ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್ ಹುಡುಗರ ಆಟದ ಪ್ರೇರಣೆ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಉದ್ಯಾನನಗರಿಯಲ್ಲಿ ಅಂದೊಂದು ದಿನ ಆ ಹೋಟೆಲ್ ಹುಡುಗರು ಆಡುತ್ತಿದ್ದ ಆಟ ವಿಚಿತ್ರವಾಗಿ ಕಂಡರೂ ಮನ ಸೆಳೆಯಿತು. ಮಾಣಿಗಳ ಕೈಯಲ್ಲಿ ಬ್ಯಾಟ್ ಇರಲಿಲ್ಲ. ಆದರೆ ಅವರು ಕ್ರಿಕೆಟ್ ಆಡುತ್ತಿದ್ದರು! ಹೌದು; ಟೆನಿಸ್ ಬಾಲನ್ನು ಒಬ್ಬ ಎಸೆಯುತ್ತಿದ್ದ.

`ಸ್ಟಂಪ್~ ಮಾದರಿಯಲ್ಲಿ ಜೋಡಿಸಿಟ್ಟ ಕಲ್ಲಿನ ಮುಂದೆ ನಿಂತಿದ್ದ ಹುಡುಗ ಚೆಂಡನ್ನು ಒದೆಯುತ್ತಿದ್ದ. ಎಲ್ಲವೂ ಕ್ರಿಕೆಟ್ ನಿಯಮದಂತೇ ಆ ಆಟ. ಆದರೆ ಚೆಂಡನ್ನು ಬ್ಯಾಟ್‌ನಿಂದ ದಂಡಿಸುತ್ತಿರಲಿಲ್ಲ. ಕಾಲಿಂದ ಒದ್ದು ಬೌಂಡರಿಗೆ ಅಟ್ಟುವ ಪ್ರಯತ್ನ ನಡೆದಿತ್ತು.

ಹೋಟೆಲ್ ಮಾಣಿಗಳು ರಜಾ ದಿನ ಆಡಿದ್ದ ಆಟ `ಲೆಗ್ ಕ್ರಿಕೆಟ್~ ರೂಪ ಪಡೆದುಕೊಂಡಿತು. ಹೋಟೆಲ್ ಹುಡುಗರು ಆಡಿದ್ದ ಆಟಕ್ಕೆ ವ್ಯವಸ್ಥಿತ ಸ್ವರೂಪವನ್ನು ಕೊಟ್ಟ ಶ್ರೇಯ ಎಸ್. ನಾಗರಾಜ್ ಅವರದ್ದು. ಈ ಆಟದಲ್ಲಿ ಕಾಲೇ ಬ್ಯಾಟ್. ಚೆಂಡು-ದಾಂಡಿನ ಆಟದ ಎಲ್ಲ ನಿಯಮಗಳನ್ನು ಇಟ್ಟುಕೊಂಡರೂ ಬ್ಯಾಟ್ ಬಿಟ್ಟು ಕಾಲಿಗೇ ಬ್ಯಾಟ್‌ನ ಸ್ಥಾನ ಕೊಟ್ಟು, ವಿಭಿನ್ನವಾದ ಕ್ರಿಕೆಟ್ ಹುಟ್ಟುಹಾಕಿ ಅದಕ್ಕೆ `ಲೆಗ್ ಕ್ರಿಕೆಟ್~ ಎನ್ನುವ ಹೆಸರು ಕೊಟ್ಟಿದ್ದು ಇವರೇ.

ಬ್ಯಾಟ್ ತುಂಬಾ ದುಬಾರಿ. ಆದ್ದರಿಂದ ಕ್ರಿಕೆಟ್ ಆಡಲು ಜೇಬಲ್ಲೊಂದಿಷ್ಟು ಕಾಸೂ ಇರಬೇಕು. ಆದರೆ ಲೆಗ್ ಕ್ರಿಕೆಟ್ ಹಾಗಲ್ಲ. ಒಂದು ರಬ್ಬರ್ ಇಲ್ಲವೆ ಚರ್ಮದ ಹೊದಿಕೆಯುಳ್ಳ ಗಾಳಿ ತುಂಬಿದ ಯಾವುದೇ ಚೆಂಡಾದರೂ ಸಾಕು. ಎಲ್ಲಿ ಬೇಕಾದರೂ ಈ ಆಟವಾಡಬಹುದು.

ಆದ್ದರಿಂದಲೇ ಇಂತಹದೊಂದು ಆಟಕ್ಕೆ ನಿಯಮಗಳ ಚೌಕಟ್ಟು ಹಾಕಿ, ಬೇರೆಲ್ಲ ಕ್ರೀಡೆಗಳಂತೆ ಟೂರ್ನಿ ನಡೆಸುವ ಮಟ್ಟಕ್ಕೆ ಇದನ್ನು ಬೆಳೆಸಿದ ಕರ್ನಾಟಕ ರಾಜ್ಯ ಲೆಗ್ ಕ್ರಿಕೆಟ್ ಸಂಸ್ಥೆಯ ಸ್ಥಾಪಕರಾದ ನಾಗರಾಜ್ ಈಗ ಸಂತಸದಲ್ಲಿದ್ದಾರೆ. ಏಕೆಂದರೆ ಈ ಕ್ರೀಡೆಗಾಗಿ ರಾಷ್ಟ್ರೀಯ ಫೆಡರೇಷನ್ ಕಟ್ಟುವ ಕೆಲಸ ನಡೆದಿದೆ. ಅಷ್ಟೇ ಅಲ್ಲ, ವಿದೇಶಗಳಿಗೂ ಈ ಆಟದ ಆಸಕ್ತಿಯ ಕಂಪು ಹರಡುತ್ತಿದೆ. ಈ ಸಂದರ್ಭದಲ್ಲಿ ಅವರು `ಲೆಗ್ ಕ್ರಿಕೆಟ್~ ಕುರಿತು ಹೇಳಿದ್ದಿಷ್ಟು:

`ಒಮ್ಮೆ ಈ ಆಟವನ್ನು ನೋಡಿದವರು ನಾವೂ ಯಾಕೆ ಹೀಗೆ ಆಡಬಾರದೆಂದು ಖಂಡಿತ ಯೋಚಿಸದೇ ಇರುವುದಿಲ್ಲ. ಅತಿ ಕಡಿಮೆ ವೆಚ್ಚದಲ್ಲಿ ಮನರಂಜನೆ ನೀಡುವ ಜೊತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಲೂ ಸಹಕಾರಿ.

ಮೊದಲು ಈ ಆಟದ ನಿಯಮಗಳನ್ನು ರೂಪಿಸುವಾಗ ಕೇವಲ ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ ಈ ಕ್ರೀಡೆ ಎಂದುಕೊಂಡಿದ್ದೆ. ಆದರೆ ಆನಂತರ ಚೌಕಟ್ಟನ್ನು ಮುರಿದು ಪುರುಷರು ಮತ್ತು ಬಾಲಕರಿಗೂ ಇದು ತಕ್ಕ ಆಟವೆಂದು ನಿರ್ಧರಿಸಿದೆ. ಹಾಗೆ ಮಾಡಿದ್ದು ಒಳಿತೇ ಆಯಿತು. ಈಗ ಲಿಂಗಭೇದ ಹಾಗೂ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಲೆಗ್ ಕ್ರಿಕೆಟ್ ಕಡೆ ಗಮನ ಹರಿಸುತ್ತಿದ್ದಾರೆ. ಫುಟ್‌ಬಾಲ್, ಕ್ರಿಕೆಟ್ ಎರಡೂ ಒಟ್ಟಿಗೆ ಇರುವುದು ಇದರ ಇನ್ನೊಂದು ವಿಶೇಷ.

ಪುಟ್ಟ ಇತಿಹಾಸ
ಈಗಲೂ ಇದು ಹೊಸ ಕ್ರೀಡೆ ಎಂದೇ ನನ್ನ ಭಾವನೆ. ದೊಡ್ಡ ಹಂತಕ್ಕೆ ಬೆಳೆಯುವ ಅರ್ಹತೆ ಹಾಗೂ ಆಕರ್ಷಕ ಅಂಶಗಳು ಇದರಲ್ಲಿವೆ. ದಶಕದ ಹಿಂದೆ ಲೆಗ್ ಕ್ರಿಕೆಟ್ಟನ್ನು ಶಾಲಾ ಮಕ್ಕಳಿಗೆ ಪರಿಚಯಿಸಲಾಯಿತು. ಆನಂತರ ರಾಜ್ಯ ಸಂಸ್ಥೆ ಕಟ್ಟಿದ್ದು. ಅದೀಗ ಬೆಳೆದಿದೆ. ಅನೇಕ ಟೂರ್ನಿಗಳನ್ನು ಆಯೋಜಿಸಲಾಗಿದೆ.

ಮುಂದೆಯೂ ಈ ಕ್ರೀಡೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯಬೇಕೆನ್ನುವುದು ಆಶಯ. ಈಗ ಒಂದು ಹಂತವನ್ನಂತೂ ಲೆಗ್ ಕ್ರಿಕೆಟ್ ಮುಟ್ಟಿದೆ. ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ಆಟವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಶ್ರೀಲಂಕಾದಲ್ಲಿಯಂತೂ ಭಾರಿ ಆಸಕ್ತಿ ವ್ಯಕ್ತವಾಗಿದೆ. ಆಸ್ಟ್ರೇಲಿಯಾದಲ್ಲಿ ಇದು ರಂಜನೆಯ ಕ್ರೀಡೆಯಾಗಿ ಸ್ವೀಕೃತವಾಗಿದೆ.

ಆಡಬೇಕು-ನೋಡಬೇಕು
ಜನರು ಈ ಆಟವನ್ನು ಆಡಬೇಕು ಹಾಗೂ ನೋಡಬೇಕು ಎನ್ನುವ ಕಾರಣಕ್ಕಾಗಿ ಪ್ರತಿ ವರ್ಷವೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಟೂರ್ನಿ ನಡೆಸಲಾಗುತ್ತಿದೆ. ಇತ್ತೀಚೆಗೆ ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಲೆಗ್ ಕ್ರಿಕೆಟ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿತ್ತು. ಸುಮಾರು ಹದಿನಾರು ರಾಜ್ಯಗಳಿಂದ ತಂಡಗಳು ಅಲ್ಲಿಗೆ ಬಂದಿದ್ದವು.
 
ಬೆಂಗಳೂರಿನಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಶಾಲೆಯ ಮಕ್ಕಳು ಲೆಗ್ ಕ್ರಿಕೆಟ್ ಆಡುತ್ತಿದ್ದಾರೆ. ಪ್ರತಿಯೊಂದು ಶಾಲೆಗೆ ಹೋಗಿ ಉಚಿತವಾಗಿ ಆಟದ ತಂತ್ರಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಉದ್ಯಾನನಗರಿಯ ಶಾಲೆಗಳಿಗಾಗಿ ಪ್ರತ್ಯೇಕವಾಗಿ ಟೂರ್ನಿ ಕೂಡ ನಡೆಸುತ್ತ ಬಂದಿದ್ದೇವೆ. ಶಾಲಾ ಮಕ್ಕಳಿಗೆ ಮಾತ್ರವಲ್ಲ ಇತ್ತೀಚೆಗೆ ಹಿರಿಯರಿಗೂ ಈ ಕ್ರೀಡೆಯನ್ನು ಆಡಿಸಲಾಗಿದೆ. ಇಷ್ಟಪಟ್ಟು ತಮ್ಮ ತಮ್ಮ ಲೇಔಟ್‌ಗಳಲ್ಲಿ ಅವರು ಆಡುವುದನ್ನು ಮುಂದುವರಿಸಿದ್ದಾರೆ.

ಸುಲಭ ನಿಯಮ
ಕ್ರಿಕೆಟ್‌ನಂತೆಯೇ ಲೆಗ್ ಕ್ರಿಕೆಟ್‌ನ ಪ್ರತಿಯೊಂದು ತಂಡದಲ್ಲಿ ಹನ್ನೊಂದು ಆಟಗಾರರಿಗೆ ಅವಕಾಶ. ಆದರೆ ನಾಲ್ವರು ಕಾಯ್ದಿರಿಸಿದ ಆಟಗಾರರನ್ನು ಹೊಂದಿರಬಹುದು. ಟಾಸ್‌ಗೆ ಮುನ್ನವೇ ಹನ್ನೊಂದು ಆಟಗಾರರ ಪಟ್ಟಿ ಪ್ರಕಟಿಸಬೇಕು. ಒಮ್ಮೆ ಟಾಸ್ ಆದ ನಂತರ ಬದಲಾವಣೆಗೆ ಅವಕಾಶವಿಲ್ಲ.

ಬದಲಿ ಆಟಗಾರರಿಗೆ ಕ್ಷೇತ್ರ ರಕ್ಷಣೆ ಮಾಡಲು ಮಾತ್ರ ಅವಕಾಶ. ಸಹಾಯಕ ರನ್ನರ್ ಆಗಿಯೂ ಕಾರ್ಯ ನಿರ್ವಹಿಸಬಹುದು. ಕ್ರಿಕೆಟ್‌ನ ಎಲ್ಲ ನಿಯಮಗಳೂ ಇದರಲ್ಲಿಯೂಭಾಗಶಃ ಬಳಕೆಯಾಗುತ್ತವೆ. ಆದರೆ ಒಂದೇ ಮಹತ್ವದ ವ್ಯತ್ಯಾಸವೆಂದರೆ ಇಲ್ಲಿ ಬ್ಯಾಟಿಂಗ್ ಎನ್ನುವುದಿರುವುದಿಲ್ಲ. ಬದಲಿಗೆ `ಕಿಕ್~ ಮಾಡುವುದಿರುತ್ತದೆ. ಕಾಲೇ ಇಲ್ಲಿ ಬ್ಯಾಟ್ ರೂಪದಲ್ಲಿ ಬಳಕೆಯಾಗುತ್ತದೆ.

ಲೆಗ್ ಕ್ರಿಕೆ ನಲ್ಲಿಯೂ ಸ್ಟಂಪ್‌ಗಳನ್ನು ನೆಡಲಾಗುತ್ತದೆ. ಪಿಚ್ ಕೂಡ ಇರುತ್ತದೆ. ಆದರೆ ಚೆಂಡು ಮಾತ್ರ ಲೆಗ್ ಕ್ರಿಕೆಟ್‌ಗೆ ಅನುಕೂಲವಾಗುವ ರೀತಿಯಲ್ಲಿ ಚರ್ಮದ ಹೊದಿಕೆಯ ಗಾಳಿ ತುಂಬಿದ್ದು. ಅದು ಜೀರೋ ಸೈಜ್ ಬಾಲ್. ಚೆಂಡನ್ನು ಎಸೆಯುವಾಗ ಸುಲಭವಾಗಿ ಹಿಡಿತಕ್ಕೆ ಸಿಗುವಂತೆ ಇರಬೇಕು.

ಅದಕ್ಕೆ ತಕ್ಕದಾದ ಗಾತ್ರದ ಚೆಂಡನ್ನು ಪುರುಷರು, ಮಹಿಳೆಯರು ಹಾಗೂ ಜೂನಿಯರ್ ಬಾಲಕ ಹಾಗೂ ಬಾಲಕಿಯರ ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗುತ್ತದೆ. ಚೆಂಡಿನ ಚರ್ಮದ ಹೊದಿಕೆಯು ಒಂದೇ ವರ್ಣದ್ದಾಗಿರಬೇಕೆನ್ನುವುದು ನಿಯಮ.

ಆಟಗಾರರು ಈ ಆಟಕ್ಕೆ ಅನುಕೂಲವಾಗುವಂತೆ ಟ್ರ್ಯಾಕ್ ಪ್ಯಾಂಟ್ ರೀತಿಯ ಇಲ್ಲವೆ ಫುಟ್‌ಬಾಲ್ ಆಟಗಾರರು ಬಳಸುವ ರೀತಿಯ ಟ್ರೌಸರ್ ಹಾಗೂ ಮೇಲಂಗಿ ಧರಿಸಬಹುದು. ಮಹಿಳೆಯರು ಟ್ರ್ಯಾಕ್ ಪ್ಯಾಂಟ್ ಹಾಗೂ ಜೆರ್ಸಿ ತೊಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಕ್ಷೇತ್ರಕ್ಕೆ ಇಳಿಯುವವರು ಜರ್ಸಿ ನಂಬರ್ ಹೊಂದಿರುವುದು ಅಗತ್ಯ.

ಬೌಲಿಂಗ್ ಅಲ್ಲ ರೋಲಿಂಗ್
ಬೌಲಿಂಗ್ ಮಾಡುವುದನ್ನು ಇದರಲ್ಲಿ ಅಂಡರ್ ಆರ್ಮ್ ರೋಲಿಂಗ್ ಎನ್ನಲಾಗುತ್ತದೆ. ಹೆಸರಿಗೆ ತಕ್ಕಂತೆ ಬಾಗಿಕೊಂಡು ಚೆಂಡನ್ನು ಉರುಳಿಸುವುದು ಅಗತ್ಯ. ಚೆಂಡನ್ನು ರೋಲ್ ಮಾಡುವುದಕ್ಕೆ ಇಂತಹದೇ ಕೈಯನ್ನು ಉಪಯೋಗಿಸಬೇಕೆನ್ನುವ ನಿರ್ಬಂಧವಿಲ್ಲ. ಆದರೆ ಪ್ರತಿಯೊಬ್ಬ ಆಟಗಾರ ಹಾಗೂ ಆಟಗಾರ್ತಿಯು ಯಾವ ಕೈಗೆ ಆದ್ಯತೆ ನೀಡುತ್ತಾರೆನ್ನುವುದು ಖಚಿತವಾಗಿರಬೇಕು.

`ಲೆಗ್ ಕ್ರಿಕೆಟ್~ ಇದಾಗಿರುವುದರಿಂದ ಬ್ಯಾಟಿಂಗ್ ಬದಲಿಗೆ ಇಲ್ಲಿ ಕಾಣುವುದು `ಕಿಕ್ಕಿಂಗ್~. ಇದಕ್ಕಾಗಿ ಎಡಗಾಲು ಇಲ್ಲವೆ ಬಲಗಾಲನ್ನು ಪ್ರಯೋಗಿಸಬಹುದು. ಪಿಚ್ 46 ಅಡಿ ಉದ್ದ ಹಾಗೂ 8 ಅಡಿ ಅಗಲವಾಗಿರುತ್ತದೆ.

ವಯೋವರ್ಗಕ್ಕೆ ತಕ್ಕ ಪಂದ್ಯಗಳಿಗೆ  ಅನುಕೂಲವಾಗುವಂತೆ ಬೌಂಡರಿ ಗೆರೆಯ ವಿಸ್ತೀರ್ಣವು ವಿಭಿನ್ನವಾಗಿರುತ್ತದೆ. ರನ್ ಗಳಿಸುವುದು ಸೇರಿದಂತೆ ಹೆಚ್ಚಿನ ನಿಯಮಗಳು ಸಾಮಾನ್ಯ ಕ್ರಿಕೆಟ್‌ನಲ್ಲಿ ಇರುವಂತೆಯೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT