ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವೆಬ್ ಅಂಗಡಿಗಳ ಪೈಪೋಟಿ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಆರು ತಿಂಗಳಿಂದ ಈಚೆಗೆ ಹಲವಾರು ಹೊಸ ಆನ್‌ಲೈನ್ ಅಂಗಡಿಗಳು ವ್ಯಾಪಾರ ಶುರು ಮಾಡಿವೆ. ಮನೆಯಲ್ಲಿ ಅಥವಾ ಆಫೀಸಿನಲ್ಲಿ ಕೂತು ವಿಂಡೋ ಶಾಪಿಂಗ್ ಮಾಡುವುದನ್ನು ಸಾಧ್ಯ ಮಾಡಿವೆ.

ಇದು ಎಂಥ ಚಟವಾಗಿಬಿಡಬಹುದು ಎಂದು ನಾನಂತೂ ಊಹಿಸಿರಲಿಲ್ಲ. ಅಂಗಡಿಗೆ ಹೋಗಿ ಶೋಕೇಸ್‌ನಲ್ಲಿ ಜೋಡಿಸಿರುವ ಒಂದೊಂದೇ ವಸ್ತುವನ್ನೂ ಕುತೂಹಲದಿಂದ ನೋಡುವುದು ಹೇಗೋ ಇದೂ ಹಾಗೇ! ಈಗ ಫೋಟೋಗ್ರಫಿ ಮತ್ತು ನೆಟ್ ತಂತ್ರಜ್ಞಾನ ಹೇಗೆ ಬೆಳೆದಿದೆ ಅಂದರೆ ಪ್ರತಿ ವಸ್ತುವನ್ನೂ ಜೂಮ್ ಮಾಡಿ ಹತ್ತಿರದಿಂದ, ಪಕ್ಕದಿಂದ, ಮೇಲಿಂದ, ಕೆಳಗಿಂದ ಕೂಲಂಕಷವಾಗಿ ಪರೀಕ್ಷಿಸಬಹುದು.

ಅಂಗಡಿ ಅಥವಾ ಮಾಲ್‌ಗೆ ಹೋಗಿ ಗಂಟೆಗಟ್ಟಲೆ ಶಾಪಿಂಗ್ ಮಾಡುವುದರ ಪರ್ಯಾಯ ಕಂಪ್ಯೂಟರ್ ಮುಂದೆ ಕೂತು ಲೈನ್ ವೆಬ್‌ಸೈಟ್‌ಗಳನ್ನು ಹೊಕ್ಕು ಶಾಪಿಂಗ್ ಮಾಡುವುದಾಗಿದೆ!

ತೀರ ಹೊಸ ಬೆಳವಣಿಗೆ: ಅಡುಗೆಗೆ ಬೇಕಾದ ಅಕ್ಕಿ ಬೇಳೆ ಎಣ್ಣೆ ಬೆಣ್ಣೆಯನ್ನೂ ಇಂಥ ಆನ್ ಲೈನ್ ಅಂಗಡಿಗಳಿಂದ ತರಿಸಿಕೊಳ್ಳಬಹುದು. ಬೆಂಗಳೂರು, ಮುಂಬೈನಂಥ ನಗರಗಳಲ್ಲಿ ಅಂತರ್ಜಾಲದಲ್ಲಿ ಕೊಳ್ಳುವವರು ಇರುವುದು ಹಳೆಯ ಸುದ್ದಿ. ಈಗ ಈ ಸೌಲಭ್ಯ ಗ್ರಾಮಾಂತರ ಪ್ರದೇಶದಲ್ಲೂ ಬಳಕೆಯಾಗುತ್ತಿದೆ.

ಕಳೆದ ಒಂದೇ ವರ್ಷದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಎರಡು ಪಟ್ಟಿಗಿಂತ ಅಧಿಕವಾಗುತ್ತಿದೆ. ಅಂದರೆ, 2011ರಲ್ಲಿ 2.1 ಕೋಟಿ ಸಂಪರ್ಕ ಇದ್ದು, ಈ ವರ್ಷದ ಕೊನೆಗೆ ಅದು 4.5 ಕೋಟಿ ಮುಟ್ಟುವ ಭರದಲ್ಲಿದೆ. ಜೂನ್ ತಿಂಗಳಲ್ಲಿ ಲೆಕ್ಕ ಮಾಡಿದಾಗ 3.8 ಕೋಟಿ ಗ್ರಾಮೀಣ ಜನರು ನೆಟ್ ಬಳಸುತ್ತಿದ್ದರು.

ಜನ್ಜಾರ್((zansaar.com) ಎಂಬ ವೆಬ್‌ಸೈಟ್ ಮನೆಯ ಫರ್ನಿಚರ್, ಪಾತ್ರೆ-ಪಡಗು ಮಾರಿದರೆ ಪೆಪ್ಪರ್ ಫ್ರೈ (pepperfry.com), ಮಿಂಟ್ರ ((myntra.com) ಮತ್ತು ಜಬಾಂಗ್ ((jabong.com))ನಂಥ ಸೈಟ್‌ಗಳು ಬಟ್ಟೆ-ಬರೆ, ಚಪ್ಪಲಿ, ವಾಚ್, ಪರ್ಸ್‌ನಂಥ  ವಸ್ತುಗಳನ್ನು ಮಾರುತ್ತಿವೆ.

ಇದಲ್ಲದೆ ಬರೀ ಕನ್ನಡಕದ ಫ್ರೇಂ, ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವ ಆನ್‌ಲೈನ್ ಅಂಗಡಿಗಳೂ ವ್ಯಾಪಾರ ಶುರು ಮಾಡಿವೆ. ಪುಸ್ತಕಗಳನ್ನು ಮಾರುವ ವೆಬ್‌ಸೈಟ್‌ಗಳ ಬಗ್ಗೆ ಮೊದಲೇ ಸುಮಾರು ಕೇಳಿರುತ್ತೇವೆ. ಈಚೆಗೆ ಹೆಚ್ಚಾಗುತ್ತಿರುವುದು ಇತರ ವಸ್ತುಗಳನ್ನು ಮಾರುವ ವೆಬ್‌ಸೈಟ್‌ಗಳು.

ಇದರ ಅರ್ಥ: ವೇಗದ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಜಾಲ ಭಾರತದ ಎಲ್ಲೆಡೆ ಹರಡಿ, ಇಂದು ಆನ್‌ಲೈನ್ ಅಂಗಡಿಗಳು ಲಾಭದಾಯಕವಾಗಿ ನಡೆಯುವ ಸಾಧ್ಯತೆ ವರ್ಧಿಸಿದೆ ಎಂದು.  ಸುಮಾರು ಹನ್ನೆರಡು ವರ್ಷದ ಹಿಂದೆ, ಡಾಟ್ ಕಾಂ ಯುಗ ಬೆಳಗಿದ ಅತ್ಯುತ್ಸಾಹದಲ್ಲಿ, ಆನ್‌ಲೈನ್ ವ್ಯಾಪಾರವೇ ಇಟ್ಟಿಗೆ-ಗಾರೆ ಅಂಗಡಿಗಳ ವ್ಯಾಪಾರಕ್ಕಿಂಥ ದೊಡ್ಡದಾಗಿ ಬಿಡುತ್ತದೆ ಎಂದು ನಂಬಿ ಕೋಟ್ಯಂತರ ರೂಪಾಯಿ ಹೂಡಿದ ಹಲವು ಸಂಸ್ಥೆಗಳು ನಷ್ಟ ಅನುಭವಿಸಿದ್ದು ಈಗ ಗೊತ್ತಿರುವ ಇತಿಹಾಸ.

ಆಗ ಪ್ರಾರಂಭವಾದ ಹಲವು ವೆಬ್‌ಸೈಟ್‌ಗಳು ಮುಚ್ಚಿಹೋದವು. ಅದಕ್ಕೆ ಕೊಡುತ್ತಿದ್ದ ಕಾರಣ ಏನೆಂದರೆ, ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಇನ್ನೂ ವ್ಯಾಪಕವಾಗುವವರೆಗೂ ಆನ್‌ಲೈನ್ ವ್ಯಾಪಾರ ಕುದುರುವುದು ಕಷ್ಟ ಎಂದು.

ಆದರೆ ಈಗ ಆ ರೀತಿಯ ಯೋಚನೆ ಬದಲಾಗಿದೆ. ಒಂದಾದ ಮೇಲೆ ಒಂದು ಆನ್‌ಲೈನ್ ಅಂಗಡಿ ತೆರೆಯುತ್ತಿದೆ. ಇವುಗಳನ್ನು ಫೇಸ್‌ಬುಕ್ ಥರದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇಂಥ ಅಂಗಡಿಗಳಲ್ಲಿ ಕೊಳ್ಳುವುದರಿಂದ ಏನು ಲಾಭ?

ಹೊಸ ಆನ್‌ಲೈನ್ ಅಂಗಡಿಗಳಲ್ಲಿ ರಿಯಾಯಿತಿ ಹೇರಳವಾಗಿ ಕೊಡುತ್ತಿದ್ದಾರೆ. ಇವರು ಯಾವುದೇ ಸರಕನ್ನೂ ತಂದು ಗೋದಾಮಿನಲ್ಲಿ ಇಡಬೇಕಾಗಿಲ್ಲ. ಆರ್ಡರ್ ಬಂದ ಕೂಡಲೇ ತಯಾರಕರಿಂದ ತರಿಸಿ ಗ್ರಾಹಕರಿಗೆ ರವಾನೆ ಮಾಡಬಹುದು, ಇಲ್ಲವೇ ತಯಾರಕರೇ ರವಾನೆ ಮಾಡುವಂತೆ ವ್ಯವಸ್ಥೆ ಮಾಡಬಹುದು. ಅವರಿಗಿರುವ ಈ ಸೌಕರ್ಯದಿಂದ ಬಾಡಿಗೆ ಮತ್ತು ಮಾರಾಟ ಮಾಡುವ ಸಿಬ್ಬಂದಿಯ ಸಂಬಳ ಉಳಿಯುತ್ತದೆ.

ಇದೆಲ್ಲ ಒಂದು ಕಡೆ. ನನಗೆ ಈಚೆಗೆ ಆದ ಅನುಭವ ಹೇಳುತ್ತೇನೆ. ಆನ್‌ಲೈನ್ ಅಂಗಡಿಗಳಲ್ಲಿ ನನಗೆ ಪುಸ್ತಕ ಕೊಂಡು ಅಭ್ಯಾಸವಿದೆ. ಮೊನ್ನೆ ಪೆಪ್ಪರ್ ಫ್ರೈ ವೆಬ್‌ಸೈಟ್‌ಗೆ ಹೋಗಿ ಒಂದು ವಾಚ್ ಕೊಳ್ಳಲು ಪ್ರಯತ್ನಿಸಿದೆ. ಬ್ಯಾಂಕ್‌ನಿಂದ ಪೆಪ್ಪರ್ ಫ್ರೈಗೆ ಹಣ ಆನ್‌ಲೈನ್ ವರ್ಗಾವಣೆ ಮಾಡಿದೆ.

ಹತ್ತು ದಿನ ಕಳೆದ ಮೇಲೂ ವಾಚ್ ಬರದಿದ್ದಾಗ ಮುಂಬೈನ ಅವರ ಆಫೀಸಿಗೆ ಫೋನ್ ಮಾಡಿದೆ. ನಾನು ಆರ್ಡರ್ ಮಾಡಿದ ವಾಚ್ ಸದ್ಯಕ್ಕೆ ಇಲ್ಲ, ಮತ್ತು ಸಿಗುವ ಸಂಭವವೂ ಇಲ್ಲ ಎಂದು ಹೇಳಿ ಹಣ ಹಿಂತಿರುಗಿಸಿದರು.

ಆನ್‌ಲೈನ್ ಖರೀದಿ ಮಾಡಿದಾಗ ವಸ್ತು ಒಂದೆರಡು ದಿನಗಳಲ್ಲೇ ಮನೆ ಬಾಗಿಲಿಗೇ ಬಂದು ಬಿಡುತ್ತದೆ ಅನ್ನುವ ನಂಬಿಕೆ ಯಾವಾಗಲೂ ನಿಜವಾಗುವುದಿಲ್ಲ ಎಂಬುದು ಇದರಿಂದ ಕಲಿತ ಮೊದಲ ಪಾಠ. ಹಣ ಹಿಂತಿರುಗಿ ಬರಬೇಕಾದರೆ ಸ್ವಲ್ಪ ದಿನ ಕಾಯಬೇಕಾಯಿತು. ಮುಂದಿನ ಖರೀದಿಗೆ ಹೆಚ್ಚಿನ ರಿಯಾಯಿತಿ ಕೊಡುತ್ತೇವೆ ಎನ್ನುವ ಮೇಲ್ ಕೂಡ ಜೊತೆಗೆ ಬಂತು. (ಆ ರಿಯಾಯಿತಿ ಉಪಯೋಗಿಸಿ ಕಂಪ್ಯೂಟರ್ ಸ್ಪೀಕರ್‌ಗಳನ್ನು ಕೊಂಡೆ!)

ಅದೇ ವಾಚ್ ಹುಡುಕುತ್ತ ಹೋದಾಗ ಅಮೆರಿಕಾದ ಅತಿ ಜನಪ್ರಿಯ ಆನ್‌ಲೈನ್ ಅಂಗಡಿ ಅಮೆಜಾನ್ (ಞಚ್ಢಟ್ಞ.್ಚಟಞ.)ನಲ್ಲಿ ಅದು ಕಣ್ಣಿಗೆ ಬಿತ್ತು. ಇನ್ನೊಂದು ದೊಡ್ಡ ಆಶ್ಚರ್ಯ ಕಾದಿತ್ತು. ಅಮೇರಿಕಾದಲ್ಲಿ ಅದರ ಬೆಲೆ ಸುಮಾರು ರೂ 7,000, ಅಂದರೆ ಭಾರತದ `ರಿಯಾಯಿತಿ ಬೆಲೆ~ಗಿಂತ ರೂ 2,000 ಕಡಿಮೆ ಇತ್ತು! ಸುಮಾರು ಹತ್ತು ದಿನದಲ್ಲಿ ಅದು ಬಂದು ತಲುಪಿತು ಕೂಡ.

ಎರಡನೇ ಪಾಠ: ಅಮೇರಿಕಾದ ಆನ್‌ಲೈನ್ ಅಂಗಡಿಗಳು ಇಲ್ಲಿಯ ಆನ್‌ಲೈನ್ ಅಂಗಡಿಗಳಿಗಿಂತ ದುಬಾರಿಯೇನಲ್ಲ. ತೆರಿಗೆ, ಪಾರ್ಸಲ್ ಖರ್ಚು ಎಲ್ಲ ಸೇರಿಯೂ ಭಾರತದ ಅಂಗಡಿಯ ಬೆಲೆಗಿಂತಲೂ ಕಡಿಮೆ ಬೆಲೆಗೆ ನೀವು ಕೆಲವು ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇರುತ್ತದೆ! ಬೆಂಗಳೂರಿನ ಇಟ್ಟಿಗೆ ಗಾರೆ ಅಂಗಡಿಗೆ ಹೋಗಿದ್ದಿದ್ದರೆ ಅದೇ ವಾಚ್‌ಗೆ ಸುಮಾರು ರೂ 2,500 ಹೆಚ್ಚು ತೆರುತ್ತಿದ್ದೆ.

ವಾಲ್ ಸ್ಟ್ರೀಟ್ ಜರ್ನಲ್ ಒಂದು ಕುತೂಹಲಕಾರಿ ವರದಿಯನ್ನು ಪ್ರಕಟಿಸಿದೆ. ವಾಲ್ ಮಾರ್ಟ್‌ನಂಥ ಅಮೆರಿಕದ ದೊಡ್ಡ ಅಂಗಡಿಗಳು ಆನ್ ಲೈನ್ ಪೈಪೋಟಿಯಿಂದ ಬೇಸತ್ತು ಒಂದು ತಂತ್ರವನ್ನು ರೂಪಿಸಿವೆ.

 ಅದೇನೆಂದರೆ: ನೀವು ಅಲ್ಲಿ ಕೊಳ್ಳುವ ವಸ್ತು ಯಾವುದಾದರೂ ವೆಬ್‌ಸೈಟ್‌ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ನೀವು ಸಾಬೀತು ಪಡಿಸಿದರೆ ನಿಮಗೆ ಅದೇ ಬೆಲೆಗೆ ವಸ್ತುವನ್ನು ಮಾರಲು ತಯಾರಿವೆ.

~ಶೋರೂಮಿಂಗ್~, ಅಂದರೆ ಇಟ್ಟಿಗೆ-ಗಾರೆಯ ಅಂಗಡಿಯಲ್ಲಿ ವಸ್ತುವನ್ನು ನೋಡಿ ನಂತರ ರಿಯಾಯಿತಿ ಬೆಲೆಗೆ ಆನ್‌ಲೈನ್ ಅಂಗಡಿಯಲ್ಲಿ ಕೊಳ್ಳುವ ಪರಿಪಾಠ, ಹೆಚ್ಚಾಗಿರುವುದರಿಂದ ಈ ತಂತ್ರವನ್ನು ರೂಪಿಸಿದ್ದಾರಂತೆ. ಇದು ಎಷ್ಟು ಅನನುಕೂಲ, ಕಿತ್ತಾಟಕ್ಕೆ ಎಡೆ ಮಾಡಿ ಕೊಡಬಹುದು ಎಂದು ಪತ್ರಿಕೆ ಯೋಚಿಸುತ್ತಿದೆ.

ದೊಡ್ಡ ಕ್ಯೂನಲ್ಲಿ ನಿಂತು ನೀವು 20 ಐಟಂಗೆ ಒಂದೊಂದೇ ಆನ್‌ಲೈನ್ ಬೆಲೆ ನಿಮ್ಮ ಮೊಬೈಲ್‌ನಲ್ಲಿ ತೋರಿಸುತ್ತಾ ನಿಂತರೆ ನಿಮ್ಮ ಹಿಂದೆ ಕಾಯುತ್ತಿರುವವರಿಗೆ ಎಷ್ಟು ಸಿಟ್ಟು ಬರಬಹುದು ಊಹಿಸಿ!

ನನ್ನ ವಾಚ್ ಕಥೆ ಆದ ಕೆಲವು ದಿನಗಳಲ್ಲೇ ಬ್ರಿಗೇಡ್ ರೋಡ್‌ಗೆ ಹೋಗಿ ಒಂದು ಸೋನಿ ಟ್ರಾನ್ಸಿಸ್ಟರ್ ರೇಡಿಯೊ ಕೊಂಡೆ. ಅದರ ಬೆಲೆ ಸುಮಾರು ರೂ 1,200. ಮನೆಗೆ ಹೋಗಿ ಅಮೆಜಾನ್‌ನಲ್ಲಿ ನೋಡಿದರೆ ಅಲ್ಲಿಯ ಬೆಲೆ ಸುಮಾರು ರೂ 800 ಹೆಚ್ಚು.

ಮತ್ತೊಂದು ಪಾಠ: ಆನ್‌ಲೈನ್ ಖರೀದಿಗಿಂತ ಮಾಮೂಲಿ ಅಂಗಡಿಯೇ ಕೆಲವು ಸಾರ್ತಿ ಮೇಲು. ಬೆಲೆಯೂ ಕಡಿಮೆ ಮತ್ತು ವಸ್ತು ನಿಮಗೆ ಕೂಡಲೇ ಕೈಗೆ ಸಿಗುತ್ತದೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT