ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶೋಧದ ಟಿಪ್ಪಣಿಗಳು

ಬ್ಲಾಗಿಲನು ತೆರೆದು...
Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ವಿಷ್ಣುಪ್ರಿಯ ಅವರಿಗೆ ವಿಜ್ಞಾನದಲ್ಲಿ ಅತೀವ ಆಸಕ್ತಿ. ವಿಜ್ಞಾನದಷ್ಟೇ ವೇದಗಳ ಬಗ್ಗೆಯೂ ವಿಶೇಷ ಪ್ರೀತಿ. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಶೋಧಗಳನ್ನು ಗಮನಿಸಿದಾಗ, ಇದರ ಉಲ್ಲೇಖ ನಮ್ಮ ವೇದಗಳಲ್ಲಿ ಇದೆಯಲ್ಲ ಎಂದು ಅವರಿಗೆ ಅನ್ನಿಸಿದೆಯಂತೆ. ಈ ಕುತೂಹಲದಿಂದಲೇ ಅವರು ವೇದ ಮತ್ತು ವಿಜ್ಞಾನದ ಬೆನ್ನುಹತ್ತಿದ್ದಾರೆ. ಅಂದಹಾಗೆ, ಪ್ರಕಾಶ್ ಎನ್ನುವುದು ಇವರ ನಿಜ ನಾಮ. `ವಿಷ್ಣುಪ್ರಿಯ' ಎನ್ನುವುದನ್ನು `ವಿಜ್ಞಾನ ನಾಮ' ಎಂದು ತಮಾಷೆಗೆ ಕರೆಯಬಹುದು.

ವಿಷ್ಣುಪ್ರಿಯರ ವೇದ-ವಿಜ್ಞಾನದ ತಾಳೆಯ ವಿಷಯ ಚರ್ಚಾಸ್ಪದ. ಆದರೆ, ಅವರ ವಿಜ್ಞಾನದ ಪ್ರೀತಿ ಮಾತ್ರ ಮೆಚ್ಚುಗೆಗೆ ಅರ್ಹ. ಅವರ ಈ ಪ್ರೀತಿ `ವಿಜ್ಞಾನಗಂಗೆ' ಬ್ಲಾಗ್‌ನಲ್ಲಿ www.vijnanagange.blogspot.in   ಸ್ಪಷ್ಟವಾಗಿ ಕಾಣಿಸುತ್ತದೆ.

ವೈಜ್ಞಾನಿಕ ಕ್ಷೇತ್ರದಲ್ಲಿ ನಡೆದ, ನಡೆಯುತ್ತಿರುವ ಹೊಸ ಶೋಧಗಳ ಕುರಿತಾದ ಮಾಹಿತಿ ತುಣುಕುಗಳು ಈ ಬ್ಲಾಗ್‌ನಲ್ಲಿವೆ.

ಸಾಮಾನ್ಯವಾಗಿ ಇಂಥ ಮಾಹಿತಿ ಇಂಗ್ಲಿಷ್‌ನಲ್ಲಿರುತ್ತದೆ. ಹಾಗಾಗಿ ಕನ್ನಡವನ್ನಷ್ಟೇ ಬಲ್ಲವರಿಂದ ಇವು ದೂರವಾಗಿ ಉಳಿಯುತ್ತವೆ. ಈ ದೃಷ್ಟಿಯಿಂದ ವಿಷ್ಣುಪ್ರಿಯ ಅವರ ಟಿಪ್ಪಣಿಗಳಿಗೆ ಮಹತ್ವವಿದೆ.

`ವಿಜ್ಞಾನಗಂಗೆ'ಯಲ್ಲಿ ಬ್ಲಾಗಿಗರು ಅಲ್ಲಿಂದ ಇಲ್ಲಿಂದ ಹೆಕ್ಕಿ ಕನ್ನಡಿಸಿದ ಬರಹಗಳ ಜೊತೆಗೆ, ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳೂ ಸಂಕಲನಗೊಂಡಿವೆ. ವಿಜ್ಞಾನದ ಮಾಹಿತಿ ಎಲ್ಲಿಂದಲಾದರೂ ಬರಲಿ, ಓದುಗರಿಗೆ ತಲುಪಲಿ ಎನ್ನುವ ಆಶಯ ಅವರದು. ಈ

ಬ್ಲಾಗ್ ಬರಹದ ಒಂದು ತುಣುಕು ನೋಡಿ:

“ಅದ್ಯಾವ ಪುಣ್ಯಾತ್ಮ ಪ್ಲಾಸ್ಟಿಕ್ ಕಂಡು ಹಿಡಿದ್ನೋ (ಅಲೆಕ್ಸಾಂಡರ್ ಪಾರ್ಕ್ಸ್, 1862ರಲ್ಲಿ ಪ್ಲಾಸ್ಟಿಕ್ ಅನ್ನೋ ಪಾಲಿಇಥಿಲೀನ್ ಅನ್ನು ಜಗತ್ತಿಗೆ ಪರಿಚಯಿಸಿದ್ದ) ಮನೆ ಮುಂದೆ ಎಲ್ಲ ಪ್ಲಾಸ್ಟಿಕ್... ಪ್ಲಾಸ್ಟಿಕ್! ಇಂಥದ್ದೊಂದು ಬಯ್ಗುಳ ಪರಿಸರ ಪ್ರಿಯರ ಬಾಯಿಯಿಂದ ಖಂಡಿತ ಕೇಳಿರುತ್ತೀರಿ. ಪರಿಸರ ರಕ್ಷಣೆಯ ಬಗ್ಗೆ ಮಾತುಗಳು ಚುರುಕು ಪಡೆದಿರುವ ಈ ಸಮಯದಲ್ಲಿ ಜಗತ್ತಿನ ಉದ್ದಗಲಕ್ಕೂ ಪ್ಲಾಸ್ಟಿಕ್ ವಿರೋಧಿ ಮಾತುಗಳೇ ಕಿವಿಗಪ್ಪಳಿಸುತ್ತಿವೆ. ಇಂಥ ಸಂದರ್ಭದಲ್ಲಿ ಪ್ಲಾಸ್ಟಿಕ್ ವಿರೋಧಿಗಳ ಮತ್ತು ಪರಿಸರ ಪ್ರೇಮಿಗಳ ಮನಸಿಗೆ ಹಿತವಾಗುವ ಒಂದು ಸಂದೇಶ ಅಮೆರಿಕದಿಂದ ಬಂದಿದೆ. ಇಲ್ಲಿನ ಯಾಲೆ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಅಮೆಜಾನ್ ಕಾಡಿನಲ್ಲಿ ಪ್ಲಾಸ್ಟಿಕ್ ತಿನ್ನುವಂಥ ಫಂಗಸ್ ಇರುವುದನ್ನು ಪತ್ತೆ ಮಾಡಿದ್ದಾರೆ.

ಪೆಟ್ರೋಲಿಯಂ ಉತ್ಪನ್ನವಾಗಿರುವ ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆತು ಹೋಗುವುದಿಲ್ಲ. ವಿಭಜನೆಗೊಳ್ಳುವುದೂ ಇಲ್ಲ. ಸಾಧಾರಣ ಫಂಗಸ್, ಬ್ಯಾಕ್ಟೀರಿಯಾಗಳು ಪ್ಲಾಸ್ಟಿಕ್ ಸುದ್ದಿಗೆ ಹೋಗುವುದಿಲ್ಲ. ಆದರೆ ಅಮೆಜಾನ್ ಮಳೆಕಾಡಿನಲ್ಲಿ ಒಂದು ಬಗೆಯ ಫಂಗಸ್ ಇದೆ. ಇದು ಪರಾವಲಂಬಿ ಜೀವಿಯಾಗಿದ್ದು, ಸಸ್ಯಗಳ ಒಳಗೇ, ಅವುಗಳಿಗೆ ಹೆಚ್ಚು ಹೆಚ್ಚು ಹಾನಿಯಾಗದಂತೆ ಜೀವಿಸುತ್ತದೆ. ಈ ಫಂಗಸ್ ಪ್ಲಾಸ್ಟಿಕ್ ಭುಂಜಿಸುತ್ತದೆ ಎನ್ನುತ್ತಿದ್ದಾರೆ ಯಾಲೆ ಯೂನಿವರ್ಸಿಟಿಯ ವಿದ್ಯಾರ್ಥಿಗಳು. ಇದಕ್ಕೆ ಎಂಥದ್ದೇ ಕಠಿಣ ಸಂಯುಕ್ತವನ್ನೇ ಆದರೂ ಭೇದಿಸಿ ಛಿದ್ರಗೊಳಿಸುವ ಸಾಮರ್ಥ್ಯ ಇರುವುದರಿಂದಾಗಿ ಇದು ಸಾಧ್ಯವಾಗಿದೆ ಎನ್ನುತ್ತಾರೆ ಅವರು. ಇವುಗಳನ್ನು ಬೆಳೆಸಿದರೆ ನಮ್ಮ ಪರಿಸರದಿಂದ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದಕ್ಕೆ ಸಹಕಾರಿಯಾಗಬಹುದೇ ಎಂಬ ಚಿಂತನೆ ಈಗ ವೈಜ್ಞಾನಿಕ ವಲಯದಲ್ಲಿ ಮೊಳಕೆಯೊಡೆದಿದೆ”.

ಸ್ವಾರಸ್ಯಕರ ಸಂಗತಿಗಳಿಗೂ ಬ್ಲಾಗ್‌ನಲ್ಲಿ ಅವಕಾಶವಿದೆ. 23 ಮೈಲಿ ಎತ್ತರದಿಂದ ದಾಖಲೆಯ ಜಿಗಿತ, ಸಹರಾ ಮರುಭೂಮಿಯಲ್ಲೊಂದು ಓಯಸಿಸ್, ಭೂತಟ್ಟೆಗಳಿಗೂ ಒಂದು ಲೂಬ್ರಿಕೆಂಟ್, ಶನಿಯಲ್ಲೊಂದು ಮ್ಯಾಜಿಕ್ ವಾತಾವರಣ- ಈ ಶೀರ್ಷಿಕೆಗಳೇ ಬರಹಗಳ ಬಗ್ಗೆ ಕುತೂಹಲ ಹುಟ್ಟಿಸುವಂತಿವೆ. `ಸೋಲಾರನ್ನು ಪೇಂಟ್ ಮಾಡಿ' ಎನ್ನುವ ಒಂದು ಬರಹದ ತುಣುಕು ನೋಡಿ:

“ಸೌರಕೋಶಗಳನ್ನು ದ್ರವರೂಪಕ್ಕೆ ಇಳಿಸಿದ್ದಾರೆ ವಿಜ್ಞಾನಿಗಳು. ಈ ದ್ರವರೂಪದ ಸೌರಕೋಶಗಳನ್ನು ಮನೆ ಗೋಡೆಗೆ, ಛಾವಣಿಗೆ ಪೇಂಟ್ ಮಾಡಿದ್ರಾಯ್ತು. ಬೇಸಗೆ ಬಂತೆಂದ್ರೆ ಸಾಕು, ಪವರ್ ಕಟ್, ಲೋಡ್ ಶೆಡ್ಡಿಂಗ್, ಲೋ ವೋಲ್ಟೇಜ್... ಶಿವನಸಮುದ್ರದಲ್ಲಿ ನೀರಿಲ್ಲ, ವಿದ್ಯುತ್ ಖರೀದಿ ಸಾಮರ್ಥ್ಯ ನಮ್ಮಲ್ಲಿಲ್ಲ. ಕರೆಂಟ್ ಇಲ್ದೇ ಇರೋದನ್ನು ಸ್ವಲ್ಪ ಅಭ್ಯಾಸ ಮಾಡ್ಕೊಳ್ಳಿ... ಅನ್ನೋ ಧಾಟಿಯನ್ನೇ ಪ್ರತಿಧ್ವನಿಸುವಂತೆ ಕಣ್ಣಾಮುಚ್ಚಾಲೆಯಾಡುವ ಕರೆಂಟ್‌ಗೆ ಅದೆಷ್ಟು ಶಾಪ ಹಾಕ್ತೀವೋ ಗೊತ್ತಿಲ್ಲ. ಅಟ್‌ಲೀಸ್ಟ್ ಬೆಳಕಾದ್ರೂ ಇರಲಿ ಅಂತ ಸೋಲಾರ್ ಹಾಕ್ಸೋಣ ಅಂದ್ಕೊಂಡ್ರೆ ಅದ್ರಲ್ಲಿ ಬರೋ ಬೆಳಕು ಸಾಲೋದೇ ಇಲ್ಲ. ಇನ್ನು ಮಿಕ್ಸಿ, ಗ್ರೈಂಡರ್, ಟಿವಿ, ಫ್ಯಾನು... ಎಲ್ಲ ಕೆಲ್ಸ ಮಾಡಬೇಕಾದರೆ ಮನೆ ಛಾವಣಿಯುದ್ದಕ್ಕೂ ಸೋಲಾರ್ ಪ್ಯಾನಲ್‌ಗಳನ್ನು ಹಾಕಿಸಬೇಕಾಗಿ ಬರುತ್ತೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯೋದೇ ಇಲ್ಲ ಅಂತ ಚಿಂತೆ! ಆದರೆ ವಿಜ್ಞಾನಿಗಳು ಈ ಚಿಂತೆಗೆ ಪರಿಹಾರ ಕಂಡುಕೊಳ್ಳುವ ಮಹತ್ತರ ಸಂಶೋಧನೆ ಮಾಡಿದ್ದಾರೆ...”.

ಹರಟೆ, ನೆನಪು, ನವಿರು ಬರಹಗಳಿಗೆ `ವಿಜ್ಞಾನಗಂಗೆ' ಬ್ಲಾಗ್ ಹೊರತಾದುದು. ಜನಪ್ರಿಯ ವಿಜ್ಞಾನದ ಜೊತೆಗೆ ಸಂಕೀರ್ಣ ವಿಜ್ಞಾನವನ್ನೂ ಒಳಗೊಂಡರೆ ಈ ಬ್ಲಾಗ್‌ನ ರುಚಿ ಮತ್ತಷ್ಟು ಹೆಚ್ಚಬಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT