ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೂಪದಲ್ಲಿ ಔಡಿ ಕ್ಯೂ 7

Last Updated 20 ಏಪ್ರಿಲ್ 2016, 19:52 IST
ಅಕ್ಷರ ಗಾತ್ರ

ವೇಗ, ರಕ್ಷಣೆ, ಮೈಲೇಜ್‌ ಮತ್ತು ತಂತ್ರಜ್ಞಾನದ ಸಮ್ಮಿಶ್ರಣ ಒಂದೇ ಎಸ್‌ಯುವಿಯಲ್ಲಿ ದೊರಕುವುದು ಕಷ್ಟ. ಇದಕ್ಕೆ ಅಪವಾದ ಎಂಬಂತೆ ಮೈತಳೆದು ನಿಂತಿದೆ ಔಡಿಯ ಐಶಾರಾಮಿ ಕ್ಯೂ 7.

ಔಡಿ ತನ್ನ ಎಸ್‌ಯುವಿ ಬಳಗದಲ್ಲಿ ಕ್ಯೂ ಸರಣಿಯ 3, 5 ಹಾಗೂ 7 ಸರಣಿಯ ವಾಹನಗಳು ಮಾರುಕಟ್ಟೆಯಲ್ಲಿದೆ. ಹಳೆಯ ಕ್ಯೂ 7 ಎಸ್‌ಯುವಿಗಳಲ್ಲೇ ಭಾರಿ ವಾಹನವಾಗಿತ್ತು. ಇದರಲ್ಲಿ ಕುಳಿತರೆ ‘ಹೆವಿ’ ಎನಿಸುವ ವಾಹನದಲ್ಲಿ ಕುಳಿತಂತೆ ಆಗುತ್ತಿತ್ತು. ಇದೀಗ ಕ್ಯೂ 7 ಕೊಂಚ ಭಾರ ಇಳಿಸಿಕೊಂಡು ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಔಡಿ ಎಸ್‌ಯುವಿಗಳಲ್ಲಿ ಇರುವ ಕ್ವಟ್ರೋ ತಂತ್ರಜ್ಞಾನ ಹೊಸ ವಾಹನದಲ್ಲೂ ಮುಂದುವರೆದಿದೆ. 1980ರಲ್ಲಿ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಹಳ್ಳಕೊಳ್ಳದ ಹಾದಿಯಲ್ಲಿ ಯಾವುದೇ ಚಕ್ರಕ್ಕೆ ಬೇಕಾದರೂ ಅಗತ್ಯ ನೂಕುಬಲದೊರಕುತ್ತದೆ.

ಒಂದು ರೀತಿ ಹಲ್ಲಿಯು ಗೋಡೆಯನ್ನು ಹತ್ತುವ ರೀತಿಯಲ್ಲಿ ವಾಹನ ಹಳ್ಳಕೊಳ್ಳ ಹಾಗೂ ಏರು ಹಾದಿಯನ್ನು ಕ್ರಮಿಸುತ್ತದೆ. ಈ ತಂತ್ರಜ್ಞಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಆದರೆ ವಾಹನದ ಭಾರವನ್ನು ಕಡಿಮೆ ಮಾಡಿಕೊಳ್ಳಲು ಕಾಂಪೊಸಿಟ್‌ ವಸ್ತುಗಳನ್ನು ಕಂಪೆನಿ ಬಳಸಿದೆ. ಇದರಿಂದ ವಾಹನವು ಹಗುರವಾಗಿದ್ದು ಕೇವಲ 7.1 ಸೆಕೆಂಡ್‌ನಲ್ಲಿ 0–100 ಕಿ.ಮೀ ವೇಗವನ್ನು ಪಡೆಯುತ್ತದೆ. ಹೊಸ ಪೀಳಿಗೆಯ 3.0 ಟಿಡಿಐ ಎಂಜಿನ್‌ನಲ್ಲಿ ಏಳು ಬಗೆಯ ಚಾಲನಾ ಕಾರ್ಯವನ್ನು ಅಳವಡಿಸಲಾಗಿದೆ.

ವಾಹನಗಳ ಒತ್ತಡ ಕಡಿಮೆ ಇದ್ದ ನುಣುಪಾದ ನೈಸ್‌ ರಸ್ತೆಯಲ್ಲಿ ಮುಂಜಾನೆ ಎಸ್‌ಯುವಿ ಚಾಲನೆಯಿಂದ ಹೊಸ ಅನುಭವ ದೊರಕಿತು. ವಾಹನ 180 ಕಿ.ಮೀ ವೇಗವನ್ನು ತಲುಪಿದರೂ ಅಲ್ಲಾಡದೆ ನುಗ್ಗುತ್ತಿತ್ತು. ಗಾಳಿಗೆ ಗುದ್ದಿ ಮುನ್ನುಗ್ಗುತ್ತಿದ್ದರೂ ವಾಹನದ ಒಳಗೆ ಮೌನ. ಎಲ್ಲಾ ಐಶಾರಾಮಿ ವಾಹನಗಳಲ್ಲಿ ಇರುವಂತೆ ಚಾಲನೆಯ ಹಲವು ಡ್ರೈವ್‌ಗಳನ್ನು ವಾಹನದಲ್ಲಿ ಅಳವಡಿಸಲಾಗಿದೆ. ಕಚ್ಚಾ ರಸ್ತೆ ಇಲ್ಲವೇ ಕಲ್ಲುಮುಳ್ಳಿನ ಹಾದಿಯಲ್ಲಿ ಚಾಸಿಯನ್ನು ಯಾಂತ್ರಿಕವಾಗಿ ಎತ್ತರಕ್ಕೆ ಏರಿಸುವ ಸೌಲಭ್ಯವಿದೆ.

ಕಾರಿನ ಒಳಭಾಗ ಸಂಪೂರ್ಣ ಐಶಾರಾಮಿಯಾಗಿದೆ. ಚಾಲಕ ಮತ್ತು ಉಳಿದ ಪ್ರಯಾಣಿಕರಿಗೆ ಪ್ರಯಾಣ ಆರಾಮ ಎನಿಸುವಂತೆ ಮಾಡಲಾಗಿದೆ. ಚಾಲಕ, ಮುಂಬದಿ ಪ್ರಯಾಣಿಕ ಹಾಗೂ ಹಿಂಬದಿಯ ಪ್ರಯಾಣಿಕರಿಗೆ ಪ್ರತ್ಯೇಕ ಹವಾಮಾನ ನಿಯಂತ್ರಣವಿದೆ.

ಬೋಸ್‌ 3ಡಿ ಧ್ವನಿ ವ್ಯವಸ್ಥೆ ಜೊತೆಗೆ 19 ಸ್ಪೀಕರ್‌ ಅಳವಡಿಸಲಾಗಿದೆ. ವಿದೇಶಗಳಲ್ಲಿ ಬದಲಿ ಟಯರ್‌ ವ್ಯವಸ್ಥೆಯಿಲ್ಲ. ಆದರೆ ಭಾರತದಲ್ಲಿ ಈ ವ್ಯವಸ್ಥೆ ಕಡ್ಡಾಯ. ಬದಲಿ ಟಯರ್‌ಗೆ ವಾಹನದಲ್ಲಿ ಸರಿಯಾದ ಜಾಗವಿಲ್ಲ ಎನ್ನುವುದೇ ವಾಹನದ ನಕಾರಾತ್ಮಕ ಅಂಶ. ಕೊನೆಯ ಹಿಂಬದಿ ಸೀಟ್‌ ಬಳಿ ಟಯರ್‌ ಅಳವಡಿಸಿದ್ದಾರೆ. ಇದು ಇಕ್ಕಟ್ಟಾದ ಅನುಭವ ನೀಡುತ್ತದೆ.

ವಾಹನ ರಸ್ತೆಯಲ್ಲಿ ಯಾವ ಕೋನದಲ್ಲಿ ಇದೆ ಎನ್ನುವ ಅಂಶ ಡ್ಯಾಶ್‌ ಬೋರ್ಡ್‌ನಲ್ಲಿ ಕಾಣಿಸುತ್ತಿರುತ್ತದೆ. ಡ್ಯಾಶ್‌ಬೋರ್ಡ್‌ನ ನಿಯಂತ್ರಣ ಕೈಬಳಿಯೇ ಸುಲಭವಾಗಿ ದೊರಕುವಂತೆ ವಿನ್ಯಾಸ ಮಾಡಿದ್ದಾರೆ. ಇದು ಹೊಸತೇನಲ್ಲ.

ವಾಹನದ ಶರೀರ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಎರಡೂ ಬದಿ ಗಾಢವಾದ ಗೆರೆ ಎದ್ದು ಕಾಣುವಂತಿದೆ. ಹೆಡ್‌ಲೈಟ್‌ನಲ್ಲಿ ಮ್ಯಾಟ್ರಿಕ್ಸ್‌ ಎಲ್‌ಇಡಿ ಅಳವಡಿಸಲಾಗಿದೆ. ಪ್ರತಿ ಎಲ್‌ಇಡಿಯು 30 ಸಣ್ಣ ಬೆಳಕಿನಾಕಾರದಲ್ಲಿ ಹೊಳೆಯುತ್ತಾ ಮಿನುಗುತ್ತಿರುತ್ತದೆ. ಬೆಳಗಿನ ಹೊತ್ತು ಸಣ್ಣ ಗೆರೆಯಂತೆ ಹೊಳೆಯುವ ವ್ಯವಸ್ಥೆಯಿದೆ.

ರಿವರ್ಸ್ ಕ್ಯಾಮೆರಾ, ಆಟೋ ಪಾರ್ಕ್‌ ಸೆನ್ಸರ್‌, ಸುರಕ್ಷತೆಗೆ ಎಬಿಎಸ್‌, ಎಎಸ್‌ಆರ್‌, ಎಂಟು ಏರ್‌ ಬ್ಯಾಗ್‌, ಟೈರ್‌ ಪಂಚರ್‌ ಆದರೆ ಎಚ್ಚರಿಸುವ ವ್ಯವಸ್ಥೆಯಿದೆ.

ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ವಾಹನದಲ್ಲಿ ಪ್ರೀಮಿಯಂ ಮತ್ತು ಟೆಕ್ನಾಲಜಿ ಎನ್ನುವ ಎರಡು ಬಗೆಯಿದೆ. ಕರ್ನಾಟಕದಲ್ಲಿ ಪ್ರೀಮಿಯಂ ಎಲ್ಲಾ ತೆರಿಗೆ ಸೇರಿ ₹ 97 ಲಕ್ಷವಾದರೆ, ಟೆಕ್ನಾಲಜಿಗೆ ₹ 1.07 ಕೋಟಿ ಹಣ ನೀಡಬೇಕು. ಜೊತೆಗೆ ಬುಕ್ ಮಾಡಿ ಮೂರು ತಿಂಗಳು ಕಾಯಬೇಕು.

ಔಡಿ ಎ 3
ಔಡಿಯಲ್ಲಿ ಸೆಡಾನ್‌ ಇಷ್ಟಪಡುವವರಿಗೆ ಎ3 ಹೇಳಿ ಮಾಡಿಸಿದ ಕಾರ್. ಯುವ ಮನಸ್ಸಿಗೆ ಇಷ್ಟವಾಗುವ ರೀತಿ ವಿನ್ಯಾಸಗೊಳಿಸಲಾಗಿದೆ. ವಿನ್ಯಾಸ, ತಂತ್ರಜ್ಞಾನ, ಐಶಾರಾಮಿ ಮನರಂಜನಾ ವ್ಯವಸ್ಥೆ, ಆಕರ್ಷಕ ಸೀಟ್‌, ಒಳಾಂಗಣ ಮತ್ತು ಹೊರ ವಿನ್ಯಾಸ ಮನಸೆಳೆಯುವಂತಿದೆ. ಚಾಲನೆ ಆರಂಭಿಸಿದ 9 ಸೆಕೆಂಡ್‌ಗೆ ನೂರು ಕಿ.ಮೀ ವೇಗವನ್ನು ಪಡೆಯುವ ಸಾಮರ್ಥ್ಯ ಕಾರಿಗಿದೆ.

ಮುಂಬದಿ ಹಾಗೂ ಹಿಂಬದಿ ಪ್ರಯಾಣಿಕರಿಗೆ ಪ್ರತ್ಯೇಕ ಎ.ಸಿ, ಸೂರ್ಯನ ಪ್ರಖರತೆ ಮತ್ತು ಕೋನವನ್ನು ಗಮನಿಸುವ ಸೆನ್ಸರ್‌, ಜೆಟ್‌ಟರ್ಬೈನ್‌ ವಿನ್ಯಾಸ , ನ್ಯಾವಿಗೇಷನ್‌, 3ಡಿ ಮ್ಯಾಪ್‌, ಡಿವಿಡಿ ಪ್ಲೇಯರ್‌ ಡ್ಯಾಶ್‌ಬೋರ್ಡ್‌ಗೆ ಹೊಸ ನೋಟ ನೀಡುತ್ತದೆ.

ಮಲೆನಾಡಿನ ತಂಗಾಳಿಯಲ್ಲಿ ಹೋಗುವಾಗ ಕಾರಿನ ಚಾವಣಿಯನ್ನು ತೆರೆಯುವ ಸೌಲಭ್ಯ ಅಳವಡಿಸಲಾಗಿದೆ. ಇದೇ ವ್ಯವಸ್ಥೆ ಔಡಿಯ ಎ 6 ಮತ್ತು 8 ಸರಣಿಯ ಕಾರುಗಳಲ್ಲಿದೆ. ರಾಜ್ಯದಲ್ಲಿ ಎ3 ಪ್ರೀಮಿಯಂಗೆ ₹ 38 ಲಕ್ಷ ಹಾಗೂ ಪ್ರೀಮಿಯಂ ಪ್ಲಸ್‌ಗೆ ₹ 44 ಲಕ್ಷದ ಆಸುಪಾಸಿನಲ್ಲಿದೆ ಬೆಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT