ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ವಿಮರ್ಶೆ ಶಕ್ತಿಯಾಗಲಿ: ಡಾ.ಚೆನ್ನಿ

ಬಿ.ಎಚ್.ಶ್ರೀಧರ ಸಾಹಿತ್ಯ ಮತ್ತು ಶಿಕ್ಷಣ ಪ್ರಶಸ್ತಿ ಪ್ರದಾನ
Last Updated 25 ಏಪ್ರಿಲ್ 2013, 7:56 IST
ಅಕ್ಷರ ಗಾತ್ರ

ಶಿರಸಿ: `ಕನ್ನಡ ವಿಮರ್ಶೆಯ ಕ್ಷೇತ್ರದಲ್ಲಿ ಸ್ವಂತ ಧ್ವನಿಯಷ್ಟೇ ಸಮುದಾಯದ ಹಲವಾರು ಧ್ವನಿಗಳು ಪ್ರಾಮುಖ್ಯವಾಗಿವೆ. ಕನ್ನಡ ಸಾಹಿತ್ಯಕ್ಕಿರುವ ಸಮಗ್ರ ತಿಳಿವಳಿಕೆಯೊಟ್ಟಿಗೆ ನಮ್ಮ ವಿಮರ್ಶೆ ಒಂದಾಗಿ ಸಮಾಜದ ಹೋರಾಟಕ್ಕೆ ಶಕ್ತಿಯಾಗಬೇಕು' ಎಂದು ಖ್ಯಾತ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ನಗರದ ಟಿಎಂಎಸ್ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. `ಜಾಗತೀಕರಣದ ಭರಾಟೆ ಭಾಷೆಯನ್ನು ನಾಶ ಮಾಡುತ್ತಿದ್ದು, ನುಡಿಚೋರತನ ಆಗುತ್ತಿದೆ. ಮಾನವಿಕ ಮೌಲ್ಯಗಳು ಅಪ್ರಸ್ತುತವಾಗಿ ಮಾರುಕಟ್ಟೆ ವಸ್ತುಗಳಾಗುತ್ತಿವೆ. ಜನ ಸಮುದಾಯದ ದೊಡ್ಡ ಹೋರಾಟಗಳು ತಬ್ಬಲಿಯಾಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಕೃತಿಗಳು ಜನ ಹೋರಾಟಕ್ಕೆ ಬಲ ನೀಡುವ ಕೆಲಸ ಮಾಡಬೇಕು' ಎಂದರು.

`ಸಾವಿರಾರು ವರ್ಷಗಳ ಪರಂಪರೆಯೆಡೆಗೆ ದೃಷ್ಟಿ ಬೀರಿದಾಗ ಪಂಡಿತರು, ರಾಜಾಶ್ರಯ, ಇತ್ತೀಚಿನ ಸರ್ಕಾರದ ಆಶ್ರಯಕ್ಕಿಂತ ಮಿಗಿಲಾಗಿ ಕನ್ನಡ ಸಾಹಿತ್ಯ ಸಮುದಾಯದ ಸೊತ್ತಾಗಿಯೇ ಬೆಳೆದುಕೊಂಡು ಬಂದಿದೆ. ನೆಲಸಂಸ್ಕೃತಿ ಸಮುದಾಯದ ಜೊತೆಗೆ ಆತ್ಮೀಯ ಸಂಬಂಧ ಇಟ್ಟುಕೊಂಡು ಆಯಾ ಕಾಲಕ್ಕೆ ಬೆಳೆದು ಬಂದು ಸಾಹಿತ್ಯಿಕ ವ್ಯಕ್ತಿಗಳು ಕನ್ನಡ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಕನ್ನಡದ ಸೃಜನಶೀಲತೆ ಇಡಿಯಾಗಿ ಪಡೆದು ಸಮುದಾಯದ ಧ್ವನಿಯನ್ನು ಸಮುದಾಯದ ಜೊತೆ ಹಂಚಿಕೊಳ್ಳುವ ಶಕ್ತಿ ಹೊಂದಿದ್ದ ಬಿ.ಎಚ್.ಶ್ರೀಧರರಂತಹ ಅನೇಕ ಹಿರಿಯ ಬರಹಗಾರರಿಂದ ಕನ್ನಡ ಸಾಹಿತ್ಯ ಸಮುದಾಯದ ಕೂಸಾಗಿಯೇ ಉಳಿದುಕೊಂಡು ಬಂದಿದೆ. ಹೀಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿದ್ದು ಅಭಿಮಾನ ಮೂಡಿಸಿದೆ' ಎಂದು ಅವರು ಹೇಳಿದರು.

`ಇಂದು ಅನೇಕ ವೈಚಾರಿಕ, ಸೂಕ್ಷ್ಮ ಸಂವೇದನೆಯ ಬರಹಗಳು ಹೊರಬಂದರೂ ಹಿಂದಿನ ಹಿರಿಯ ಬರಹಗಾರರ ಸಾಮರ್ಥ್ಯದಂತೆ ಸಮುದಾಯದ ಹಂಚುವಿಕೆ ಆಗುತ್ತಿಲ್ಲವೆಂಬ ವಿಷಾದವೂ ಇದೆ. ಇನ್ನೊಂದೆಡೆ ಇವನ್ನು ಸಾಧಿಸಲು ಸಾಧ್ಯವಾ ಎಂಬ ಮರು ಹಂಬಲವೂ ಇದೆ' ಎಂದರು.

ವಿಮರ್ಶಕರಾದ ಪ್ರೊ. ಎಂ.ಜಿ.ಹೆಗಡೆ, ಆರ್.ಡಿ.ಹೆಗಡೆ ಆಲ್ಮನೆ, ನಿವೃತ್ತ ಪ್ರಾಧ್ಯಾಪಕ ಎಂ.ರಮೇಶ, ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಖಾ ಹೆಬ್ಬಾರ ಸ್ವಾಗತಿಸಿದರು. ಸಿ.ಎನ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT