ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮಾರ್ಗದರ್ಶಿ ಸೂತ್ರ: ಟ್ರಾಯ್ ಚಿಂತನೆ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಹಲವು ಮೊಬೈಲ್ ಕಂಪನಿಗಳ 2ಜಿ ಪರವಾನಗಿಗಳನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ರದ್ದುಪಡಿಸಿರುವ ಹಿನ್ನೆಲೆಯಲ್ಲಿ,  ಕಂಪೆನಿಗಳು ಅನುಸರಿಸಬೇಕಾದ ವ್ಯಾವಹಾರಿಕ ನಿಯಮಗಳನ್ನು ಒಳಗೊಂಡ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಚಿಂತನೆ ನಡೆಸುತ್ತಿದೆ.

ದೇಶದ ಬಹು ಪ್ರಮಾಣದ ಮೊಬೈಲ್ ಗ್ರಾಹಕರ ಹಿತರಕ್ಷಣೆಗಾಗಿ ಈ ಹೊಸ ಸೂತ್ರಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಈ ಕಂಪೆನಿಗಳು ಕೋಟ್ಯಂತರ ಡಾಲರ್ ವ್ಯಯಿಸಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಇವುಗಳ ಪರವಾನಗಿಯೂ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೀಚಾರ್ಜ್ ಕೂಪನ್‌ಗಳ ಮಾರಾಟ ಮತ್ತು ಕಂಪೆನಿಗಳ ಹೊಸ ಸಂಪರ್ಕ ಕುರಿತಂತೆ ಟ್ರಾಯ್ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಯೂನಿನಾರ್, ಲೂಪ್ ಟೆಲಿಕಾಂ, ಸಿಸ್ಟೆಮ ಶ್ಯಾಮ್, ಎಟಿಸಲಾಟ್ ಡಿಬಿ, ಎಸ್ ಟೆಲ್, ವಿಡಿಯೊಕಾನ್, ಟಾಟಾ ಮತ್ತು ಐಡಿಯಾ ಕಂಪೆನಿಗಳ 122 ಅಕ್ರಮ 2ಜಿ ಪರವಾನಗಿಗಳನ್ನು ಸುಪ್ರೀಂಕೋರ್ಟ್ ಕಳೆದ ವಾರ ರದ್ದುಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಈಗಿರುವ ಪರವಾನಗಿಗಳ ಕಾಲಾವಧಿ ಕೇವಲ ನಾಲ್ಕು ತಿಂಗಳು.

ಪರವಾನಗಿಗಳ ರದ್ದಿನಿಂದ ಗ್ರಾಹಕರು ಇತರ ಮೊಬೈಲ್ ಕಂಪನಿಗಳಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶವಿದ್ದರೂ ಹೆಚ್ಚಿನ ಗ್ರಾಹಕರಿಗೆ ಈ ಕುರಿತು ಅರಿವಿಲ್ಲ. ಮಾತ್ರವಲ್ಲ, ಹೊಸ 2ಜಿ ಹರಾಜಿನಲ್ಲಿ ಈ ಕಂಪೆನಿಗಳು ಪರವಾನಗಿಗಳನ್ನು ಪಡೆಯಲು ವಿಫಲವಾದಲ್ಲಿ ಈಗಿರುವ ಸೇವೆಯನ್ನು ಮುಂದುವರಿಸಲು ಕಂಪೆನಿಗಳಿಗೆ ಸಾಧ್ಯವಿಲ್ಲ ಎಂಬುದೂ ಅವರಿಗೆ ತಿಳಿದಿಲ್ಲ ಎಂದು ಮೂಲಗಳು ಹೇಳಿವೆ.

`ಕಂಪೆನಿಗಳು ತಮ್ಮ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿವೆ. ಅವರಿಗೆ ಅವರ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವ ಎಲ್ಲಾ ಹಕ್ಕು ಇದೆ. ಆದರೆ ಅದೇ ವೇಳೆ ಗ್ರಾಹಕರ ಹಿತಾಸಕ್ತಿಯೂ ಅಷ್ಟೇ ಪ್ರಮುಖವಾಗಿದೆ~ ಎಂದೂ ಮೂಲಗಳು ತಿಳಿಸಿವೆ. ಈ ಮಧ್ಯೆ ಸುಪ್ರೀಂಕೋರ್ಟ್‌ನ ಆದೇಶದ ಬಳಿಕವೂ ಸುಮಾರು ಮೂರು ಲಕ್ಷದಷ್ಟು ಗ್ರಾಹಕರನ್ನು ಪಡೆಯುವಲ್ಲಿ ಸಫಲರಾಗಿದ್ದೇವೆ ಎಂದು ಯೂನಿನಾರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT