ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ತಾಲ್ಲೂಕಿನ 64 ಗ್ರಾಮಗಳಲ್ಲಿ ತೀವ್ರ ಬರದ ಛಾಯೆ

Last Updated 19 ಸೆಪ್ಟೆಂಬರ್ 2011, 8:40 IST
ಅಕ್ಷರ ಗಾತ್ರ

ಹೊಸದುರ್ಗ: ಮಳೆರಾಯನ ಮುನಿಸಿನಿಂದಾಗಿ ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ರೈತಾಪಿ ಜನರು ಸಂಕಷ್ಟ ಎದುರಿಸುವಂತಾಗಿದೆ.ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೇ ಬೆಳೆ ಬಾಡುತ್ತಿದೆ. ಕೆಲವೆಡೆ ಭೂಮಿಗೆ ಬಿತ್ತಿದ ಬೀಜ ಮೊಳಕೆ ಒಡೆಯದೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ನಮ್ಮ ಹೊಟ್ಟೆಪಾಡು ಹೇಗೋ ನಡೆಯುತ್ತೆ ಜಾನುವಾರುಗಳ ಗತಿಯೇನು ಎಂದು ರೈತರು ಮುಗಿಲು ನೋಡುತ್ತಿದ್ದಾರೆ.

ಮಳೆ ಕೊರತೆಯಿಂದಾಗಿ  ತಾಲ್ಲೂಕಿನ ಒಟ್ಟು 225 ಗ್ರಾಮಗಳಲ್ಲಿ 64 ಗ್ರಾಮಗಳು ತೀವ್ರತರವಾದ ಬೆಳೆ ವೈಫಲ್ಯ ಎದುರಿಸುತ್ತಿವೆ. 69 ಗ್ರಾಮಗಳಲ್ಲಿ ಭಾಗಶಃ ಬೆಳೆ ಹಾನಿಹಾಗಿದ್ದರೆ 24 ಗ್ರಾಮಗಳಲ್ಲಿ ಅಲ್ಪಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ನಾಲ್ಕು ಹೋಬಳಿಗಳಲ್ಲಿ ಕಸಬಾ ಹೋಬಳಿಯಲ್ಲಿ ಹೆಚ್ಚು ಗ್ರಾಮಗಳು ಬೆಳೆ ವೈಫಲ್ಯ ಎದುರಿಸುತ್ತಿವೆ.
ಹೋಬಳಿಯ ಒಟ್ಟು 84 ಗ್ರಾಮಗಳಲ್ಲಿ 63 ಗ್ರಾಮಗಳು ಬರದ ಪರಿಸ್ಥಿತಿ ಎದುರಿಸುವಂತಾಗಿದೆ.33 ಗ್ರಾಮಗಳಲ್ಲಿ ತೀವ್ರ ಬೆಳೆ ಹಾನಿಯಾಗಿದ್ದರೆ 20 ಗ್ರಾಮಗಳಲ್ಲಿ ಭಾಗಶಃ  ಹಾನಿಯಂಟಾಗಿದೆ. 10 ಗ್ರಾಮಗಳಲ್ಲಿ ಅಲ್ಪ ಪ್ರಮಾಣದ ಬೆಳೆ ನಾಶವಾಗಿದೆ.

ಶ್ರೀರಾಂಪುರ ಹೋಬಳಿಯಲ್ಲಿ 26 ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆ ಹಾನಿಯಾಗಿದ್ದರೆ. ಮತ್ತೋಡು ಹೋಬಳಿ ವ್ಯಾಪ್ತಿಯಲ್ಲಿ 26 ಹಾಗೂ ಮಾಡದಕರೆ ಹೋಬಳಿ ವ್ಯಾಪ್ತಿಯ 28 ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದೆ.
ವಾಡಿಕೆ ಯಂತೆ ಆಗಸ್ಟ್ ಅಂತ್ಯಕ್ಕೆ 218 ಮಿ.ಮೀ. ಮಳೆಯಾಗಬೇಕಿದ್ದು, ಪ್ರಸಕ್ತ ಸಾಲಿನಲ್ಲಿ 201 ಮಿ.ಮೀ. ಮಳೆಯಾಗಿದೆ.

ಕಳೆದ ಮೂರು ತಿಂಗಳುಗಳಿಂದ ಮಳೆ ಇಲ್ಲದ ಕಾರಣ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ.  ತಾಲ್ಲೂಕಿನ ಒಟ್ಟು 60,500 ಹೆಕ್ಟೇರ್ ಪ್ರದೇಶದ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ 56,398 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.  4,269 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಈರುಳ್ಳಿ ಬಿತ್ತನೆಗೆ ರೈತರು ಕಂಡವರ ಬಳಿ ಸಾಲ ಪಡೆದು ಗೊಬ್ಬರ ಬೀಜಕ್ಕೆ ಹಾಕಿದ್ದ ಲಕ್ಷಾಂತರ ರೂಪಾಯಿ ಮಣ್ಣು ಪಾಲಾಗಿದೆ. ಸಾಲ ಕೊಟ್ಟವರ ಹಣ ವಾಪಸ್ಸು ಮಾಡಲು ದಾರಿಯೇ ಕಾಣುತ್ತಿಲ್ಲ ಎನ್ನುತ್ತಾರೆ ಪೀಲಾಪುರದ ಗ್ರಾ.ಪಂ. ಸದಸ್ಯ ಸೋಮಶೇಖರ್.

ತಾಲ್ಲೂಕಿನ ಪ್ರಮುಖ ಬೆಳೆ ರಾಗಿ 26,680 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆಯ ಕೊರತೆಯಿಂದಾಗಿ  ರಾಗಿ  ಬಹುತೇಕ ಸೊರಗಿ ಹೋಗಿದೆ. ಸುಮಾರು 534 ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಹಾನಿಯಾಗಿದೆ. ಮೆಕ್ಕೆಜೋಳ, ಸಾವೆ, ನವಣೆ, ತೊಗರಿ ಇತ್ಯಾದಿ ಬೆಳೆಯೂ ಹಾನಿಗೀಡಾಗಿದೆ.

ಮಳೆರಾಯನ ಮುನಿಸಿನಿಂದಾಗಿ ಜಾನುವಾರುಗಳಿಗೆ ಮೇವು ಲಭ್ಯವಿಲ್ಲದಂತಾಗಿದೆ. ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ.  ತಾಲ್ಲೂಕಿನ ಜನತೆಯ ಜೀವನಾಡಿ ವೇದಾವತಿ ಸಂಪೂರ್ಣವಾಗಿ ಬತ್ತಿಹೋಗಿದೆ. ಮಳೆ ಬಾರದೇ ಹೋದಲ್ಲಿ ಕೆಲವೇ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಸಂಭವವಿದೆ ಎನ್ನುತ್ತಾರೆ ರೈತ ಮಂಜುನಾಥ್.

ಮಳೆಗಾಲದಲ್ಲಿಯೇ ಇಂತಹ ವಿಷಮ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂಬರುವ ಬೇಸಿಗೆಯ ದಿನಗಳನ್ನು ಎದುರಿಸುವುದು ಹೇಗೆ ಎಂದು ತಾಲ್ಲೂಕಿನ ಜನತೆ ಆತಂಕದಿಂದ ದಿನಕಳೆಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT