ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆವಿಷ್ಕಾರದತ್ತ ಹೆಜ್ಜೆ ಹಾಕಲು ಸಲಹೆ

Last Updated 22 ಮೇ 2012, 8:20 IST
ಅಕ್ಷರ ಗಾತ್ರ

ಸಿರಿಗೆರೆ: ಪ್ರಸ್ತುತ ಮುಂದುವರಿದ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಸಂಶೋಧನೆ, ಆವಿಷ್ಕಾರಗಳ ಕಡೆಗೆ ಹೆಚ್ಚು ಒಲವು ತೋರಿಸಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಜೀವನ ಸಾಗಿಸಬೇಕು ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತರಳಬಾಳು ವಿದ್ಯಾಸಂಸ್ಥೆ ವತಿಯಿಂದ 75 ದಿನಗಳಿಂದ ನಡೆದ ವಿಜ್ಞಾನ ವಿಭಾಗದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಪಿಯು ವಿದ್ಯಾರ್ಥಿಗಳ ಜತೆಗೆ ಇಲ್ಲಿಗೆ ಸಮೀಪದ ಶಾಂತಿವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಯನ ಒಂದು ನಿರಂತರ ಕಾರ್ಯ. ಅದು ಪ್ರತಿಯೊಬ್ಬ ಮನುಷ್ಯನ ಜೀವಿತ ಅವಧಿಯವರೆಗೂ ನಡೆಯುವಂಥದ್ದು. ಅದರಲ್ಲಿ ಯಶಸ್ಸು ಕಾಣಲು ನಿರಂತರ ಅಧ್ಯಯನ ಮಾಡುತ್ತಿರಬೇಕು ಎಂದರು.

ಕೇವಲ ಪದವಿಗಾಗಿ ಶಿಕ್ಷಣ ಪಡೆಯುವುದು ಸರಿಯಲ್ಲ. ನಾವು ಕಲಿತ ವಿದ್ಯೆಯಿಂದ ನಾಡು, ನುಡಿಗೆ, ರಾಷ್ಟ್ರಕ್ಕೆ, ಪೋಷಕರಿಗೆ ಹಾಗೂ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು. ಶಿಕ್ಷಣದಿಂದ ಸಂಪಾದಿಸಿದ ಜ್ಞಾನದ ಲಾಭ ಸಮಾಜಕ್ಕೆ ಆಗಬೇಕು ಎಂದು ತಿಳಿಸಿದರು.

ವಿಜ್ಞಾನ ವಿದ್ಯಾರ್ಥಿಗಳು, ಪ್ರಸ್ತುತ ಪ್ರಗತಿಯಲ್ಲಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಏನನ್ನಾದರೂ ಹೊಸದನ್ನು ಕಂಡು ಹಿಡಿಯುವ ಕಡೆಗೆ ಹೆಚ್ಚು ಒಲವು ತೋರಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ಆಗುಹೋಗುಗಳ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಗಳು, ತಾವು ಅಭಿವೃದ್ಧಿಪಡಿಸಿರುವ `ಗಣಕ ವಚನ ಸಂಪುಟ ತಂತ್ರಾಂಶ~ದ ಸ್ಥೂಲ ಪರಿಚಯ ಮಾಡಿಕೊಟ್ಟರು. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ನಾಗರಿಕರು, ಶರಣರ ವಚನಗಳು ಮತ್ತು ಅವುಗಳ ಸಾರ, ತತ್ವಗಳನ್ನು ಅರಿಯಬೇಕು ಎಂಬ ಉದ್ದೇಶದಿಂದ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಸಂವಾದದಲ್ಲಿ ರಾಜ್ಯದ 13 ಜಿಲ್ಲೆಗಳ ವಿವಿಧ 43 ಪದವಿಪೂರ್ವ ಕಾಲೇಜುಗಳ 275 ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಆರ್. ಕುಮಾರಸ್ವಾಮಿ, ಪ್ರೊ.ಡಿ.ಎಂ. ನಾಗರಾಜ್, ರಾಜಶೇಖರಯ್ಯ, ಕೆ.ಎಸ್. ರಘು, ಕೆ.ಆರ್. ಮರುಳಸಿದ್ದಪ್ಪ, ಎಚ್.ಪಿ. ಶಿವಕುಮಾರ್, ಆರ್. ಮರುಳಸಿದ್ದಯ್ಯ, ಎಂ.ಎಸ್. ಸಿದ್ದೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT