ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸೌರ ಮಂಡಲದ ಮೊದಲ ಮಾದರಿ

Last Updated 4 ಜನವರಿ 2011, 13:40 IST
ಅಕ್ಷರ ಗಾತ್ರ

ದಕ್ಷಿಣ ಆಕಾಶದಲ್ಲಿ ಕಾಣುವ ಪ್ರಖರ ನಕ್ಷತ್ರಗಳಲ್ಲಿ ಎರಡನೆಯದು ‘ಅಗಸ್ತ್ಯ’ (ಕೆನೋಪಸ್). ಇದಕ್ಕೆ ಕೆಲವೇ ಡಿಗ್ರಿಗಳಷ್ಟು ಪಶ್ಚಿಮಕ್ಕೆ ಇರುವ ಇನ್ನೊಂದು ನಕ್ಷತ್ರ ‘ಪಿಕ್ಟೋರಿಸ್’ (ಚಿತ್ರ ಫಲಕ) ಎಂಬ ನಕ್ಷತ್ರ ಪುಂಜಕ್ಕೆ ಸೇರಿದ್ದು. ಅದರಲ್ಲಿ ಪ್ರಕಾಶದಲ್ಲಿ ಎರಡನೆಯ ಸ್ಥಾನ ಪಡೆದ ಕಾರಣ ಇದಕ್ಕೆ ‘ಬೀಟಾ ಪಿಕ್ಟೋರಿಸ್’ ಎಂದೇ ಹೆಸರು. ದಕ್ಷಿಣದಲ್ಲಿ ಇರುವುದರಿಂದ ಕಳೆದ ಎರಡು ಶತಮಾನಗಳಿಂದ ಮಾತ್ರ ವೀಕ್ಷಕರನ್ನು ಆಕರ್ಷಿಸಿದೆ.  8000 ಕೆಲ್ವಿನ್ ತಾಪಮಾನದ ನೀಲಿ ನಕ್ಷತ್ರ; ಸೂರ್ಯನಿಗೆ ಹೋಲಿಸಿದರೆ ಧಾತುಗಳ ಪ್ರಮಾಣ ತುಸು ಹೆಚ್ಚು ಎನ್ನಬಹುದು. ಸುಮಾರು 30-40 ನಿಮಿಷಗಳಲ್ಲಿ ಬೆಳಕಿನಲ್ಲಿ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಲಾಗಿದೆ. ‘ಡೆಲ್ಟಾ ಸ್ಕುಟಿ’ ಎಂಬ ಚಂಚಲ ನಕ್ಷತ್ರಗಳ ವರ್ಗಕ್ಕೆ ಸೇರಿದೆ.

1983ರಲ್ಲಿ ಈ ನಕ್ಷತ್ರ ಇದ್ದಕ್ಕಿದ್ದಂತೆ ಪ್ರಾಮುಖ್ಯ ಪಡೆಯಿತು.ಆಗ ಹಾರಿಬಿಟ್ಟ ಐರಸ್ (ಇನ್ಫ್ರಾರೆಡ್ ಅಸ್ಟ್ರಾನಮಿ ಸೆಟಲೈಟ್) ಎಂಬ ನೌಕೆ ಈ ನಕ್ಷತ್ರದಿಂದ ಅವಕೆಂಪು ಕಿರಣಗಳು ಹೆಚ್ಚಾಗಿ ಬರುತ್ತಿರುವುದನ್ನು ತೋರಿಸಿತು. ಅಲ್ಲದೆ ನಕ್ಷತ್ರದ ಸುತ್ತ ದೂಳಿನ ತಟ್ಟೆ ಹರಡಿಕೊಂಡಿರುವುದನ್ನೂ ತೋರಿಸಿತು. ಇದು ನಕ್ಷತ್ರಗಳ ಅಧ್ಯಯನದಲ್ಲಿ ಒಂದು ಮುಖ್ಯ ತಿರುವನ್ನೇ ತಂದುಕೊಟ್ಟಿತು. ಗ್ರಹಗಳು ರೂಪಿತವಾಗುವ ದೂಳಿನ ತಟ್ಟೆ ಇದು ಎಂಬುದೇ ಇದಕ್ಕೆ ಕಾರಣ. ಮುಂದೆ ಈ ನಕ್ಷತ್ರ ತೀವ್ರ ಅಧ್ಯಯನಕ್ಕೆ ಒಳಪಟ್ಟಿತು. ‘ಹಿಪಾರ್ಕೊಸ್’ ಎಂಬ ಇನ್ನೊಂದು ಬಾಹ್ಯಾಕಾಶ ನೌಕೆ ಇದರ ದೂರ ವೇಗ ಇತ್ಯಾದಿಗಳನ್ನೆಲ್ಲಾ ನಿಖರವಾಗಿ ತಿಳಿಸಿತು.

ದ್ರವ್ಯರಾಶಿ ಸೂರ್ಯನ 1.8ರಷ್ಟು. ವ್ಯಾಸವೂ ಸೂರ್ಯನ 1.8 ರಷ್ಟು. ಇದರಲ್ಲಿರುವ ಭಾರದ ಧಾತುಗಳ ಸೂರ್ಯನಿಗಿಂತ ಹೆಚ್ಚು. ಈ ಎಲ್ಲ ಕಾರಣಗಳನ್ನು ಒಟ್ಟು ಗೂಡಿಸಿ ಇದರ ಹುಟ್ಟಿನ ವಿವರಗಳನ್ನು ಲೆಕ್ಕ ಹಾಕಬಹುದು.

ಇನ್ನೂ ಹತ್ತಿಪ್ಪತ್ತು ನಕ್ಷತ್ರಗಳೊಡನೆ ಇದು ರಚಿತವಾಯಿತು. ಎಲ್ಲವೂ ರಚಿತವಾಗಲು ಒಂದು ಸೂಪರ್ ನೋವಾ ಸಿಡಿದದ್ದೇ ಕಾರಣ. ಆ ಸೂಪರ್ ನೋವಾವನ್ನು ಗುರುತಿಸುವುದೂ ಸಾಧ್ಯವಾಗಿದೆ. ಸುಮಾರು 10 ದಶಲಕ್ಷ  ವರ್ಷಗಳ ಹಿಂದೆ ನಡೆದ ಈ ಘಟನೆಯಿಂದ ನಕ್ಷತ್ರ ರಚನೆಯೇನೋ ಸಾಧ್ಯವಾಯಿತು. ಜೊತೆಗೆ ಈ ಎಲ ್ಲನಕ್ಷತ್ರಗಳೂ ದೂರ ದೂರಕ್ಕೆ ಸರಿಯತೊಡಗಿದವು. ಸೂಪರ್ ನೋವಾ ಸಂಗಾತಿಯಾಗಿದ್ದ ಇನ್ನೊಂದು ನಕ್ಷತ್ರ ಅತಿ ವೇಗ ಪಡೆದು ಧಾವಿಸುತ್ತಿದೆ. ಈ ಎಲ್ಲ ನಕ್ಷತ್ರಗಳು ಗುಚ್ಛದಂತೆ ಕಾಣುತ್ತಿಲ್ಲ. ಆದರೆ ಈ ವೇಗಗಳ ಅಳತೆಯ ಆಧಾರದ ಮೇಲೆ ಇವನ್ನು ‘ಬೀಟಾ ಪಿಕ್ಟೊರಿಸ್ ಚಾಲಿತ ಗುಂಪು’ (ಮೂವಿಂಗ್ ಗ್ರೂಪ್) ಎಂದೇ ಕರೆಯಲಾಗುತ್ತಿದೆ. 

ಡಾಪ್ಲರ್  ತತ್ವದ ಆಧಾರದ ಮೇಲೆ ಆವರ್ತನಾವಧಿಯನ್ನು ಲೆಕ್ಕ ಮಾಡಿ ತಿಳಿಯಲಾಗಿದೆ. ಸುಮಾರು 609 ಗಂಟೆಗಳು - ಅಂದರೆ 16 ಗಂಟೆಗಳು - ಸೂರ್ಯನದು 25 ದಿನಗಳು ಎಂಬುದಕ್ಕೆ ಹೋಲಿಸಿದರೆ ಬಹಳ ವೇಗವಾಗಿ ತಿರುಗುತ್ತಿದೆ ಎನ್ನಬಹುದು. ದೂಳಿನ ತಟ್ಟೆಯಲ್ಲಿ ಗ್ರಹಗಳು ರಚಿತವಾಗುವುವೇ? ಆಗ ಆವರ್ತನೆಯ ವೇಗ ಕಡಿಮೆಯಾಗಬಹುದೇ? ಈ ಎಲ ್ಲಪ್ರಶ್ನೆಗಳಿಗೆ ಇದು ಬಹುಶಃ ಉತ್ತರ ಒದಗಿಬಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT