ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂಡಾ ಮಿಲಿಂದ್ ಈಗ ಹಾರ್ಲೆ ಹುಡುಗ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳ್ಳಂಬೆಳಿಗ್ಗೆಯೇ ಬೇಸಿಗೆ ಬಿಸಿಲ ಝಳ ಜೋರಾಗಿತ್ತು. `ಶೋಲೆ' ಚಿತ್ರೀಕರಣಕೊಂಡ ರಾಮನಗರದ ರಾಮದೇವರ ಬೆಟ್ಟದ ಬಂಡೆಗಳು ಕಾದು ಕೆಂಡವಾಗಿದ್ದವು. ಆ ತಪ್ಪಲಿನಲ್ಲೇ ಇದ್ದ ಮಾವಿನ ತೋಪಿನೊಳಗೆ ಕೊಂಚ ತಂಪಿತ್ತು. ಅಲ್ಲಿ ನಡೆಯುತ್ತಿದ್ದ ರಾಕ್ ಸಂಗೀತವೂ ದೂರಕ್ಕೆ ಇಂಪಾಗಿ ಕೇಳಿಸುತ್ತಿತ್ತು. ಅದೇ ತೋಪಿನಲ್ಲೇ ಬಿಸಿಲ ಝಳವನ್ನೂ ಲೆಕ್ಕಿಸದೇ ಕಪ್ಪು ಬಟ್ಟೆಯೊಳಗೆ ಸುಂದರಿಯೊಬ್ಬಳು ಯಾರಿಗಾಗಿಯೋ ಕಾಯುತ್ತಿದ್ದಳು. ಸುಂದರಿ ನೋಡುವ ತವಕ ಅಲ್ಲಿದ್ದವರಿಗೆ. ಆದರೆ ಆ ಸುಂದರಿಗೆ ಮಾತ್ರ ತನ್ನ ಇನಿಯನ ಸೇರುವ ಕಾತರ. ಆತನೂ ತನ್ನ ಇಡೀ ಕುಟುಂಬದೊಂದಿಗೆ ಆ ಸುಂದರಿಗಾಗಿಯೇ ಅಲ್ಲಿ ಬಂದಿದ್ದು ಗುಟ್ಟೇನೂ ಆಗಿರಲಿಲ್ಲ.

ಆ ಸುಂದರಿ ಬೇರ‌್ಯಾರೂ ಅಲ್ಲ, ಹಾರ್ಲೆ ಡೇವಿಡ್ಸನ್ ಐಎನ್883. ಆ ಇನಿಯ ರ‌್ಯಾಂಗ್ಲರ್ ಟ್ರೂ ವಾಂಡರರ್ಸ್ ವಿಜೇತ ಮಿಲಿಂದ್ ಹಿರೇಮಠ. ದೇಶದಾದ್ಯಂತ ರ‌್ಯಾಂಗ್ಲರ್ ಆಯೋಜಿಸಿದ್ದ ಟ್ರೂ ವಾಂಡರರ್ಸ್‌ನ ಎರಡನೇ ಆವೃತ್ತಿಯ ವಿಜೇತ, ಕನ್ನಡದ ಹುಡುಗ ಎಂಬ ಸಂತಸ ಅಲ್ಲಿ ಮನೆ ಮಾಡಿತ್ತು. ಮೂರನೇ ಸ್ಥಾನ ಪಡೆದ ಶ್ರೀನಾಥ್ ಕೂಡ ಕನ್ನಡಿಗರೇ. ವಿಜೇತರಿಗೆ ಪ್ರಶಸ್ತಿ ನೀಡುವ ಈ ಕಾರ್ಯಕ್ರಮದಲ್ಲಿ ನ್ಯೂಸ್ ಎಂಬ ತಂಡ ರಾಕ್ ಗೀತೆಗಳನ್ನೂ ಪ್ರಸ್ತುತಪಡಿಸಿತು. ಸ್ಪರ್ಧಿಗಳು ಮಾತ್ರವಲ್ಲದೆ ಬೈಕ್ ಆಸಕ್ತರು ಹಾಗೂ ವಿವಿಧ ಬೈಕರ್ ಸಂಘಟನೆಗಳಿಗೆ ಸೇರಿದ್ದವರೂ ಈ ಕಾರ್ಯಕ್ರಮದಲ್ಲಿ ತುಂಬು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಳೆದ ವರ್ಷದಂತೆ ಈ ವರ್ಷವೂ ರ‌್ಯಾಂಗ್ಲರ್ ಆಯೋಜಿಸಿದ್ದ `ಟ್ರೂ ವಾಂಡರರ್ಸ್ 2.0' ಸ್ಪರ್ಧೆಗೆ ಬಂದಿದ್ದ ಸಾವಿರಾರು ಅರ್ಜಿಗಳಲ್ಲಿ ಆಯ್ಕೆಯಾಗಿದ್ದು ಕೇವಲ ಹತ್ತು ಸಾಹಸಿ ಬೈಕರ್‌ಗಳು. ಬೈಕರ್‌ಗಳಿಗಾಯೇ ರ‌್ಯಾಂಗ್ಲರ್ ಸಿದ್ಧಪಡಿಸಿದ್ದ 7 ಐಕಾನ್ ಜೀನ್ಸ್, ವಾಟರ್ ರೆಪೆಲೆಂಟ್ ಡೆನಿಮ್, ಟೀಸ್ ಹಾಗೂ ಜಾಕೆಟ್ಸ್ ತೊಟ್ಟು ಈ ಸಾಹಸಿಗಳು ತಾವು ಈವರೆಗೂ ಹೋಗಿರದ ತಾಣಕ್ಕೆ ಹೋಗಿ ಅಲ್ಲಿನ ಅನುಭವ ಪಡೆಯುವುದರ ಜತೆಗೆ ಆ ಅನುಭವವನ್ನು ಬ್ಲಾಗ್ ಮೂಲಕ ಇತರರೊಂದಿಗೆ ಅಷ್ಟೇ ಸೊಗಸಾಗಿ ಹಂಚಿಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿತ್ತು. ಪ್ರತಿ ಬೈಕರ್‌ಗೆ ತನ್ನ ವ್ಯಾಪ್ತಿಯಲ್ಲಿ ಸುತ್ತಾಡುವಂತೆ ಸೂಚಿಸಲಾಗಿತ್ತು. ಎಕ್ಸ್‌ಬಿಎಚ್‌ಪಿ ತಂಡದವರು ತೀರ್ಪುಗಾರರಾಗಿದ್ದರು.

ವಿಜೇತ ಮಿಲಿಂದ್ ಹಿರೇಮಠ ಬೆಂಗಳೂರಿನಿಂದ ಹೊರಟು ಹಾಸನ ಮಾರ್ಗವಾಗಿ ಮಲೆನಾಡು, ಕರಾವಳಿಯ ಪ್ರತಿಯೊಂದು ಹಳ್ಳಿಯನ್ನೂ ಸುತ್ತಾಡಿ ಅಲ್ಲಿನ ಊಟ, ಬೆಟ್ಟದ ಮೇಲೆ ನಿದ್ದೆ, ಇಬ್ಬನಿಯ ಸ್ನಾನ ಇತ್ಯಾದಿ ಅನುಭವಗಳನ್ನು ರಸವತ್ತಾಗಿ ತಮ್ಮ ಬ್ಲಾಗ್‌ನಲ್ಲಿ ಬರೆಯುವ ಮೂಲಕ ನಿತ್ಯ ಅನೇಕರನ್ನು ತಲುಪುತ್ತಿದ್ದರು. ಅಲ್ಲಿನ ಊಟ, ಜನರೊಂದಿಗಿನ ಮಾತು, ಮಾಡಿದ ಸಾಹಸ ಇತ್ಯಾದಿ ಆಗುಹೋಗುಗಳನ್ನು ತಿಳಿಸುತ್ತಿದ್ದರು. ಫೇಸ್‌ಬುಕ್‌ನಲ್ಲಿರುವ 2.5 ಲಕ್ಷ ರ‌್ಯಾಂಗ್ಲರ್ ಅಭಿಮಾನಿಗಳು ತಮ್ಮ ಮತಗಳ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು. ಅಂತಿಮವಾಗಿ ಮಿಲಿಂದ್ ವರ್ಷಾನುಗಟ್ಟಲೆ ಬೈಕ್ ಸಾಹಸದ ತಾಲೀಮು ಮಾಡಿದ್ದಕ್ಕೆ ಪ್ರತಿಫಲ ಸಂದಿತು.

ಬೆಟ್ಟದ ತಪ್ಪಲ ವೇದಿಕೆಯಲ್ಲಿ...
ವಿಜಯಿಗೆ ಬೈಕ್ ಹಸ್ತಾಂತರಿಸಲು ವೇದಿಕೆಯನ್ನೂ ಬೆಟ್ಟದ ತಪ್ಪಲಿನಲ್ಲೇ ಆಯೋಜಿಸಲಾಗಿತ್ತು. `ರ‌್ಯಾಂಗ್ಲರ್‌ಗೆ ನೂರು ವರ್ಷಗಳ ಇತಿಹಾಸವಿದೆ. ಕೌಬಾಯ್‌ಗಳಿಗೆ ಉಡುಪು ಸಿದ್ಧಪಡಿಸುವುದರಲ್ಲಿ ರ‌್ಯಾಂಗ್ಲರ್ ಸಿದ್ಧಹಸ್ತ ಕಂಪೆನಿ. ಈಗ ಕುದುರೆ ಓಡಿಸುವವರು ವಿರಳ. ಕುದುರೆ ಬದಲು ಬೈಕ್ ಬಂದಿದೆ. ಅದರಂತೆ ಕೌಬಾಯ್‌ಗಳು ಬೈಕರ್‌ಗಳಾಗಿದ್ದಾರೆ. ಬೈಕ್ ಯಾವುದೇ ಆಗಲಿ ಸುತ್ತಾಡುವ ಮನಸ್ಸಿರಬೇಕು. ಅದಕ್ಕೆ ಪೂರಕವಾದ ಉಡುಪು ಸಿದ್ಧಪಡಿಸುವುದು ನಮ್ಮ ಹೊಣೆ. ಮೂರು ಬಗೆಯ ಬೈಕರ್ ಜೀನ್ಸ್‌ಗಳನ್ನು ಸಿದ್ಧಪಡಿಸಿದ್ದೇವೆ. ಕಳೆದ ವರ್ಷ ಮೊದಲ ಬಾರಿಗೆ ಟ್ರೂ ವಾಂಡರರ್ಸ್ ನಡೆಸಿದ್ದು ಹೊಸ ಅನುಭವ. ಆಗ ವಿಜೇತರಿಗೆ ಹ್ಯೂಸಂಗ್ ಬೈಕ್ ನೀಡಲಾಗಿತ್ತು. ಈಗ ಹಾರ್ಲೆ ನೀಡುತ್ತಿದ್ದೇವೆ' ಎಂದು ರ‌್ಯಾಂಗ್ಲರ್ ಮಾರುಕಟ್ಟೆ ವಿಭಾಗದ ಅನ್ಷುಲ್ ಚತುರ್ವೇದಿ ತಿಳಿಸಿದರು.

ಬೈಕ್ ಪಡೆಯಲು ತುದಿಗಾಲ ಮೇಲೆ ನಿಂತಿದ್ದ ಮಿಲಿಂದ್, ವೇದಿಕೆ ಏರಿದವರೇ ತಾವೇ ಮುಂದಾಗಿ ಆ ಕಪ್ಪು ಬಟ್ಟೆಯನ್ನು ಸರಿಸಿ ಸುಂದರಿಯನ್ನು ಅನಾವರಣಗೊಳಿಸಿದರು. ಬೈಕ್ ಏರಿ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ರ‌್ಯಾಂಗ್ಲರ್ ಅಧಿಕಾರಿಗಳಿಂದ ಬೈಕ್‌ನ ಕೀಲಿ ಪಡೆದು ಗಾಡಿ ಚಾಲೂ ಮಾಡಿ ಆ್ಯಕ್ಸಲರೇಟರ್ ಕೊಟ್ಟ ತಕ್ಷಣ ರಾಮದೇವರ ಗುಡ್ಡದಲ್ಲಿ ದೊಡ್ಡ ಸದ್ದು ಮೂಡುವಂತೆ ಬೈಕ್ ಗುಡುಗಿತು. ಇಡೀ ಪ್ರಯಾಣದುದ್ದಕ್ಕೂ ತನಗೆಲ್ಲೂ ತೊಂದರೆಯಾಗದಂತೆ ನೋಡಿಕೊಂಡ ಹೋಂಡಾ ಸಿಬಿಆರ್ 250 ಬೈಕನ್ನು ಮರೆಯದ ಮಿಲಿಂದ್, ಅದನ್ನೂ ತಂದು ತನ್ನ ಹೊಸ ಬೈಕ್ ಪಕ್ಕ ನಿಲ್ಲಿಸಿ ಫೋಟೊ ತೆಗೆಸಿಕೊಂಡಿದ್ದು ವಿಶೇಷ.

`ನಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಪ್ರವೇಶವಾಗಿದೆ. ಬೈಕ್ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಸ್ನೇಹಿತರು ನನ್ನ ಬೈಕನ್ನು ನನ್ನ ಗೆಳತಿ ಎಂದೇ ಕರೆಯುತ್ತಾರೆ. ಇದರಿಂದ ಇನ್ನಷ್ಟು ಸುತ್ತಾಡಬೇಕೆಂಬ ಮನಸ್ಸಾಗಿದೆ. ಭಾರತದ ಈಶಾನ್ಯ ರಾಜ್ಯಗಳಿಗೊಮ್ಮೆ ಭೇಟಿ ನೀಡುವ ಇರಾದೆಯೂ ಇದೆ' ಎಂದ ಮಿಲಿಂದ್ ಕಣ್ಣಲ್ಲಿ ಕನಸುಗಳು ಇನ್ನೂ ಸಾಕಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT