆಚ್ಚುತ್ತಾ ಹೋಯಿತು ಎಂದರು.

ಆದರೆ, ಆರ್ಥಿಕ ಉತ್ತೇಜನಾ ನೀತಿಯಿಂದ 2008ರಲ್ಲಿ ಶೇ 6.8ರಷ್ಟಿದ್ದ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) 2009ರಲ್ಲಿ ಶೇ 9ನ್ನು ತಲುಪುವಲ್ಲಿ ಯಶಸ್ವಿಯಾಯಿತು. ಈಗ ‘ಜಿಡಿಪಿ’ ಉದ್ದೇಶಿತ ಗುರಿಗೆ ಸಮೀಪದಲ್ಲಿದೆ. ಬಜೆಟ್‌ನಲ್ಲಿ ಉದ್ಯಮ ರಂಗಕ್ಕೆ ಹೆಚ್ಚಿನ  ಕೊಡುಗೆ ನೀಡುವುದರಿಂದ ಮತ್ತೆ ವಿತ್ತೀಯ ಕೊರತೆ ಸೃಷ್ಟಿಯಾಗುತ್ತದೆ ಎಂದರು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 2.9ರಷ್ಟಿದ್ದ ವಿದೇಶಿ ವಿನಿಮಯ ಶೇ 3.5ಕ್ಕೆ ಹೆಚ್ಚಿದೆ. 2011-12ನೇ ಹಣಕಾಸು ವರ್ಷದಲ್ಲಿ ಸರ್ಕಾರ ಶೇ 4.8ರಷ್ಟು ವಿತ್ತೀಯ ಕೊರತೆಯನ್ನು ಅಂದಾಜಿಸಿದೆ.

ಭಾರತ ವಿರೋಧ: ‘ಜಾಗತಿಕ ಆರ್ಥಿಕ ಅಸಮತೋಲನ ಭಾರತದ ಕೊಡುಗೆ ಅಲ್ಲ. ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಚಂಚಲತೆಯಿಂದ ಸೃಷ್ಟಿಯಾಗಿರುವ ಆರ್ಥಿಕ ಅಸಮತೋಲನ ನಿಯಂತ್ರಿಸಲು ಎಲ್ಲರಿಗೂ ಸರಿ ಹೊಂದುವ ಒಂದೇ ಅಳತೆಯ ನೀತಿಯನ್ನು ಭಾರತ ವಿರೋಧಿಸುತ್ತದೆ’  ಎಂದು ಪ್ರಣವ್ ಮುಖರ್ಜಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ‘ಬ್ರಿಕ್’ (ಬ್ರೆಜಿಲ್, ರಷ್ಯಾ, ಇಂಡಿಯಾ ಮತ್ತು ಚೀನಾ-ಬಿಆರ್‌ಐಸಿ) ರಾಷ್ಟ್ರಗಳ ಹಣಕಾಸು ಸಚಿವರುಗಳ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಅಸಮತೋಲನಕ್ಕೆ ಭಾರತದ ಕೊಡುಗೆ ಇಲ್ಲ, ಹಾಗಾಗಿ ಎಲ್ಲರಿಗೂ ಸರಿ ಹೊಂದುವ ಒಂದೇ ಅಳತೆಯ ನೀತಿಯನ್ನು ನಾವು ವಿರೋಧಿಸುತ್ತೇವೆ. ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ   ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಿದೆ ಎಂದರು.

‘ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ಶಕ್ತಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಹೆಚ್ಚುವಂತೆ ಮಾಡಿವೆ’ ಎಂದು ಫೆಡರಲ್ ರಿಸರ್ವ್ ಮುಖ್ಯಸ್ಥರು ಮಾಡಿದ ಟೀಕೆಗೆ ಪ್ರಣವ್ ಈ ರೀತಿ ತಿರುಗೇಟು ನೀಡಿದರು.

‘ಜಿ20’ ದೇಶಗಳಾದ ಭಾರತ, ಚೀನಾ, ರಷ್ಯಾ, ಬ್ರೆಜಿಲ್,ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್ ಜಾಗತಿಕ ಆರ್ಥಿಕ ಅಸಮತೋಲನ ನಿಯಂತ್ರಿಸಲು ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಸಾರ್ವಜನಿಕ ಸಾಲ, ಖಾಸಗಿ ಉಳಿತಾಯ, ವಿದೇಶಿ ವಿನಿಮಯ ದರ ಇತ್ಯಾದಿ ವಿಷಯಗಳ ಕುರಿತ ಪ್ರಸ್ತಾವಗಳನ್ನು ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT