ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ್ತಿಲಲ್ಲೇ ಕಾವೇರಿ; ಕುಡಿಯುವ ನೀರಿಗೆ ಬರ!

Last Updated 10 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಕೆ.ಆರ್.ನಗರ: `ಸಮುದ್ರದ ನಂಟಸ್ತನ, ಉಪ್ಪಿಗೆ ಬಡತನ~ ಎಂಬ ಮಾತು ಈ ಗ್ರಾಮಕ್ಕೆ ಅಕ್ಷರಶಃ ಹೋಲಿಕೆಯಾಗುತ್ತದೆ. ಗ್ರಾಮದ ಹೊಸ್ತಿಲಲ್ಲೇ ಕಾವೇರಿ ನದಿ ಹರಿಯುತ್ತಿದ್ದರೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆ ತಪ್ಪಿಲ್ಲ.

ಗ್ರಾಮದಲ್ಲಿರುವ ಯಾವುದೇ ಬೋರ್‌ವೆಲ್‌ನಲ್ಲೂ ಹನಿ ನೀರು ತೊಟ್ಟಿಕ್ಕುವುದಿಲ್ಲ...
ಹೌದು. ತಾಲ್ಲೂಕಿನ ಗಂಧನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲೂರು ಗ್ರಾಮದ ಚಿತ್ರಣ ತುಂಬ ವಿಚಿತ್ರವಾಗಿದೆ. ಗ್ರಾಮದ ಪಕ್ಕದಲ್ಲಿಯೇ ಕಾವೇರಿ ನೀರು ಹರಿಯುತ್ತಿದೆ. ಆದರೆ, ಈ ಗ್ರಾಮಕ್ಕೆ ನದಿ ನೀರು ಪೂರೈಕೆ ಸಾಧ್ಯವಾಗಿಲ್ಲ. ಬಾಲೂರುಹೊಸಕೊಪ್ಪಲು ಗ್ರಾಮದಲ್ಲಿರುವ ಬೋರ್‌ವೆಲ್‌ನಿಂದಲೇ ಇಲ್ಲಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬಾಲೂರಿನಲ್ಲಿ ಮೂರು ಬೋರ್‌ವೆಲ್‌ಗಳಿದ್ದರೂ ಅದರಿಂದ ಒಂದೇ ಒಂದು ಹನಿ ನೀರು ಸಿಗುತ್ತಿಲ್ಲ. ಗ್ರಾಮದ ಹೊರಲವಯದಲ್ಲೇ ನದಿ ಇದ್ದರೂ ಗ್ರಾಮದಲ್ಲಿ ಅಂತರ್ಜಲ ಕುಸಿದಿರುವುದು ಅಚ್ಚರಿ ಮೂಡಿಸುತ್ತದೆ.

ಕೆ.ಆರ್.ನಗರದಿಂದ 10 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ 700ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಅಂಗನವಾಡಿ ಮತ್ತು 1 ರಿಂದ 5ನೇ ತರಗತಿವರೆಗೆ ಶಾಲೆ ಇದೆ. ಮುಂದಿನ ವ್ಯಾಸಂಗ ಮಾಡಬೇಕೆಂದರೆ ಗಂಧನಹಳ್ಳಿ, ಮಿರ್ಲೆ ಅಥವಾ ಹಂಪಾಪುರ ಗ್ರಾಮಕ್ಕೆ ತೆರಳಬೇಕು. ಗ್ರಾಮದಲ್ಲಿ ಹಾಲಿನ ಡೇರಿ ಕೂಡ ಇದೆ. ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಹಲವರು ನೀರಾವರಿ  ಸೌಲಭ್ಯ ಹೊಂದಿದ್ದಾರೆ. ಆದರೆ, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲ.

ಮೂರು ಪ್ರಮುಖ ರಸ್ತೆಗಳಲ್ಲಿ ಬೀದಿಗಳಿವೆ. 15 ವರ್ಷಗಳ ಹಿಂದೆ ಅಭಿವೃದ್ಧಿ ಮಾಡಲಾದ ರಸ್ತೆಗಳು ಇದುವರೆಗೂ ಡಾಂಬರ್ ಕಂಡಿಲ್ಲ. ಇದರಿಂದ ರಸ್ತೆಯಲ್ಲಿನ ಜಲ್ಲಿ ಕಲ್ಲು ಮೇಲೆದ್ದು ಗುಂಡಿಗಳು ಬಿದ್ದಿವೆ. ಕೆಲವೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ.

ಆದಾಗ್ಯೂ, ಚರಂಡಿಯಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಕಳೆದ ವರ್ಷ ಗೊಲ್ಲ ಜನಾಂಗದರಿಗಾಗಿ ಸಮುದಾಯ ಭವನ ಕೂಡ ಸರ್ಕಾರದಿಂದ ಮಂಜೂರಾಗಿತ್ತು. ಗ್ರಾಮದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ಸಮುದಾಯ ಭವನ ನಿರ್ಮಿಸಲು ಸಾಧ್ಯವಾಗಿಲ್ಲ. ಇದರಿಂದ ಸರ್ಕಾರದಿಂದ ಬಂದ ರೂ. 5 ಲಕ್ಷ ಅನುದಾನ ಹಿಂದಿರುಗಿದೆ.

ಮೂರು ವರ್ಷಗಳ ಹಿಂದೆ ಗ್ರಾಮದಲ್ಲಿ ಹಾರಂಗಿ ಇಲಾಖೆ ವತಿಯಿಂದ ಸಂಪರ್ಕ ಸೇತುವೆ ನಿರ್ಮಾಣ ಮಾಡಲಾಗಿದ್ದು, ಅದೂ ಪೂರ್ಣಗೊಂಡಿಲ್ಲ. ಇದು ಗ್ರಾಮಸ್ಥರ ಸಂಚಾರಕ್ಕೂ ಅಡೆತಡೆಯಾಗಿದೆ. ಬೀದಿ ದೀಪಗಳು ಇವೆ. ಆದರೆ, ಉರಿಯುವುದೇ ಇಲ್ಲ. ಕೆ.ಆರ್.ನಗರದಿಂದಲೇ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸಮಸ್ಯೆ ಉಂಟಾದಾಗ ತಕ್ಷಣ ಸ್ಪಂದಿಸಲು ಸಿಬ್ಬಂದಿ ಇಲ್ಲ. ಬಾಲೂರು ಗ್ರಾಮಕ್ಕೆ ಹತ್ತಿರವಿರುವ ಮಿರ್ಲೆ ಗ್ರಾಮದಿಂದಲೇ ವಿದ್ಯುತ್ ಸರಬರಾಜು ಮಾಡಿದರೆ ಅನುಕೂಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಗ್ರಾಮಕ್ಕೆ ರೈತ ಕಣ ಅವಶ್ಯ
ಬಾಲೂರುಹೊಸಕೊಪ್ಪಲು ಗ್ರಾಮದಲ್ಲಿರುವ ಟ್ಯಾಂಕಿ ನಿಂದ ಬಾಲೂರು ಗ್ರಾಮಕ್ಕೆ ಕುಡಿಯುವ ನೀರು ಸರಬ ರಾಜು ಮಾಡ ಲಾಗುತ್ತಿದೆ. ಇದರಿಂದ ಕುಡಿ ಯುವ ನೀರಿಗೆ ತೊಂದರೆ ಆಗುತ್ತಿದೆ. ನಮ್ಮ ಗ್ರಾಮ ದಲ್ಲೇ ಟ್ಯಾಂಕ್ ನಿರ್ಮಿಸಬೇಕು.ಸಮುದಾಯ ಭವನ, ರೈತ ಕಣ ಅವಶ್ಯಕ ವಾಗಿದೆ. ಅಧಿ ಕಾರಿಗಳು ಮತ್ತು ಜನಪ್ರತಿ ನಿಧಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಬಾಲೂರು ನಂಜುಂಡೇಗೌಡ, ಮುಖಂಡ

ಸಮಸ್ಯೆ ಕೇಳುವವರಾರು?
ಗ್ರಾಮದಲ್ಲಿನ ಒಂದು ಬೀದಿ ಇದುವರೆಗೂ ಡಾಂಬರು ಕಂಡಿಲ್ಲ. ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವುದರಿಂದ ಮಲಿನ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿರುವ ಕೊಳವೆಬಾವಿಗಳಿಂದ ನೀರು ಬರುವುದಿಲ್ಲ. ಬೀದಿ ದೀಪ ಉರಿಯುವುದಿಲ್ಲ. ನಮ್ಮ ಸಮಸ್ಯೆ ಕೇಳುವವರಾರು?
-ಕೃಷ್ಣೇಗೌಡ, ಗ್ರಾ.ಪಂ.ಮಾಜಿ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT