ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವಾರಸ್ದಾರ!

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಲಾಬಿ ಬಣ್ಣದ ಪ್ಯಾಂಟು, ಬಿಳಿ ಬಣ್ಣದ ಶರ್ಟು, ಕುತ್ತಿಗೆಗೊಂದು ಕೆಂಪು ರುಮಾಲು. ನಾಯಕ ನಟ ದರ್ಶನ್ ಹೊಸ ವೇಷದಲ್ಲಿ ರಂಗಾಗಿದ್ದರು. ಅವರ ಸುತ್ತಲೂ ಅಭಿಮಾನಿಗಳ ಚಕ್ರವ್ಯೆಹ. ಅದು `ಬುಲ್ ಬುಲ್~ ಚಿತ್ರದ ಮುಹೂರ್ತದ ಸಂದರ್ಭ. ಆ ಸಂಭ್ರಮಕ್ಕೆ ದರ್ಶನ್ ಹುಟ್ಟುಹಬ್ಬವೂ ಜೊತೆಯಾಗಿದ್ದುದು ವಿಶೇಷ.

ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದರ್ಶನ್ ಪತ್ರಕರ್ತರ ಎದುರು ತುಟಿ ಬಿಚ್ಚಿದ್ದು ಕಡಿಮೆ. `ಚುರುಕು ತಂದೆಗೆ ಚುರುಕು ಮಗನಾಗಿ ಅಭಿನಯಿಸುತ್ತಿರುವೆ. `ಅಣ್ಣಾವ್ರ~ ಚಿತ್ರದ ನಂತರ ಎರಡನೇ ಬಾರಿಗೆ ಅಂಬರೀಷ್ ಅವರೊಂದಿಗೆ ಜೊತೆಯಾಗಿ ನಟಿಸುತ್ತಿರುವೆ. ಚಿತ್ರದಲ್ಲಿ ನಮ್ಮಿಬ್ಬರ ಕಾಂಬಿನೇಷನ್ ಹಾಸ್ಯಮಯವಾಗಿದೆ~ ಎಂದರು.

`ತೂಗುದೀಪ್ ಶ್ರೀನಿವಾಸ್ ಮಕ್ಕಳು ಇಂಥ ಸ್ಥಾನಕ್ಕೆ ಬಂದಿರುವುದು ಸಂತಸದ ಸಂಗತಿ. ಅವರಿಗೆ ಒಳಿತಾಗಲಿ~ ಎಂದು ಅಂಬರೀಷ್ ಹಾರೈಸಿದರು. ಚಿತ್ರದಲ್ಲವರು ದರ್ಶನ್ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 70ರ ದಶಕದ ಶೈಲಿಯ ಹಸಿರು ಪ್ಯಾಂಟು, ಬಿಳಿ ಶರ್ಟು, ಕಪ್ಪು ಕನ್ನಡಕ ತೊಟ್ಟಿದ್ದ ಅವರು- `ಹಸಿರು ಅಂದ್ರೆ ಗ್ರೀನ್ ಸಿಗ್ನಲ್~ ಎಂದು ಹೇಳಿ ಜೋರಾಗಿ ನಕ್ಕರು.

ಚಿತ್ರ ಸಾಹಿತಿ ಕವಿರಾಜ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ಎಂ.ಡಿ.ಶ್ರೀಧರ್, ಛಾಯಾಗ್ರಾಹಕ ಎ.ವಿ.ಕೃಷ್ಣಕುಮಾರ್ ಮತ್ತು ನಿರ್ದೇಶಕ ದಿನಕರ್ `ಬುಲ್‌ಬುಲ್~ ಚಿತ್ರದ ನಿರ್ಮಾಪಕರು. ನಿರ್ಮಾಪಕರಾಗುವ ತಮ್ಮ ಆಸೆಗೆ ನೀರೆರೆದು ಬ್ಯಾನರ್ ನೀಡಿ ಸಹಕರಿಸುತ್ತಿರುವ ದರ್ಶನ್ ಕುಟುಂಬಕ್ಕೆ ನಿರ್ಮಾಪಕರೆಲ್ಲಾ ಒಟ್ಟಾಗಿ ಧನ್ಯವಾದ ಸಲ್ಲಿಸಿದರು.

ತೆಲುಗಿನ `ಡಾರ್ಲಿಂಗ್~ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದಿರುವ ಚಿತ್ರತಂಡ, `ಬುಲ್‌ಬುಲ್~ಗಾಗಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆಯಂತೆ. `ಮೂಲ ಚಿತ್ರದ ಎರಡನೇ ಭಾಗ ನಮಗೆ ಇಷ್ಟವಾಯಿತು. ಕ್ಲೈಮ್ಯಾಕ್ಸ್‌ನಲ್ಲಿ ಉದ್ದ ಸನ್ನಿವೇಶಗಳಿದ್ದ ಕಾರಣ ಬೇಡವಾದದ್ದನ್ನು ಕತ್ತರಿಸಿ ಚೆನ್ನಾಗಿರುವುದನ್ನು ಉಳಿಸಿಕೊಂಡಿದ್ದೇವೆ.

ನಮ್ಮ ಪ್ರಾದೇಶಿಕತೆಗೆ ತಕ್ಕಂತೆ ಸಿನಿಮಾ ಇರಲಿದೆ. ಕೆಲವು ಹೊಸ ಪಾತ್ರಗಳನ್ನು ಸೇರಿಸಿ ಚಿತ್ರಕತೆ ರೂಪಿಸಿಕೊಳ್ಳಲಾಗಿದೆ. ಈ ಚಿತ್ರವನ್ನು ರೀಮೇಕ್ ಅನ್ನುವುದಕ್ಕಿಂತ `ಡಾರ್ಲಿಂಗ್~ ಚಿತ್ರದ ಸ್ಫೂರ್ತಿ ಎನ್ನಬಹುದು~ ಎಂದು ವಿವರಣೆ ನೀಡಿದರು ದಿನಕರ್.

ದಿನಕರ್ ಅವರಂಥ ನಿರ್ದೇಶಕರಿದ್ದೂ ತಮಗೆ ಅವಕಾಶ ನೀಡಿದ ದರ್ಶನ್‌ಗೆ ನಿರ್ದೇಶಕ ಎಂ.ಡಿ.ಶ್ರೀಧರ್ ವಂದಿಸಿದರು. `ಅಂಬರೀಷ್ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದೇ ಮೊದಲ ಬಾರಿಗೆ ಅವರಿಗೆ ಆಕ್ಷನ್-ಕಟ್ ಹೇಳುತ್ತಿರುವೆ. ದರ್ಶನ್- ಅಂಬರೀಷ್ ಅವರ ಜೊತೆಯಾಟವನ್ನು ಅದ್ಭುತವಾಗಿ ಚಿತ್ರೀಕರಿಸುವುದು ನನ್ನ ಯೋಜನೆ. ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ~ ಎಂದರು.

`ಅಂಬರೀಷ್ ಜಲೀಲನಾಗಿ ನಟಿಸಿದ `ನಾಗರಹಾವು~ ಚಿತ್ರದಲ್ಲಿ ಬರುವ `ಬುಲ್ ಬುಲ್..~ ಸಂಭಾಷಣೆಯನ್ನು ಚಿತ್ರದ ಶೀರ್ಷಿಕೆಯಾಗಿ ಬಳಿಸಿಕೊಂಡಿದ್ದೇವೆ. ಯಾಕೆಂದರೆ ಅಂಬರೀಷ್ ಅವರ ಹಳೆಯ ಚಿತ್ರಗಳ ವಾರಸುದಾರ ದರ್ಶನ್~ ಎಂದರು ಕವಿರಾಜ್. ಅವರು ಇದೇ ಮೊದಲ ಬಾರಿಗೆ `ಬುಲ್‌ಬುಲ್~ ಮೂಲಕ ಸಂಭಾಷಣೆ ಬರೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.

ತಮಗೆ ಮೊದಲು ಸಂಗೀತ ನಿರ್ದೇಶನಕ್ಕೆ ಅವಕಾಶ ನೀಡಿದ ಸಂಸ್ಥೆಯಿಂದಲೇ ತಾವು ನಿರ್ಮಾಪಕರಾಗಿ ಹೊರಹೊಮ್ಮುತ್ತಿರುವುದನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ಹೆಮ್ಮೆಯಿಂದ ಹೇಳಿಕೊಂಡರು.

ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್, `ದರ್ಶನ್ ತಮ್ಮ ಮಾರುಕಟ್ಟೆ ಲೆಕ್ಕಿಸದೇ ತಂತ್ರಜ್ಞರ ಬೆಂಬಲಕ್ಕೆ ನಿಂತಿರುವುದು ಖುಷಿ ನೀಡಿದೆ~ ಎಂದರು. ದರ್ಶನ್ ತಾಯಿ ಮೀನಾ ತೂಗುದೀಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT