ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂವರ್ಕ್ ಮಾಡದ್ದಕ್ಕೆ ಹೆತ್ತ ಮಗಳನ್ನೇ ಕೊಂದ!

ಲಟ್ಟಣಿಗೆಯಿಂದ ಹೊಡೆದು ಕೊಲೆ-ಆರೋಪ
Last Updated 26 ಜುಲೈ 2013, 20:05 IST
ಅಕ್ಷರ ಗಾತ್ರ

ಬೆಂಗಳೂರು: ತಂದೆಯೇ ಎಂಟು ವರ್ಷದ ಮಗಳಿಗೆ ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಸಮೀಪದ ಆವಲಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ನೇಹಾಸಿಂಗ್ ಕೊಲೆಯಾದ ಬಾಲಕಿ. ಆಕೆ ಆವಲಹಳ್ಳಿಯ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಘಟನೆ ಸಂಬಂಧ ಆಕೆಯ ತಂದೆ ಸತ್ಯನಾರಾಯಣಸಿಂಗ್ ಮತ್ತು ಅಜ್ಜಿ ಪದ್ಮಬಾಯಿ ಅವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಹೋಂವರ್ಕ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಸತ್ಯನಾರಾಯಣಸಿಂಗ್ ಮಗಳು ನೇಹಾಸಿಂಗ್‌ಳನ್ನು ಕೊಠಡಿಯೊಂದಕ್ಕೆ ಎಳೆದುಕೊಂಡು ಹೋಗಿ ಲಟ್ಟಣಿಗೆಯಿಂದ ಮನಬಂದಂತೆ ಹೊಡೆದಿದ್ದಾನೆ. ಇದರಿಂದಾಗಿ ನೇಹಾಸಿಂಗ್‌ಳ ಮೈಮೇಲೆಲ್ಲಾ ಬಾಸುಂಡೆ ಮೂಡಿ, ಬಲಗೈ ಮುರಿದಿದೆ. ಘಟನೆಯಿಂದ ಅಸ್ವಸ್ಥಗೊಂಡ ಆಕೆ ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ನಂತರ ರಾತ್ರಿ 12 ಗಂಟೆ ವೇಳೆಗೆ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಸತ್ಯನಾರಾಯಣ್‌ಸಿಂಗ್, `ಮಗಳನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಮನೆಗೆ ಬಂದ ಮಗಳು ಮೃತಪಟ್ಟಿದ್ದಾಳೆ' ಎಂದು ಮಾಹಿತಿ ನೀಡಿದ.

ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಆತ, `ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಿದ್ದೆವು. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದ ಮಗಳನ್ನು ದುಷ್ಕರ್ಮಿಗಳು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮಗಳಿಗಾಗಿ ಎಲ್ಲೆಡೆ ಹುಡುಕಾಡುತ್ತಿದ್ದಾಗ ಗಾಯಗೊಂಡ ಸ್ಥಿತಿಯಲ್ಲಿ  ರಾತ್ರಿ 11.45ರ  ಸುಮಾರಿಗೆ ಮನೆಗೆ  ವಾಪಸ್ ಬಂದ ಆಕೆ ಕೆಲ ಹೊತ್ತಿನಲ್ಲೇ  ಸಾವನ್ನಪ್ಪಿದಳು'  ಎಂದು ಸುಳ್ಳು ಹೇಳಿ ಪ್ರಕರಣದ ದಿಕ್ಕು  ತಪ್ಪಿಸಲು ಯತ್ನಿಸಿದ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಬಾಲಕಿಯ ಮೇಲೆ ಅತ್ಯಾಚಾರ ನಡೆದ ಯಾವುದೇ ಲಕ್ಷಣಗಳು ಇರಲಿಲ್ಲ. ಇದರಿಂದಾಗಿ ಆತನ ಮೇಲೆ ಅನುಮಾನ ಮೂಡಿತು. ನಂತರ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ನಡೆದ ಸಂಗತಿಯನ್ನು ತಿಳಿಸಿದ. ಘಟನೆ ವೇಳೆ ಆತನ ತಾಯಿ ಪದ್ಮಬಾಯಿ ಮತ್ತು ಎರಡನೇ ಪತ್ನಿ ತೇಜಸ್ವಿನಿ ಅವರು ಮತ್ತೊಂದು ಕೊಠಡಿಯಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆವಲಹಳ್ಳಿ ಎರಡನೇ ಅಡ್ಡರಸ್ತೆ ನಿವಾಸಿಯಾದ ಸತ್ಯನಾರಾಯಣಸಿಂಗ್, ಈ ಮೊದಲು ಆಶಾ ಎಂಬುವರನ್ನು ವಿವಾಹವಾಗಿದ್ದ. ಆಶಾ ಅವರು 2006ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೇಹಾಸಿಂಗ್, ಆಶಾ ಅವರ ಮಗಳು. ಆಶಾ ಸಾವಿನ ನಂತರ ಅವರ ತಂದೆ ರಘುನಾಥ್ ಸಿಂಗ್ ಮತ್ತು ತಾಯಿ ವಸಂತಿ ಅವರೇ ಮೊಮ್ಮಗಳು ನೇಹಾಸಿಂಗ್‌ಳನ್ನು ಶಿವಮೊಗ್ಗದಲ್ಲಿ ಸಾಕಿಕೊಂಡಿದ್ದರು. ಸತ್ಯನಾರಾಯಣಸಿಂಗ್ ಎರಡು ತಿಂಗಳ ಹಿಂದೆ ರಘುನಾಥ್‌ಸಿಂಗ್ ದಂಪತಿಯ ಜತೆ ಜಗಳವಾಡಿ ನೇಹಾಸಿಂಗ್‌ಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

ಆಶಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗಜೀವನರಾಂನಗರ ಪೊಲೀಸರು ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು ಸತ್ಯನಾರಾಯಣಸಿಂಗ್‌ನನ್ನು ಬಂಧಿಸಿದ್ದರು. ನಂತರ ಐದು ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ತೇಜಸ್ವಿನಿ ಅವರನ್ನು ಎರಡನೇ ಮದುವೆಯಾಗಿದ್ದ. ತೇಜಸ್ವಿನಿ ಅವರಿಗೆ ಎರಡು ವರ್ಷದ ಗಂಡು ಮಗುವಿದೆ. ಆರೋಪಿಯು ಟಿಂಬರ್ ಲೇಔಟ್‌ನಲ್ಲಿ ಪ್ಲಾಸ್ಟಿಕ್ ವಸ್ತುಗಳ ಕಾರ್ಖಾನೆ ಇಟ್ಟುಕೊಂಡಿದ್ದ. ಬಂಧಿತರ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

`ಸತ್ಯನಾರಾಯಣಸಿಂಗ್‌ನ ಕಿರುಕುಳ ತಾಳಲಾರದೆ ಆಶಾ ಅವರು ಮದುವೆಯಾದ ಎರಡು ವರ್ಷದಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಆತ ಎರಡನೇ ಪತ್ನಿಗೂ ವಿನಾ ಕಾರಣ ಕಿರುಕುಳ ನೀಡುತ್ತಿದ್ದ. ಪದ್ಮಬಾಯಿ ಸಹ ಮಗನ ಜತೆ ಸೇರಿಕೊಂಡು ಬಾಲಕಿ ನೇಹಾಸಿಂಗ್‌ಳನ್ನು ಥಳಿಸುತ್ತಿದ್ದರು' ಎಂದು ರಘುನಾಥ್‌ಸಿಂಗ್ ಅವರ ಸಂಬಂಧಿಕ ಧನೇಂದ್ರಸಿಂಗ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT