ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಮಾಜ ನಿರ್ಮಿಸಲು ಕಾಲ ಪಕ್ವ

Last Updated 24 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಶಿವಮೊಗ್ಗ:  ಹೊಸ ಸಮಾಜ ಕಟ್ಟಲು ಕಾಲ ಪಕ್ವವಾಗಿದ್ದು, ಎರಡೂ ರೈತ ಬಣಗಳು ಒಟ್ಟಾಗಿ ಹೋರಾಟದ ರೂಪುರೇಷೆ ಹಾಕಬೇಕಾಗಿದೆ ಎಂದು ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನದ ಪಚ್ಚೆ ನಂಜುಂಡಸ್ವಾಮಿ ಪ್ರತಿಪಾದಿಸಿದರು. ನಗರದ ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯಶೀಲ ಬಳಗ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ರೈತ ಚೇತನ-2’ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪುಸ್ತಕ ಬಿಡುಗಡೆ ಮತ್ತು ‘ಎಂಡಿಎನ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಳವಳಿ ಎನ್ನುವುದು ಮಗುವಿನಂತೆ. ಬೆಳೆಯುವ ಹಂತದಲ್ಲಿ ಎಡವುತ್ತದೆ. ಅದೇ ರೀತಿ, ರೈತ ಚಳವಳಿ ಕೂಡ ಎಡವಿದೆ, ನೋವು ಅನುಭವಿಸಿದೆ. ಆದರೆ, ಈಗ ಪಕ್ವವಾದ ಕಾಲಘಟ್ಟದಲ್ಲಿದ್ದು, ಪ್ರೌಢಿಮೆ ಬೆಳೆದಿದೆ. ಎರಡೆರಡು ರೈತ ಬಣಗಳು ಬೇಡ. ವ್ಯತ್ಯಾಸಗಳನ್ನು ಕೂತು ಚರ್ಚಿಸಿ, ಬಗೆಹರಿಸಿಕೊಂಡರೆ ಮತ್ತೊಂದು ಸಮಾಜ ಕಟ್ಟಬಹುದು. ಆದ್ದರಿಂದ ರೈತ ಬಣಗಳು ಒಟ್ಟಾಗಬೇಕಿದೆ ಎಂದು ತಿಳಿಸಿದರು.

ಯುವಕರು ಇಂದು ರೈತ ಚಳವಳಿಯಿಂದ ದೂರ ಉಳಿಯುತ್ತಿದ್ದಾರೆ. ಬದುಕು ಕಟ್ಟಿಕೊಳ್ಳುವ ಸ್ವಾರ್ಥ, ಕಿರುತೆರೆಯ ಭರಾಟೆ ಮತ್ತಿತರ ಕಾರಣಗಳಿಂದ ಮರೆಯಾಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಸಮಾಜದ ಧ್ವನಿಯಾಗಿರುವ ಪೂರ್ವಜರು ಸಮಾಜದ ಪ್ರಮುಖ ಅಂಗಗಳಾಗಿದ್ದಾರೆ. ಅವರೆಲ್ಲರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಸಮಾಜದ ಧ್ವನಿಯಾಗಿದ್ದಂತಹ ಸಾಧಕ ಪ್ರತಿ ಕ್ಷೇತ್ರದ ವ್ಯಕ್ತಿಗೂ ತಲುಪುತ್ತಾನೆ. ಹಾಗಾಗಿ, ನಂಜುಂಡಸ್ವಾಮಿ ಅವರ ಕುರಿತ ‘ವಿಶ್ವ ರೈತ ಚೇತನ-2’ ಪುಸ್ತಕ ಬಿಡುಗಡೆಗೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಅದೇ ರೀತಿ, ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ಇರಲಿಲ್ಲ ಎಂದು ಕಡಿದಾಳು ಶಾಮಣ್ಣ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದರು. 

ಹೋರಾಟ ಅಗತ್ಯ
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹೋರಾಟಗಳು ಸಾಂಕೇತಿಕವಾದರೆ ಅರ್ಥ ಕಳೆದುಕೊಳ್ಳುತ್ತವೆ. ವ್ಯಾಪಕ ಹೋರಾಟಗಳಾದರೆ ಮಾತ್ರ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ನಂಜುಂಡಸ್ವಾಮಿ ಅವರ ಚಿಂತನೆ ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

‘ವಿಶ್ವ ರೈತ ಚೇತನ-2’ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ಹೋರಾಟಗಾರರು ರಾಜಕೀಯ ಹುದ್ದೆಗಳಿಗೆ ಹೋಗಲು ಅಭ್ಯಂತರವಿಲ್ಲ; ಆದರೆ, ಅಧಿಕಾರಕ್ಕೆ ಹೋದ ಮೇಲೆ ರೈತರ ಭಾವನೆಗಳಿಗೆ ಸ್ಪಂದಿಸಿ, ಕೆಲಸ ಮಾಡಬೇಕು ಎಂದರು.

ಗುಟ್ಕಾ ಪ್ಲಾಸ್ಟಿಕ್ ಪ್ಯಾಕೆಟ್ ನಿಷೇಧಕ್ಕೆ ಆಕ್ಷೇಪವಿಲ್ಲ. ಆದರೆ, ಕೆಲ ತಿಂಗಳು ಕಾಲಾವಕಾಶ ನೀಡಿದರೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು.ಆದೇಶ ಹೊರಡಿಸುವ ಮುನ್ನ ಆ ಭಾಗದ ಜನಕ್ಕೆ ಯಾವ ರೀತಿ ತೊಂದರೆಯಾಗಬಹುದು ಎಂಬ ಬಗ್ಗೆಯೂ ಸರ್ಕಾರ ಯೋಚಿಸಬೇಕು ಎಂದು ಸೂಚ್ಯವಾಗಿ ಹೇಳಿದರು.

ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷೆ ಶಾರದಾ ಪೂರ್ಯನಾಯ್ಕ, ತಾ.ಪಂ. ಅಧ್ಯಕ್ಷ ಕೆ.ಬಿ. ಚಂದ್ರಶೇಖರಪ್ಪ, ಡಿಎಸ್‌ಎಸ್ ಸಂಚಾಲಕ ಎಂ. ಗುರುಮೂರ್ತಿ, ಕಾಂಗ್ರೆಸ್ ಮುಖಂಡ ವೈ.ಎಚ್. ನಾಗರಾಜ್, ಉಮಾಪತಿಯಪ್ಪ, ಎಸ್.ಕೆ. ಗಜೇಂದ್ರ ಸ್ವಾಮಿ, ಕೆ. ಬೆನಕಪ್ಪ, ಹಿಟ್ಟೂರು ರಾಜು ಉಪಸ್ಥಿತರಿದ್ದರು.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷೆ ಕೆ.ಬಿ. ಪವಿತ್ರಾ ರಾಮಯ್ಯ, ರೈತ ಮುಖಂಡರಾದ ಕಡಿದಾಳು ಶಾಮಣ್ಣ, ಯಶವಂತರಾವ್ ಘೋರ್ಪಡೆ, ರವಿಗೌಡ, ಕಾಚಿನಕಟ್ಟೆ ಪುಟ್ಟಪ್ಪ, ಪಾಂಡುರಂಗ, ಷಣ್ಮುಖಪ್ಪ ಅವರಿಗೆ ಇದೇ ಸಂದರ್ಭದಲ್ಲಿ ‘ಎಂಡಿಎನ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT