ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಾಗಲ್‌ಗೆ ಹಳೆ ಹಾಡು

Last Updated 17 ನವೆಂಬರ್ 2011, 19:30 IST
ಅಕ್ಷರ ಗಾತ್ರ

`ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನ್ಲ್ಲಿಲ್ಲ ಸುಳ್ಳು.....~ ನಾಗರಹೊಳೆ ಚಿತ್ರಕ್ಕಾಗಿ 1976ರಲ್ಲಿ ಕೆ.ಎಸ್. ಎಲ್. ಸ್ವಾಮಿ (ರವಿ) ಹಾಡಿದ ಗೀತೆ ಇದು. ಸತ್ಯಂ ಸಂಗೀತ ನಿರ್ದೇಶನದಲ್ಲಿ ಚಿ. ಉದಯಶಂಕರ್ ಈ ಹಾಡು ಬರೆದಿದ್ದರು. 35 ವರ್ಷದ ಬಳಿಕ ಇದೇ ಹಾಡು ಹೊಸ ರೂಪ ತಳೆದು ಮತ್ತೆ ಮೂಡಿ ಬಂದಿದೆ. ಅಂದಹಾಗೆ ಈ ಹಾಡಿಗೆ ಆಧುನಿಕ ಸಂಗೀತದ ಸ್ಪರ್ಶ ನೀಡಿ ಅದೇ ಧಾಟಿಯಲ್ಲಿ ಬಳಸಿಕೊಂಡಿರುವುದು `ಪಾಗಲ್~ ಚಿತ್ರಕ್ಕಾಗಿ. ಮತ್ತೊಂದು ವಿಶೇಷವೆಂದರೆ ಚಿತ್ರಕ್ಕೆ ಸಂಗೀತ ನೀಡಿರುವ ವಿ.ಮನೋಹರ್ ಈ ಹಾಡನ್ನು ಪುನಃ ರವಿ ಅವರಿಂದಲೇ ಹಾಡಿಸಿರುವುದು.

`ಈ ಹಾಡು ಹಾಡಿದಾಗ ನನಗೆ 37 ವರ್ಷ. ಈಗ 73, ಅಷ್ಟೇ ವ್ಯತ್ಯಾಸ~ ಎಂದು ತಾವು ಹಾಡಿದ ದಿನಗಳನ್ನು ಕೆ.ಎಸ್.ಎಲ್ ಸ್ವಾಮಿ ನೆನೆಸಿಕೊಂಡಿದ್ದು, `ಪಾಗಲ್~ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ. ಈ ಹಾಡಿನ ಮೂಲಕ ಮನೋಹರ್ ಬಹುದೊಡ್ಡ ಪ್ರಯೋಗ ಮಾಡಲು ಹೊರಟಿದ್ದಾರೆ ಎಂದ ಅವರು ಹಳೆಯ ದಿನಗಳನ್ನು ಮೆಲುಕು ಹಾಕಿದರು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದ ಆದಾಯ ತೆರಿಗೆ ಅಧಿಕಾರಿಯೊಬ್ಬರು ಈ ಹಾಡನ್ನು ಕೇಳಿ ಮನಸ್ಸನ್ನು ಬದಲಿಸಿಕೊಂಡಿದ್ದು, ತಾವು ಶೃಂಗೇರಿಗೆ ಹೋಗಿದ್ದಾಗ ಆತ ಕಾಲಿಗೆ ಬಿದ್ದು ನಮಸ್ಕರಿಸಿದ್ದರು~ ಎಂದು ಹಾಡಿನ ಜೊತೆ ಬೆರೆತಿರುವ ಕಥೆಗಳನ್ನು ಸ್ವಾಮಿ ತೆರೆದಿಟ್ಟರು. ಗೀತೆಯ ಯಶಸ್ಸಿನ ಗೌರವವನ್ನು ಚಿ.ಉದಯಶಂಕರ್ ಅವರಿಗೆ ಅರ್ಪಿಸಿದರು.

`ಮೆಜೆಸ್ಟಿಕ್~, `ದಾಸ~, `ಶಾಸ್ತ್ರಿ~, `ಸುಗ್ರೀವ~, `ತಂಗಿಗಾಗಿ~ ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಎನ್.ಸತ್ಯ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕರಾಗಿ ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಕಥೆ, ಸಂಭಾಷಣೆ ಕೂಡ ಅವರದ್ದೆ. ತಾನೇ ನಾಯಕನಾಗಬೇಕೆಂದು ಮಹತ್ವಾಕಾಂಕ್ಷೆಯಿಂದ ಕೈಗೆತ್ತಿಕೊಂಡಿದ್ದ ಚಿತ್ರಕ್ಕೆ ಅಡೆತಡೆಗಳು ಬಂದು ನಿಂತೇ ಹೋಗುವ ಸ್ಥಿತಿಗೆ ತಲುಪಿತ್ತು. ಆಗ ಕೈ ಹಿಡಿದವರು ನಿರ್ಮಾಪಕ ಕೆ.ಮುರಳೀಧರ್ ಎಂದು ಸತ್ಯ ಧನ್ಯವಾದ ಅರ್ಪಿಸಿದರು. ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂಬ ಮಾತನ್ನೂ ಸೇರಿಸಿದರು.

ಸಂಗೀತದ ಬಗ್ಗೆ ವೇದಿಕೆ ಮೇಲಿದ್ದವರೆಲ್ಲರಿಂದ ಅಪಾರ ಮೆಚ್ಚುಗೆ ಬಂದಾಗ ಸಂಗೀತ ನಿರ್ದೇಶಕ ವಿ.ಮನೋಹರ್ ಮುಖದಲ್ಲಿ ಸಂಕೋಚ ಮತ್ತು ಸಂತಸ ಎರಡೂ ಮನೆಮಾಡಿತ್ತು. ಮಾತಿಗಿಳಿದ ಅವರು ತಮ್ಮ ಸಂಗೀತದ ಬಗ್ಗೆ ಏನನ್ನೂ ಹೇಳಿಕೊಳ್ಳಲಿಲ್ಲ.

ಬದಲಾಗಿ ಚಿತ್ರಕ್ಕೆ ಹಾಡಿದ ಅವಿನಾಶ್ ಛಬ್ಬಿ, ಸಂತೋಷ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಅನುರಾಧ ಭಟ್‌ರನ್ನು ಸ್ಮರಿಸಿದರು. ಹಿನ್ನೆಲೆ ಸಂಗೀತ ನೀಡಿದ ಗೌತಮ್ ವಸಿಷ್ಠ, ಸಾಹಿತ್ಯ ರಚಿಸಿದ ಗೌಸ್ ಪೀರ್, ಸೋಸಲೆ ಗಂಗಾಧರ್ ಮೊದಲಾದವರಿಗೆ ಪ್ರಶಂಸೆಯ ಮಳೆಗೈದರು. ಇಂದು `ಪಾಗಲ್~ ಆಗುತ್ತಿರುವುದು ಹುಡುಗರು. ಕೆಲವರು ಹುಡುಗಿಯರ ಪ್ರೀತಿಯಲ್ಲಿ ಬಿದ್ದು ಪಾಗಲ್ ಆದರೆ, ಉಳಿದವರು ಮದುವೆಯಾಗಿ ಪಾಗಲ್ ಆಗುತ್ತಿದ್ದಾರೆ ಎಂದು ಮನೋಹರ್ ಚಟಾಕಿ ಹಾರಿಸಿದರು.

ಚಿತ್ರದ ನಾಯಕಿ ಪೂಜಾ ಗಾಂಧಿಗೆ ಹೇಳಲು ಮಾತುಗಳು ಹೆಚ್ಚಿರಲಿಲ್ಲ. ಇದುವರೆಗಿನ ಚಿತ್ರಗಳಲ್ಲೇ ಇದು ವಿಭಿನ್ನವಾದ ಪಾತ್ರ ಎಂದು ಹೇಳಿಕೊಂಡರು.

ಹಿರಿಯ ನಟ ಕೃಷ್ಣೇಗೌಡ, ಜೇಡರಹಳ್ಳಿ ಕೃಷ್ಣಪ್ಪ, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕ ಶಿವರಾಜ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT