ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನಕ್ಕೆ ಕನ್ನಡಿ ಹಿಡಿದವರು

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುರುವಾರದಿಂದ 6 ದಿನಗಳ ಕಾಲ ನಾಲ್ಕು ಮಂದಿ ಪ್ರತಿಭಾವಂತ ಕಲಾವಿದರ ಕಲಾಪ್ರದರ್ಶನಕ್ಕೆ ಚಿತ್ರಕಲಾ ಪರಿಷತ್ತು ಸಾಕ್ಷಿಯಾಗಲಿದೆ.  ಈ ನಾಲ್ವರು ಕಲಾ ಜಗತ್ತಿಗೆ ಹೊಸಬರಲ್ಲ.

 ವೆಂಕಿ ಪಲಿಮಾರು ಬೆಂಗಳೂರಿನ ಕಲಾಜಗತ್ತಿಗೆ ಅಪರಿಚಿತರಲ್ಲ. ಮ್ಯೂರಲ್, ಮರಳುಶಿಲ್ಪ, ಜಲವರ್ಣ, ಥರ್ಮಕೋಲ್ ಈ ರೀತಿ ವಿವಿಧ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆ ಮೆರೆದವರು.

ಬೆಂಗಳೂರು, ಉಡುಪಿ, ಮೂಡಬಿದಿರೆ, ಮಣಿಪಾಲ- ಈ ರೀತಿ ಹಲವೆಡೆಗಳಲ್ಲಿ ತಮ್ಮ ಕಲಾಪ್ರದರ್ಶನ ಮಾಡಿದ ಅವರು ಈ ಬಾರಿ ಮ್ಯೂರಲ್ ಶೈಲಿ ಅನುಕರಿಸಿ ವರ್ಣಚಿತ್ರಗಳನ್ನು ರಚಿಸಿದ್ದಾರೆ.

ಇವರ ಟೆರಕೊಟ್ಟಾ ಶಿಲ್ಪಗಳು ಈ ಹಿಂದೆ ಇದೇ ಗ್ಯಾಲರಿಯಲ್ಲಿ ಪ್ರದರ್ಶನಗೊಂಡು ಅಪಾರ ಜನಪ್ರಿಯತೆ ಗಳಿಸಿತ್ತು. ಈ ಬಾರಿಯ ಪ್ರದರ್ಶನ ಕೇವಲ ಚಿತ್ರಕಲಾಕೃತಿಗಳಿಗೆ ಮೀಸಲು.
 
ಮೂರು ಕಲಾಕೃತಿಗಳಲ್ಲಿ ಬುದ್ಧ, ಒಂದರಲ್ಲಿ ಕುಟುಂಬ ಮತ್ತು ವೃಕ್ಷ, ಇನ್ನೊಂದರಲ್ಲಿ ನಾಗಮಂಡಲ, ಮತ್ತೊಂದರಲ್ಲಿ ಗೋವು ಮತ್ತು ಮನುಷ್ಯ ಸಂಬಂಧ ವಸ್ತುಗಳಾಗಿವೆ.
ತಾವೇ ಕ್ಯಾನ್ವಾಸ್ ಸಿದ್ಧಪಡಿಸಿ ವಿವಿಧ ಸಾಧನಗಳಿಂದ ಮೈವಳಿಕೆ ರೂಪಿಸಿ ವಿಶಿಷ್ಟವಾಗಿ ಕೃತಿಗಳನ್ನು ರಚಿಸಿದ್ದಾರೆ.

 ಹೊಸ ಚಿಂತನೆ, ಹೊಸ ಶೈಲಿಯ ಜತೆಗೆ ಇಂದಿನ ಬದುಕಿನ ಸಂಕೀರ್ಣತೆ ಸೆರೆ ಹಿಡಿಯುವ ಸುನಿಲ್ ಮಿಶ್ರಾ  ಹತ್ತು ಹಲವು ಮಾಧ್ಯಮಗಳಲ್ಲಿ ಕೈಯಾಡಿಸಿದವರು. ಹೊಸತನದ ನಿರಂತರ ಅರಸುವಿಕೆ ಅವರ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುವಂತೆ ಮಾಡಿದೆ. ಚಿತ್ರಕೃತಿಗಳಲ್ಲಿ ವರ್ಣಗಳ ಜತೆಗೆ ಮರವನ್ನು ಬಳಸಿ ಪ್ರಯೋಗ ಮಾಡಿದ್ದಾರೆ.

 ಈ ವಿಶಿಷ್ಟ ಪ್ರಯೋಗ ಸಹಜವಾಗಿ ಜನರನ್ನು ಸೆಳೆಯುತ್ತದೆ. ಹಣ ಮಾಡಲು ನಗರಗಳಲ್ಲಿ ಹತ್ತು ಹಲವು ಮಾರ್ಗಗಳಿವೆ ನಿಜ. ಆದರೆ ಹಣವೇ ಎಲ್ಲವೂ ಅಲ್ಲ .ಇದರ ಹೊರತಾದುದುರ ಕಡೆಗೆ ಮಾನವನ ತುಡಿತ ಮುಖ್ಯ ಎನ್ನುತ್ತದೆ ಅವರ ಕೃತಿಯೊಂದು.

 ಹಿರಿಯ ಕಲಾವಿದ ಜಿ.ಕೆ.ಶಿವಣ್ಣವರು ತಮ್ಮ ಕಲಾಕೃತಿಗಳಲ್ಲಿ ಗ್ರಾಮೀಣ ಬದುಕು, ಪ್ರಕೃತಿ ಮತ್ತು ಮಾನವನ ಮಧ್ಯದ ಸಂಬಂಧವನ್ನು ಪ್ರಮುಖವಾಗಿ ಸೆರೆ ಹಿಡಿದಿದ್ದಾರೆ.  ಇಂದು ಗ್ರಾಮೀಣ ಬದುಕಿನಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ. ಹಿಂದಿನ ಬದುಕಿನ ಉತ್ತಮ ಅಂಶಗಳು ಕಂಡು ಬರುತ್ತಿಲ್ಲ. ಬದುಕು ದುರ್ಬರವಾಗಿದೆ. ಇದನ್ನು ಶಿವಣ್ಣ ಸಮರ್ಥವಾಗಿ  ಸೆರೆ ಹಿಡಿದಿದ್ದಾರೆ. ಶಿವಣ್ಣನವರು ಅಕ್ರೆಲಿಕ್ ವರ್ಣವನ್ನು ಜಲವರ್ಣದಂತೆ ಬಳಸಿದ್ದಾರೆ.

ಅವರು  ಅಜಂತಾದ ಕಲೆಯಿಂದ ಪ್ರಭಾವಿತರಾದವರು. ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಯ ಸಮ್ಮಿಲನ ಅವರ ಚಿತ್ರಗಳಲ್ಲಿದೆ. ಬೆಂಗಳೂರು, ಚಳ್ಳಕೆರೆ, ಭದ್ರಾವತಿ, ಚಿಕ್ಕಮಗಳೂರು, ಬಸನಬಾಗೇವಾಡಿ ಈ ರೀತಿ ನಾಡಿನ ಉದ್ದಗಲಕ್ಕೂ ಕಲಾಪ್ರದರ್ಶನ ಏರ್ಪಡಿಸಿದ ಅವರು ಕಲಾ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದಾರೆ.

ಮೈಸೂರು ಶೈಲಿಯ ಭಿತ್ತಿಚಿತ್ರಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಶ್ರೀಕೃಷ್ಣನನ್ನು ವಸ್ತುವಾಗಿಟ್ಟು ಚಿತ್ರ ರಚಿಸಿರುವ ತರುಣ ಎಂ.ಎನ್. ನರಸಿಂಹಮೂರ್ತಿ ಅವರು ಶಾಂತಿನಿಕೇತನದಲ್ಲಿ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು.
 
ಹೈದರಾಬಾದ್, ಪುಣೆ, ಪಾಂಡಿಚೇರಿ, ಲಖನೌ, ನವದೆಹಲಿ ಈ ರೀತಿ ರಾಜ್ಯದ ಹೊರಗೂ ಕಲಾಪ್ರಶರ್ನ ಮತ್ತು ಕ್ಯಾಂಪ್‌ಲ್ಲಿ ಭಾಗವಹಿಸಿದ ಪ್ರತಿಭಾವಂತ. ಮೂಲತಃ ತುಮಕೂರಿನವರು.

ಈ ನಾಲ್ವರ ಕಲಾಪ್ರದರ್ಶನ ಚಿತ್ರಕಲಾಪರಿಷತ್ತಿನಲ್ಲಿ  ಈ ತಿಂಗಳ 9ರಿಂದ 14ರ ವರೆಗೆ ನಡೆಯಲಿದ್ದು  9ರಂದು ಗುರುವಾರ ಸಂಜೆ 5 ಗಂಟೆಗೆ  ಪ್ರದರ್ಶನವನ್ನು ಖ್ಯಾತ ಕಲಾವಿದ ಎಸ್.ಜಿ. ವಾಸುದೇವ್ ಉದ್ಘಾಟಿಸಲಿದ್ದಾರೆ.  ಖ್ಯಾತ ಕಲಾವಿದ ಚಂದ್ರನಾಥ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ. ನಟರಾಜ್ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.                                                                                          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT