ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗಾಳಿ...

ಮಹಿಳಾ ರಾಜಕಾರಣದ ಸವಾಲು
Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನಮಗೂ ಸಮಾನ ರಾಜ­ಕೀಯ ಅವ­ಕಾಶ ಬೇಕು ಎನ್ನು­ವುದು ಸ್ತ್ರೀಯರ ಬಹುದಿನಗಳ ಹಕ್ಕೊತ್ತಾಯ. ಆದರೆ, ಸ್ಥಾನಮಾನಗಳೆಲ್ಲ

ಗಗನಕುಸುಮಗಳಾಗಿ ಅನಾದಿ ಕಾಲದಿಂದಲೂ ಅನುಭವಿಸಿದ್ದು ಬರೀ ಅನ್ಯಾಯವನ್ನೇ. ಗಂಡಸರಿಗೆ ಸಮ–ಸಮವಾಗಿ ದುಡಿದರೂ ಮಹಿಳೆಯರ ಶ್ರಮವನ್ನು ಕಡೆಗಣಿಸುತ್ತಾ ಬಂದಿರುವುದು ಐತಿಹಾಸಿಕ ಸತ್ಯ.

ರಾಜ–ಮಹಾರಾಜರಿಗಿಂತ ಅದ್ಭುತವಾಗಿ ಆಡಳಿತ ನಡೆಸಿದ ರಾಣಿಯರು ನಮ್ಮಲ್ಲಿಲ್ಲವೇ? ಆದರೆ, ಬೆರಳೆಣಿಕೆ­ಯಷ್ಟು ಧೀರೆಯರನ್ನು ಹೊರತುಪಡಿಸಿ ಮಿಕ್ಕ ರಾಣಿಯರ ಚರಿತ್ರೆಯೇ ಸಿಗುವುದಿಲ್ಲ. ಪುರುಷ ಆಡಳಿತಗಾರರನ್ನು ಮಾತ್ರ ‘ರಾಜಾಧಿರಾಜ, ರಾಜ ಮಹಾರಾಜ, ರಾಜ ಮಾರ್ತಾಂಡ’ ಎಂದೆಲ್ಲ ಹಾಡಿ ಹೊಗಳಿದ ಸಾವಿರಾರು ಪುಟಗಳ ಚರಿತ್ರೆ ನಮ್ಮ ಗ್ರಂಥ ಭಂಡಾರದಲ್ಲಿ ತುಂಬಿ­ಕೊಂಡಿದೆ. ಸ್ತ್ರೀಕುಲದ ಮೇಲಿನ ಐತಿಹಾಸಿಕ ಶೋಷಣೆಗೆ ಇದೊಂದು ಸಣ್ಣ ಉದಾಹರಣೆ.

ಬಸವಣ್ಣನವರ ಕಾಲದಲ್ಲಿ ಲಿಂಗ ಸಮಾನತೆ ಯತ್ನ­ಗಳು ಬಲು ಜೋರಾಗಿ ನಡೆದವು. ವಚನಕಾರ್ತಿಯರು ದೊಡ್ಡ ಸಂಖ್ಯೆಯಲ್ಲಿ ಬೆಳೆದರು. ಹಲವರು ವೈಚಾರಿಕ­ವಾಗಿ ಬೆಳೆದರೂ ಮನೆಯ ಚೌಕಟ್ಟನ್ನು ಮೀರಿ ಹೊರಬರದಾದರು. ‘ಮನೆಯೇ ದೇವಸ್ಥಾನ, ಪತಿಯೇ ದೇವರು’ ಎಂಬ ಮಂತ್ರವನ್ನು ಮಹಿಳೆ ಕಿವಿಯಲ್ಲಿ ಉಲಿದ ಸಮಾಜ, ಅವಳನ್ನು ಮನೆಯೊಳಗೆ ಸೀಮಿತಗೊಳಿಸಿ­ಬಿಟ್ಟಿತು. ಶೀಲ, ಮಾನದ ಬಗೆಗೆ ಹೆಚ್ಚು–ಹೆಚ್ಚು ಕಾಳಜಿ ವಹಿಸುತ್ತಾ ಹೋದ ಆಕೆ, ಮನೆಯೆಂಬ ಪಂಜರದೊಳಗೇ ಬಂದಿಯಾಗಿಬಿಟ್ಟಳು. ಕ್ರೂರ ಸಮಾಜ ಅವಳನ್ನು ಮುಂದುವರಿಯಲು ಬಿಡಲೇ ಇಲ್ಲ.

ಹೆಣ್ಣನ್ನು ಒಂದು ಶೃಂಗಾರದ ಗೊಂಬೆಯಾಗಿ ನೋಡುವ ಪರಿಪಾಠ ಇತ್ತು; ಈಗಲೂ ಇದೆ. ವಿಶ್ವಾಮಿತ್ರನ ತಪಸ್ಸನ್ನು ಕೆಡಿಸಲು,

ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಭರವಸೆಯನ್ನು  ಕಾಂಗ್ರೆಸ್ ಪಕ್ಷ ಈ ಬಾರಿಯೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ  ಪ್ರಕಟಿಸಿದೆ. ಆದರೆ ಕಳೆದ 18 ವರ್ಷಗಳಿಂದಲೂ ಈ ಭರವಸೆಯ ಮಾತು ಹುಸಿಯಾಗಿದೆ. ಮಹಿಳಾ ಮೀಸಲು ಮಸೂದೆ ಎಂಬುದು ಮರೀಚಿಕೆಯೇ ಆಗಿದೆ. ರಾಜಕೀಯದಲ್ಲಿ ಮಹಿಳಾ ನಾಯಕತ್ವದ ಬೆಳವಣಿಗೆಗೆ ಅಡ್ಡಿಯಾಗುತ್ತಿರುವ ಅಂಶಗಳಾವುವು? ಪ್ರಮುಖ ರಾಜಕೀಯ ಪಕ್ಷಗಳ ನಾಯಕಿಯರು ಮಂಡಿಸಿರುವ ವಿಚಾರಧಾರೆ ಇಲ್ಲಿದೆ.

ದೇವೇಂದ್ರನ ವಿರುದ್ಧ ಪಿತೂರಿ ನಡೆಸಲು, ಚಕ್ರಾಧಿಪತ್ಯಗಳನ್ನು ಪತನ­ಗೊಳಿಸಲು... ಇಂತಹ ಸಂಗತಿಗಳಿಗೆಲ್ಲ ಮಹಿಳೆಯರನ್ನೇ ಬಳಸ­ಲಾಗಿದೆ. ಅದೇ ರಾಜಕಾರಣದ ಸಂಧಾನಗಳಿಗೆ ಕೃಷ್ಣ–ವಿಭೀಷಣರಂತಹ ಪುರುಷರೇ ಬೇಕಾಗುತ್ತದೆ!

ಪ್ರಾಕೃತಿಕವಾಗಿ ಹೆಣ್ಣು ಮಕ್ಕಳಿಗೆ ಕೆಲವು ಮಿತಿಗಳಿವೆ. ಪುರುಷರಷ್ಟು ಗಟ್ಟಿಗಿತ್ತಿ ಅಲ್ಲ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ, ಕೆಲಸದ ವಿಷಯದಲ್ಲಿ ಆಕೆ ಗಂಡಸಿನಂತೆಯೇ ದುಡಿಯುತ್ತಾಳೆ. ಅದಕ್ಕೆ ಬೇಕಾದ ಶಕ್ತಿಯೂ ಅವಳಲ್ಲಿದೆ. ಈ ಎಲ್ಲ ಹಿನ್ನೆಲೆಯನ್ನು ಗಮನ­ದಲ್ಲಿ ಇಟ್ಟುಕೊಂಡು ಇಂದಿನ ರಾಜಕಾರಣ ಅವಲೋಕಿಸಬೇಕಿದೆ.


ಪ್ರಸಕ್ತ ಚುನಾವಣೆಯಲ್ಲಿ ಪ್ರಚಾರದಲ್ಲಿ ಇರುವ ಹೆಸರುಗಳು ಯಾವುವು? ನರೇಂದ್ರ ಮೋದಿ, ರಾಹುಲ್‌ ಗಾಂಧಿ ಮತ್ತು ಅರವಿಂದ ಕೇಜ್ರಿವಾಲ್‌. ಏಕೆ, ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್‌, ಮಮತಾ ಬ್ಯಾನರ್ಜಿ, ಜೆ.ಜಯಲಲಿತಾ ಅವರೆಲ್ಲ ಈ ನಾಯಕರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ?

ರಾಜಕಾರಣದಲ್ಲಿ ಮಹಿಳೆ ಬೆಳೆಯುವುದು ಅಷ್ಟು ಸುಲಭವಲ್ಲ. ಹಣಬಲ, ತೋಳ್ಬಲದ ಈ ಸನ್ನಿವೇಶದಲ್ಲಿ ಚುನಾವಣಾ ರಾಜಕೀಯಕ್ಕೆ ಬರಲು ಸೀತೆ ಅನುಭವಿಸಿದ ವನವಾಸಕ್ಕಿಂತ ಹೆಚ್ಚಿನ ಕಷ್ಟ ಎದುರಿಸಬೇಕು. ಟಿಕೆಟ್‌ ಪಡೆಯುವುದೂ ಅಷ್ಟು ಸುಲಭವಲ್ಲ. ಅದಕ್ಕಾಗಿ ನಾಯಕರೊಬ್ಬರನ್ನು ಅನಿವಾರ್ಯವಾಗಿ ಆಶ್ರಯಿಸಿದ ಮಾಜಿ ಸಚಿವೆಯೊಬ್ಬರು ಎಷ್ಟೆಲ್ಲ ವ್ಯಂಗ್ಯದ ಮಾತುಗಳನ್ನು ಕೇಳಬೇಕಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಮನೆ ನೋಡಿಕೊಳ್ಳುವ ಸಂಪೂರ್ಣ ಹೊಣೆಯನ್ನು ಸಮಾಜ ಮಹಿಳೆಗೇ ಕೊಟ್ಟುಬಿಟ್ಟಿದೆ. ಖಾಸಗಿ ಜೀವನ­ದಲ್ಲಿ ಮಾವ, ಅತ್ತೆ, ಗಂಡ, ಮಕ್ಕಳ ಆರೈಕೆ ಮಾಡು­ವುದು ಕರ್ತವ್ಯವೇ ಆಗಿಬಿಟ್ಟಿದೆ. ರಾಜಕಾರಣವು ಸಾರ್ವಜನಿಕ ಬದುಕಾಗಿದ್ದು, ಸಮಾಜ ಸೇವೆಯೇ ಮುಖ್ಯ. ಖಾಸಗಿ ಜೀವನದ ಹೊರೆಯೇ ದೊಡ್ಡ­ದಾಗಿ (ಮನೆಯ ಕೆಲಸಗಳೆಲ್ಲ ಮಹಿಳೆಗೇ ಮೀಸಲು) ರಾಜಕಾರಣದ ಓಟ ಅವಳಿಗೆ ದಕ್ಕುವುದಿಲ್ಲ ಎನ್ನುವುದು ಕೂಡ ಸತ್ಯ. 

ಸಾಮರ್ಥ್ಯ ಇರುವ ಮಹಿಳೆಯರು ಒಂದುವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೂ ಕಡಿಮೆ ಮಹತ್ವದ ಸ್ಥಾನಮಾನ­ಗಳೇ ಅವರಿಗೆ ಮೀಸಲು. ಪುರುಷ ಸಮಾಜದ ಧೋರಣೆಗೆ ಇದೊಂದು ಕೈಗನ್ನಡಿ. ಇಂದಿರಾ ಗಾಂಧಿ  ಪ್ರಧಾನಿ ಆಗಿದ್ದರು ಎಂಬುದನ್ನು  ಬಿಟ್ಟರೆ ನಮ್ಮ ದೇಶದಲ್ಲಿ ಗೃಹ, ಹಣಕಾಸು, ವಿದೇಶಾಂಗದಂತಹ ಪ್ರಮುಖ ಖಾತೆಗಳು ಮಹಿಳೆಗೆ ಸಿಕ್ಕಿವೆಯೇ? ಇಂತಹ ಸಿಕ್ಕುಗಳನ್ನೆಲ್ಲ ಮಹಿಳೆಯರು ಬಿಡಿಸುತ್ತಾ ಮುಂದೆ ಸಾಗಬೇಕಿದೆ.

ಚುನಾವಣಾ ರಾಜಕೀಯಕ್ಕೆ ಪಕ್ಷದಲ್ಲಿ ಸಿಗುವ ಸ್ಥಾನಮಾನಗಳೇ ಮೆಟ್ಟಿಲು. ಪಕ್ಷದ ಪದಾಧಿಕಾರಿಗಳ ಹುದ್ದೆಯಲ್ಲಿ ಮಹಿಳೆಯರಿಗೆ ನಿರ್ದಿಷ್ಟ ಹುದ್ದೆಗಳನ್ನು ಮೀಸಲಿಡಬೇಕು ಮತ್ತು ಅದಕ್ಕೆ ಪ್ರಜಾಸತ್ತಾತ್ಮಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಪ್ರಣಾಳಿಕೆ ಸಿದ್ಧಪಡಿಸು­ವುದು ಸೇರಿದಂತೆ ಪಕ್ಷದ ಪ್ರಮುಖ ತೀರ್ಮಾನ ಕೈಗೊಳ್ಳುವ ಸಮಿತಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇರ­ಬೇಕು. ಹೀಗೆ ಹಂತ–ಹಂತವಾಗಿ ಮಹಿಳಾ ನಾಯಕತ್ವ­ವನ್ನು ಬೆಳೆಸಬೇಕು. ಲಂಬಾಣಿಯಂತಹ ಪುಟ್ಟ ಸಮುದಾ­ಯ­ದಿಂದ ಬಂದ ನನ್ನಂತಹ ವ್ಯಕ್ತಿಯೂ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗಿದ್ದು, ಮಹಿಳಾ ರಾಜಕಾರಣದ ಸಾಧ್ಯತೆಗಳನ್ನು ಎತ್ತಿ ತೋರಿದೆ.

ರಾಜಕಾರಣವನ್ನು ಸದ್ಯ ತುಂಬಿರುವ ಅಪರಾ­ಧೀಕ­ರಣದಿಂದ, ಹಣಬಲದಿಂದ, ಜಾತಿ ಬಲದಿಂದ ಮುಕ್ತಗೊಳಿಸಿದರೆ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಹೆದ್ದಾರಿಯೇ ಸಿಕ್ಕಂತೆ. ದೇಶದಲ್ಲಿ ಹೊಸ ರಾಜಕೀಯ ವಾತಾವರಣ ಭರದಿಂದ ಸೃಷ್ಟಿಯಾಗುತ್ತಿದ್ದು, ಶುದ್ಧೀಕ­ರಣದ ದಿನಗಳು ಬಂದೇ ಬರುತ್ತವೆ. ಆಗ ಮಹಿಳೆಯರಿಗೆ ದೊಡ್ಡ ಪಾತ್ರ ಇರುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ.

(ಲೇಖಕಿ ಆಮ್‌ ಆದ್ಮಿ ಪಕ್ಷದ ನಾಯಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT