ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹಾಡು, ಹಳೆ ಗೀಳು

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಬೃಹತ್ ವೇದಿಕೆ ಅದು. ಅಕ್ಕ ಪಕ್ಕದಲ್ಲಿ ವಾದ್ಯಗಳ ಮೇಳ. ತುಸು ದೂರದಲ್ಲೇ ಕುಳಿತ ನಿರ್ಣಾಯಕರು. ಕಣ್ಣರಳಿಸಿ ಸ್ಪರ್ಧಿಗಳ ಹಾಡಲ್ಲಿ ಒಂದಾಗಲು ಕಾತರಿಸುತ್ತಿರುವ ನೂರಾರು ಮುಖಗಳು.ವೇದಿಕೆಯ ಹಿಂಭಾಗದಲ್ಲಿ ಒಮ್ಮೆ ನೀರು ಕುಡಿಯುತ್ತಾ, ಇನ್ನೊಮ್ಮೆ ಪ್ರಸ್ತುತಪಡಿಸಬೇಕಿರುವ ಹಾಡನ್ನು ಗುನುಗುತ್ತಾ, ಬೆವರುವ ಮುಖವನ್ನು ಒರೆಸಿಕೊಳ್ಳುತ್ತಾ, ಮೇಲೆ ನೋಡುತ್ತಾ ದೇವರೇ ಕಾಪಾಡು ಎನ್ನುವಂಥ ಭಾವ ಹೊರಹೊಮ್ಮಿಸುತ್ತ ಕುಳಿತಿದ್ದ ಸ್ಪರ್ಧಿಗಳು.

`ವಾಯ್ಸ ಆಫ್ ಬೆಂಗಳೂರು ಪಟ್ಟ ನನಗೇ ಒಲಿಯಲಿ' ಎಂದು ಬೇಡುತ್ತಿದ್ದ ಆ ಮುಖಗಳಲ್ಲಿನ ಕಾತರ, ಆ ಹಂತ ತಲುಪಿದ ಹೆಮ್ಮೆ ನೋಡುಗರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿತ್ತು.ನಗರದ ಗರುಡಾ ಮಾಲ್‌ನಲ್ಲಿ ಇತ್ತೀಚೆಗೆ ನಡೆದ `ವಾಯ್ಸ ಆಫ್ ಬೆಂಗಳೂರು ಸೀಜನ್-6'ರ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಹಾಜರಿದ್ದವರ ಮನಸ್ಸಿನ ಭಾವಗಳಿವು.

ಮೂಲತಃ ಕೇರಳದವರಾಗಿ `ಎಲ್ ಅಂಡ್ ಟಿ'ಯಂಥ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಜಿನ್ಶಾ ಸಂಗೀತ ಪ್ರೇಮಿ. ಒಂದೇ ರೀತಿಯ ಬದುಕಿನ ಶೈಲಿಗೆ ಬೇಸತ್ತು ಕುಳಿತಾಗ `ವಾಯ್ಸ ಆಫ್ ಬೆಂಗಳೂರು' ಕಾರ್ಯಕ್ರಮದಲ್ಲಿ ಅವಕಾಶ ದೊರೆತಿದೆ. ಈಗ ಸೆಮಿಫೈನಲ್‌ನಲ್ಲೂ ಆಯ್ಕೆಯಾದ ಖುಷಿ ಅವರದ್ದು. ಕನ್ನಡವನ್ನು ಕಲಿಯದಿದ್ದರೂ `ಭುವನೇಶ್ವರಿಯ ನೆನೆ ಮಾನಸವೆ' ಹಾಡನ್ನು ಅತ್ಯಂತ ಶ್ರದ್ಧೆಯಿಂದ ಪ್ರಸ್ತುತಪಡಿಸಿದರು

. `ಮೆಹಬೂಬ್ ಮೇರೆ' ಹಾಡುವ ಹೊತ್ತಿಗೆ ಕುಳಿತವರೆಲ್ಲರ ಮನಸ್ಸು ಸಂಗೀತದಲ್ಲಿ ಒಂದಾಗಿಯಾಗಿತ್ತು. ತುಸು ಆತಂಕದಲ್ಲೇ ವೇದಿಕೆ ಹತ್ತಿದ್ದ ಜಿನ್ಶಾ ಹಾಡುವಾಗ ಅವರ ಮುಖದಲ್ಲಿ ಆತ್ಮವಿಶ್ವಾಸದ ಚಿಲುಮೆ. ಮೊದಲನೆ ಸ್ಪರ್ಧಿಯಾಗಿ ಬಂದ ಅವರು ಇಡೀ ಕಾರ್ಯಕ್ರಮಕ್ಕೆ ಲವಲವಿಕೆಯ ಚುಚ್ಚುಮದ್ದು ಕೊಟ್ಟರು. ಅಲ್ಲಿಯವರೆಗೆ ಗೆಳತಿಯ ಹೆಗಲ ಮೇಲೆ ಕೈಯಿಟ್ಟು ಗರುಡಾ ಮಾಲ್ ಸುತ್ತುತ್ತಿದ್ದವರು ಹಾಡಿನತ್ತ ಗಮನ ಹರಿಸಿದರು.

ಶಾಸ್ತ್ರೀಯ ಸಂಗೀತದ ಜೊತೆಗೆ ಒಂದು ಕನ್ನಡ, ಒಂದು ಹಿಂದಿ ಗೀತೆಯನ್ನು ಹಾಡಬೇಕು ಎಂಬ ನಿಯಮವನ್ನು ಸ್ಪರ್ಧಿಗಳಿಗೆ ಮೊದಲೇ ಹೇಳಲಾಗಿತ್ತು.ಏಳು ಹುಡುಗಿಯರು ಹಾಗೂ ಐದು ಹುಡುಗರು ಸೆಮಿಫೈನಲ್‌ನಲ್ಲಿ ಆಯ್ಕೆಯಾಗಿದ್ದರು. `ಈ ಬಾರಿಯ ವಿಶೇಷವೆಂದರೆ ಪ್ರತಿಯೊಬ್ಬರೂ ಚೆನ್ನಾಗಿ ಹಾಡುತ್ತಾರೆ. ಅತ್ಯಂತ ಕಠಿಣ ಸ್ಪರ್ಧೆ ಏರ್ಪಾಡಾಗಿದ್ದು ಸಂತಸ ತಂದಿದೆ. ದಿನದಿಂದ ದಿನಕ್ಕೆ ಅವರಲ್ಲಿನ ಏಳಿಗೆ ಖುಷಿ ನೀಡುತ್ತಿದೆ' ಎಂಬ ಮಾತನ್ನು ಗಾಯಕ ಹಾಗೂ ಕಾರ್ಯಕ್ರಮದ ತೀರ್ಪುಗಾರ ರಾಜೇಶ್‌ಕೃಷ್ಣನ್ ಸ್ವತಃ ಒಪ್ಪಿಕೊಳ್ಳುತ್ತಾರೆ.

ಪ್ರತಿ ಸ್ಪರ್ಧಿ ವಿಭಿನ್ನ ಕಂಠಸಿರಿಯಿಂದ ಗಮನ ಸೆಳೆದರು. ಕೆಲವರು ಹಾಡಿನ ಆಯ್ಕೆಯಲ್ಲಿ ಸೋತರಷ್ಟೆ. ಇನ್ನು ಕೆಲವರ ಹಾಡುಗಾರಿಕೆ ಚಾಣಾಕ್ಷತೆ ತೋರಿದಂತಿತ್ತೇ ಹೊರತು ಪ್ರೇಕ್ಷಕರು ಬಯಸುವ ಇಂಪು ಇರಲಿಲ್ಲ.ಕರ್ನಾಟಕದವರನ್ನು ಹೊರತುಪಡಿಸಿ ಕನ್ನಡ ಗೊತ್ತಿಲ್ಲದ ಅನ್ಯ ಭಾಷಿಗರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇರಳ, ಮುಂಬೈ, ಪುಣೆ, ಒಡಿಶಾದವರೂ ಇದ್ದರು. ಆಯ್ಕೆಯಾದ ಹೆಚ್ಚಿನವರು ಅವರೇ ಎಂಬುದು ವಿಶೇಷ.

ಚಿತ್ರ ನಿರ್ದೇಶಕ ಸುರೇಶ್ ಬಾಬು, ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅತಿಥಿಯಾಗಿ ಬಂದು ಕಾರ್ಯಕ್ರಮಕ್ಕೆ ಕಳೆಕಟ್ಟಿದ್ದರು. ಪ್ರತಿಯೊಬ್ಬರು ಹಾಡಿದ ಮೇಲೆ ಹಾಸ್ಯಭರಿತ, ಗಂಭೀರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು. ಆದರೆ ಸ್ಪರ್ಧಿಗಳೆಲ್ಲರೂ ನೆಚ್ಚಿನ ಮಾರ್ಗದರ್ಶಿ ರಾಜೇಶ್ ಕೃಷ್ಣನ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದರು. `ಹಾಡಿನ ಬಗ್ಗೆ ಅವರು ಒಳ್ಳೆಯ ಅನಿಸಿಕೆಯನ್ನೇ ಹೇಳಲಿ' ಎಂದು ದೇವರಲ್ಲಿ  ಮೊರೆ ಇಟ್ಟಂತಿತ್ತು ಅವರ ಕಣ್ಣಿನ ಭಾವ.

ನಗರದ ಆಸುಪಾಸಿನಲ್ಲಿರುವ ಭರವಸೆಯ ದನಿಗಾಗಿ ಹುಡುಕಾಟ ನಡೆಸುತ್ತಿರುವ `ವಾಯ್ಸ ಆಫ್ ಬೆಂಗಳೂರು' ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ ವಾದ್ಯವೃಂದ. ಸ್ಪರ್ಧಿಗಳ ಮನಸ್ಥಿತಿಗೆ ಪೂರಕವೆಂಬಂತೆ ಎಲ್ಲಾ ಕಲಾವಿದರು ವಾದ್ಯ ನುಡಿಸುತ್ತಿದ್ದರು. 
ಕಾರ್ಯಕ್ರಮ ಮುಗಿಯುವ ಹೊತ್ತಿಗೆ `ನೀನು ನೀನೆ ಇಲ್ಲಿ ನಾನು ನಾನೆ', `ಶಿವ ಶಿವ ಎನ್ನದ', `ಮಧುಬನ್ ಮೆ ರಾಧಿಕಾ', `ನಿನಗೆಂದೇ ವಿಶೇಷವಾದ ಮಾಹಿತಿ', `ದೀನಳ ಮೊರೆಯಾ', `ಐಸಾ ಜಾದೂ ಉಡಾಲಾರೆ', `ಶಿವಶಂಕರಿ', `ಜರಾ ಸಾ ದಿಲ್ ಮೆ ದೇ ಜಗಹ್ ತು', `ಜಯಗೌರಿ ಜಗದೀಶ್ವರಿ', `ನಟನ ವಿಶಾರದ', `ಕಾಹೆ ಛೇಡ್' ಮುಂತಾದ ಹಾಡುಗಳು ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು.

ವಿನಾಯಕ ಜೋಶಿ ಅವರ ಮಧುರ ನಿರೂಪಣೆ ಕಾರ್ಯಕ್ರಮಕ್ಕಿತ್ತು. ಎಲ್ಲರನ್ನೂ ತೊಡಗಿಸಿಕೊಳ್ಳುತ್ತಿದ್ದ ಪರಿ ಅವರ ಪ್ಲಸ್ ಪಾಯಿಂಟ್.
ಅಂತಿಮ ಸುತ್ತಿಗೆ ಯುವಕರಲ್ಲಿ ಕೇರಳದ ಜಿಮ್ಮಿ ಫ್ರಾನ್ಸಿಸ್, ವಿಜೇತ್ ಅರಸ್, ಅಶ್ವಿನ್ ಆಯ್ಕೆಯಾದರೆ ಯುವತಿಯರಲ್ಲಿ ಮುಂಬೈನ ಜಿನ್ಶಾ, ಬೆಂಗಳೂರಿನ ರಕ್ಷಾ ಆಚಾರ್ಯ ಹಾಗೂ ಒಡಿಶಾದ ಸಮೀಕ್ಷಾ ಆಯ್ಕೆಯಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT