ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದೃಷ್ಟಿಕೋನ ನೀಡಿದ ಸಾರಾ

`ನೃಪತುಂಗ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಚಂಪಾ ಅಭಿಪ್ರಾಯ
Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಸಾರಿಗೆ ಮತ್ತು ಸಾಹಿತ್ಯಕ್ಕೆ ಸಂಬಂಧವಿಲ್ಲ, ಆದರೆ, ಸಾರಿಗೆ ಜನರನ್ನು ಮನೆ ತಲುಪಿಸುವಂತೆ, ಸಾಹಿತ್ಯ ಜನರ ಮನತಲುಪುತ್ತದೆ' ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಡಾ. ಸಾರಾ ಅಬೂಬಕರ್ ಅವರಿಗೆ `ನೃಪತುಂಗ ಸಾಹಿತ್ಯ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.

`ಸಾರಿಗೆ ಇಲಾಖೆಯು ಸದಾ ಕನ್ನಡ ಭಾಷೆಗೆ ಆದ್ಯತೆ ನೀಡಿದೆ. ಶೇ 95ಕ್ಕೂ ಅಧಿಕ ಮಂದಿ ಕನ್ನಡಿಗರೇ ಇಲಾಖೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಸಾರಾ ಅಂತಹ ಲೇಖಕಿಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ಖುಷಿಯೆನಿಸುತ್ತಿದೆ' ಎಂದರು. 

ಸಾಹಿತಿ ಡಾ.ಚಂದ್ರಶೇಖರ ಪಾಟೀಲ, `ಮುಸ್ಲಿಂ ಸಮುದಾಯದಲ್ಲಿರುವ ಅನಿಷ್ಟ ಪದ್ಧತಿಗಳನ್ನು ವಿರೋಧಿಸುತ್ತಲೇ ಬರವಣಿಗೆಯಲ್ಲಿ ತೊಡಗಿದ ದಿಟ್ಟ ಮಹಿಳೆ ಸಾರಾ. ಅವರ ಎಲ್ಲ ಪ್ರಗತಿಪರ ಚಿಂತನೆಗಳನ್ನು ಪಡೆದುಕೊಳ್ಳುವಷ್ಟು ಕನ್ನಡ ಸಾಹಿತ್ಯ ಪರಂಪರೆ ಆರೋಗ್ಯಕರವಾಗಿದೆ' ಎಂದು ಅಭಿಪ್ರಾಯಪಟ್ಟರು.

`ಕಾಸರಗೋಡಿನವರಾದರೂ ಕನ್ನಡ ಭಾಷೆಯಲ್ಲಿಯೇ ಬರವಣಿಗೆ ಆರಂಭಿಸುವ ಮೂಲಕ ಕನ್ನಡಭಾಷಾ ಪ್ರೇಮವನ್ನು ಮೆರೆದಿದ್ದಾರೆ. ಸಾಮುದಾಯಿಕ ಸವಾಲುಗಳ ಜತೆಯಲ್ಲಿಯೇ ಸಾಹಿತ್ಯದ ಮೂಲಕ ಹೊಸ ದೃಷ್ಟಿಕೋನವನ್ನು ನೀಡಿದ್ದಾರೆ' ಎಂದು ಶ್ಲಾಘಿಸಿದರು.

ಹಿರಿಯ ಸಾಹಿತಿ ಡಾ.ದೇ.ಜವರೇಗೌಡ, `ಕನ್ನಡ ಭಾಷಿಗರು ಎಲ್ಲ ಭಾಷೆಗಳಲ್ಲಿ ಸಾಹಿತ್ಯಾಧನಯಕ್ಕೆ ತೊಡಗಿಕೊಳ್ಳಬೇಕು. ಅಂತೆಯೇ ರಾಜ್ಯದಲ್ಲಿ ನೆಲೆಸಿರುವ ತೆಲಗು, ತಮಿಳು ಸೇರಿದಂತೆ ವಿವಿಧ ಪ್ರಾದೇಶಿಕ ಭಾಷಿಗರು ಕನ್ನಡ ಭಾಷೆಯಲ್ಲಿ ಕೃತಿ ರಚಿಸಬೇಕು. ಆ ಮೂಲಕ ಭಾಷೆಗಳ ನಡುವೆ ಭಾಂದವ್ಯ ಬೆಳೆಯುತ್ತದೆ' ಎಂದು ಸಲಹೆ ನೀಡಿದರು.

`ಇಂಗ್ಲಿಷ್‌ಅನ್ನು ಒಂದು ಭಾಷೆಯಾಗಿ ಕಲಿಯಬೇಕು ಹೊರತು ಮಾಧ್ಯಮವಾಗಿ ಅಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಡ್ಡಾಯವಾಗಿ ನೌಕರಿ ನೀಡುವ ಜವಾಬ್ಧಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು' ಎಂದು ಹೇಳಿದರು.

ಪ್ರಶಸ್ತಿಯು ಏಳು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಾಹಿತಿ ಸಾರಾ ಅಬೂಬಕರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಉಪಸ್ಥಿತರಿದ್ದರು.

ಗುಜರಾತ್‌ಗಿಂತ ನಾವೇ ಮುಂದು: ಅಶೋಕ್
`ಗುಜರಾತ್ ಅಭಿವೃದ್ಧಿಯಲ್ಲಿ ಮೊದಲನೇ ಸ್ಥಾನ ಪಡೆದಿದ್ದರೂ ಸಾರಿಗೆ ವ್ಯವಸ್ಥೆ ನಮ್ಮಷ್ಟೇನು ಉತ್ತಮವಾಗಿಲ್ಲ' ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ತಿಳಿಸಿದರು.

ಮೊನ್ನೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದಾಗ ಅಲ್ಲಿನ ಸಾರಿಗೆ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇನ್ನೂ 15 ವರ್ಷಗಳ ನಂತರವೂ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಗುಜರಾತ್ ಸಾರಿಗೆ ಇಲಾಖೆ ಹಿಂದಿಕ್ಕಲು ಸಾಧ್ಯವಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT