ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದಿಕ್ಕಿನತ್ತ ಚಿಂತನೆ ಅವಶ್ಯ

Last Updated 20 ಸೆಪ್ಟೆಂಬರ್ 2011, 7:30 IST
ಅಕ್ಷರ ಗಾತ್ರ

ರಾಯಚೂರು: ಸುಸ್ಥಿರ ಕೃಷಿಯತ್ತ ಒಲವು ಬೆಳೆಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾವಣೆಯಲ್ಲಿ ಭಾಗೀದಾರರಾದರೆ ರೈತರು-ಕೃಷಿ ಕ್ಷೇತ್ರ ಉಳಿಯಲು ಸಾಧ್ಯ. ಹೊಸ ದಿಕ್ಕಿನತ್ತ ಚಿಂತನೆ ಮಾಡಬೇಕು. ಕೃಷಿ ಮತ್ತು ಕೃಷಿ ಉತ್ಪನ್ನಗಳನ್ನೇ ಆಧರಿಸಿದ ಉದ್ದಿಮೆಗಳ ಉಳಿವಿಗಾಗಿ ಹೊಸ ರೀತಿಯ ಕಾರ್ಯತಂತ್ರ ರೂಪಿಸಬೇಕಿದೆ ಎಂದು ರಾಜ್ಯ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ವಸಂತಕುಮಾರ ತಿಳಿಸಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ, ರಾಯಚೂರು ವಾಣಿಜ್ಯೋದ್ಯಮ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ಧ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕೃಷಿ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಶೇ 60ರಿಂದ 70ರಷ್ಟು ಕೃಷಿಯನ್ನೇ ಆಧರಿಸಿರುವ ಈ ದೇಶದಲ್ಲಿ ಸವಾಲುಗಳು ಮುಂದುವರಿದಿವೆ.  ಕೃಷಿ ಮತ್ತು ವಾಣಿಜ್ಯ ಪರಸ್ಪರ ಅವಲಂಬಿತವಾಗಿರುವಂಥವು. ಸಮತೋಲನ ತಪ್ಪಿದರೆ ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಸಂದರ್ಭದಲ್ಲಿ ಕೃಷಿ ಬಂಡವಾಳ ಹೂಡಿಕೆ ಎಂಬುದು ಕೃಷಿ ಮತ್ತು ಕೃಷಿ ಉತ್ಪನ್ನಗಳನ್ನೇ ಅವಲಂಬಿಸಿರುವ ಉದ್ದಿಮೆಗಳ ಏಳ್ಗೆಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಕೃಷಿ ವಿವಿ ಕುಲಪತಿ ಡಾ.ಬಿ.ವಿ ಪಾಟೀಲ್ ಮಾತನಾಡಿ, ಆಹಾರ ಉತ್ಪಾದನೆ ವಿಷಯದಲ್ಲಿ ದೇಶ ಮುನ್ನಡೆ ಸಾಧಿಸಿದೆ. ಆದರೆ, ರೈತ ಮಾತ್ರ ನೆಮ್ಮದಿಯಿಂದ ಇಲ್ಲ. ಏನೆಲ್ಲ ಬೆಳೆ ಬೆಳೆದರೂ ಸಂಕಷ್ಟ ತಪ್ಪಿಲ್ಲ. ಉತ್ಪಾದನಾ ವೆಚ್ಚಾಗುತ್ತಲೇ ಇದೆ. ಬೆಲೆ ದೊರಕುತ್ತಿಲ್ಲ. ಕೃಷಿ ಆಧಾರಿತ ಉದ್ದಿಮೆಗಳ ಸ್ಥಾಪನೆ, ಸಂಸ್ಕರಣ ಘಟಕಗಳ ಆರಂಭ ಅವಶ್ಯಕವಾಗಿದೆ ಎಂದರು.

ಜಿಲ್ಲಾಧಿಕಾರಿ ವಿ ಅನ್ಬುಕುಮಾರ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ವಿಫುಲ ಅವಕಾಶಗಳಿವೆ. ಏಳುವರೆ ಲಕ್ಷಕ್ಕೆ ಒಂದು ಎಕರೆ ಭೂಮಿ ಕಲ್ಪಿಸಲಾಗುತ್ತಿದೆ. ಅತ್ಯಂತ ಅಲ್ಪ ಸಮಯದಲ್ಲಿ ಉದ್ದಿಮೆದಾರರಿಗೆ ಅನುಕೂಲತೆಗಳನ್ನು ಕಲ್ಪಿಸಲಾಗುತ್ತಿದೆ. ಜಿಲ್ಲೆಯ ರೈತ ಸಮುದಾಯ ಕೇವಲ ರೈತರಾಗಿಯೇ ಉಳಿಯಬೇಕಿಲ್ಲ. ಕೃಷಿ ಆಧಾರಿತ ಉದ್ದಿಮೆ ಸ್ಥಾಪನೆ ಮಾಡಲು ಆಸಕ್ತಿವಹಿಸಬೇಕಾಗಿದೆ ಎಂದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ ಮಾತನಾಡಿ, ರೈತ ಬೆಳೆದ ಬೆಳೆಗೆ ನಿರ್ದಿಷ್ಟ ಮತ್ತು ಉತ್ತಮ ಬೆಲೆ ದೊರಕಿಸಿದರೆ ಆತ ನೆಮ್ಮದಿ ಕಾಣಬಲ್ಲ. ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಎಂಬುವಂಥ ಯೋಜನೆಗಳು ರೈತರ ಸಂಕಷ್ಟ ಪರಿಹರಿಸುವಲ್ಲಿ ಸೋತಿವೆ. ಉದ್ದಿಮೆಗಳು ನಷ್ಟ ಅನುಭವಿಸಿದರೆ ವಿಮೆ ನೆರವಿಗೆ ಧಾವಿಸುತ್ತದೆ. ಆದರೆ ರೈತ ಸಾಲ ಹೊರೆ ಹೊರಬೇಕಾಗುತ್ತದೆ. ಈ ರೀತಿ ಸಮಸ್ಯೆ ಪರಿಹರಿಸಲು ಸಮಾವೇಶ ಗಂಭೀರ ಚಿಂತನೆ ನಡೆಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಹರವಿ ನಾಗನಗೌಡ ಮಾತನಾಡಿದರು. ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜವಾಹರ ಜೈನ್ ಸ್ವಾಗತಿಸಿದರು. ತ್ರಿವಿಕ್ರಮ ಜೋಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT