ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ-ತಿನೈಘಾಟ್ ಜೋಡಿ ರೈಲು ಮಾರ್ಗ

ಕಾಮಗಾರಿಗೆ ಸಚಿವ ಖರ್ಗೆ ಶಂಕುಸ್ಥಾಪನೆ
Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಬೆಳಗಾವಿ ಬಳಿಯ ತಿನೈಘಾಟ್ ವರೆಗೆ 245 ಕಿಮಿ ಉದ್ದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ  ಖಾನಾಪುರ ತಾಲ್ಲೂಕಿನ ಲೋಂಡಾದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

ಬಳ್ಳಾರಿ- ಹೊಸಪೇಟೆ ಭಾಗದ ಅದಿರನ್ನು ಗೋವಾದ ಬಂದರಿಗೆ ಸಾಗಿಸಿ ಅಲ್ಲಿಂದ ವಿದೇಶಗಳಿಗೆ ರಫ್ತು ಮಾಡಲು ಈ ಮಾರ್ಗ ಸಹಕಾರಿಯಾಗಲಿದೆ. ಅಲ್ಲದೆ ಮಡಗಾವ್ ಬಂದರಿಗೆ ಆಮದಾಗುವ ಕಲ್ಲಿದ್ದಲನ್ನು ರಾಜ್ಯದ ಉಕ್ಕು ಕೈಗಾರಿಕೆಗಳಿಗೆ ಮತ್ತು ಗುಲ್ಬರ್ಗದ ಜೇವರ್ಗಿಯಲ್ಲಿ ನಿರ್ಮಾಣವಾಗಲಿರುವ ಹಾಗೂ ಬಳ್ಳಾರಿಯಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಾಗಿಸಲು ಕೂಡ ಇದರಿಂದ ಅನುಕೂಲವಾಗಲಿದೆ.

`ಈ ಮಾರ್ಗವು ಬಳ್ಳಾರಿ- ಹೊಸಪೇಟೆ- ವಾಸ್ಕೋ ನಡುವಿನ 407 ಕಿ.ಮೀ. ಉದ್ದದ ಯೋಜನೆಯ  ಭಾಗವಾಗಿದ್ದು, ಮೊದಲ ಹಂತದಲ್ಲಿ 928.85 ಕೋಟಿ ವೆಚ್ಚದಲ್ಲಿ ಹೊಸಪೇಟೆ- ತಿನೈಘಾಟ್ ಮಧ್ಯೆ ಕಾಮಗಾರಿ ನಡೆಯಲಿದೆ. ಇದಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ (ಎಡಿಬಿ) ಹಣಕಾಸು ನೆರವು ಪಡೆಯಲಾಗಿದ್ದು, 300 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ' ಎಂದು ಶಿಲಾನ್ಯಾಸದ ನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಖರ್ಗೆ ತಿಳಿಸಿದರು.

`ಮೊದಲ ಹಂತದ 300 ಕೋಟಿ ರೂಪಾಯಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ, ಎರಡನೇ ಹಂತದ ಕಾಮಗಾರಿಗೆ ಮತ್ತೆ 300 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು. ಈ ಕಾಮಗಾರಿ 2015ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. 97 ಕಿ.ಮೀ. ದೂರದ ತಿನೈಘಾಟ್- ವಾಸ್ಕೋಡಗಾಮ ನಡುವಿನ ಜೋಡಿ ಮಾರ್ಗದ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ' ಎಂದರು.

`ಈ ಅನುಮತಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎರಡನೇ ಹಂತದಲ್ಲಿರುವ ಬಯಲು ಪ್ರದೇಶದ 71 ಕಿ.ಮೀ. ಮಾರ್ಗದ ಭೂಮಿ ಸಮೀಕ್ಷೆ ಕಾರ್ಯ ಮುಕ್ತಾಯಗೊಂಡಿದೆ. ಕ್ಯಾಸಲ್‌ರಾಕ್- ಕುಲೇಂ ಘಾಟ್ ವಿಭಾಗದ 26 ಕಿ.ಮೀ. ಮಾರ್ಗದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಇದೆಲ್ಲವೂ ಮುಗಿದ ನಂತರ ಎರಡನೇ ಹಂತದ ಕಾಮಗಾರಿ ಆರಂಭಗೊಳ್ಳಲಿದೆ' ಎಂದು ಹೇಳಿದರು.

`ರಾಜ್ಯದಲ್ಲಿ ರೈಲ್ವೆ ಮಾರ್ಗ ನಿರ್ಮಾಣದ ಕೆಲವು ಯೋಜನೆಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇತ್ತು. ಅವುಗಳ ಮೇಲಿನ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ರೈತರ ಮನವೊಲಿಸಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದು. ರೈತರಿಗೆ ಇಲಾಖೆ ನೀಡುವ ಪರಿಹಾರ ಸಾಕಾಗದಿದ್ದರೆ, ಅವರು ನ್ಯಾಯಾಲಯಕ್ಕೆ ಹೋಗಿ ಪಡೆಯಬಹುದು. ನ್ಯಾಯಾಲಯ ನಿಗದಿಪಡಿಸುವ ಪರಿಹಾರವನ್ನು ನೀಡಲು ಇಲಾಖೆ ಸಿದ್ಧವಿದೆ. ಆದ್ದರಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕಾಳಜಿ ವಹಿಸಬೇಕು' ಎಂದು ತಿಳಿಸಿದರು.

`ಕೋಲಾರ- ಚಿಕ್ಕಬಳ್ಳಾಪುರ, ಹಾಸನ- ಸಕಲೇಶಪುರ- ಚಿಕ್ಕಮಗಳೂರು ಹಾಗೂ ಬೀದರ್- ಗುಲ್ಬರ್ಗ ಮಾರ್ಗದ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ರಾಜ್ಯ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಸಹ ನೀಡಲಾಗುತ್ತಿದೆ. ಈಗಾಗಲೇ ನಮ್ಮ ಇಲಾಖೆಯಿಂದ 300 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ 300 ಕೋಟಿ ರೂಪಾಯಿ ನೀಡಬೇಕು. ಇದರಿಂದ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ' ಎಂದು ಖರ್ಗೆ ಹೇಳಿದರು.

`ಈ ಭಾಗದ ರೈಲ್ವೆ ಯೋಜನೆಗಳ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬಿಟ್ಟು, ಒಗ್ಗಟ್ಟು ಪ್ರದರ್ಶಿಸಬೇಕು. ಇದರಿಂದ ರಾಜ್ಯಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು. ನನಗೆ ಕೇವಲ 8-10 ತಿಂಗಳ ಅವಧಿ ಮಾತ್ರ ಉಳಿದಿದ್ದು, ಈ ಭಾಗದ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT