ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್ ಬಾಡಿಗೆ ಹೆಚ್ಚಿಸದಂತೆ ಸೂಚನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ಸಭೆ
Last Updated 6 ಸೆಪ್ಟೆಂಬರ್ 2013, 6:47 IST
ಅಕ್ಷರ ಗಾತ್ರ

ಮೈಸೂರು: `ನಗರದ ಹೋಟೆಲ್‌ಗಳ ಕೊಠಡಿಗಳ ಬಾಡಿಗೆಯನ್ನು ದಸರೆಗೂ ಮುನ್ನವೇ ನಿಗದಿಪಡಿಸಿ ಪ್ರಚಾರ ಮಾಡಬೇಕು. 403ನೇ ದಸರಾ ಮಹೋತ್ಸವ ಮುಗಿಯುವವರೆಗೆ ಇದೇ ದರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಬಾಡಿಗೆ ಹೆಚ್ಚಳ ಮಾಡಿ ಪ್ರವಾಸಿಗರಿಗೆ ಅನಗತ್ಯ ತೊಂದರೆ ನೀಡಬಾರದು' ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಜಾಧವ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರಿನ ಕೈಗಾರಿಕೋದ್ಯಮಿಗಳು, ಹೋಟೆಲ್ ಮಾಲೀಕರು, ಪ್ರವಾಸಿ ಏಜೆನ್ಸಿಗಳ ಪ್ರತಿನಿಧಿಗಳು, ಕೈಗಾರಿಕಾ ಇಲಾಖೆ, ಸಾರಿಗೆ ಇಲಾಖೆ, ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ದಸರಾ ವೇಳೆಯಲ್ಲಿ ಕೆಲವು ಹೋಟೆಲ್ ಮಾಲೀಕರು ಕೊಠಡಿಗಳ ಬಾಡಿಗೆ ಹೆಚ್ಚಿಸುವ ಮೂಲಕ ಪ್ರವಾಸಿಗರನ್ನು ಸುಲಿಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಈ ಆದೇಶ ನೀಡಿದರು.

ದಸರಾ ಸಮಯದಲ್ಲಿ ಮೈಸೂರನ್ನು ಪ್ರವಾಸಿಸ್ನೇಹಿ ನಗರವಾಗಿ ಅಭಿವೃದ್ಧಿಪಡಿಸಬೇಕು. ನಾಡಹಬ್ಬಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ  ವಿವಿಧ ಭಾಗಗಳಲ್ಲಿ ದಸರಾ ಬಗ್ಗೆ ವಿಶೇಷ ಪ್ರಚಾರ ಕೈಗೊಳ್ಳಲಾಗಿದೆ. ಹೀಗಾಗಿ, ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆ ಇದ್ದು ಅವರಿಗೆ ಕಹಿ ಅನುಭವ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದರು.

ಸಾರಿಗೆ ಪಾಸ್ ನೀಡಿ: ಪ್ರವಾಸಿಗರು ಸಮೂಹ ಸಾರಿಗೆಯನ್ನು ಅವಲಂಬಿಸುವಂತೆ ಮಾಡಬೇಕು. ಇದಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸಬೇಕು. 15 ದಿನಗಳಿಗೆ ಬಳಸುವ ಬಸ್ ಪಾಸ್‌ಗಳನ್ನು ಮೊದಲೇ ವಿತರಿಸಬೇಕು. ಎಲ್ಲ ಹೋಟೆಲ್‌ಗಳಲ್ಲೂ ಇಂತಹ ಪಾಸ್‌ಗಳು ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಈ ಕುರಿತು ಸಾರಿಗೆ ಸಂಸ್ಥೆ ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಪ್ರವಾಸೋದ್ಯಮ ಅಭಿವದ್ಧಿ ನಿಗಮದ ಗೋಲ್ಡನ್ ಚಾರಿಯಟ್ ರೈಲು ದಸರಾ ಸಮಯದಲ್ಲಿ ಮೈಸೂರಿಗೆ ಆಗಮಿಸಲಿದೆ. ಮೈಸೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ನಿರ್ಧರಿಸಲಾಗಿದೆ. ದಸರಾ ಕಾರ್ಯಕ್ರಮ ನಡೆಯುವ ವೇದಿಕೆಯ ಸಮೀಪ, ಪ್ರವಾಸಿ ದಟ್ಟಣೆಯ ಸ್ಥಳಗಳಲ್ಲಿ ಸಂಚಾರಿ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಬೇಕು. ಸ್ವಚ್ಫತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು.

ದಸರಾ ಸಮಯದಲ್ಲಿ ಪ್ರವಾಸಿ ವಾಹನಗಳಿಗೆ ನೀಡುವ ಪ್ರವೇಶ ತೆರಿಗೆ ವಿನಾಯ್ತಿಯನ್ನು ಅಕ್ಕಪಕ್ಕದ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂಬ ಸಲಹೆಯನ್ನು ಉದ್ಯಮಿಗಳು ನೀಡಿದರು. ಈ ಬಗ್ಗೆ ಸಾರಿಗೆ ಆಯುಕ್ತರ ಜೊತೆ ಚರ್ಚಿಸುವುದಾಗಿ ಅರವಿಂದ್ ಜಾಧವ್ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸಿ. ಶಿಖಾ ಮಾತನಾಡಿ, ಸಯ್ಯೊಜಿರಾವ್ ರಸ್ತೆಯ ವ್ಯಾಪಾರಿಗಳ ಸಭೆಯನ್ನು ಈಚೆಗೆ ನಡೆಸಲಾಗಿದೆ. ಎಲ್ಲ ಮಳಿಗೆಗಳ ಮುಂದೆ ಏಕರೂಪದ ಕಲಾತ್ಮಕ ನಾಮಫಲಕ ಅವಳವಡಿಸಲು ವ್ಯಾಪಾರಿಗಳು ಒಪ್ಪಿದ್ದಾರೆ. ಇದರಿಂದ ಜಂಬೂಸವಾರಿ ಸಾಗುವ ಮಾರ್ಗ ಇನ್ನಷ್ಟು ಕಳೆಗಟ್ಟಲಿದೆ. ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುವುದು. ಎಲ್ಲ ಹೋಟೆಲ್‌ಗಳಲ್ಲಿ ಮಾಹಿತಿ ನೀಡುವ ಸಾಹಿತ್ಯ ದೊರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಗೋಪಾಲ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ದಸರಾ ಅನುದಾನ: ಸದ್ಬಳಕೆಗೆ ಒತ್ತಾಯ
ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಮೀಸಲಿಟ್ಟ ಅನುದಾನದಲ್ಲಿ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೂ ಬಳಸಬೇಕು ಎಂದು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ಒತ್ತಾಯಿಸಿದ್ದಾರೆ.

ಪ್ರತಿ ದಸರಾ ಮಹೋತ್ಸವಕ್ಕೆ ಮೈಸೂರಿಗೆ ವಿಶೇಷ ಅನುದಾನ ಬಿಡುಗಡೆಯಾಗುತ್ತದೆ. ಈ ಹಣದಲ್ಲಿ ನಗರದ ವಿವಿಧ ರಸ್ತೆಗಳ ಡಾಂಬರೀಕರಣ, ಬೀದಿದೀಪಗಳ ದುರಸ್ತಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆದರೆ, ಕಳೆದ ಹತ್ತು ವರ್ಷಗಳಿಂದ ಅನುದಾನ ಬಳಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಎಸ್.ಎ. ರಾಮದಾಸ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಬಡಾವಣೆಗಳು ಅಭಿವೃದ್ಧಿಯಾಗಿಲ್ಲ ಎಂದು ದೂರಿದ್ದಾರೆ.

ಈ ತಾರತಮ್ಯವನ್ನು ನಿವಾರಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಮುಂದಾಗಬೇಕು. ದಸರಾ ಅನುದಾನವನ್ನು ನಗರದ ಸಮಗ್ರ ಅಭಿವೃದ್ಧಿಗೆ ವಿನಿಯೋಗ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ
ಕುವೆಂಪುನಗರದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ  ಅ. 5ರಿಂದ ಹಮ್ಮಿಕೊಂಡಿರುವ ದಸರಾ ಬೊಂಬೆ ಮತ್ತು ಕೈತೋಟ ಪ್ರದರ್ಶನ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದವರ ಮನೆಗೆ ಅ. 8ರಿಂದ 11ರವರೆಗೆ ಪ್ರತಿಷ್ಠಾನದ ತೀರ್ಪುಗಾರರು ಭೇಟಿ ನೀಡಲಿದ್ದಾರೆ. ನಗರದ ಗಾನಭಾರತಿಯಲ್ಲಿ ಜನವರಿಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಆಸಕ್ತರು ಸೆ. 31ರ ಒಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಮೊ: 94484 34550 ಸಂಪರ್ಕಿಸಿ ಎಂದು ಪ್ರಕಟಣೆ ಮನವಿ ಮಾಡಿದೆ.

ರಂಗಾಯಣದ 9 ಕ್ಲಾಸಿಕ್ ನಾಟಕ ಪ್ರದರ್ಶನ
ರಂಗಾಸಕ್ತರಿಗೊಂದು ಸಿಹಿ ಸುದ್ದಿ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಇಲ್ಲಿಯ ರಂಗಾಯಣದ ಕಲಾವಿದರು 9 ಕ್ಲಾಸಿಕ್ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ.

ರಂಗಾಯಣದ ಕಲಾವಿದರೊಂದಿಗೆ ರಂಗ ಸಮಾಜದ ಸದಸ್ಯರು ಗುರುವಾರ ಸಂವಾದ ನಡೆಸಿದ ನಂತರ ನಾಟಕಗಳ ಪ್ರದರ್ಶನ ಕುರಿತು ಪ್ರಕಟಿಸಲಾಯಿತು.

25 ವರ್ಷಗಳಿಂದ ಪ್ರಯೋಗಿಸುತ್ತ ಬಂದ ಸದಾರಮೆ, ಶೂದ್ರ ತಪಸ್ವಿ, ಚಂದ್ರಹಾಸ, ಗಾಂಧಿ ವರ್ಸಸ್ ಗಾಂಧಿ, ಚಿರೇಬಂದಿ ವಾಡೆ, ಪುಗಳೇಂದಿ ಪ್ರಹಸನ ಮೊದಲಾದ ನಾಟಕಗಳು ಅ. 5ರಿಂದ 13ರವರೆಗೆ ರಂಗಾಯಣದ ಭೂಮಿಗೀತದಲ್ಲಿ ಪ್ರಯೋಗಗೊಳ್ಳಲಿವೆ.

`ಪ್ರಯೋಗಗೊಳ್ಳುವ ನಾಟಕಗಳ ಪಟ್ಟಿಯನ್ನು ಕಲಾವಿದರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ' ಎಂದು ರಂಗಾಯಣ ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟಿ ತಿಳಿಸಿದರು.

ಕಲಾವಿದರೊಂದಿಗೆ ಸಮಾಲೋಚನೆ: ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಕ್ಕೆ ನಿಯೋಜನೆಗೊಂಡಿದ್ದ 12 ಕಲಾವಿದರನ್ನು ಕೂಡಲೇ ವಾಪಸು ಮೈಸೂರಿಗೆ ಕರೆಸಬೇಕೆಂದು ರಂಗ ಸಮಾಜ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿತ್ತು. ಜತೆಗೆ ಕಲಾವಿದರೊಂದಿಗೆ ಸಂವಾದ ನಡೆಸಬೇಕೆಂದೂ ನಿರ್ಧರಿಸಿತ್ತು. ಹೀಗಾಗಿ ಗುರುವಾರ ರಂಗ ಸಮಾಜದ ಸದಸ್ಯರಾದ ಜಿ.ಕೆ. ಗೋವಿಂದರಾವ್, ಮಂಡ್ಯ ರಮೇಶ್, ಕೆ.ವೈ. ನಾರಾಯಣಸ್ವಾಮಿ, ಶಶಿಧರ ಅಡಪ, ಡಿ.ಎಸ್. ಚೌಗಲೆ ಹಾಗೂ ಸುಜಾತಾ ಜಂಗಮಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಯಿತು. ಮೊದಲಿಗೆ ಸಾಮೂಹಿಕವಾಗಿ ಚರ್ಚಿಸಿದ ನಂತರ ವೈಯಕ್ತಿಕವಾಗಿಯೂ ಕಲಾವಿದರೊಂದಿಗೆ ಸಮಾಲೋಚಿಸಲಾಯಿತು.

`ಈ ಚರ್ಚೆಯಿಂದ ಕಲಾವಿದರ ಸಮಸ್ಯೆಗಳ ಕುರಿತು ಅರಿಯಲಾಗಿದೆ. ಮುಂದೇನು ಮಾಡಬಹುದು ಎನ್ನುವುದರ ಕುರಿತು ಯೋಜಿಸಲಾಗುತ್ತದೆ. ಮೈಸೂರು ರಂಗಾಯಣದ ಜತೆಗೆ ಇತರ ರಂಗಾಯಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಕೆ.ವೈ. ನಾರಾಯಣಸ್ವಾಮಿ ತಿಳಿಸಿದರು.

ದಸರಾ ಹಬ್ಬಕ್ಕೆ  ರೂ 6 ಕೋಟಿ ಬಿಡುಗಡೆ
ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಆಚರಣೆ ಪ್ರಯುಕ್ತ ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ ಆರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಈ ಸಲದ ದಸರಾ ಆಚರಣೆಗೆ ಒಟ್ಟು  ರೂ 10 ಕೋಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಮೊದಲ ಹಂತದ ಸಿದ್ಧತೆ ಸಲುವಾಗಿ ಆರು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶೇ 75ರಷ್ಟು ಹಣ ಖರ್ಚು ಮಾಡಿದ ನಂತರ ಬಾಕಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಲು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ದಸರಾ ಉದ್ದೇಶಕ್ಕೆ ಮಾತ್ರ ಹಣ ಬಳಸಬೇಕು. ಮಂಜೂರಾದ ಹಣ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಲೆಕ್ಕಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪಟ್ಟಿ ಹಾಗೂ ಹಣ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಸಿದ್ರಾಮಪ್ಪ ತಳವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಅನುದಾನ ಬಳಕೆಗೆ ಪಾರದರ್ಶಕ ಅಧಿನಿಯಮದ ವಿನಾಯಿತಿ ನೀಡಲಾಗಿದೆ ಎಂದೂ ತಳವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT