ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಣ್ಣು!

Last Updated 27 ಜನವರಿ 2011, 18:30 IST
ಅಕ್ಷರ ಗಾತ್ರ

ಗಿರೀಶ ಕಾಸರವಳ್ಳಿ ಅವರ ‘ಹಸೀನಾ’ ಚಿತ್ರ ರೂಪುಗೊಳ್ಳುತ್ತಿದ್ದ ಸಮಯ. ಸ್ಟಿಲ್ ಫೋಟೊಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಕನಸುಕಂಗಳ ಹುಡುಗನ ಕ್ರಿಯಾಶೀಲತೆಯನ್ನು ಕಾಸರವಳ್ಳಿ ಮೆಚ್ಚಿಕೊಂಡಿದ್ದರು. ಆ ಹುಡುಗ ತನ್ನ ಕನಸು ತೋಡಿಕೊಂಡ: ‘ಸರ್, ನಿಮ್ಮ ಒಂದಾದರೂ ಚಿತ್ರಕ್ಕೆ ನಾನು ಛಾಯಾಗ್ರಾಹಕನಾಗಿ ಕೆಲಸ ಮಾಡಬೇಕು. ಅದು ನನ್ನ ಜೀವನದ ಆಸೆಗಳಲ್ಲೊಂದು’.

ಕಾಸರವಳ್ಳಿ ನಕ್ಕರು. ‘ಎಲ್ಲರೂ ಕಮರ್ಷಿಯಲ್ ಸಿನಿಮಾಗಳಿಗೆ ಕ್ಯಾಮೆರಾ ಹಿಡಿಯುವ ಕನಸು ಕಾಣುವಾಗ ಇದೆಂಥ ಆಸೆ ನಿನ್ನದು’ ಎಂದರು. ಆ ತರುಣನ ಹೆಸರು ರವಿಕುಮಾರ್ ಸಾನಾ.

ಕಾಸರವಳ್ಳಿ ಅವರ ಚಿತ್ರಕ್ಕೆ ಕಣ್ಣಾಗುವ ರವಿಕುಮಾರ್ ಅವರ ಕನಸಿನ್ನೂ ಬಾಕಿಯಿದೆ. ಅವರ ಚೊಚ್ಚಿಲ ಚಿತ್ರ ‘ಒಲವೇ ಮಂದಾರ’ ಈಗ ತೆರೆಕಂಡಿದೆ. ಸಿನಿಮಾ ನೋಡಿದ ಯಾರೊಬ್ಬರೂ ಛಾಯಾಗ್ರಾಹಕನ ಬಗ್ಗೆ ಮಾತನಾಡದೆ ಇರುವಂತಿಲ್ಲ. ಆಮಟ್ಟಿಗೆ, ರವಿಕುಮಾರ್ ಮಂದಾರಕ್ಕೆ ಜೀವ ತುಂಬಿದ್ದಾರೆ. ರವಿ ಕ್ಯಾಮೆರಾ ಚಳಕದಲ್ಲಿ ಇಡೀ ಚಿತ್ರ ಒಂದು ಕಲಾಕೃತಿಯಂತೆ ರೂಪುಗೊಂಡಿದೆ.

ಹಾಗೆ ನೋಡಿದರೆ ರವಿಕುಮಾರ್ ಶೈಕ್ಷಣಿಕ ಶಿಸ್ತಿನ ಕಲಿಕೆಯ ಛಾಯಾಗ್ರಾಹಕರೇನಲ್ಲ. ಸಿನಿಮಾ ಬಗ್ಗೆ ಅವರಿಗೆ ಚಿಕ್ಕಂದಿನಿಂದಲೂ ಆಸಕ್ತಿ ಇದ್ದುದು ನಿಜ. ಕನ್ನಡದ ಹಿರಿಯ ಛಾಯಾಗ್ರಾಹಕ ಭಾಸ್ಕರ್ ಅವರೊಂದಿಗೆ ಕೆಲಸ ಮಾಡುತ್ತ, ಸ್ಟಿಲ್ ಫೋಟೊಗ್ರಾಫರ್ ಆಗಿ ದುಡಿಯುತ್ತಿದ್ದ ರವಿಕುಮಾರ್ ಸಿನಿಮಾ ಛಾಯಾಗ್ರಹಣದ ಬಗ್ಗೆ ಆಸಕ್ತಿ ಹೊಂದಿದ್ದರು. ತರಬೇತಿ ಸಂಸ್ಥೆಗಳಲ್ಲಿ ಪ್ರಾಯೋಗಿಕವಾಗಿ ಕಲಿಯದೆ ಹೋದರೂ, ಪುಸ್ತಕಗಳನ್ನು ಓದಿ ನೆಳಲು ಬೆಳಕಿನ ಬಗ್ಗೆ ತಿಳಿವಳಿಕೆ ಹೆಚ್ಚಿಸಿಕೊಂಡರು. ಫಿಲ್ಮ್ ಇನ್‌ಸ್ಟಿಟ್ಯೂಟ್‌ಗಳಲ್ಲಿದ್ದ ಗೆಳೆಯರನ್ನು ಕಾಡಿ ಪುಸ್ತಕ ತರಿಸಿಕೊಂಡು ಓದಿದರು. ಈ ಥಿಯರಿಯೇ ಅವರ ಬಂಡವಾಳ.

ರತ್ನವೇಲು ಅವರ ‘ಸೇತು’, ‘ನಂದ’ ಚಿತ್ರಗಳನ್ನು ನೋಡಿದ ತಕ್ಷಣ ರವಿಕುಮಾರ್‌ಗೆ ಅನ್ನಿಸಿದ್ದು- ‘ನಾನೇನಾದರೂ ಕೆಲಸ ಮಾಡಿದರೆ ಈತನ ಬಳಿಯೇ ಮಾಡಬೇಕು. ಇಲ್ಲದಿದ್ದರೆ ಇದ್ದೇ ಇದೆ ಸ್ಟಿಲ್ ಫೋಟೊಗ್ರಫಿ ಹಾಗೂ ಸಾಕ್ಷ್ಯಚಿತ್ರಗಳ ನಂಟು’.

ಕನಸು ಹೊತ್ತುಕೊಂಡು ತಮ್ಮ ಬಳಿಬಂದ ಹುಡುಗನನ್ನು ರತ್ನವೇಲು ನಿರಾಶೆಗೊಳಿಸಲಿಲ್ಲ. ‘ಜೊತೆಗಿರು’ ಎಂದರು. ರತ್ನವೇಲು ಅವರಿಗೆ ಸಹಾಯಕನಾಗಿ ‘ಸೈನೈಡ್’ ಹಾಗೂ ‘ಗಾಳಿಪಟ’ಗಳಲ್ಲಿ ರವಿಕುಮಾರ್ ದುಡಿದರು. ತಲಾ ಒಂದೊಂದು ತಮಿಳು, ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದರು. ಇದಿಷ್ಟೇ ಅನುಭವ. ‘ಒಲವೇ ಮಂದಾರ’ ಮೂಲಕ ಸ್ವತಂತ್ರವಾಗಿ ಕ್ಯಾಮೆರಾ ಹಿಡಿದರು.

ಜೊತೆಜೊತೆಗೇ ಪ್ರಶಾಂತ್ ನಿರ್ದೇಶನದ ‘ನಂದೇ’ ಚಿತ್ರದಲ್ಲೂ ಕೆಲಸ ಮಾಡಿದರು. ಮಂದಾರ ಈಗ ತೆರೆಯಲ್ಲಿ. ‘ನಂದೇ’ ತೆರೆಯ ನಿರೀಕ್ಷೆಯಲ್ಲಿ.

ನಿರ್ದೇಶಕ ಜಯತೀರ್ಥ ಅವರು ‘ಒಲವೇ ಮಂದಾರ’ದ ಕಥೆ ಹೇಳಿದಾಗ ರವಿಕುಮಾರ್ ತೆಲುಗು ಚಿತ್ರವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದರಂತೆ. ಮಂದಾರದ ಕಥೆ ಅವರನ್ನು ಎಷ್ಟರಮಟ್ಟಿಗೆ ಪ್ರಭಾವಿಸಿತೆಂದರೆ, ತೆಲುಗಿನ ಕಮಿಟ್‌ಮೆಂಟ್ ಕೈಬಿಟ್ಟು ಜಯತೀರ್ಥ ಜೊತೆಗುಳಿದರು. ಚಿತ್ರದ ಶೂಟಿಂಗ್ ಆರಂಭಕ್ಕೆ ಮುನ್ನ ಜಯತೀರ್ಥ ಅವರೊಂದಿಗೆ ಮೂವತ್ತೈದು ದಿನಗಳ ಕಾಲ ದೇಶ ಸುತ್ತಿದರು.

ಗ್ರಾಮೀಣ ಭಾರತದ ಹಸಿವಿನ ಚಿತ್ರಗಳು ಅವರನ್ನು ಕಲಕಿವೆ. ಈ ‘ಭಾರತ ದರ್ಶನ’ ಅವರನ್ನು ವ್ಯಕ್ತಿಯಾಗಿ ಮಾಗಿಸಿವೆ. ಮಂದಾರ ಪ್ರೇಮಕಾವ್ಯ. ಗ್ರಾಮೀಣ ಭಾರತದ ದಾರುಣ ಚಿತ್ರಗಳ ಬಗ್ಗೆಯೂ ಒಂದು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರಿಗನ್ನಿಸಿದೆ.

‘ಒಲವೇ ಮಂದಾರ’ ಚಿತ್ರತಂಡ ಅಸ್ಸಾಂನಲ್ಲಿ ಚಿತ್ರೀಕರಣ ನಡೆಸಿರುವುದು ಸ್ವಲ್ಪ ಭಾಗವನ್ನಷ್ಟೇ. ಉಗ್ರರ ಉಪಟಳದಿಂದಾಗಿ ಅರ್ಧದಲ್ಲೇ ಅಸ್ಸಾಂನಿಂದ ವಾಪಸ್ ಬರಬೇಕಾಯಿತಂತೆ. ಬಾಳೆಹೊನ್ನೂರು ಸಮೀಪದ ದಟ್ಟ ಹಸಿರಿನ ನಡುವೆ ಹೊಸ್ಮನೆ ಮೂರ್ತಿ ಅವರೊಂದಿಗೆ ಮತ್ತೊಂದು ಅಸ್ಸಾಂ ನಿರ್ಮಿಸಿ ಶೂಟಿಂಗ್ ಮುಂದುವರಿಸಿದರಂತೆ. ಈ ಮರುಸೃಷ್ಟಿಯ ಕೆಲಸ ರವಿಕುಮಾರ್‌ಗೆ ಖುಷಿಕೊಟ್ಟಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಬಿಹಾರ ಹಾಗೂ ವಾರಣಾಸಿಯಲ್ಲಿ ನಡೆಸಿದ ಚಿತ್ರೀಕರಣದ ಅನುಭವಗಳು, ಯೂನಿಟ್ ಇಲ್ಲದೆ ಶೇ.60ರಷ್ಟು ಶೂಟಿಂಗ್ ಮಾಡಿದ್ದು- ಇವೆಲ್ಲ ಅವರಿಗೆ ಸಮಾಧಾನ ತಂದುಕೊಟ್ಟಿವೆ.

‘ಎಂಥ ಕೆಟ್ಟ ಲೊಕೇಷನ್‌ನಲ್ಲೂ ನನ್ನತನ ತೋರಿಸಬಲ್ಲೆ’ ಎನ್ನುವ ಆತ್ಮವಿಶ್ವಾಸದ ರವಿಕುಮಾರ್‌ಗೆ ‘ಒಲವೇ ಮಂದಾರ’ ಚಿತ್ರಕ್ಕೆ ವ್ಯಕ್ತವಾಗಿರುವ ಬೆಚ್ಚನೆ ಪ್ರತಿಕ್ರಿಯೆ ಪುಳಕ ಉಂಟುಮಾಡಿದೆ. ಚಿತ್ರನಟರಾದ ಗಣೇಶ್, ಮುರಳಿ ಫೋನ್ ಮಾಡಿ ಅಭಿನಂದನೆ ಹೇಳಿದ್ದಾರೆ.

‘ಚಿತ್ರತಂಡದ ನಮಗೆಲ್ಲ ಒಲವೇ ಮಂದಾರ ಹೆಸರು ತಂದುಕೊಟ್ಟಿದೆ. ಸಹಜವಾಗಿಯೇ ನಮಗೆಲ್ಲ ಖುಷಿಯಾಗಿದೆ. ಈ ಖುಷಿ ನಾಳೆಯೂ ಉಳಿಯಬೇಕಾದರೆ ನಿರ್ಮಾಪಕ ಗೆಲ್ಲಬೇಕು’ ಎನ್ನುತ್ತಾರೆ ರವಿಕುಮಾರ್.

‘ಸದಭಿರುಚಿಯ ನಿರ್ದೇಶಕ-ನಿರ್ಮಾಪಕರಿದ್ದರಷ್ಟೇ ಮಂದಾರದಂಥ ಚಿತ್ರಗಳು ರೂಪುಗೊಳ್ಳಲು ಸಾಧ್ಯ’ ಎನ್ನುವ ಮಾತು ಅವರ ಸಿನಿಮಾ ಪ್ರೀತಿ-ಬದ್ಧತೆಗೆ ಹಿಡಿದ ಕನ್ನಡಿಯಂತೆ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT