ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗಣಿ ಗುತ್ತಿಗೆಗೆ ಸುಪ್ರೀಂ ಅಸ್ತು

`ಸಿ' ವರ್ಗದ 49 ಗಣಿಗಾರಿಕೆ ರದ್ದು
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊಸ ಗಣಿಗಾರಿಕೆಗೆ ಪರವಾನಗಿ ನೀಡುವುದರ ಮೇಲಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಗುರುವಾರ ಸಡಿಲಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಪುನಃ `ಗಣಿಗಾರಿಕೆ ಪರ್ವ' ಆರಂಭವಾಗಲಿದೆ. ಆದರೆ ಯದ್ವಾತದ್ವಾ ಗಣಿಗಾರಿಕೆ ನಡೆಸಿದ ಆರೋಪಕ್ಕೊಳಗಾಗಿರುವ `ಸಿ' ವರ್ಗದ 49 ಗಣಿ ಗುತ್ತಿಗೆಯನ್ನು ಅದು ಸಂಪೂರ್ಣವಾಗಿ ನಿಷೇಧಿಸಿದೆ.

ನ್ಯಾಯಮೂರ್ತಿ ಅಫ್ತಾಬ್ ಆಲಂ, ಕೆ.ಎಸ್. ರಾಧಾಕೃಷ್ಣನ್ ಹಾಗೂ ರಂಜನ್ ಗೋಗಾಯ್ ಅವರಿದ್ದ `ಸುಪ್ರೀಂ ಕೋರ್ಟ್ ಪರಿಸರ ಮತ್ತು ಅರಣ್ಯ ಪೀಠ', ಎ ವರ್ಗದ 27, ಬಿ ವರ್ಗದ 63 ಗಣಿ ಗುತ್ತಿಗೆಗಳ ಪುನರಾರಂಭಕ್ಕೆ ಅನುಮತಿಸಿದೆ. ಆದರೆ ಇದು `ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ' ಅನುಷ್ಠಾನ ಸೇರಿದಂತೆ ಎಲ್ಲ ಷರತ್ತುಗಳ ಪಾಲನೆಗೆ ಒಳಪಟ್ಟಿದೆ ಎಂದು ತಿಳಿಸಿದೆ. ಮೊದಲೆರಡು ವರ್ಗಗಳ ಗಣಿ ಗುತ್ತಿಗೆಗಳ ಪುನರಾರಂಭಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕಿರುವುದರಿಂದ ದೇಶಿ ಉಕ್ಕು ಉತ್ಪಾದಕರು  ನಿಟ್ಟುಸಿರುಬಿಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ 3ರಂದು ಎ ವರ್ಗದ 18 ಗಣಿ ಗುತ್ತಿಗೆಗಳ ಪುನರಾರಂಭಕ್ಕೆ ಅನುಮತಿ ನೀಡಿತ್ತು.  ಗುರುವಾರ ನೀಡಿರುವ 80 ಪುಟಗಳ ಸುದೀರ್ಘ ತೀರ್ಪಿನಲ್ಲಿ ಗಣಿ ಗುತ್ತಿಗೆಗಳ ಗಡಿ ಗುರುತಿಸುವ ಕೆಲಸದ ಮಹತ್ವ ಕುರಿತು ವಿವರಿಸಿದೆ. ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸದಸ್ಯರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜತೆಗೂಡಿ ಈ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ.

`ಸಿಇಸಿ ವಿಶ್ವಾಸಾರ್ಹತೆ ಮತ್ತು ಅಸ್ತಿತ್ವ' ಕುರಿತು ಎತ್ತಿದ ಪ್ರಶ್ನೆಗಳನ್ನು ಪೀಠ ತಳ್ಳಿಹಾಕಿ, ಕಾಲಕಾಲಕ್ಕೆ ಕೋರ್ಟ್ ನೀಡುತ್ತಿರುವ ಆದೇಶಗಳಿಗೆ ಅನುಗುಣವಾಗಿ ಸಿಇಸಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಿತು.

ಆದರೆ `ಕೋರ್ಟ್ ಒಪ್ಪಿಕೊಳ್ಳುವ ಸಿಇಸಿಯ ಯಾವುದೇ ಶಿಫಾರಸು ಹೇಗೆ ಸಂಸತ್ತು ರೂಪಿಸುವ ಕಾನೂನುಗಳಿಗೆ ವ್ಯತಿರಿಕ್ತವಾಗಿರುತ್ತದೆ' ಎಂದು ಪ್ರಶ್ನಿಸಿತು.

ಉನ್ನತಾಧಿಕಾರ ಸಮಿತಿ ಅನೇಕ ವರದಿಗಳನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, `ಈ ವರದಿಗಳು ಅಕ್ರಮ ಗಣಿಗಾರಿಕೆ ಬೊಕ್ಕಸ ಹಾಗೂ ಪರಿಸರದ ಮೇಲೆ ಉಂಟುಮಾಡಿದ ಪರಿಣಾಮ ಕುರಿತು ಮನವರಿಕೆ ಮಾಡಿಕೊಟ್ಟಿವೆ. ಇದು ಅಸ್ತಿತ್ವದಲ್ಲಿರುವ ನಮ್ಮ ಕಾನೂನುಗಳ ವಿಶ್ವಾಸಾರ್ಹತೆ ಕುರಿತು ಅನುಮಾನ ಹುಟ್ಟಿಸುತ್ತವೆ. ಅಕ್ರಮ ಗಣಿಗಾರಿಕೆ ಸಂಬಂಧ ಹಾಜರುಪಡಿಸಿರುವ ಉಪಗ್ರಹ ಚಿತ್ರಗಳು ನ್ಯಾಯಾಲಯದ ಪ್ರಜ್ಞೆಯನ್ನೇ ಅಲುಗಾಡಿಸಿವೆ' ಎಂದು ಅಭಿಪ್ರಾಯ ಪಟ್ಟಿತು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸುತ್ತಿರುವ ಹಿರಿಯ ವಕೀಲ ಶ್ಯಾಂ ದಿವಾನ್ ನೀಡಿದ ಅಂಕಿಸಂಖ್ಯೆಯನ್ನು ಪೀಠ ಒಪ್ಪಿಕೊಂಡಿತು. 2001-02ರಲ್ಲಿ  124 ಲಕ್ಷ ಟನ್ ಉತ್ಪಾದನೆ ಆಗುತ್ತಿದ್ದು ಅದಿರು 2008-09ಕ್ಕೆ 443.9 ಲಕ್ಷ ಟನ್‌ಗೆ ಏರಿಕೆ ಆಗಿದೆ ಎಂದು ಶ್ಯಾಂ ದಿವಾನ್ ಹೇಳಿದರು.

2010ರ ಜುಲೈ 9ರಂದು ಆಗಿನ ಮುಖ್ಯಮಂತ್ರಿ ವಿಧಾನಮಂಡಲದಲ್ಲಿ ನೀಡಿದ ಹೇಳಿಕೆಯನ್ನು ಪೀಠ ಪ್ರಸ್ತಾಪಿಸಿತು. 2003 ರಿಂದ 2010 ರವರೆಗೆ 15,245 ಕೋಟಿ ಮೊತ್ತದ 304.9 ಲಕ್ಷ ಟನ್ ಅದಿರು ರಫ್ತಾಗಿದೆ ಎಂದು ಆಗಿನ ಮುಖ್ಯಮಂತ್ರಿ ಹೇಳಿದ್ದಾರೆ. 2009ನವೆಂಬರ್‌ನಿಂದ ಫೆಬ್ರುವರಿ 2010ರವರೆಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಬೇಲೆಕೇರಿ ಹಾಗೂ ಕಾರವಾರ ಬಂದರಿಗೆ  35,319 ಲಕ್ಷ ಟನ್ ಅಕ್ರಮ ಅದಿರು ಸಾಗಣೆ ಆಗಿದೆ.

ಪ್ರತಿನಿತ್ಯ ಸುಮಾರು ಮೂರು ಸಾವಿರ ಟ್ರಕ್ಕುಗಳು ಅದಿರು ಸಾಗಣೆ ಮಾಡಿವೆ' ಎಂದು ಸಲ್ಲಿಸಿರುವ ಪ್ರಮಾಣ ಪತ್ರದ ಕಡೆ ಕೋರ್ಟ್ ಬೆರಳುಮಾಡಿತು.
ಕರ್ನಾಟಕ ಹಾಗೂ ಆಂಧ್ರ ಗಡಿಗೆ ಹೊಂದಿಕೊಂಡಿರುವ ಬಿ ವರ್ಗದ ಏಳು ಗಣಿ ಗುತ್ತಿಗೆಗಳು ಉಭಯ ರಾಜ್ಯಗಳ ಗಡಿ ವಿವಾದ ಅಂತ್ಯವಾಗುವವರೆಗೂ ಸ್ಥಗಿತಗೊಂಡಿರುತ್ತವೆ, ಅನಂತರ ಈ ಗುತ್ತಿಗೆಗಳ ಕಾರ್ಯಾಚರಣೆ ಪುನರಾರಂಭ ಕುರಿತು ಕೇಂದ್ರ ಉನ್ನತಾಧಿಕಾರ ಸಮಿತಿ ಹೊಸದಾಗಿ ಪರಿಶೀಲಿಸಬಹುದು ಎಂದು ಕೋರ್ಟ್ ಹೇಳಿತು.

ಸಿ ವರ್ಗದ ಗಣಿಗಳ ಅದಿರು ಮಾರಾಟದಿಂದ ಬಂದಿರುವ ಹಣವನ್ನು `ಉಸ್ತುವಾರಿ ಸಮಿತಿ'ಯು ರಾಜ್ಯ ಸರ್ಕಾರಕ್ಕೆ ಜಮಾ ಮಾಡಲಿದೆ. ಈ ಹಣ `ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ' ಅನುಷ್ಠಾನಕ್ಕೆ ಬಳಕೆಯಾಗಬೇಕು ಎಂದು ಸೂಚಿಸಿದ ಕೋರ್ಟ್, ಅಕ್ರಮ ಗಣಿಗಾರಿಕೆ ಸಂಬಂಧ ಸಮಾಜ ಪರಿವರ್ತನಾ ಸಮುದಾಯ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT