ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸವರ್ಷಕ್ಕೆ ಜೊತೆಯಾದ ನೀನಾಸಂ ನಾಟಕಗಳು

Last Updated 4 ಜನವರಿ 2011, 11:05 IST
ಅಕ್ಷರ ಗಾತ್ರ

ಗಜೇಂದ್ರಗಡ:  ಜ.1 ಮತ್ತು 2ರಂದು ಪಟ್ಟಣದಲ್ಲಿ ಪ್ರದರ್ಶನಗೊಂಡ ನೀನಾಸಂ ತಿರುಗಾಟದ ಎರಡು ನಾಟಕಗಳು ಇಲ್ಲಿನ ರಂಗಾಸಕ್ತರಿಗೆ ನೂತನ ವರ್ಷದ ಸಂಭ್ರಮಾಚರಣೆಗೆ ಸಾಕ್ಷಿಯಾದವು. ಮಂಜುನಾಥ ಬಡಿಗೇರ ನಿರ್ದೇಶನದ ಕುವೆಂಪು ರಚಿತ ಕನ್ನಡ ನಾಟಕ ‘ಶೂದ್ರ ತಪಸ್ವಿ’ ಹಾಗೂ ಜೆಹಾನ್ ಮಾಣಿಕ್‌ಷಾ ನಿರ್ದೇಶನದ ಕೆ.ಎಸ್.ನಿಸಾರ್ ಅಹಮದ್ ಅನುವಾದಿತ, ಶೇಕ್‌ಸ್ಪಿಯರ್ ಅವರ ‘ಒಥೆಲೋ’ ನಾಟಕಗಳು ನೀನಾಸಂ ರಂಗತಂಡದ ಮನೋಜ್ಞ ಅಭಿನಯದಿಂದ ಮನಸೂರೆಗೊಂಡವು.

1940ರಲ್ಲಿ ಕುವೆಂಪು ರಚಿಸಿದ ‘ಶೂದ್ರ ತಪಸ್ವಿ’ ನಾಟಕದಲ್ಲಿ ಶೂದ್ರ ವ್ಯಕ್ತಿಯೊಬ್ಬರು ತಪಸ್ಸು ಮಾಡುತ್ತಿರುವುದರಿಂದ ಬ್ರಾಹ್ಮಣಕುಮಾರನೊಬ್ಬ ಮೃತನಾದ ಎನ್ನುವ ದೂರು ರಾಮನ ಎದುರಿಗೆ ಬರುತ್ತದೆ. ಆಗ ರಾಮನು ತಪ್ಪಿತಸ್ಥನನ್ನು ಹುಡುಕಿ ದಂಡಿಸಲು ಬಂದಾಗ ಅಲ್ಲಿ ತಪಸ್ಸು ಮಾಡುತ್ತಿರುವ ಶೂದ್ರ ಶಂಭೂಕನನ್ನು ಕಾಣುತ್ತಾನೆ. ಇದರಿಂದ ಶೂದ್ರನು ತಪಸ್ಸು ಮಾಡುವುದನ್ನು ವಿರೋಧಿಸದಂತೆ ದೂರು ಕೊಟ್ಟವನಿಗೆ ಸಲಹೆ ನೀಡುತ್ತಾನೆ.

ಅದಕ್ಕೆ ಬ್ರಾಹ್ಮಣ ಒಪ್ಪದೆ ಇದ್ದಾಗ, ‘ಯಾರು ತಪ್ಪಿತಸ್ಥರೋ ಅವರನ್ನು ದಂಡಿಸಲಿ’ ಎಂಬ ಉದ್ಧೇಶದಿಂದ ರಾಮ ಬಾಣ ಬಿಡುತ್ತಾನೆ. ಬಾಣವು ಮೊದಲು ಶಂಭೂಕನ ಬಳಿಗೆ ತೆರಳಿ ಆತನಿಗೆ ನಮಸ್ಕರಿಸಿ ನಂತರ ಬ್ರಾಹ್ಮಣನತ್ತಲೆ ತಿರುಗುತ್ತದೆ. ಇದರಿಂದ ಭಯಭೀತನಾಗುವ ಬ್ರಾಹ್ಮಣ ರಾಮ ಮತ್ತು ಶಂಭೂಕನ ಕ್ಷಮೆ ಕೇಳುತ್ತಾನೆ. ಈ ರೀತಿಯಾಗಿ ಶಂಭೂಕವಧೆಯ ಬದಲಿಗೆ ಆತನಿಗೆ ಸೂಕ್ತ ಗೌರವ ದೊರೆಯುತ್ತದೆ. ಮೃತನಾಗಿದ್ದ ಬ್ರಾಹ್ಮಣಕುಮಾರ ಎಚ್ಚರಗೊಳ್ಳುವ ಮೂಲಕ ನಾಟಕ ಮುಕ್ತಾಯವಾಗುತ್ತದೆ.

ಜೆಹಾನ್ ಮಾಣಿಕ್‌ಷಾ ನಿರ್ದೇಶನದ ಶೇಕ್‌ಸ್ಪಿಯರ್‌ನ ಪ್ರಸಿದ್ಧ ದುರಂತ ನಾಟಕ ‘ಒಥೆಲೋ’, ಮೇಲ್ನೋಟಕ್ಕೆ ಸರಳವಾದ ದಾಂಪತ್ಯ ಹಾಗೂ ಕುತಂತ್ರದ ಕಥೆಯಂತೆ ಕಾಣಿಸಿದರೂ ನಾಟಕ ಮುಂದುವರೆದಂತೆ ಹಲವು ಮುಖಗಳನ್ನು ಪರಿಚಯಿಸುತ್ತ ಹೋಗುತ್ತದೆ. ಮನುಷ್ಯನ ಪ್ರೀತಿ, ಅಸೂಹೆ, ಕುಟಿಲತೆಯ ಸಂಘರ್ಷವನ್ನು ಕಣ್ಣೆದುರಿಗೆ ತರುತ್ತದೆ. ಜೊತೆಯಲ್ಲಿಯೇ ಜನಾಂಗದ್ವೇಷ, ಪುರುಷ ಅಹಂಕಾರಗಳ ಚಿತ್ರಣವನ್ನು ಕಟ್ಟುತ್ತ ಇಂದಿನ ಸಾಮಾಜಿಕ ರಾಜಕಾರಣದ ವಾಸ್ತಗಳಿಗೆ ಕೈಗನ್ನಡಿಯಾಗುತ್ತದೆ.

ಮೊರಾಕ್ಕೋ ಮೂಲದ ಶೂರ ಒಥೆಲೋ ವೆನಿಸ್ಸಿನ ಸೇನಾನಾಯಕ. ಇತನು ವೆನಿಸ್ಸಿನ ಶಾಸಕನ ಮಗಳು ಡೆಸ್ಡಿಮೋನಾಳನ್ನು ಪ್ರೀತಿಸಿ ಗುಟ್ಟಾಗಿ ಮದುವೆಯಾಗುತ್ತಾನೆ. ಇವರ ದಾಂಪತ್ಯ ಜೀವನ ಉತ್ತಮವಾಗಿ ಸಾಗುತ್ತಿರುವಾಗ ಒಥೆಲೋನ ಕೈಕೆಳಗಿನ ಅಧಿಕಾರಿ ಇಯಾಗೋ ಸೇನಾಬಡ್ತಿಯ ಚಿಕ್ಕ ಕಾರಣಕ್ಕೆ ಒಥೆಲೋನೊಂದಿಗೆ ದ್ವೇಷಕ್ಕೆ ಇಳಿಯುತ್ತಾನೆ. ಹಲವಾರು ಕುತಂತ್ರಗಳ ಮೂಲಕ ಒಥೆಲೋ ಮನಸ್ಸಿನಲ್ಲಿ ಡೆಸ್ಡಿಮೋನಾಳ ಬಗ್ಗೆ ಸಂಶಯ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ.

ಇಯಾಗೋ ತನ್ನ ಕುತಂತ್ರಗಳಿಗೆ ಡೆಸ್ಡಿಮೋನಾಳನ್ನು ಬಯಸಿದ್ದ ರಾಡ್ರಿಗೋ, ಇಯಾಗೋನ ಹೆಂಡತಿ ಎಮೀಲಿಯಾ, ಕ್ಯಾಷಿಯೋ, ಆತನ ಪ್ರೇಯಸಿ ಬಿಯಾಂಕ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಾನೆ. ಇದರಿಂದ ಉತ್ತಮ ಚಾರಿತ್ರ್ಯದ ಡೆಸ್ಡಿಮೋನಾಳ ಶೀಲದ ಬಗ್ಗೆ ಶಂಕಿತಗೊಂಡ ಒಥೆಲೋ ಆಕೆಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ವಿಭಿನ್ನವಾಗಿರುವ ಈ ಎರಡು ನಾಟಕಗಳಲ್ಲಿ ಕಲಾವಿದರಾದ ಉಮೇಶ ಆಚಾರ್ಯ, ಉಮೇಶ ಸಾಲಿಯಾನ, ನವೀನಕುಮಾರ, ನಾಗರಾಜ ಮಳವಳ್ಳಿ, ಕೊಟ್ರಮ್ಮ ಎಚ್. ಸೇರಿದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು. ಸನ್ನಿವೇಶಗಳಿಗೆ ತಕ್ಕಂತೆ ರಂಗಸಜ್ಜಿಕೆ, ವೇಷಭೂಷಣ, ಸಂಗೀತ, ಧ್ವನಿ ಎಲ್ಲವೂ ಒಪ್ಪುವಂತಿತ್ತು. ಸತತ ಎರಡು ವರ್ಷಗಳಿಂದ ನೀನಾಸಂ ತಿರುಗಾಟ ತಂಡವನ್ನು ಪಟ್ಟಣಕ್ಕೆ ಕರೆಯಿಸಿ ಇಲ್ಲಿನ ರಂಗಾಸಕ್ತರ ಹಸಿವು ತಣಿಸಲು ಕಾರಣವಾದ ಇಲ್ಲಿನ ನಿರಂತರ ವೇದಿಕೆ ಕಾರ್ಯ ಮೆಚ್ಚುಗೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT