ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗಾಳಿ ಬೀಸಲಿ

ಯೋಚನೆ, ಯೋಜನೆ, ಅನುಷ್ಠಾನ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಇವತ್ತು ಕ್ರೀಡಾ ಚಟುವಟಿಕೆ ಸಂದಿಗ್ಧ ಕಾಲಘಟ್ಟದಲ್ಲಿದೆ. ಒಂದು ಕಡೆ ಚೀನಾ, ಅಮೆರಿಕ ಸಾಧನೆಗಳ ಬಗ್ಗೆ ಹೋಲಿಕೆ ಮಾಡುವ ನಮ್ಮವರು, ನಮ್ಮ ನಡುವೆಯೇ ಈ ದಿಸೆಯಲ್ಲಿ ಉನ್ನತ ಮಟ್ಟದ ಕಾರ್ಯಕ್ರಮಗಳು ಸುದ್ದಿಯಾದಾಗ ‘ಊಟಕ್ಕೇ ತತ್ವಾರವಾಗಿರುವಾಗ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಯಿತು ಕ್ರೀಡೆ’ ಎಂದು ಮೂಗು ಮುರಿಯುವುದೂ ಇದೆ.

ಅಂತರರಾಷ್ಟ್ರೀಯ ಕ್ರೀಡಾಪಟುಗಳು ನಮ್ಮಲ್ಲೂ ಅರಳಬೇಕು ಎನ್ನುವ ಅಧಿಕಾರಸ್ಥರು, ಕ್ರೀಡಾ ಮೂಲ ಸೌಕರ್ಯ ಅಭಿವೃದ್ಧಿಯ ಪ್ರಶ್ನೆ ಬಂದಾಗ ಅದಕ್ಕೆ ಕೊನೆಯ ಪ್ರಾಶಸ್ತ್ಯ ನೀಡುತ್ತಾರೆ. ನಮ್ಮಲ್ಲಿ ಕ್ರೀಡೆಗಾಗಿ ಏನು ಮಾಡಬೇಕು ಎಂಬ ಪ್ರಶ್ನೆ ಬಂದಾಗ  ಮೊದಲಿಗೆ  ‘ಇಂತಹ ಮನಸ್ಥಿತಿ ನಡುವೆ ನಾವಿದ್ದೀವಿ’ ಎಂಬ ವಾಸ್ತವದ ಜತೆಗೇ ನಾವು ನಮ್ಮ ಹೆಗ್ಗುರಿಯತ್ತ ದಾಪುಗಾಲಿಡಬೇಕು.

ಕ್ರೀಡಾಭಿವೃದ್ಧಿ ಹೇಗೆ ಎಂಬ ಪ್ರಶ್ನೆ ಬಂದಾಗ ಅದನ್ನು ಸಾಕಾರಗೊಳಿಸಲೆತ್ನಿಸುವ ವ್ಯಕ್ತಿಗಳಾಗಲೀ, ಸಂಘ–ಸಂಸ್ಥೆ­ಗಳಾಗಲೀ ಇಲ್ಲವೇ ಸರ್ಕಾರವೇ ಇರಲಿ... ಮೊದಲಿಗೆ ತಮ್ಮ ಸಾಮರ್ಥ್ಯ ಏನೆಂಬು­ದನ್ನು ಅರಿತುಕೊಳ್ಳಬೇಕು.  ಎಲ್ಲವೂ ‘ಹೇಳಿಕೆ’ಗಳ ಸುತ್ತಲೇ ಗಿರಕಿ ಹೊಡೆಯುವಂತೆ ಆ­ಗಬಾರದು. ನಂತರ ನಾವು ಯಾರಿಗೆ ತರಬೇತು ನೀಡುತ್ತೇವೆ ಎಂಬುದೂ ನಮಗೆ ಗೊತ್ತಿರ­ಬೇಕು. ಅಂತಹವರಿಗೆ ಎಂತಹ ಕ್ರೀಡೆಯಲ್ಲಿ ಆಸಕ್ತಿ ಇದೆ, ಯಾವ ತೆರನಾದ ಕ್ರೀಡೆ ಅವರ ದೇಹ ಪ್ರಕೃತಿಗೆ ಹೊಂದುತ್ತದೆ, ಅವರ ಎತ್ತರವೇನು, ತೂಕವೇನು, ಅವರ ತರಬೇತಿಗೆ ಬೇಕಾಗುವ ಹಣ ಎಷ್ಟು  ಎಂಬಿತ್ಯಾದಿಗಳ  ಬಗ್ಗೆಯೂ ವೈಜ್ಞಾನಿಕ ನೆಲೆಯಲ್ಲಿ ನಮಗೆ ಸ್ಪಷ್ಟ ಕಲ್ಪನೆ ಇರಬೇಕು.

ನಮ್ಮ ಕ್ರೀಡಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಮರ್ಪಣಾ ಮನೋಭಾವ, ಪ್ರಾಮಾಣಿಕ ನಡೆ ಇರಲೇಬೇಕು. ಯೋಚನೆ, ಯೋಜನೆ, ಅನುಷ್ಠಾನಗಳಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕು. ಮಹಾನಗರಗಳ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತ ಐಎಎಸ್ ಅಧಿಕಾರಿಯೊಬ್ಬ ವಿಜಾಪುರದಲ್ಲಿ, ಶಿವಮೊಗ್ಗದಲ್ಲಿ ಕ್ರೀಡಾಭಿವೃದ್ಧಿಯ ಬಗ್ಗೆ ಯೋಚಿಸಿ, ಯೋಜನೆಗಳನ್ನು ರೂಪಿಸುವ ವ್ಯವಸ್ಥೆ ನಮ್ಮಲ್ಲಿದೆ. ರಾಯಚೂರು ಮತ್ತು ದಕ್ಷಿಣ ಕನ್ನಡದ ವಾತಾವರಣಗಳೇ ಬೇರೆ  ಮತ್ತು ಆ ಎರಡೂ ಪ್ರದೇಶಗಳಿಗೆ ವಿಭಿನ್ನ ಸ್ವರೂಪದ ಕಾರ್ಯ­ಕ್ರಮಗಳು ಬೇಕೆಂಬ ಪ್ರಾಯೋಗಿಕ ಜ್ಞಾನ ಇಲ್ಲದವರೇ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆ. ಇಂತಹದ್ದನ್ನೆಲ್ಲಾ ನಾನು ಹತ್ತಿರದಿಂದ ಕಂಡು ರೋಸಿ ಹೋಗಿದ್ದೇನೆ.  ಈ ಪರಿಪಾಠಕ್ಕೆ ಕಡಿವಾಣ ಹಾಕಬೇಕು.

‘ಪ್ರಾಮಾಣಿಕತೆ ಬೇಕು’ ಎಂಬ ನನ್ನ ಅನಿಸಿಕೆ ತೀರಾ ಸಾಮಾನ್ಯ ಎನಿಸಬಹುದು. ಆದರೆ ಅದು ಮುಖ್ಯವಾದುದು. ಕ್ರೀಡಾ ಯೋಜನೆಯೊಂದಕ್ಕೆ ಒಂದು ಕೋಟಿ ರೂಪಾಯಿಯನ್ನು ಸರ್ಕಾರ ನಿಗದಿ ಮಾಡುತ್ತದೆ ಎಂದಿಟ್ಟುಕೊಳ್ಳಿ. ಅನುಷ್ಠಾನ ಪ್ರಕ್ರಿಯೆಯಲ್ಲಿ ಅದು ಮೇಲಿನಿಂದ ಕೆಳಗೆ ಹರಿದು ತಲುಪುವಾಗ ಕೇವಲ 10 ಲಕ್ಷ ರೂಪಾಯಿಗಳಷ್ಟೇ ಉಳಿದಿರುತ್ತದೆ! ಇದನ್ನೆಲ್ಲಾ ನೋಡಿ, ಅಂತಹ ಯೋಜನೆಗಳತ್ತ ಯೋಚಿಸುವುದನ್ನೇ ಬಿಟ್ಟು ನನ್ನ ಪಾಡಿಗೆ ನಾನು ಕ್ರೀಡಾಭಿವೃದ್ಧಿ ಚಟುವಟಿಕೆಯಲ್ಲಿ ನಿರತನಾಗಿದ್ದೇನೆ.

ಕ್ರೀಡಾ ಚಟುವಟಿಕೆಗಳನ್ನು ನಾವು   ಎರಡು ಸ್ವರೂಪದಲ್ಲಿ  ನೋಡಬೇಕು. ಒಂದನೆಯದಾಗಿ ಎಳೆಯರಲ್ಲಿ ಕ್ರೀಡಾ ಮನೋಭಾವ ಮೂಡಿಸಲಿಕ್ಕಾಗಿಯೇ ನಡೆಸುವಂತಹ ಕ್ರೀಡಾ ಕಾರ್ಯಕ್ರಮಗಳು. ಇನ್ನೊಂದು ಸ್ಪರ್ಧಾಕೂಟಗಳಲ್ಲಿ ಎತ್ತರಕ್ಕೇರುವ ನಿಟ್ಟಿನಲ್ಲಿಯೇ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಈ ಎರಡರ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡೇ ಆ ದಿಸೆಯಲ್ಲಿ ನಾವು ಹೆಜ್ಜೆ ಇಡಬೇಕಿದೆ.
ಸರ್ಕಾರದಿಂದ ಹೊರಗೆ ನಿಂತು ಖಾಸಗಿ ಸಂಸ್ಥೆಗಳ ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದೆಂದರೆ ಅದು ಸಲೀಸಾದ ದಾರಿಯೇನಲ್ಲ. ಅಲ್ಲಿ ಕಲ್ಲುಮುಳ್ಳುಗಳೇ ಹೆಚ್ಚು. ಆದರೆ ನಿರಂತರವಾದ  ಆ ಪ್ರಕ್ರಿಯೆಯಲ್ಲಿ ಯಶಸ್ಸು ದೊರೆತಾಗ, ಅಂದರೆ ಮಕ್ಕಳು ಅದ್ಭುತ ಸಾಮರ್ಥ್ಯ ತೋರಿದಾಗ ಸಿಗುವ ಸಂತೃಪ್ತಿ ಇದೆಯಲ್ಲಾ ಅದು ಪದಗಳಿಗೆ ನಿಲುಕುವಂತಹದ್ದಲ್ಲ.

ಈ ದಿಸೆಯಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಗೆ ಅಜಗಜಾಂತರ ಇದೆ. ಖಾಸಗಿಯವರ ಕ್ರೀಡಾ ಚಟುವಟಿಕೆ ರಾಜ್ಯದಾದ್ಯಂತ ವ್ಯಾಪಕಗೊಳ್ಳಬೇಕಾದ ಅನಿವಾರ್ಯ ಇದೆ. ಕ್ರೀಡಾ ಕಾರ್ಯಕ್ರಮಗಳನ್ನು ಸರ್ಕಾರ ಮಾತ್ರ ಮಾಡಬೇಕು ಎಂದು ನಂಬಿ ಕುಳಿತುಕೊಳ್ಳುವುದು ಪೆದ್ದುತನ. ಇವತ್ತು ರಾಜ್ಯದಾದ್ಯಂತ ಎಷ್ಟೊಂದು ಖಾಸಗಿ ಆಸ್ಪತ್ರೆಗಳಿಲ್ಲ ಹೇಳಿ. ಅದೇ ರೀತಿ  ಅಸಂಖ್ಯ ಖಾಸಗಿ ಶಾಲಾ, ಕಾಲೇಜುಗಳೂ ಇವೆ.

  ಈ ಎರಡೂ ಕ್ಷೇತ್ರಗಳನ್ನು ನಿಭಾಯಿಸುವ ಹೊಣೆ ಸರ್ಕಾರದ್ದೇ  ಎಂದು ಎಲ್ಲರೂ ಸುಮ್ಮನೆ ಕುಳಿತು ಬಿಟ್ಟಿದ್ದರೆ,  ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೇ ಸಾವಿರಾರು ಮಂದಿ ಸತ್ತೇ ಹೋಗುತ್ತಿದ್ದರು. ಶಾಲೆಗಳಲ್ಲಿ ಅವಕಾಶ ಸಿಗದೇ ಲಕ್ಷಾಂತರ ಮಂದಿ ಅನಕ್ಷರಸ್ಥರೇ ತುಂಬಿರುತ್ತಿದ್ದರು.  ಕ್ರೀಡಾ ಕ್ಷೇತ್ರದಲ್ಲೂ ಅದೇ ರೀತಿ ಖಾಸಗಿ ಸಹಭಾಗಿತ್ವ ಬೇಕು ಎಂದು ನಾವೇಕೆ ಯೋಚನೆ ಮಾಡುತ್ತಿಲ್ಲ?
ನಾನು ಅಮೆರಿಕದಲ್ಲಿ ಸುತ್ತಾಡಿದಾಗ  ಕಂಡುಕೊಂಡ ಸಂಗತಿ ಎಂದರೆ, ಖಾಸಗಿ  ಉದ್ದಿಮೆ ಸಂಸ್ಥೆ, ಕ್ಲಬ್, ಸಂಸ್ಥೆಗಳೇ ಕ್ರೀಡಾ ಚಟುವಟಿಕೆಗಳ ಯೋಚನೆ, ಯೋಜನೆ, ಅನುಷ್ಠಾನಗಳಲ್ಲಿ ಮುಂದಿವೆ.

ಆದರೆ ಚೀನಾದಲ್ಲಿರುವ ವ್ಯವಸ್ಥೆ ಬೇರೆ ಬಗೆಯದು. ಅಂತಹ ವ್ಯವಸ್ಥೆ ನಮ್ಮಲ್ಲಿಲ್ಲ. ಅಲ್ಲಿ ಸರ್ಕಾರ, ಕ್ರೀಡೆಯನ್ನು  ರಾಷ್ಟ್ರೀಯ ಪ್ರತಿಷ್ಠೆಯನ್ನಾಗಿ ಪರಿಗಣಿಸಿದೆ. ಹಣಕಾಸು ಇಲಾಖೆ, ರಕ್ಷಣಾ ಇಲಾಖೆಗಳಿಗೆ ನೀಡುವಷ್ಟೇ ಮಹತ್ವವನ್ನು ಕ್ರೀಡಾ ಇಲಾಖೆಗೂ ನೀಡಿದೆ. ತಜ್ಞರು ಹಳ್ಳಿ ಹಳ್ಳಿಗಳಿಗೆ ಹೋಗಿ ಎಳೆಯ ಮಕ್ಕಳನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿ, ನಂತರ ಆಯ್ಕೆ ಮಾಡಿ ನೇರವಾಗಿ ಕ್ರೀಡಾ ತರಬೇತಿ ಶಿಬಿರಗಳಿಗೆ ತಂದು ಸೇರಿಸಿಬಿಡುತ್ತಾರೆ. ಅಂತಹ ಮಕ್ಕಳ ತಂದೆತಾಯಂದಿರು ತಮ್ಮ ಮಕ್ಕಳನ್ನು ಕಳಿಸುವುದಿಲ್ಲ ಎನ್ನುವಂತೆಯೇ ಇಲ್ಲ. ಅಲ್ಲಿ ಸತತ ಹಲವು ವರ್ಷಗಳ ಕಾಲ ತರಬೇತಿಯನ್ನೇ ನೀಡಲಾಗುತ್ತದೆ. ಭಾರತದಲ್ಲಿ ಅಂತಹ ವ್ಯವಸ್ಥೆಯೊಂದನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮಲ್ಲಿ ಸರ್ಕಾರ ಆ ಮಟ್ಟಿಗೆ ಕ್ರೀಡೆಗೆ ಪ್ರಾಮುಖ್ಯ ಕೊಡಲು ಸಾಧ್ಯವೇ?

ಖಾಸಗಿ ಸಹಭಾಗಿತ್ವ ಎಂದರೆ   ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಉಸ್ತುವಾರಿಯೇ ಬೇಡವೆಂದಲ್ಲ. ಅದೇ ಮುಖ್ಯ. ಆದರೆ ಆ ಜವಾಬ್ದಾರಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ನಿಭಾಯಿಸಬೇಕು. 

ನಾವು ಕೆಲವು ಖಾಸಗಿ ಮಂದಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನಿರಿಸಿಕೊಂಡು ಅವರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದೇವೆ.  ಇನ್ನೂ ಹೆಚ್ಚಿಗೆ ಮಾಡುವ ಹಂಬಲ ಇದೆ. ಆ ಮಕ್ಕಳು ಶಿಕ್ಷಣದ ಜತೆಗೇ ಕ್ರೀಡೆಯಲ್ಲಿ ಪ್ರಾವೀಣ್ಯ  ಸಾಧಿಸಲು ಅವಕಾಶವಿದ್ದರೆ ಮಾತ್ರ ಪೋಷಕರೂ ಬೆಂಬಲಿಸುತ್ತಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಾಲಾ, ಕಾಲೇಜುಗಳಲ್ಲಿರುವ ಪ್ರತಿಭಾವಂತ ಕ್ರೀಡಾ ಸಾಧಕರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು. ವಾರ್ಷಿಕ ಪರೀಕ್ಷೆಗಳಲ್ಲಿ ‘ಕೃಪಾಂಕ’ (ಗ್ರೇಸ್ ಮಾರ್ಕ್ಸ್) ಕೊಡಲು ಅನುಕೂಲವಾಗುವಂತೆ ನಿಯಮಗಳನ್ನು ತಿದ್ದುಪಡಿ ಮಾಡಲಿ.  ಸರ್ಕಾರ ಇಷ್ಟರಮಟ್ಟಿಗೆ ನೆರವಾದರೂ ಮಾಡಿದರೆ, ಆಸಕ್ತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ನೂರಾನೆಯ ಬಲ ಬಂದಂತಾಗುತ್ತದೆ.

ನಾನು 1984ರಿಂದ ಈವರೆಗೆ  ನನ್ನ ಶಿಕ್ಷಣ ಸಂಸ್ಥೆಯಲ್ಲಿ  ನಿರಂತರವಾಗಿ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇನೆ. ನನಗೆ ಟೆನಿಸ್, ಗಾಲ್ಫ್ ಮುಂತಾದ ಆಟಗಳ ಬಗ್ಗೆ ಗೊತ್ತಿಲ್ಲವೆಂದೇನಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚುವವ ನಾನು. ನನಗೆ ಮತ್ತು ನನ್ನ ಮಕ್ಕಳಿಗೆ ಆರ್ಥಿಕವಾಗಿ ಮತ್ತು ‘ಸಾಂಸ್ಕೃತಿಕ’ವಾಗಿ ಸುಲಭಸಾಧ್ಯ ಮತ್ತು ಆಪ್ತ ಎನಿಸುವ ಅಥ್ಲೆಟಿಕ್ಸ್, ಫುಟ್‌ಬಾಲ್, ಕೊಕ್ಕೊ, ಕಬಡ್ಡಿ, ಬಾಲ್‌ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳಲ್ಲೇ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದೇನೆ.

ನನ್ನ ಸಂಸ್ಥೆಯ ಬಹಳಷ್ಟು ಮಕ್ಕಳು ಅಂತರ ವಾರ್ಸಿಟಿ, ರಾಜ್ಯ ಮತ್ತು ರಾಷ್ಟ್ರೀಯ ಕೂಟಗಳಲ್ಲಿ ಅಪಾರ ಪದಕಗಳನ್ನು ಗೆದ್ದಿದ್ದಾರೆ. ಈ ವರ್ಷ ನನ್ನ ಸಂಸ್ಥೆಯಲ್ಲಿ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಶಿಕ್ಷಣದ ಜತೆಗೆ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. ಇವರೆಲ್ಲರಿಗೂ ಉಚಿತ ಶಿಕ್ಷಣ, ವಸತಿ ಮತ್ತು ಊಟದ ವ್ಯವಸ್ಥೆ ಇದೆ. ನಾನು ಕ್ರೀಡೆಗೆ ಸಂಬಂಧಿಸಿದಂತೆ ಯಾವುದಕ್ಕೂ ಸರ್ಕಾರದ ಮುಂದೆ ಈವರೆಗೆ ಕೈ ಒಡ್ಡಿ ನಿಂತಿಲ್ಲ.

ರಾಜ್ಯದಲ್ಲಿ ನನ್ನಂತಹವರು ನೂರಾರು ಮಂದಿ ಸಿಗುತ್ತಾರೆ. ಅಂತಹವರಿಗೆ ಸರ್ಕಾರ ಯಾವ ತೆರನಾದ ಪ್ರೋತ್ಸಾಹ ನೀಡಿದೆ. ಏಡ್ಸ್ ನಿವಾರಣೆ, ಪರಿಸರ ರಕ್ಷಣೆ, ದನಗಳ ರಕ್ಷಣೆ, ಮಧ್ಯವರ್ಜನೆ ಇತ್ಯಾದಿ ಏನೇನೋ ಚಟುವಟಿಕೆ ನಡೆಸುವ ಸ್ವಯಂ ಸೇವಾ  ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಸರ್ಕಾರದ ಹಣ ಹರಿದು ಹೋಗುವುದು ನಿಜವಲ್ಲವೇ? ಹಾಗಿದ್ದರೆ ನಾನೂ ‘ಪ್ರಾಜೆಕ್ಟ್ ರಿಪೋರ್ಟ್’ ಕೊಡುತ್ತೇನೆ. ನನ್ನಂತಹವರು ನಡೆಸುವ ಕ್ರೀಡಾ ಚಟುವಟಿಕೆಗಳನ್ನು ‘ಎನ್‌ಜಿಒ ಕಾರ್ಯಕ್ರಮ’ ಎಂದೇ ಪರಿಗಣಿಸಿ, ‘ಪರಿಸರ ರಕ್ಷಿಸುವ ಮಂದಿ’ಗೆ ಕೊಡುವಷ್ಟು ಹಣವನ್ನು ನಮಗೂ ನೀಡಲಿ. ಸರ್ಕಾರ ನನಗೆ ನೂರು ಕೋಟಿ ಕೊಟ್ಟರೆ, ಅದರೊಂದಿಗೆ ನಾನೂ ನೂರು ಕೋಟಿ ರೂಪಾಯಿ ಹಾಕಿ ಅದ್ಭುತ ಫಲಿತಾಂಶ ನೀಡಬಲ್ಲೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಲು ಸಾಧ್ಯವಿದೆಯೇ?

ಹಿಂದೆ ದಶಕಗಳ ಕಾಲ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ವಿನಯ್ ಹೆಗ್ಡೆಯವರು ಅನನ್ಯ ಕ್ರೀಡಾ ಚಟುವಟಿಕೆಗಳನ್ನು ನಡೆಸಿದರು. ಆನಂದ ಶೆಟ್ಟಿ, ಆಶಾ ಹೆಗ್ಡೆ ಅವರಂತಹ ಹತ್ತಾರು ಅಂತರರಾಷ್ಟ್ರೀಯ ಕ್ರೀಡಾಪಟುಗಳು ಅಲ್ಲಿಂದಲೇ ಬಂದಿದ್ದು. ಸರ್ಕಾರ ಅವರತ್ತ ತಿರುಗಿಯೂ ನೋಡಲಿಲ್ಲ. ಕ್ರೀಡಾ ಚಟುವಟಿಕೆ ಬಗ್ಗೆ ವಿನಯ್ ಹೆಗ್ಡೆ ಅಂತಹವರು ನಿರಾಸಕ್ತಿ ತಾಳದಿರಲು ಸಾಧ್ಯವೇ?

ನಮ್ಮಲ್ಲಿ ಸರ್ಕಾರವೇ ನಡೆಸುವ ದಸರಾ ಕ್ರೀಡಾಕೂಟ, ಪ್ರಾಥಮಿಕ ಶಾಲೆ, ಹೈಸ್ಕೂಲು, ಪಿಯುಸಿ ಮಟ್ಟದ ಕ್ರೀಡಾಕೂಟಗಳ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸರ್ಕಾರವೇ ಒಂದು ಸಲ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು. ಎಸ್‌ಎಸ್‌ಎಲ್‌ಸಿ ಫೇಲ್ ಆದವನು ಮತ್ತೆ ಎಂಟನೇ ತರಗತಿಗೆ ಸೇರಿ ಹೈಸ್ಕೂಲನ್ನು ಪ್ರತಿನಿಧಿಸುತ್ತಾನೆ. ಅಂತಹ ಕೂಟಗಳಲ್ಲಿ ಪಾಲ್ಗೊಳ್ಳುವ ಕೆಲವರಲ್ಲಿ ಎರಡು ಅಥವಾ ಮೂರು ‘ಏಜ್ ಸರ್ಟಿಫಿಕೇಟ್’ಗಳಿರುತ್ತವೆ!  ಕ್ರೀಡಾಂಗಣದ ಪಕ್ಕದಲ್ಲೇ ಹತ್ತಾರು ‘ಮದ್ದು’ ಸಿರಿಂಜ್‌ಗಳು ಬಿದ್ದಿರುತ್ತವೆ.

ಇಂತಹದ್ದನ್ನೆಲ್ಲಾ ಯಾರು ತಡೆಯಬೇಕು ಹೇಳಿ? ಇಂತಹವುಗಳ ವಿರುದ್ಧ ಕ್ರೀಡಾ ಇಲಾಖೆ ಕಠಿಣ ಕ್ರಮ ತೆಗೆದುಕೊಂಡಿದೆಯೇ,  ಜಾಗೃತಿ ಮೂಡಿಸುವ ಪ್ರಕ್ರಿಯೆ ನಡೆಸಿದೆಯೇ?

ರಾಜ್ಯದಲ್ಲಿ ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಇಂತಹ ‘ಸಣ್ಣಪುಟ್ಟ ಸಂಗತಿ’ಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಉತ್ತಮ ದೇಹದಾರ್ಢ್ಯ ಇರುವ ಆರೋಗ್ಯವಂತ ಮನಸ್ಸಿನ ಮುಂದಿನ ಪೀಳಿಗೆಯನ್ನು ರೂಪಿಸುವಲ್ಲಿ ಇಂತಹ ಸಂಗತಿಗಳು ಬಲು ಮುಖ್ಯ.
ಕ್ರೀಡೆ ಬಗ್ಗೆ ಗೊತ್ತಿಲ್ಲದವರಿಂದಲೇ ಯೋಜನೆಗಳು ರೂಪುಗೊಳ್ಳುತ್ತಿವೆ. ಶಾಲಾ ಕ್ರೀಡೆಗಳ ಬಗ್ಗೆಯೂ ಆತ್ಮವಿಮರ್ಶೆ ಆಗಬೇಕಿದೆ.
(ಲೇಖಕರು: ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡುಬಿದರೆ)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT