ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ-ಹರಿಹರ ರೈಲು ವರ್ಷದೊಳಗೆ ಆರಂಭ!

Last Updated 31 ಮೇ 2012, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಯ ನಡುವೆ ಸಂಪರ್ಕ ಕಲ್ಪಿಸುವ ಹೊಸಪೇಟೆ-ಹರಿಹರ ರೈಲು ಸಂಚಾರವನ್ನು ಒಂದು ವರ್ಷದೊಳಗೆ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ (ಜಿಎಂ) ಅಶೋಕ ಕುಮಾರ ಮಿತ್ತಲ್ ಭರವಸೆ ನೀಡಿದ್ದಾರೆ ಎಂದು ಹೊಸಪೇಟೆ- ಕೊಟ್ಟೂರು-ಹರಿಹರ ರೈಲ್ವೆ ಕ್ರಿಯಾ ಸಮಿತಿ ತಿಳಿಸಿದೆ.

ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯ ಬಳಿಕ ಅವರು ಈ ವಿಷಯವನ್ನು ತಿಳಿಸಿದ್ದು, ಹರಿಹರ ಹಾಗೂ ಕೊಟ್ಟೂರು ನಡುವೆ ರೈಲು ಸಂಚಾರಕ್ಕೆ ಆಗುತ್ತಿದ್ದ ಅಡ್ಡಿಯನ್ನು ನಿವಾರಿಸಿ ಮೂರು ತಿಂಗಳ ಒಳಗೆ ಸಂಚಾರವನ್ನು ಆರಂಭಿಸಲಾಗುವುದಾಗಿ ಜಿಎಂ ತಿಳಿಸಿದ್ದಾರೆ ಎಂದು ವಿವರಿಸಿದರು.

ರೈಲ್ವೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಕಡೆಗಳಿಂದ ಬಸ್‌ನಲ್ಲಿ ಆಗಮಿಸಿದ ಹೋರಾಟಗಾರರು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿ ನಂತರ ವಿಜಾಪುರ ರಸ್ತೆಯ ಮೂಲಕ ಪ್ರಧಾನ ವ್ಯವಸ್ಥಾಪಕರ ಕಚೇರಿಗೆ ಮೆರವಣಿಗೆ ನಡೆಸಿದರು.

ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನ ವ್ಯವಸ್ಥಾಪಕರ ಕಾರ್ಯದರ್ಶಿ ಜಿ.ಕೆ. ಜಲನ್, ನಿರ್ವಹಣಾ ವಿಭಾಗದ ಮುಖ್ಯ ವ್ಯವಸ್ಥಾಪಕ ಎನ್.ಸಿ. ಸಿನ್ಹಾ ಹಾಗೂ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಜಿ.ಎಂ. ರಾಜು ಅವರ ಜತೆ ಚರ್ಚೆ ನಡೆಸಿದರು.

`ಹರಿಹರ- ಕೊಟ್ಟೂರು ನಡುವಿನ ರೈಲು ಸಂಚಾರವನ್ನು ಕಳೆದ 19 ವರ್ಷಗಳಿಂದ ಗೇಜ್ ಪರಿವರ್ತನೆಗಾಗಿ ನಿಲ್ಲಿಸಲಾಗಿದೆ. ಈಗ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ರೈಲು ಓಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ರಾಜಕಾರಣಿಗಳು ನೀಡಿದ ಭರವಸೆ ಸುಳ್ಳಾಗಿದೆ~ ಎಂದು ಹೋರಾಟಗಾರರು ದೂರಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು `ರೈಲು ಓಡಿಸಲು ಮುಂದಾದಾಗ ಪರಿಹಾರ ಮೊತ್ತದ ವಿಷಯದಲ್ಲಿ ತಕರಾರು ತೆಗೆದ ರೈತರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ರೈಲು ಓಡಿಸಲು ಸಾಧ್ಯವಾಗಲಿಲ್ಲ~ ಎಂದು ಹೇಳಿದರು.
ಕೊಷ್ಠೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಾಂತಿಯನ್ನು ಬಿಟ್ಟು ಕ್ರಾಂತಿ ಮಾಡಬೇಕಾಗಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ತೀವ್ರ ಹೋರಾಟ ಮಾಡಬೇಕಾದ ಕಾಲ ಬಂದಿದೆ ಎಂದು ಹೇಳಿದರು.

ಚಿತ್ರದುರ್ಗ ಉಜ್ಜಿನಿಮಠದ ಶ್ರೀ, ಮರಿಯಮ್ಮನ ಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಕುರುಗೋಡಿನ ರಾಘವಾಂಕ ಶಿವಾಚಾರ್ಯ ಶ್ರೀ, ಕೊಟ್ಟೂರಿನ ಯೋಗಿ ರಾಜೇಂದ್ರ ಶಿವಾಚಾರ್ಯ ಶ್ರೀ, ಸಂಡೂರು ವಿರಕ್ತಮಠದ ಪ್ರಭು ಸ್ವಾಮಿ, ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಹಗರಿಬೊಮ್ಮನಹಳ್ಳಿಯ ಮಹೇಶ್ವರ ಶ್ರೀ, ನೀಲಗುಂದದ ಚನ್ನಬಸವ ಶಿವಯೋಗಿ, ಹೂವಿನಹಡಗಲಿಯ ಹಿರಿಶಾಂತವೀರ ಶ್ರೀ, ಕೂಡ್ಲಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಶ್ರೀ, ಕ್ರಿಯಾ ಸಮಿತಿಯ ಸಂಚಾಲಕರಾದ ಕೊಟ್ರೇಶ ಶೆಟ್ಟರ, ಕೈಲಾಸ ಮೂರ್ತಿ, ರಾಜಶೇಖರ ಪೂಜಾರ, ಮೂಲವಿಂದ ಮಲ್ಲಿಕಾರ್ಜುನ, ಗವಿಸಿದ್ದಪ್ಪ ವಿಠೋಬಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT