ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಬಾಡಿಗೆಯಲ್ಲೂ ಏರಿಕೆ!

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಎಲ್ಲಾ ಬೆಲೆಗಳು ದುಪ್ಪಟ್ಟಾಗುತ್ತಿರುವ ಈ ಹೊತ್ತಿನಲ್ಲಿ ಏರುತ್ತಿರುವ ಬೆಲೆಗಳ ಸಾಲಿಗೆ ಈಗ ಹೋಟೆಲ್‌ ಕೋಣೆಗಳ ಬಾಡಿಗೆಯೂ ಸೇರಿಕೊಂಡಿದೆ. ಭಾರತವೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿನ ಹೊಟೇಲ್ ಕೋಣೆಗಳ ಬಾಡಿಗೆ ಪ್ರಸಕ್ತ ವರ್ಷದ ಮೊದಲ ಆರು ತಿಂಗಳಿನಲ್ಲಿ ಸರಾಸರಿ ಶೇ 2ರಷ್ಟು ಏರಿಕೆ ಕಂಡಿದೆ ಎನ್ನುತ್ತದೆ ‘ಹೋಟೆಲ್ಸ್‌.ಕಾಮ್‌’ನ ಇತ್ತೀಚಿನ ‘ಹೋಟೆಲ್ಸ್ ಪ್ರೈಸ್ ಇಂಡೆಕ್ಸ್’ (ಎಚ್‌ಪಿಐ) ಸಮೀಕ್ಷಾ ವರದಿ.

2008ರ ನಂತರದಲ್ಲಿ ಜಾಗತಿಕ ಆರ್ಥಿಕ ಹಿಂಜರಿ­ತದಿಂದಾಗಿ ಬಹುಪಾಲು ಎಲ್ಲಾ ಕ್ಷೇತ್ರಕ್ಕೂ ಬರಸಿಡಿಲು ಬಡಿದಂತಾಗಿದ್ದರೆ, ಹೋಟೆಲ್ ಉದ್ಯಮಕ್ಕೂ ಗ್ರಹಣ ಹಿಡಿದಂತಾಗಿತ್ತು. ನಂತರದ ವರ್ಷಗಳಲ್ಲಿ ಕಂಡುಬಂದ ಚೇತರಿಕೆ ತೀರಾ ಅತ್ಯಲ್ಪ ಪ್ರಮಾಣದ್ದು ಎನಿಸಿದರೂ, ಆತಿಥ್ಯ ಸೇವಾ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ತಕ್ಕಮಟ್ಟಿಗೆ ಚೇತೋಹಾರಿಯೇ ಆಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸಮರ್ಥ ಆರ್ಥಿಕ ವಲಯ ಎಂದೇ ಬಿಂಬಿತವಾಗಿರುವ ‘ಯೂರೊ’ ಚಲಾವಣೆಯ ದೇಶಗಳಲ್ಲಿನ ಪರಿಸ್ಥಿತಿ ಮಾತ್ರ ಹೋಟೆಲ್ ಉದ್ಯಮದ ಪಾಲಿಗೆ ಅಷ್ಟೇನೂ ಆಶಾದಾಯಕವಾಗಿಲ್ಲ. ಇದು ಕಳೆದ 6 ತಿಂಗಳ ಅವಧಿಯಲ್ಲಿ ಸಾಧಿಸಿದ ಅಭಿವೃದ್ಧಿ ಬರೇ ಶೇ 1ರಷ್ಟು ಮಾತ್ರ!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ‘ಹೋಟೆಲ್‌.ಕಾಮ್’ ಸಂಸ್ಥೆಯ ಅಧ್ಯಕ್ಷ ಡೇವಿಡ್ ರಾಂಚ್ ಅವರು ಹೇಳುವಂತೆ, ಯೂರೋಪಿನ ‘ಯೋರೊ ಕರೆನ್ಸಿ’ ಚಲಾವಣೆಯಲ್ಲಿರುವ ವಲಯಗಳು ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಕ್ಕಿಲ್ಲ ಎಂಬುದರಲ್ಲಿ ಸತ್ಯಾಂಶವೆನೂ ಇಲ್ಲ. ಆ ದೇಶಗಳ ಹಣಕಾಸು ಸ್ಥಿತಿ ಕೂಡ ಆರ್ಥಿಕ ಹಿಂಜರಿತದಿಂದ ಬಳಲಿದೆ. ಆದರೆ, 2013ರ ಮೊದಲ 2 ತ್ರೈಮಾಸಿಕಗಳ ಅವಧಿ­ಯಲ್ಲಿ ಕಂಡ ಪ್ರಗತಿಯು ಅತ್ಯಲ್ಪವಾದರೂ, ಹೋಟೆಲ್‌ ಉದ್ಯಮ ಹಿಂಜರಿತದಿಂದ ಹೊರಬ­ರುತ್ತಿದೆ ಎಂಬುದರ ದ್ಯೋತಕ. ಆದಾಗ್ಯೂ, ಈ ಇನ್ನಷ್ಟು ಪ್ರಗತಿ ಸಾಧಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ.

ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಚೀನಾ ದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಪ್ರವಾಸ ಹೊರಟಿದ್ದಾರೆ. ಹೋಟೆಲ್‌ ಕೋಣೆಯ ಬಾಡಿಗೆ ದರದಲ್ಲಿ ಸುಧಾರಣೆ ಕಾಣುವುದಕ್ಕೆ ಈ ಅಂಶವು ಸಹಕಾರಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ವಿಶೇಷವಾಗಿ ಚೀನಾ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವ್ಯಾಪಕವಾದ ಪ್ರಗತಿಯನ್ನು ಸಾಧಿಸುತ್ತಿದೆ. 2013ರ ಮೊದಲ 6 ತಿಂಗಳಲ್ಲಿ ಸುಮಾರು 8 ಕೋಟಿ ಚೀನೀಯರು ವಿವಿಧ ದೇಶಗಳಿಗೆ ಪ್ರವಾಸ ಹೊರಟಿದ್ದಾರೆ ಎಂಬ ಅಂಕಿ–ಅಂಶ ಚೀನಾ ಪ್ರವಾಸೋದ್ಯಮ ಇಲಾಖೆಯ ವರದಿಯಲ್ಲಿದೆ.

2012ರಲ್ಲಿ ಚೀನೀಯರು  ವಿದೇಶ ಪ್ರವಾಸ ಹೊರಡಲು ವೆಚ್ಚ ಮಾಡಿದ ಹಣ ಬರೋಬರಿ 10200 ಕೋಟಿ ಡಾಲರ್. ಇದು 2011ಕ್ಕೆ ಹೋಲಿಸಿದರೆ ಶೇ 40ಕ್ಕಿಂತ ಅಧಿಕ. ಇದು ಪ್ರವಾಸೋದ್ಯಮಕ್ಕೆ ಇನ್ನಿಲ್ಲದ ಒತ್ತು ನೀಡುತ್ತಿರುವ ಅಮೆರಿಕ ಹಾಗೂ ಜರ್ಮನಿಗಿಂತ ಅಧಿಕ ಎಂದು ವಿಶ್ವ ಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ ಸಂಸ್ಥೆಯ ವರದಿ ತಿಳಿಸಿದೆ.

ಮೈಸೂರು ದಸರಾ ಪರಿಣಾಮ
ರಾಜ್ಯದ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರುವ ‘ಮೈಸೂರು ದಸರಾ’ ಹೊಸ್ತಿಲಲ್ಲೇ ಇದೆ. ಈ ಅವಧಿಯಲ್ಲಿ ಹೋಟೆಲ್‌ ಕೋಣೆಗಳ ಬಾಡಿಗೆ ದರಗಳು ಬಹಳಷ್ಟು ಏರಿಕೆಯಾಗುತ್ತವೆ. ಕೃತಕ ಅಭಾವವನ್ನು ಸೃಷ್ಟಿಸಲಾಗುತ್ತದೆ ಎಂಬೆಲ್ಲಾ ಆರೋಪಗಳಿವೆ. ಆದರೆ, ಇವುಗಳು ಯಾವುವೂ ನಿಜವಲ್ಲ ಎಂದು ಮೈಸೂರು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಹೇಳುತ್ತಾರೆ.

ಅವರು ಹೇಳುವಂತೆ ದರಗಳು ದುಪ್ಪಟ್ಟಾಗುತ್ತವೆ, ಸಿಕ್ಕಾಪಟ್ಟೆ ಮನಬಂದಂತೆ ಏರಿಸಲಾಗುತ್ತದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದವು. ಎಲ್ಲೋ ಕೆಲವೆಡೆ ಶೇ 1 ಅಥವಾ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಬಹುದೇನೊ. ಆದರೆ, ಬಹುಪಾಲು ಹೋಟೆಲ್‌ಗಳು ನಿಗದಿಪಡಿಸಿದ ಬಾಡಿಗೆಯನ್ನೇ ಗ್ರಾಹಕರಿಂದ ಪಡೆಯುತ್ತವೆ. ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆ ರಜೆ ದಿನಗಳು ಹಾಗೂ ದಸರೆ ಸಮಯದಲ್ಲಿ ಮಾತ್ರ ಹೋಟೆಲ್‌ ಕೋಣೆಗಳಿಗೆ ಬೇಡಿಕೆ ಇದೆ. ಇನ್ನುಳಿದ ವರ್ಷದ ದಿನಗಳಲ್ಲಿ ಹೋಟೆಲ್‌ ಕೋಣೆಗಳು ಬಿಕೋ ಎನ್ನುತ್ತವೆ. ಇದಕ್ಕೆ ರಾಜ್ಯ ಸರ್ಕಾರ ಪ್ರವಾಸೋ­ದ್ಯಮಕ್ಕೆ ಹೆಚ್ಚಿನ ಒತ್ತು ನೀಡದಿರುವುದೇ ಕಾರಣ ಎಂದು ಅವರು ನೇರವಾಗಿ ಆರೋಪಿಸುತ್ತಾರೆ.

ಹೋಟೆಲ್‌ ಮಾಲೀಕರೆಂದರೆ ಎಲ್ಲರೂ ಕೋಟಿ ಲೆಕ್ಕದ ಕುಳಗಳೇನೂ ಅಲ್ಲ ಎಂದು ಹೇಳುವ ಅವರು, ‘ಎಷ್ಟೋ ಹೋಟೆಲ್‌ ಮಾಲೀಕರ ಬಳಿ ದಸರಾ ಹಾಗೂ ಬೇಸಿಗೆ ರಜೆ ದಿನಗಳನ್ನು ಹೊರತುಪಡಿಸಿದರೆ, ಇನ್ನುಳಿದ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟಲೂ ಹೆಣಗಾಡುವ ಸ್ಥಿತಿ ಇದೆ. ನೆರೆಯ ಕೇರಳ ರಾಜ್ಯದಂತೆ ನಮ್ಮ ರಾಜ್ಯವೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದಲ್ಲಿ ಖಂಡಿತವಾಗಿಯೂ ಹೋಟೆಲ್‌ ಉದ್ಯಮ ಬೆಳವಣಿಗೆ ಕಾಣುವುದರಲ್ಲಿ ಎರಡು ಮಾತಿಲ್ಲ. ಇದು ಬರೇ ಹೋಟೆಲ್‌ಗಳಿಗೆ ಮಾತ್ರವಲ್ಲ ನಗರದ ಸರ್ವತೋಮುಖ ಅಭಿವೃದ್ಧಿಯೂ ಇದರಿಂದ ಸಾಧ್ಯ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪ್ರವಾಸೋ­ದ್ಯಮ ಇನ್ನಷ್ಟು ಬೆಳವಣಿಗೆ ಕಂಡರೆ, ರಾಜ್ಯ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ ಎಂಬುದು ಅವರ ವಾದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT