ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ಊರಲ್ಲಿ ನಲುಗಿದ ಅಭಿವೃದ್ಧಿ

Last Updated 19 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಮಾಯಕೊಂಡ’ -ಎಂಬುದು ಹುಟ್ಟು ಹೋರಾಟಗಾರರ ಗ್ರಾಮ. ರಾಜ್ಯದ ‘ಶಿವಪುರ’ ಹೊರತುಪಡಿಸಿದರೆ, ಈ ಗ್ರಾಮದಲ್ಲೇ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರಿದ್ದರು ಎಂಬುದಾಗಿ ಇಲ್ಲಿನ ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟೇ ಅಲ್ಲ, ಹಿರೇಮದಕರಿನಾಯಕನ ಸಮಾಧಿ ಈಗಲೂ ಇಲ್ಲಿ ಇದ್ದು, ಐತಿಹಾಸಿಕ ಪರಂಪರೆಗೂ ಪ್ರಖ್ಯಾತಿ ಗಳಿಸಿದೆ. ಇಂತಹ ವೈಶಿಷ್ಠ್ಯವುಳ್ಳ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಥೇಟ್ ಕುಗ್ರಾಮದಂತಹ ಚಿತ್ರಣಗಳು ಗೋಚರಿಸಿ ನಿರಾಸೆ ಹುಟ್ಟಿಸಿಬಿಡುತ್ತದೆ. ಇದು ಐತಿಹಾಸಿಕ, ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದರೂ, ಅಭಿವೃದ್ಧಿ ಪಥದಲ್ಲಿ ಮಾತ್ರ ಅಂಬೆಗಾಲಿಡುತ್ತಿರುವ ಮಗುವಿನಂತಿದೆ.

ಮಾಯಕೊಂಡ ಜಿಲ್ಲಾ ಕೇಂದ್ರದಿಂದ ಬರೋಬ್ಬರಿ 30 ಕಿ.ಮೀ. ದೂರವಿರುವ ಹೋಬಳಿ ಕೇಂದ್ರ. 1978ರಿಂದಲೂ ವಿಧಾನಸಭಾ ಕ್ಷೇತ್ರವಾಗಿ ಪ್ರತಿನಿಧಿಸುತ್ತಾ ಬಂದಿದೆ. ಈ ಕ್ಷೇತ್ರದಲ್ಲಿ ಗೆದ್ದವರು ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆಯುವರೆಂಬ ರಾಜಕೀಯ ಪ್ರತೀತಿ ಬಲವಾಗಿದೆ. ಇಂತಹ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿದೆ. ಗ್ರಾ.ಪಂ. ಕಚೇರಿಗೆ ಸ್ವಂತ ಕಟ್ಟಡವಿಲ್ಲದೇ ಸರ್ಕಾರಿ ಕಟ್ಟಡದಲ್ಲಿ ಕಾರ್ಯನಿರ್ವಹಸಬೇಕಾದ ದುಸ್ಥಿತಿ ಒದಗಿರುವುದು ಅಚ್ಚರಿ ಹುಟ್ಟಿಸುತ್ತದೆ.

ಐತಿಹಾಸಿಕ ಹಿನ್ನೆಲೆ: ಗ್ರಾಮದೆಲ್ಲೆಡೆ ಸುತ್ತಾಡಿದರೆ ಸಿಗುವ ಐತಿಹಾಸಿಕ ದೇಗುಲ ಮತ್ತು ವೀರಗಲ್ಲು, ಮಾಸ್ತಿಕಲ್ಲುಗಳೇ ಗ್ರಾಮದ ಐತಿಹಾಸಿಕ ಹಿನ್ನೆಲೆ ವಿವರಿಸುತ್ತವೆ. ಇಟ್ಟಿಗೆಪುರದ ರಾಜ ತನ್ನ ಮಗಳು ಮಾಯಮ್ಮಳನ್ನು ‘ಕೊಂಡ’ ಊರಿಗೆ ಬಳುವಳಿಯಾಗಿ ನೀಡಿದ್ದರಿಂದ ‘ಮಾಯಕೊಂಡ’ ಎಂಬ ಹೆಸರು ರೂಢಿ ಬಂದಿರುವುದಾಗಿ ಸ್ಥಳೀಯರು ಹೇಳುತ್ತಾರೆ.1721ರಲ್ಲಿ ಮಾಯಕೊಂಡದ ಮೈದಾನದಲ್ಲಿ ಚಿತ್ರದುರ್ಗದ ಹಿರೇಮದಕರಿ ನಾಯಕರಿಗೂ ಹಾಗೂ ಹರಪನಹಳ್ಳಿಯ  ಸೋಮಶೇಖರರಾಯನಿಗೂ ಯುದ್ಧ ನಡೆದು ಹಿರೇಮದಕರಿ ಸಾವನ್ನಪಿದ್ದು, ಈಗಲೂ ಹಿರೇಮದಕರಿ ನಾಯಕರ ಸಮಾಧಿ ಇಲ್ಲಿದೆ. ಅರಳಿ ಮರದಡಿಯಲ್ಲಿನ ಕಾಂಪೌಂಡಿನಲ್ಲಿ ಸಮಾಧಿಯನ್ನು ಸಂರಕ್ಷಿಸಲಾಗಿದೆ.

ದೇಗುಲಗಳ ನಾಡು: ದೊಡ್ಡಮಾಗಡಿ ಕಡೆಯಿಂದ ಮಾಯಕೊಂಡವನ್ನು ಪ್ರವೇಶಿಸಿದರೆ ಪೆದ್ದಪ್ಪನ ಕಲ್ಲಿನ ದೇಗುಲ; ಊರ ಗಡಿಯಲ್ಲಿ ಮೂಗಬಸಪ್ಪನಗುಡಿ, ಬಸವ ವಿಗ್ರಹ, ಕಾಳಿಕಾ ದೇವಾಲಯ, ಓಬಳೇಶ್ವರ ದೇಗುಲಗಳು ನೋಡುಗರನ್ನು ಆಕರ್ಷಿಸುತ್ತವೆ. ಐತಿಹಾಸಿಕ ಓಬಳೇಶ್ವರ ದೇಗುಲ ಅವಸಾನದ ಅಂಚಿನಲ್ಲಿದ್ದು, ಪ್ರಾಚ್ಯವಸ್ತು ಇಲಾಖೆ ಗಮನಹರಿಸುವ ಅಗತ್ಯವಿದೆ. ಇದರೊಟ್ಟಿಗೆ ಗ್ರಾಮದಲ್ಲಿ ನಾಲ್ಕು ಭಜನಾ ಮಂದಿರಗಳಿವೆ. ಹುಬ್ಬಳ್ಳಿಯ ಸಿದ್ಧಾರೂಢರು ಇಲ್ಲಿಗೆ ಆಗಮಿಸಿ ಭಜನಾ ಮನೆಗಳಲ್ಲಿ ಆರಾಧನೆ ನಡೆಸುವ ಮೂಲಕ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದರು ಎನ್ನಲಾಗಿದೆ.

ಉಪ್ಪಾರ ಹಟ್ಟಿ, ಕುರುಬರ ಹಟ್ಟಿ, ಸಾರಾಯಿದರ ಹಟ್ಟಿ ಎಂಬಲ್ಲಿ ಮೂರು ಗರಡಿ ಮನೆಗಳಿವೆ. ಈಗಲೂ ಪೈಲ್ವಾನರು ಅಲ್ಲಿ ಕಸರತ್ತು ನಡೆಸುತ್ತಾರೆ. ಕಾಡಜ್ಜಿ ಗಂಗಣ್ಣ ಎಂಬ ಪೈಲ್ವಾನ ಆಗಿನ ಮೈಸೂರು ದಸರಾ ಕುಸ್ತಿಯಲ್ಲಿ ಬಹುಮಾನ ಗೆದ್ದಿದ್ದನ್ನು ಸ್ಥಳೀಯರು ಸ್ಮರಿಸುತ್ತಾರೆ. ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ದಸರಾ ಹಬ್ಬವನ್ನು ಗ್ರಾಮಸ್ಥರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.

1903ರಲ್ಲಿ  ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಪ್ರಾಥಮಿಕ ಶಾಲೆ ಗ್ರಾಮದ ಆಕರ್ಷಣೆಯಾಗಿದ್ದು, ಪದವಿ, ಪದವಿಪೂರ್ವ ಕಾಲೇಜು, ಮೊರಾರ್ಜಿ ಬಾಲಕಿಯರ ವಸತಿಶಾಲೆ, ರೈಲ್ವೆ ಸ್ಟೇಷನ್, ಉಪ ಖಜಾನೆ ಕಚೇರಿ ಇದ್ದರೂ, ಸೂಕ್ತ ಬಸ್‌ನಿಲ್ದಾಣ; ಸಾರ್ವಜನಿಕ ಮೂತ್ರಾಲಯಗಳಂತಹ ಕನಿಷ್ಠ ಸೌಲಭ್ಯಗಳ ಕೊರತೆ ಜನರನ್ನು ಕಾಡುತ್ತಿದೆ. ರಸ್ತೆ ಪಕ್ಕದಲ್ಲೇ ಪ್ರತಿ ಶುಕ್ರವಾರ ನಡೆಯುವ ಸಂತೆ ಸಂಚಾರಕ್ಕೂ ಅಡ್ಡಿಯಾಗಿದ್ದು, ಸಂತೆ ಮೈದಾನವನ್ನು ತುರ್ತಾಗಿ ನಿರ್ಮಿಸುವ ಅಗತ್ಯವಿದೆ ಎನ್ನುತ್ತಾರೆ

ಸ್ಥಳೀಯರು.ದಾಹ ನೀಗಿಸಿದ ಯೋಜನೆ: ಫ್ಲೋರೈಡ್‌ಯುಕ್ತ ನೀರಿನಿಂದ ಅಕ್ಷರಶಃ ನಲುಗಿ ಹೋಗಿದ್ದ ಮಾಯಕೊಂಡ ಜನರ ದಾಹ ್ಙ 16 ಕೋಟಿಯಷ್ಟು ಬೃಹತ್ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದಾಗಿ ನೀಗಿದಂತಾಗಿದೆ. ಇದರೊಟ್ಟಿಗೆ 18 ಹಳ್ಳಿಗಳಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆಗಿನ ಮೈಸೂರು ರಾಜ್ಯದ ಅರಸರು ಗ್ರಾಮದ ಸಮೀಪ 1970ರಲ್ಲಿ ನಿರ್ಮಿಸಿರುವ ಹೊಸಕೆರೆಗೆ ಬೃಹತ್ ಪೈಪ್‌ಗಳ ಮೂಲಕ ಚಾನಲ್ ನೀರನ್ನು ಕೆರೆಗೆ ಡಂಪ್ ಮಾಡಲಾಗುತ್ತಿದೆ. ಕೆರೆ ಇಕ್ಕೆಲದಲ್ಲಿನ ಬೃಹತ್ ಗುಡ್ಡದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ.

ಕುಡಿಯುವ ನೀರಿನ ದಾಹ ನೀಗಿದೆ. ಆದರೆ, ಗ್ರಾಮದಲ್ಲಿನ ವಿವಿಧ ಬಡಾವಣೆಗಳ ಸಂಪರ್ಕ ರಸ್ತೆಗಳು ಮಾತ್ರ ಇದುವರೆಗೂ ಅಭಿವೃದ್ಧಿ ಕಂಡಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದೇ ಗ್ರಾಮದೆಲ್ಲೆಡೆ ಸೊಳ್ಳೆಗಳ ಉತ್ಪತ್ತಿ ಅಧಿಕಗೊಂಡಿದ್ದು, ಅನಾರೋಗ್ಯಕರ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ. ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಗ್ರಾಮ ಪಂಚಾಯ್ತಿಯಲ್ಲಿನ ಅನುದಾನ ಸಾಲುತ್ತಿಲ್ಲ. ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿದರೆ ಅಭಿವೃದ್ಧಿಯ ಪ್ರಗತಿ ಕಾಣಬಹುದು.   ಹುಂಡೇಕರ್ ಸಮಿತಿ, ಗದ್ದಿಗೌಡರ್ ಸಮಿತಿ, ವಾಸುದೇವರಾವ್ ಸಮಿತಿಗಳು ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ವರದಿ ನೀಡಿವೆ. ಆದರೆ, ಸರ್ಕಾರದ ನಿರ್ಲಕ್ಷತನದಿಂದಾಗಿ ಐತಿಹಾಸಿಕ ಗ್ರಾಮ ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣವಾಗಿದೆ  ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್. ವಿಶ್ವನಾಥಾಚಾರ್, ನೂತನ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಸ್. ನೀಲಪ್ಪ, ಗೌರವಾಧ್ಯಕ್ಷ ಎಚ್. ಸಿದ್ಧಲಿಂಗಪ್ಪ ಹೇಳುತ್ತಾರೆ.

ಗ್ರಾಮ ಸುವರ್ಣ ಯೋಜನೆಗೊಳಪಟ್ಟಿದ್ದು, ್ಙ 1.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಉದ್ಯೋಗಖಾತ್ರಿ ಯೋಜನೆಯಲ್ಲಿ ಸುಮಾರು ್ಙ 2 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿ ಸಂಪೂರ್ಣಗೊಂಡಿದೆ. ಈಗ ಹದಗೆಟ್ಟ ರಸ್ತೆ ದುರಸ್ತಿಯನ್ನು ಕೈಗೆತ್ತಿಕೊಳ್ಳುವ ಹಂತದಲ್ಲಿ ಗ್ರಾಮ ಪಂಚಾಯ್ತಿಕಾರ್ಯೋನ್ಮುಖವಾಗಿದೆ ಎನ್ನುತ್ತಾರೆ ಗ್ರಾ.ಪಂ. ಮಾಜಿ ಸದಸ್ಯ ಉಮಾಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT