ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರು-ಉಣಕಲ್ ಬೈಪಾಸ್ ರಸ್ತೆಗೆ ಡಾಂಬರು ಭಾಗ್ಯ!

Last Updated 8 ಫೆಬ್ರುವರಿ 2013, 6:14 IST
ಅಕ್ಷರ ಗಾತ್ರ

ಪ್ರಜಾವಾಣಿ ಫಲಶ್ರುತಿ

ಹುಬ್ಬಳ್ಳಿ: ಕಮರಿಪೇಟೆ ಪೊಲೀಸ್ ನಿಲ್ದಾಣದ ಮುಂಭಾಗದಿಂದ ಉಣಕಲ್‌ವರೆಗೆ ಸಾಗುವ ಬೈಪಾಸ್ ರಸ್ತೆಗೆ ಇದೀಗ ಡಾಂಬರೀಕರಣ ಭಾಗ್ಯ ಕೂಡಿಬಂದಿದೆ. ಕಳೆದೊಂದು ವಾರದಿಂದ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು, ಇಲ್ಲಿನ ಜನ ದೂಳಿನ ಸ್ನಾನ ತಪ್ಪಿದ ಖುಷಿಯಲ್ಲಿದ್ದಾರೆ.

ಸುಮಾರು 3.5 ಕಿ.ಮೀ. ಉದ್ದದ ಈ ರಸ್ತೆಯ ಡಾಂಬರೀಕರಣಕ್ಕೆ ಮಹಾನಗರಪಾಲಿಕೆಯು ರೂ. 1.5 ಕೋಟಿ ವ್ಯಯಿಸುತ್ತಿದೆ. ಕಮರಿಪೇಟೆ ಪೊಲೀಸ್ ನಿಲ್ದಾಣದಿಂದ ಡಾ. ಸಿಂಧೂರ ಆಸ್ಪತ್ರೆವರೆಗೆ ಒಂದು ಭಾಗ ಹಾಗೂ ಆಸ್ಪತ್ರೆಯಿಂದ ಸಾಯಿನಗರದವರೆಗೆ ಒಂದು ಭಾಗವನ್ನಾಗಿ ವಿಂಗಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಎರಡೂ ಭಾಗಗಳಿಗೆ ತಲಾ ರೂ 75 ಲಕ್ಷ ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ.

`ಪ್ರಸ್ತುತ ರಸ್ತೆಯನ್ನು ಸುಮಾರು 5.5 ಮೀಟರ್‌ನಿಂದ 7ಮೀಟರ್ ಅಗಲದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಐದು ಸೆಂಟಿಮೀಟರ್‌ನಷ್ಟು ದಪ್ಪದ ಡಾಂಬರ್ ಹಾಕಲಾಗುವುದು. ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಮಧ್ಯೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ಕಾರಣ ಅಲ್ಲಲ್ಲಿ ವಿರಾಮ ನೀಡಿ ಕೆಲಸ ಮುಂದುವರಿಸಲಾಗಿದೆ. ಅಂದುಕೊಂಡಂತೆ ಆದಲ್ಲಿ ಇನ್ನು ಒಂದು ತಿಂಗಳಿನಲ್ಲಿ ಕೆಲಸ ಮುಗಿಸುವ ನಿರೀಕ್ಷೆ ಇದೆ' ಎಂದು ಪಾಲಿಕೆಯ ಪಿಡಬ್ಲ್ಯುಡಿ ಎಂಜಿನಿಯರ್ ಎಂ.ಬಿ. ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.

`ಪ್ರಜಾವಾಣಿ' ವರದಿ ಪರಿಣಾಮ:
`ಅದೊಂದು ದಿನ ಈ ರಸ್ತೆಯ ದುರವಸ್ಥೆ ಕುರಿತು `ಪ್ರಜಾವಾಣಿ' ಪತ್ರಿಕೆಯಲ್ಲಿ ದೊಡ್ಡದಾಗಿ ವರದಿ ಪ್ರಕಟವಾಗಿತ್ತು. ಇಲ್ಲಿನ ಜನರ ಆಕ್ರೋಶವನ್ನು ಆ ವರದಿ ಬಿಂಬಿಸುತಿತ್ತು. ಅಂದು ರಾತ್ರಿಯೇ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ಸೇರಿ ಈ ರಸ್ತೆಯ ಅಭಿವೃದ್ಧಿಗೆ ಯೋಜನೆ ರೂಪಿಸಿದೆವು. ಅಷ್ಟೇ ಶೀಘ್ರವಾಗಿ ಟೆಂಡರ್ ಸಹ ಕರೆಯಲಾಯಿತು' ಎನ್ನುತ್ತಾರೆ ಈ ರಸ್ತೆ ಕಾಮಗಾರಿಯ ದಕ್ಷಿಣ ಭಾಗದ ಉಸ್ತುವಾರಿ ಹೊತ್ತಿರುವ ಎಂಜಿನಿಯರ್ ಎಸ್.ಎಸ್. ಮಣ್ಣಂಗಿ.

ರಸ್ತೆಯ ದುರವಸ್ಥೆ ಬಗ್ಗೆ, ಇದರಿಂದಾಗಿ ಇಲ್ಲಿನ ಜನ ಪಡುತ್ತಿರುವ ಕಷ್ಟಗಳ ಬಗ್ಗೆ `ಪ್ರಜಾವಾಣಿ' ಅನೇಕ ಬಾರಿ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

`ಸದ್ಯ ಸಿಂಧೂರ ಆಸ್ಪತ್ರೆಯಿಂದ ರಸ್ತೆಯಿಂದ ಕಾರವಾರ ರಸ್ತೆ ವೃತ್ತದವರೆಗಿನ ಕೆಲಸ ಚುರುಕಿನಿಂದ ಸಾಗಿದೆ. ಇದು ಮುಗಿದ ಬಳಿಕ ಅಲ್ಲಿಂದ ಕಮರಿಪೇಟೆವರೆಗಿನ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು' ಎಂದು ಅವರು ತಿಳಿಸಿದರು.

ರಸ್ತೆಯನ್ನು ಇನ್ನಷ್ಟು ವಿಸ್ತರಿಸಿ ನಂತರ ಕಾಮಗಾರಿ ಕೈಗೊಳ್ಳಲು ಮೊದಲು ಯೋಜಿಸಲಾಗಿತ್ತು. ಆದರೆ ರಸ್ತೆ ಮಧ್ಯದಲ್ಲಿಯೇ ವಿದ್ಯುತ್ ಕಂಬಗಳು ಇರುವುದರಿಂದ ರಸ್ತೆ ಅಗಲೀಕರಣ ಕಷ್ಟವಾಗಿತ್ತು. ಹಣಕಾಸಿನ ಕೊರತೆಯೂ ಇರುವ ಕಾರಣ ಸದ್ಯ ಈಗಿರುವ ವಿಸ್ತೀರ್ಣದಲ್ಲೇ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ.

ಈ ರಸ್ತೆಯು ಪಿ.ಬಿ. ರಸ್ತೆ ಹಾಗೂ ವಿಮಾನ ನಿಲ್ದಾಣ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೂ ಆಗಿರುವುದರಿಂದ ಶೀಘ್ರದಲ್ಲೇ ಇದರ ವಿಸ್ತರಣೆಯೂ ಆಗಬಹುದು ಎನ್ನುವ ನಿರೀಕ್ಷೆ ಹೊಂದಿರುವುದಾಗಿ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT