ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಮರೆಯಲ್ಲಿ ಮಹಾತ್ಮ...

Last Updated 30 ಸೆಪ್ಟೆಂಬರ್ 2013, 20:07 IST
ಅಕ್ಷರ ಗಾತ್ರ

ಅದು ಸ್ವಾತಂತ್ರ್ಯ ಚಳವಳಿಯ ಕಾಲ, 1927 ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಅತಿಥಿ ಗೃಹದಲ್ಲಿ ಸುಮಾರು ಒಂದು ತಿಂಗಳು ವಾಸ್ತವ್ಯ ಹೂಡಿದ್ದರು. ಆಗ ಸುತ್ತಲೂ ಕಾಡು. ಅಂತಹ ತಂಪಾದ ಪರಿಸರದಲ್ಲಿ ‘ಜ್ಯೋತಿ ವೃಕ್ಷ’ ದ ಕೆಳಗೆ ಕುಳಿತು ಗಾಂಧೀಜಿ ಪ್ರಾರ್ಥನೆಯನ್ನು ಸಲ್ಲಿಸಿದ್ದರು.

ಗಾಂಧಿ ತಾತನಿಗೆ ಆಗ ಚಿಕ್ಕ ಮಕ್ಕಳ ಸಾಥ್‌. ‘ವಂದೇ ಮಾತರಂ... ಗೀತೆಯನ್ನು ಪುಟಾಣಿಗಳಿಂದಲೇ ಹಾಡಿಸಿದ್ದರು ಈ ತಾತ. ‘ನಾವೆಲ್ಲ ಒಂದೇ, ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯ, ಅಹಿಂಸೆಯಿಂದ ಹೋರಾಡಬೇಕು. ದೇಶ ಬಾಂಧವರೇ ಒಂದಾಗಿ’ ಎಂದು ನಾಡಿನ ಜನತೆಗೆ ಕರೆನೀಡಿದ್ದ ಸ್ಥಳವಿದು.

ಸ್ವಾತಂತ್ರ್ಯಾನಂತರ...
1947 ರ ಆಗಸ್ಟ್ 15ರಂದು ದೇಶ ಬ್ರಿಟಿಷರಿಂದ ಗುಲಾಮಮುಕ್ತವಾಗಿ ಸ್ವಾತಂತ್ರ್ಯವನ್ನು ಪಡೆಯಿತು. ನಂತರ 1971ರಲ್ಲಿ ಅಲ್ಲಿ ಲಲಿತ್ ಅಶೋಕ್ ಬೃಹತ್ ಹೋಟೆಲ್‌ ನಿರ್ಮಾಣವಾಯಿತು. ಆಗ, ಗಾಂಧೀಜಿ ಅವರು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದ ಆ ಸ್ಥಳವು ಕ್ರಮೇಣ ನೇಪಥ್ಯಕ್ಕೆ ಸರಿಯಿತು.

ಜ್ಯೋತಿ ವೃಕ್ಷದ ಕೆಳಗೆ ಗಾಂಧೀಜಿ ಸಲ್ಲಿಸುತ್ತಿದ್ದ ಪ್ರಾರ್ಥನೆಯ ಸವಿನೆನಪಿಗಾಗಿ ಭಾರತ ಸೇವಾದಳ ಮತ್ತು ಹೋಟೆಲ್‌ನ ಆಡಳಿತ ಮಂಡಳಿಯು ಸೇರಿ ಅಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿವೆ. ಆದರೆ, ಅಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ.

ಆ ಸ್ಥಳದ ದರ್ಶನವನ್ನು ಪಡೆಯಲು ಹೋಟೆಲ್‌ ಆಡಳಿತ ಮಂಡಳಿಯ ಅನುಮತಿಯನ್ನು ಪಡೆದೇ ಹೋಗಬೇಕು. ಹೋಟೆಲ್‌ ಆಡಳಿತ ಮಂಡಳಿಯ ಹಲವು ಪ್ರಶ್ನೆಗಳಿಗೆ ಉತ್ತರವಿರುವ ಪತ್ರವನ್ನು ಹೋಟೆಲ್ ಆಡಳಿತ ಮಂಡಳಿಗೆ ಬರೆದು ನಂತರ ಅವರು ಅನುಮತಿ ನೀಡಿದರೆ ಪ್ರವೇಶಿಸಬಹುದಾಗಿದೆ.

ಎಲ್ಲರಿಗೂ ಲಭ್ಯವಾಗಲಿ
‘ಗಾಂಧೀಜಿ ಅವರು ಬೆಂಗಳೂರಿಗೆ ಬಂದಾಗ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದ ಪವಿತ್ರ ಸ್ಥಳವದು. ಅಂತಹ ಸ್ಥಳ ಸಾರ್ವಜನಿಕರಿಗೆ ಮತ್ತು ಪ್ರವಾಸಿಗಳಿಗೆ ಲಭ್ಯವಾಗಬೇಕು. ಆದರೆ, ಇದಕ್ಕೆ ಹೋಟೆಲ್‌ನ ಆಡಳಿತ ಮಂಡಳಿಯವರು ಮನಸ್ಸು ಮಾಡಬೇಕು. ಈ ಕುರಿತು ಚಿಂತನೆಯನ್ನು ನಡೆಸಬೇಕು’ ಎನ್ನುವುದು ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ ಬಿ.ಸಿ.ವೆಂಕಟೇಶ ಅವರ ಅಭಿಮತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT