ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಒಕ್ಕೂಟ ಅಸ್ತಿತ್ವಕ್ಕೆ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ, ನ್ಯೂಯಾರ್ಕ್ (ಪಿಟಿಐ): ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ನಡೆಸುವ ಉದ್ದೇಶದಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಒಳಗೊಂಡ ನೂತನ ಒಕ್ಕೂಟ ಅಸ್ವಿತ್ವಕ್ಕೆ ಬಂದಿದೆ.

ಹೊಸದಾಗಿ ರಚಿತವಾಗಿರುವ `ಭಯೋತ್ಪಾದನಾ ನಿಗ್ರಹ ಜಾಗತಿಕ ವೇದಿಕೆ~ (ಜಿಸಿಟಿಎಫ್)ಯಲ್ಲಿ ಯೂರೋಪಿಯನ್ ಒಕ್ಕೂಟದ 29 ರಾಷ್ಟ್ರಗಳು, 11 ಪ್ರಮುಖ ಮುಸ್ಲಿಂ ರಾಷ್ಟ್ರಗಳು, ಚೀನಾ, ರಷ್ಯ ಸೇರಿವೆ. ಈ ವೇದಿಕೆಯಲ್ಲಿ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾಗಳಿಗೆ ಪ್ರಾದೇಶಿಕ ಪ್ರಾತಿನಿಧ್ಯ ನೀಡಲಾಗಿದೆ. ಈ ವೇದಿಕೆಯ ಸಂಚಾಲನಾ ಸಮಿತಿಯು ವಿದೇಶಾಂಗ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಜತೆಗೆ, ಐದು ಪ್ರತ್ಯೇಕ ಕಾರ್ಯತಂಡಗಳು ವೇದಿಕೆಯಡಿ ಕಾರ್ಯನಿರ್ವಹಿಸಲಿವೆ.

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ವಿವಿಧ ರಾಷ್ಟ್ರಗಳ ಪ್ರಮುಖರು ಇಲ್ಲಿಗೆ ಆಗಮಿಸಿರುವ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ವೇದಿಕೆಯನ್ನು ಉದ್ಘಾಟಿಸಿದರು.
ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಅದರಲ್ಲಿ ಭಾಗಿಯಾಗುವ ಇನ್ನಿತರರನ್ನು ಒಂದೆಡೆ ಸೇರಿಸಲು ಪ್ರತ್ಯೇಕ ವೇದಿಕೆ ಅಗತ್ಯವಿತ್ತು. ವೇದಿಕೆಯ ರಚನೆಯೊಂದಿಗೆ ಆ ಆಶಯವೀಗ ಸಾಕಾರಗೊಂಡಿದೆ ಎಂದು ಹಿಲರಿ ಕ್ಲಿಂಟನ್ ಅಭಿಪ್ರಾಯಪಟ್ಟರು.

ಲಂಡನ್‌ನಿಂದ ಲಾಹೋರ್‌ವರೆಗೆ, ಮ್ಯಾಡ್ರಿಡ್‌ನಿಂದ ಮುಂಬೈವರೆಗೆ, ಕಾಬೂಲ್‌ನಿಂದ ಕಂಪಾಲಾವರೆಗೆ- ಹೀಗೆ ಎಲ್ಲೆಡೆ ಮುಗ್ಧ ನಾಗರಿಕರು ಅಲ್ ಖೈದಾ ಮತ್ತು ಎಲ್‌ಇಟಿ ಪಾತಕ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಯಾವುದೇ ರಾಷ್ಟ್ರ ಈ ಅಪಾಯವನ್ನು ಕೈಕಟ್ಟಿಕೊಂಡು ನೋಡಲಾಗದು. ಅದೇ ಸಮಯಕ್ಕೆ ಈ ಪಿಡುಗಿನ ವಿರುದ್ಧ ಏಕಾಂಗಿ ಹೋರಾಟ ಕೂಡ ಅಸಾಧ್ಯ. ಹೀಗಾಗಿ ಸಂಘಟಿತ ಹೋರಾಟಕ್ಕೆ ವೇದಿಕೆ ಅನುವು ಮಾಡಿಕೊಡಲಿದೆ ಎಂದು ಪ್ರತಿಪಾದಿಸಿದರು.

`ಜಾಗತಿಕ ಭಯೋತ್ಪಾದನೆ ವಿರುದ್ಧ ಸಮಗ್ರ ಒಡಂಬಡಿಕೆ~ ಜಾರಿಗೆ ತರಬೇಕು ಎಂದು ಭಾರತ 10ಕ್ಕೂ ಹೆಚ್ಚು ವರ್ಷಗಳಿಂದ ಆಗ್ರಹಿಸುತ್ತಿದೆ. ಈ ಒಡಂಬಡಿಕೆಗೆ ಅಂತಿಮರೂಪ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ರಾಷ್ಟ್ರವೂ ಕಾರ್ಯಪ್ರವೃತ್ತವಾಗಬೇಕು ಎಂದು ಕ್ಲಿಂಟನ್ ಇದೇ ಸಂದರ್ಭದಲ್ಲಿ ಕೋರಿದರು.

ವಿವಿಧ ರಾಷ್ಟ್ರಗಳು ಒಂದೆಡೆ ಸೇರಿ, ಭಯೋತ್ಪಾದನೆ ಹತ್ತಿಕ್ಕುವಲ್ಲಿ ಜರೂರಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವಲೋಕಿಸುವುದಕ್ಕೆ ಪೂರಕವಾಗಿ ಜಿಸಿಟಿಎಫ್ ಕೆಲಸ ಮಾಡಲಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಅಥವಾ ವಿಳಂಬಗೊಂಡಿರುವ ಕೆಲವು ಚರ್ಚೆಗಳಿಗೆ ಮರುಚಾಲನೆ ನೀಡಲು ಕೂಡ ಇದು ನೆರವಾಗಲಿದೆ. ನಾಗರಿಕ ಸಂಘಟನೆಗಳು, ಕಾನೂನು ನಿಯಮಾವಳಿಗಳು, ಗಡಿ ಭದ್ರತೆ ಮತ್ತಿತರ ವಿಷಯಗಳ ಬಗ್ಗೆಯೂ ಇದು ಒತ್ತು ನೀಡಲಿದೆ ಎಂದು ಹಿಲರಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT